ಸಂಘಟಿತ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್ ತಂಡ 5 ವಿಕೆಟ್ ಗಳಿಂದ ಚೆನ್ನೈಸೂಪರ್ ಕಿಂಗ್ಸ್ ತಂಡವನ್ನು ಬಗ್ಗುಬಡಿದು ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಗೆ ಲಗ್ಗೆ ಹಾಕಿದೆ.
ಶುಕ್ರವಾರ ನಡೆದ ಲೀಗ್ ನ ಅಂತಿಮ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 6 ವಿಕೆಟ್ ಗೆ 150 ರನ್ ಗಳಿಗೆ ನಿಯಂತ್ರಿಸಿದ ರಾಜಸ್ಥಾನ್ ರಾಯಲ್ಸ್ ತಂಡ 1 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ರಾಜಸ್ಥಾನ್ ರಾಯಲ್ಸ್ ತಂಡ 14 ಪಂದ್ಯಗಳಲ್ಲಿ 9 ಜಯ ಹಾಗೂ 5 ಸೋಲಿನೊಂದಿಗೆ 18 ಅಂಕ ಪಡೆದು 2ನೇ ಸ್ಥಾನಕ್ಕೆ ಲಗ್ಗೆ ಹಾಕುವ ಮೂಲಕ ಪ್ಲೇಆಫ್ ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿತು. ಚೆನ್ನೈ ಸೂಪರ್ ಕಿಂಗ್ಸ್ 14 ಪಂದ್ಯಗಳಲ್ಲಿ 4 ಜಯ ಹಾಗೂ 10 ಸೋಲಿನೊಂದಿಗೆ 8 ಅಂಕ ಗಳಿಸಿ 9ನೇ ಸ್ಥಾನ ಪಡೆದಿದೆ.
ರಾಜಸ್ಥಾನ್ ರಾಯಲ್ಸ್ ತಂಡ ಒಂದು ಹಂತದಲ್ಲಿ ಯಶಸ್ವಿ ಜೈಸ್ವಾಲ್ ಸಿಡಿಲಬ್ಬರದ ಅರ್ಧಶತಕದ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಅನುಭವಿಸಿತು. ಯಶಸ್ವಿ ಜೈಸ್ವಾಲ್ 44 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 59 ರನ್ ಬಾರಿಸಿದರು.
ಆದರೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದ ಆರ್.ಅಶ್ವಿನ್ 23 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ ಅಜೇಯ 40 ರನ್ ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಮತ್ತೊಂದು ತುದಿಯಲ್ಲಿದ್ದ ರಿಯಾಗ್ ಪರಾಗ್ 10 ಎಸೆತಗಳಲ್ಲಿ 1 ಬೌಂಡರಿ ಸೇರಿದ 10 ರನ್ ಗಳಿಸಿದ್ದೂ ಅಲ್ಲದೇ ಅಶ್ವಿನ್ ಜೊತೆ ಮುರಿಯದ 6ನೇ ವಿಕೆಟ್ ಗೆ 39 ರನ್ ಜೊತೆಯಾಟ ನಿಭಾಯಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಚೆನ್ನೈ ತಂಡ ಶತಕ ವಂಚಿತ ಮೊಯಿನ್ ಅಲಿ ಹೋರಾಟದ ಹೊರತಾಗಿಯೂ ಸಾಧಾರಣ ಮೊತ್ತ ಕಲೆ ಹಾಕಿತು. ಮೊಯಿನ್ ಅಲಿ 57 ಎಸೆತಗಳಲ್ಲಿ 13 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 93 ರನ್ ಸಿಡಿಸಿದರು. ಕೆಳ ಕ್ರಮಾಂಕದಲ್ಲಿ ಮಹೇಂದ್ರ ಸಿಂಗ್ ಧೋನಿ 28 ಎಸೆತಗಳಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ 26 ರನ್ ಬಾರಿಸಿದರು.
ರಾಜಸ್ಥಾನ್ ಪರ ಯಜುರ್ವೆಂದ್ರ ಚಾಹಲ್ ಮತ್ತು ಒಬೆಡ್ ಮೆಕೊಯ್ ತಲಾ 2 ವಿಕೆಟ್ ಪಡೆದು ಚೆನ್ನೈ ರನ್ ವೇಗಕ್ಕೆ ಬ್ರೇಕ್ ಹಾಕಿದರು.