ಪಂಚ ಗ್ಯಾರಂಟಿಗಳಿಗಾಗಿ ವರ್ಷಕ್ಕೆ ೬೦ ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ೫ ವರ್ಷಕ್ಕೆ ೩ ಲಕ್ಷ ಕೋಟಿ ಹಣವನ್ನು ವ್ಯಯಿಸಲಾಗುತ್ತಿದೆ. ಮಹಿಳೆಯರ ಕೆಲಸವನ್ನು ಗೌರವಸುವ ನಿಟ್ಟಿನಲ್ಲಿ ಗೃಹ ಲಕ್ಷ್ಮಿ ಹಣವನ್ನು ನೀಡಲಾಗುತ್ತಿದೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್ ಲಾಡ್ ಅವರು ಹೇಳಿದರು.

ಇಲ್ಲಿನ ಕೆ.ಸಿ.ಡಿ ಕಾಲೇಜು ಆವರಣದಲ್ಲಿರುವ ಶ್ರೀ ಅಣ್ಣಾಜಿರಾವ ಶಿರೂರ (ಸೃಜನಾ) ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಮತ್ತು ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಜಿಲ್ಲಾ ಮಟ್ಟದ ಗ್ಯಾರಂಟಿ ಕಾರ್ಯಾಗಾರ ಮತ್ತು ಗ್ಯಾರಂಟಿ ಉತ್ಸವವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಮೂಲಕ ನಿಮ್ಮ ಹಣವನ್ನು ನಿಮಗೆ ನೀಡುತ್ತಿದ್ದೇವೆ. ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರ ಸರ್ಕಾರದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ ಜಾರಿಗೆ ತರಲಾಯಿತು. ಉಳುವವನೇ ಭೂಮಿಯ ಒಡೆಯ ಕಾರ್ಯಕ್ರಮ ಜಾರಿಗೊಳಿಸಲಾಗಿತ್ತು. ಆಹಾರ ಭದ್ರತೆ ಕಾನೂನು ಜಾರಿಗೆ ತಂದರು. ದೇಶದಲ್ಲಿ ಸರಿ ಸುಮಾರು ೭೦ ಕೋಟಿ ಜನರಿಗೆ ಅನ್ನ ದೊರೆಯುತ್ತಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಸಹ ಕಾರ್ಮಿಕ ಇಲಾಖೆಯಿಂದ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಈ ದೇಶವು ೧೪೫ ಕೋಟಿ ಜನರ ಆಸ್ತಿಯಾಗಿದೆ. ೬೦೦ ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಆ ಮೂಲಕ ರಾಜ್ಯದ ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಮಾರ್ಚ್ ೮ ರಂದು ಮಹಿಳಾ ದಿನಾಚರಣೆ ಆಚರಣೆ ಮಾಡಲಾಗುತ್ತದೆ. ಮಹಿಳೆಯರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನೆನೆಯಬೇಕು ಎಂದು ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಅವರು ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಗ್ಯಾರಂಟಿ ಯೋಜನೆಗಳು ತಲುಪಬೇಕು. ಧಾರವಾಡ ಜಿಲ್ಲೆಯ ಶೇ.೯೮ ರಷ್ಟು ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳ ಹಣವನ್ನು ನೇರವಾಗಿ ತಲುಪಿಸಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಇಡೀ ರಾಜ್ಯದಲ್ಲೇ ಧಾರವಾಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಿದರು.
ಸುಮಾರು ೧ ಲಕ್ಷ ಕೋಟಿ ಜನರಿಗೆ ನೇರವಾಗಿ ಹಣ ಸಂದಾಯ ಮಾಡಲಾಗುತ್ತಿದೆ. ೬೩೮ ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತವಾಗಿ ಬಸಗಳಲ್ಲಿ ಸಂಚಾರ ಮಾಡಿದ್ದಾರೆ. ಶಕ್ತಿ ಯೋಜನೆಗೆ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ನಂತಹ ಸಂಸ್ಥೆಗಳಿAದ ಪ್ರಶಸ್ತಿ, ಪ್ರಮಾಣಪತ್ರಗಳು ಲಭಿಸಿವೆ. ಗೃಹ ಲಕ್ಷ್ಮಿ, ಗೃಹ ಜ್ಯೋತಿ ಹಾಗೂ ಯುವ ನಿಧಿ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುತ್ತಿವೆ ಎಂದು ಅವರು ಬಣ್ಣಿಸಿದರು. ಶಾಸಕರಾದ ಎನ್.ಎಚ್.ಕೋನರಡ್ಡಿ ಅವರು ಮಾತನಾಡಿ, ನುಡಿದಂತೆ ನಡೆದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು. ಪಂಚ ಗ್ಯಾರಂಟಿ ಯೋಜನೆಗಳನ್ನು ೫ ವರ್ಷಗಳ ಕಾಲ ನಿರಂತರವಾಗಿ ನೀಡುತ್ತೇವೆ. ಮಹಿಳೆಯರ ಮನದಾಳ ಮಾತುಗಳಿಂದ ಗ್ಯಾರಂಟಿ ಯೋಜನೆಗಳು ಯಾವ ರೀತಿಯಲ್ಲಿ ತಲುಪುತ್ತಿವೆ ಎಂಬುದನ್ನು ತಿಳಿಯಬಹುದಾಗಿದೆ ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಬೆಳಗಾವಿ ವಿಭಾಗದ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ಧಾರವಾಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪಾಟೀಲ ಅವರು ಮಾತನಾಡಿದರು.

ಗ್ಯಾರಂಟಿ ಯೋಜನೆಗಳ ಕುರಿತು ಡಾ.ವಾಸು ಎಚ್. ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಅಧ್ಯಕ್ಷ ಸೈಯದ್ ಸೈಯದ್ ಅಜೀಮ್‌ಪೀರ್ ಎಸ್.ಖಾದ್ರಿ, ವಿಧಾನ ಪರಿಷತ್ ಸದಸ್ಯ ಎಫ್.ಹೆಚ್.ಜಕ್ಕಪ್ಪನವರ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಸೇರಿದಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಫಲಾನುಭವಿಗಳು, ಸಾರ್ವಜನಿಕರು ಇತರರು ಭಾಗವಹಿಸಿದ್ದರು.











