ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಈ ಬಾರಿ ಇದಕ್ಕೊಂದು ಕಲಶಪ್ರಾಯ ಎಂಬಂತೆ ವೂಮನ್ ಪ್ರೀಮಿಯರ್ ಲೀಗ್ ಕೂಡ ಸೇರಿಕೊಂಡಿದೆ. ಡಬ್ಲುಪಿಎಲ್ 2023 ಸದ್ಯ ಅಂತಿಮ ಘಟ್ಟವನ್ನು ತಲುಪುತ್ತಿದೆ. ವೂಮನ್ ಪ್ರೀಮಿಯರ್ ಲೀಗ್ ಮುಗಿಯುತ್ತಿದ್ದಂತೆಯೇ ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ 16ನೇ ಆವೃತ್ತಿಯನ್ನು ಆರಂಭಿಸಲಿದೆ.
ಮಾರ್ಚ್ 31ರಂದು ಐಪಿಎಲ್ 16ನೇ ಆವೃತ್ತಿ ಆರಂಭಗೊಳ್ಳಲಿದ್ದು ಈ ಬಾರಿಯಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯುತ್ತಾ ಎಂಬ ನಿರೀಕ್ಷೆ ಅನೇಕರಲ್ಲಿದೆ. ಏಪ್ರಿಲ್ 2ನೇ ತಾರೀಖಿನಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಆವೃತ್ತಿಯ ತನ್ನ ಮೊದಲ ಪಂದ್ಯವನ್ನಾಡಲು ಸಜ್ಜಾಗಿದೆ. ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆರ್ಸಿಬಿ ಸೆಣೆಸಲಿದ್ದು ಈ ಪಂದ್ಯದ ಟಿಕೆಟ್ ಹಾಟ್ ಕೇಕ್ನಂತೆ ಸೇಲ್ ಆಗ್ತಿದೆ.
ಆರ್ಸಿಬಿ ಅಧಿಕೃತ ವೆಬ್ಸೈಟ್ನಲ್ಲಿಯೇ ಟಿಕೆಟ್ ಖರೀದಿ ಮಾಡಬಹುದಾಗಿದ್ದು 2310 ರೂಪಾಯಿಗಳಿಂದ 42 ಸಾವಿರ ರೂಪಾಯಿಗಳವರೆಗೆ ಟಿಕೆಟ್ ಖರೀದಿ ಮಾಡಬಹುದಾಗಿದೆ. ಆದರೆ ಈಗಾಗಲೇ ಬಹುತೇಕ ಎಲ್ಲಾ ಟಿಕೆಟ್ಗಳು ಸೋಲ್ಡ್ಔಟ್ ಆಗಿದ್ದು ಬಾಕಿ ಉಳಿದಿರುವ ಕೆಲವೇ ಕೆಲವು ಟಿಕೆಟ್ಗಳಿಗಾಗಿ ಕ್ರಿಕೆಟ್ ಪ್ರಿಯರ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಕೊರೊನಾ ಕಾರಣದಿಂದಾಗಿ ಕಳೆದ ಮೂರು ವರ್ಷಗಳಿಂದ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಗಳ ಟಿಕೆಟ್ಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವೆಬ್ಸೈಟ್ನಲ್ಲಿ ಬುಕ್ ಮಾಡಬಹುದಾಗಿದೆ. ಆರಂಭಿಕ ಬೆಲೆ 2310 ರೂಪಾಯಿಗಳಿಂದ 42350 ರೂಪಾಯಿಗಳವರೆಗೆ ಟಿಕೆಟ್ಗಳು ಲಭ್ಯವಿದೆ. ಇದರ ಜೊತೆಯಲ್ಲಿ ಬಾಕ್ಸಾಫೀಸ್ ಕೌಂಟರ್ಗಳಲ್ಲಿಯೂ ಟಿಕೆಟ್ ಖರೀದಿ ಮಾಡಬಹುದಾಗಿದೆ. ಅನೇಕರು ವೆಬ್ಸೈಟ್ನಲ್ಲಿ ಟಿಕೆಟ್ ಬುಕ್ ಮಾಡಿದ್ದರೆ ಇನ್ನೂ ಕೆಲವರು ಬಿಸಿಲನ್ನೂ ಲೆಕ್ಕಿಸದೇ ಕೌಂಟರ್ಗಳಲ್ಲಿ ಟಿಕೆಟ್ ಖರೀದಿ ಮಾಡ್ತಿದ್ದಾರೆ.