ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್ ಸಿಡಿಲಬ್ಬರದ ಆಟದಿಂದ ಗುಜರಾತ್ ಟೈಟಾನ್ಸ್ 3 ವಿಕೆಟ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಂತಿಮ ಎಸೆತದಲ್ಲಿ ರೋಚಕ ಜಯ ಸಾಧಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ.
ಪುಣೆಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಗೆ 165 ರನ್ ಗಳಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಗುಜರಾತ್ ಟೈಟಾನ್ಸ್ 19.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಒಂದು ಹಂತದಲ್ಲಿ 87 ರನ್ ಗೆ 5 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದ ತಂಡವನ್ನು ಮಿಲ್ಲರ್ ಮತ್ತು ರಶೀದ್ ಖಾನ್ 6ನೇ ವಿಕೆಟ್ ಗೆ 70 ರನ್ ಜೊತೆಯಾಟ ನಿಭಾಯಿಸಿದರು.

ಮಿಲ್ಲರ್ 51 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್ ಸೇರಿದ 94 ರನ್ ಬಾರಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರೆ, ರಶೀದ್ ಖಾನ್ 21 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 40 ರನ್ ಬಾರಿಸಿ ಔಟಾದರು.
ಚೆನ್ನೈ ಪರ ಡ್ವೈನ್ ಬ್ರಾವೊ 3 ವಿಕೆಟ್ ಕಿತ್ತರೆ, ಮಹೇಶ್ ತೀಕ್ಷಣ 2, ಮುಖೇಶ್ ಚೌಧರಿ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಗಳಿಸಿದರು.