ಬೆಂಗಳೂರು : ಸಿಎಂ ಬದಲಾವಣೆಯ ವದಂತಿಗಳು ರಾಜ್ಯ ರಾಜಕಾರಣದ ಪಡಸಾಲೆಯಲ್ಲಿ ಹರಿದಾಡುತ್ತಿರುವಂತೆಯೇ ಮತ್ತೊಂದು ಬೆಳವಣಿಗೆಗೆ ನಡೆದಿದೆ.ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು , ಸಿಎಂ ರೇಸಿನಲ್ಲಿರುವ ಸತೀಶ್ ಜಾರಕಿಹೊಳಿಯನ್ನು ತಮ್ಮ ಬೆಂಬಲಿಗರೊಡನೆ ಭೇಟಿ ಮಾಡಿ ಕುತೂಹಲ ಮೂಡಿಸಿದ್ದಾರೆ.
ಶಿಕಾರಿಪುರದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಕುಟ್ರಳ್ಳಿ ಟೋಲ್ ನಿಂದಾಗಿ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಈ ಟೋಲ್ ನ್ನು ತೆರವುಗೊಳಿಸಬೇಕೆಂದು ಮನವಿ ನೀಡುವ ಸಲುವಾಗಿ ಭೇಟಿಯಾಗಿರುವುದಾಗಿ ವಿಜಯೇಂದ್ರ ಹೇಳಿದ್ದಾರೆ. ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿಯವರಿಗೆ ಈ ಕುರಿತು ಮನವಿ ಪತ್ರವನ್ನೂ ಸಲ್ಲಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ದಸರಾ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತ ಎಂದು ವಿಜಯೇಂದ್ರ ಹೇಳಿಕೆ ನೀಡಿ ಎಲ್ಲರಲ್ಲಿ ,ಅಚ್ಚರಿ ಮೂಡಿಸಿದ್ದರು. ಇದೇ ವೇಳೆ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಗಳ ಪೈಕಿ ಒಬ್ಬರಾಗಿರುವ ಸತೀಶ್ ಜಾರಕಿಹೊಳಿ ಎಐಸಿಸಿ ಅಧ್ಯಕ್ಷರು ಹಾಗೂ ಗೃಹಸಚಿವ ಜಿ. ಪರಮೇಶ್ವರ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚೆ ನಡೆಸಿದ್ದರು. ಇದು ದಲಿತ ಸಿಎಂ ಚರ್ಚೆಯನ್ನು ಹುಟ್ಟುಹಾಕಿತ್ತು. ಇದರ ಬೆನ್ನಲ್ಲೇ ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂದು ಅಭಿಮಾನಿಗಳು ಘೋಷಣೆ ಕೂಗುವ ಮೂಲಕ ಈ ವದಂತಿಗೆ ಇನ್ನಷ್ಟು ಪುಷ್ಠಿ ನೀಡಿದ್ದರು.