ಫೆಬ್ರವರಿ 16ರಂದು ದುಬೈನಲ್ಲಿ ನಡೆಯಲಿದೆ ಅದ್ದೂರಿ ಸಮಾರಂಭ .
ಕನ್ನಡ ನುಡಿಯ ತಂಪು, ಗಂಧದ ಗುಡಿಯ ಕಂಪನ್ನ ದುಬೈ ನಲ್ಲಿ ಮೆರೆಸೋಕೆ ಅಚ್ಚ ಕನ್ನಡದ ತಂಡ overseas entertainment, G KD investments LLC ಅವರ ಸಹಕಾರದೊಂದಿಗೆ ಪ್ರಸ್ತುತ ಪಡಿಸುತ್ತಿರುವ ಅಚ್ಚ ಕನ್ನಡದ, ಅವರ ಸಹಕಾರದೊಂದಿಗೆಕನ್ನಡಿಗರ ಹೆಮ್ಮೆಯ ಹಿರಿಮೆಯ ಕಾರ್ಯಕ್ರಮ “ಅಂತರಾಷ್ಟ್ರೀಯ ಗಂಧದ ಗುಡಿ ಪ್ರಶಸ್ತಿ – 2025” ಫೆಬ್ರವರಿ 16 ರಂದು ದುಬೈನಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟಿ ತಾರಾ ಅನುರಾಧ, ನಟ ಸುಚೇಂದ್ರ ಪ್ರಸಾದ್, ನಟ ವಿಜಯ ರಾಘವೇಂದ್ರ ಹಾಗೂ ಸಮಾರಂಭದ ಆಯೋಜಕರಾದ ಪೀಟರ್ ಉಪಸ್ಥಿತರಿದ್ದರು. ಪತ್ರಿಕಾಗೋಷ್ಠಿಗೂ ಮುನ್ನ ಸಂಜಯ್ ಗೌಡ ಅವರು ಪ್ರಶಸ್ತಿ ಪ್ರದಾನ ಸಮಾರಂಭ ಯಶಸ್ವಿಯಾಗಲೆಂದು ಹಾರೈಸಿದರು. ನಂತರ ಆಗಮಿಸಿದ ಗಣ್ಯರು ಹಾಗೂ ಆಯೋಜಕರು ಮಾತನಾಡಿದರು
ಕನ್ನಡದ ಹೆಮ್ಮೆಯ ಸಾಧಕರನ್ನ, ಅವರ ಅಪ್ರತಿಮ ಸಾಧನೆಯನ್ನ ಗುರುತಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವಿಸೋ ಒಂದು ಅಂತರಾಷ್ಟ್ರೀಯ ಕನ್ನಡ ಸಾಂಸ್ಕೃತಿಕ ಅಲೆಯನ್ನ ದುಬೈ ನಲ್ಲಿ ಹುಟ್ಟು ಹಾಕೋ ಆಕಾಂಕ್ಷೆಯಿಂದ ಈ ಸಮಾರಂಭವನ್ನು ಆಯೋಜಿಸಿದ್ದೇವೆ.
ದುಬೈ ಕನ್ನಡಿಗರನ್ನೆಲ್ಲ ಒಟ್ಟುಗೂಡಿಸಿ, ಒಂದು ಕಡೆ ಸೇರಿಸಿ ಕನ್ನಡ ಸಂಸ್ಕೃತಿಯ ಸೆಲೆಯನ್ನ, ಕನ್ನಡ ಚಂದನವನದ ಕಲೆಯನ್ನು ಸಂಭ್ರಮಿಸುವ ಉದ್ದೇಶವೂ ಹೌದು. ಫೆಬ್ರವರಿ 16 ರಂದು ದುಬೈನಲ್ಲಿ ಅದ್ದೂರಿ ಸಮಾರಂಭ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಆತಿಥ್ಯವನ್ನ ಜನಪ್ರಿಯ ನಾಯಕರಾದ ಶಿವರಾಜ್ ತಂಗಡಗಿ, ಡಿಕೆ ಸುರೇಶ್, ಸಂಸದ ಹಾಗೂ ರಾಜ ವಂಶಸ್ಥರಾದ ಶ್ರೀ ಯದುವೀರ್ ಕೃಷ್ಣರಾಜ ಒಡೆಯರ್, ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ , ಆರತಿ ಕೃಷ್ಣ ಹಾಗು ಕೆಪಿ ಶ್ರೀಕಾಂತ್ ವಹಿಸಲಿದ್ದಾರೆ. ಇಡೀ ಕಾರ್ಯಕ್ರಮವನ್ನ ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗಿದ್ದು, ಇಷ್ಟು ದೊಡ್ಡ ವೇದಿಕೆಗೆ ಸಾರಥಿಯಾಗಿ ಕನ್ನಡದ ಹೆಸರಾಂತ ನಿರೂಪಕಿ ಅನುಶ್ರೀ ಹಾಗೂ ಕನ್ನಡದ ಹೆಸರಾಂತ ನಾಯಕ ವಿಜಯ್ ರಾಘವೇಂದ್ರ ನಿರೂಪಕರಾಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಪುಣ್ಯ ಕನ್ನಡ ಭೂಮಿಯಲ್ಲಿ ಹುಟ್ಟಿ ತಮ್ಮ ಸಾಧನೆಯ ಮೂಲಕ ವಿಶ್ವದಾದ್ಯಂತ ಬೆಳಗಿದ ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.. ಚಿತ್ರರಂಗದಲ್ಲಿನ ಸಾಧನೆಗೆ, ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗೆ, ಸಾಹಿತ್ಯದಲ್ಲಿ, ಪತ್ರಿಕೋದ್ಯಮದಲ್ಲಿ, ವೈದ್ಯಕೀಯ ಸೇವೆ, ಶಿಕ್ಷಣ, ಕಾನೂನು ಹೇಗೆ ಹಲವು ಕ್ಷೇತ್ರದ ಸಾಧಕರಿಗೆ ವಿಶೇಷ ಗೌರವ ಸನ್ಮಾನ ನೀಡಿ ಗೌರವಿಸಲಾಗುವುದು. ಈ ಬಾರಿ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನಟಿ ತಾರಾ ಅನುರಾಧ ಅವರಿಗೆ ನೀಡಲಾಗುತ್ತಿದೆ. ಇನ್ನು ನಮಗೆ ಮಾರ್ಗದರ್ಶಿಗಳಾಗಿ ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರಿದ್ದಾರೆ. ಸುಚೇಂದ್ರ ಪ್ರಸಾದ್ ಅವರು ಸಹ ಇಂದು ನಮ್ಮ ಜೊತೆಗಿದ್ದಾರೆ. ಇನ್ನು ಅಂದು ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಹೆಸರಾಂತ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಮತ್ತು ತಂಡದವರಿಂದ ಕನ್ನಡದ ಸುಪ್ರಸಿದ್ಧ ಹಾಡುಗಳ ಸಂಗೀತ ರಸಸಂಜೆ ಸಮಾರಂಭವಿರುತ್ತದೆ ದಯವಿಟ್ಟು ಈ ಪ್ರಶಸ್ತಿ ಸಮಾರಂಭದ ವಿಷಯವನ್ನು ತಮ್ಮ ಘನ ಮಾಧ್ಯಮದ ಮೂಲಕ ಎಲ್ಲರಿಗೂ ತಲುಪಿಸಬೇಕೆಂದು ಆಯೋಜಕ ಪೀಟರ್ ವಿನಂತಿಸಿದರು.
ನನಗೆ ಪೀಟರ್ ಅವರು ಬಹು ದಿನಗಳ ಪರಿಚಯ. ಅವರು ಈವರೆಗೂ ದುಬೈನಲ್ಲಿ ನನ್ನ ನಿರ್ಮಾಣದ ಚಿತ್ರಗಳು ಸೇರಿದಂತೆ ಅನೇಕ ಕನ್ನಡ ಚಿತ್ರಗಳನ್ನು ಪ್ರದರ್ಶನ ಮಾಡಿದ್ದಾರೆ. ಈಗ “ಅಂತರಾಷ್ಟ್ರೀಯ ಗಂಧದ ಗುಡಿ ಪ್ರಶಸ್ತಿ – 2025”ಯನ್ನು ಕನ್ನಡಿಗರಿಗಾಗಿ ದುಬೈನಲ್ಲಿ ಅದ್ದೂರಿಯಾಗಿ ಆಯೋಜಿಸುತ್ತಿದ್ದಾರೆ ಸಮಾರಂಭ ಯಶಸ್ವಿಯಾಗಲಿ ಎಂದು ರಾಕ್ ಲೈನ್ ವೆಂಕಟೇಶ್ ಹಾರೈಸಿದರು.
ನನಗೆ ಈ ಹಿಂದೆ ಕೂಡ ಸಮಾರಂಭಕ್ಕೆ ಆಹ್ವಾನ ನೀಡಿದ್ದರು. ಹೋಗಲಿಕ್ಕೆ ಆಗಿರಲಿಲ್ಲ. ಈಗ “ಜೀವಮಾನದ ಸಾಧನೆ” ಪ್ರಶಸ್ತಿ ನೀಡುತ್ತಿದ್ದಾರೆ. ಸಂತೋಷ. ಆದರೆ, ಸಾಧನೆ ಮಾಡಬೇಕಾಗಿರುವುದು ಬಹಳ ಇದೆ. ಅಂತರಾಷ್ಟ್ರೀಯ ಪ್ರಶಸ್ತಿ ಎಂದಾಗ ನಾನು ಪೀಟರ್ ಅವರ ಬಗ್ಗೆ ಕೇಳಿ ತಿಳಿದುಕೊಂಡೆ. ಅವರ ಉದ್ದೇಶ ಚೆನ್ನಾಗಿದೆ. ಇವರು ಕನ್ನಡ ಶಾಲೆಗಳನ್ನು ಜೀರ್ಣೋದ್ಧಾರ ಮಾಡುತ್ತಿರುವ ವಿಷಯ ತಿಳಿದು ಇನ್ನೂ ಸಂತೋಷವಾಯಿತು ಎಂದು ತಾರಾ ಅನುರಾಧ ತಿಳಿಸಿದರು.
ಪೀಟರ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಸಮಾರಂಭ ಯಶಸ್ವಿಯಾಗಿ ನಡೆಯಲಿ ಎಂದರು ನಟ ಸುಚೇಂದ್ರ ಪ್ರಸಾದ್.
ಪೀಟರ್ ಅವರು ನನಗೆ ಬಹು ದಿನಗಳ ಪರಿಚಯ. ಅವರು ಕನ್ನಡಿಗರಿಗಾಗಿ ಆಯೋಜಿಸುತ್ತಿರುವ ಈ ಸಮಾರಂಭದ ನಿರೂಪಣೆ ಮಾಡುತ್ತಿರುವುದು ಖುಷಿಯಾಗಿದೆ ಎಂದು ನಟ ವಿಜಯ ರಾಘವೇಂದ್ರ ಹೇಳಿದರು.