• Home
  • About Us
  • ಕರ್ನಾಟಕ
Friday, November 21, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಅಂತರ್ಜಾತಿ ವಿವಾಹಗಳು ಮತ್ತು ಸಮಾಜ ಪರಿವರ್ತನೆ

ನಾ ದಿವಾಕರ by ನಾ ದಿವಾಕರ
June 19, 2023
in ಅಂಕಣ
0
ಅಂತರ್ಜಾತಿ ವಿವಾಹಗಳು ಮತ್ತು ಸಮಾಜ ಪರಿವರ್ತನೆ
Share on WhatsAppShare on FacebookShare on Telegram

ಶ್ರೇಣೀಕೃತ ಜಾತಿ ಗೋಡೆಗಳು ಮತ್ತು ಮೆಟ್ಟಿಲುಗಳ ನಡುವೆ ಮನುಜ ಸಂವೇದನೆಯ ಶೋಧ

ADVERTISEMENT

ಡಾ. ಬಿ. ಆರ್.‌ ಅಂಬೇಡ್ಕರ್‌ ಭಾರತದ ಶ್ರೇಣೀಕೃತ ಸಮಾಜವನ್ನು ಮೆಟ್ಟಿಲುಗಳಿಲ್ಲದ ಬಹುಅಂತಸ್ತಿನ  ಕಟ್ಟಡಕ್ಕೆ ಹೋಲಿಸುತ್ತಾರೆ. ಅಂದರೆ ಒಂದು ನಿರ್ದಿಷ್ಟ ಜಾತಿಯಲ್ಲಿ ಹುಟ್ಟಿದ ವ್ಯಕ್ತಿ ತನ್ನ ಸಾಮಾಜಿಕ ಶ್ರೇಣಿಯಲ್ಲಿ ಮೇಲ್ದರ್ಜೆಗೆ ಏರುವುದಾಗಲೀ, ಕೆಳದರ್ಜೆಗೆ ಕುಸಿಯುವುದಾಗಲೀ ಸಾಧ್ಯವೇ ಇಲ್ಲದಂತಹ ಒಂದು ಸಾಮಾಜಿಕ ಚೌಕಟ್ಟನ್ನು ಭಾರತದ ಸಾಮಾಜಿಕ ವ್ಯವಸ್ಥೆ ನಿರ್ಮಿಸಿದೆ. ಹುಟ್ಟಿನಿಂದಲೇ ಗುರುತಿಸಲ್ಪಡುವ ಜಾತಿಯ ನೆಲೆಗಳು ಭಿನ್ನ ಕಸುಬುಗಳನ್ನು ಅನುಸರಿಸಿದಾಗಲೂ ಶಿಥಿಲವಾಗದ ರೀತಿಯಲ್ಲಿ ಜಾತಿ ವ್ಯವಸ್ಥೆ ತನ್ನ ಬೇರುಗಳನ್ನು ಬಿಟ್ಟಿದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಪ್ರತಿಯೊಂದು ಜಾತಿಯೂ ಒಂದು ಮುಚ್ಚಲ್ಪಟ್ಟ ವರ್ಗ ಎಂದೇ  ವ್ಯಾಖ್ಯಾನಿಸುವ ಡಾ ಬಿ.ಆರ್.‌ ಅಂಬೇಡ್ಕರ್‌, ಈ ವರ್ಗ ತಾರತಮ್ಯಗಳನ್ನು ಹೋಗಲಾಡಿಸಿ ಹುಟ್ಟಿನಿಂದಲೇ ಅಂಟಿಕೊಂಡು ಬರುವ ಜಾತಿ ಸೋಂಕುಗಳನ್ನು ತೊಡೆದುಹಾಕಲು ಸಹಭೋಜನ ಮತ್ತು ಅಂತರ್ಜಾತಿ ವಿವಾಹಗಳನ್ನು ಪ್ರಧಾನ ಅಸ್ತ್ರಗಳಾಗಿ ಪರಿಗಣಿಸುತ್ತಾರೆ.

ಜಾತಿ ಸಮಾಜದ ತಳಹದಿ

“ ಜಾತಿಯ ಅಡಿಪಾಯದ ಮೇಲೆ ನೀವು ಏನನ್ನೂ ನಿರ್ಮಿಸಲು ಸಾಧ್ಯವಾಗುವುದಿಲ್ಲ, ಒಂದು ರಾಷ್ಟ್ರವನ್ನೂ ನಿರ್ಮಿಸಲು ಸಾಧ್ಯವಿಲ್ಲ, ನೈತಿಕ ಸಮಾಜವನ್ನೂ ನಿರ್ಮಿಸಲಾಗುವುದಿಲ್ಲ. ಜಾತಿಯ ಅಡಿಪಾಯದ ಮೇಲೆ ನೀವು ನಿರ್ಮಿಸುವ ಯಾವುದೇ ಆದರೂ ಅದು ಅಪೂರ್ಣವಾಗಿಯೇ ಉಳಿಯುತ್ತದೆ ಅಥವಾ ಒಡೆದುಹೋಗುತ್ತದೆ ” ಎಂದು ತಮ್ಮ Annihilation of Caste ಪುಸ್ತಕದಲ್ಲಿ ಅಂಬೇಡ್ಕರ್‌ ಹೇಳುತ್ತಾರೆ. ಈ ಸುಭದ್ರ ಅಡಿಪಾಯವನ್ನು ಭೇದಿಸದೆ ಹೋದರೆ ಅಥವಾ ಸಡಿಲಗೊಳಿಸದೆ ಹೋದರೆ ಜಾತಿ ವ್ಯವಸ್ಥೆಯ ಭದ್ರ ಕೋಟೆಗಳು ಶತಮಾನಗಳು ಕಳೆದರೂ ಯಥಾಸ್ಥಿತಿಯಲ್ಲಿರುತ್ತವೆ ಎನ್ನುವುದನ್ನು ಭಾರತದ ಸಾಮಾಜಿಕ ಇತಿಹಾಸವೇ ನಿರೂಪಿಸಿದೆ. ಕೈಗಾರಿಕೀಕರಣದಿಂದ ಜಾತಿ ಭೇದದ ಗೋಡೆಗಳು ಶಿಥಿಲವಾಗುವ ಅಥವಾ ಸಡಿಲವಾಗುವ ಸಾಧ್ಯತೆಗಳಿರುವುದಾದರೂ,  ಇದು ಮೇಲ್ನೋಟಕ್ಕೆ ಕಾಣಬಹುದಾದ ಬದಲಾವಣೆಯಾಗಿ ಮಾತ್ರವೇ ಕಂಡುಬರುತ್ತದೆ. ವ್ಯಕ್ತಿಗತ ನೆಲೆಯಲ್ಲಿ, ಕೌಟುಂಬಿಕ ಚೌಕಟ್ಟಿನಲ್ಲಿ ತಮ್ಮ ಸ್ವಜಾತಿ ನೆಲೆಯ ಆಚರಣೆ ಮತ್ತು ನಂಬಿಕೆಗಳನ್ನು ಉಳಿಸಿಕೊಂಡೇ ಬರುವ ಮೇಲ್ಜಾತಿಯ ಮಂದಿ ಬಾಹ್ಯ ಸಮಾಜದ ಅನಿವಾರ್ಯತೆಗಳಿಗೆ ಮಣಿದು ಜಾತಿ ಗೆರೆಗಳನ್ನು ದಾಟಿ ನಡೆಯುವುದನ್ನು ಇಂದಿಗೂ ಕಾಣಬಹುದು.

ಇವತ್ತಿನ ಸಾಮಾಜಿಕ ವಾತಾವರಣದಲ್ಲಿ ಸಹಭೋಜನ ಎನ್ನುವುದು ಸಾರ್ವಜನಿಕವಾಗಿ ಸಮಸ್ಯಾತ್ಮಕವಾಗಿ ಕಾಣದೆ ಹೋದರೂ, ನಿರ್ದಿಷ್ಟ ಜಾಗಗಳಲ್ಲಿ, ಮೇಲ್ಜಾತಿಯ ಮಠ-ದೇವಾಲಯಗಳಲ್ಲಿ ಇಂದಿಗೂ ಸಹ ಪಂಕ್ತಿ ಭೇದದ ಆಚರಣೆಗಳು ಇದ್ದೇ ಇರುವುದನ್ನು ಗಮನಿಸಬೇಕಿದೆ. ಸಾರ್ವಜನಿಕ ಜೀವನದಲ್ಲಿ ಜಾತಿ ಸೂಚಕಗಳನ್ನು ಗುರುತಿಸುವುದೂ ಸಹ ಕಷ್ಟವಾಗಿರುವುದರಿಂದ, ಬಾಹ್ಯ ಸಮಾಜದ ದೈನಂದಿನ ಚಟುವಟಿಕೆಗಳಲ್ಲಿ ಜಾತಿ ಲಕ್ಷಣಗಳಿಗೆ ಹೆಚ್ಚಿನ ಲಕ್ಷ್ಯ ಕೊಡಲು ಸಾಧ್ಯವಾಗುವುದಿಲ್ಲ. ಆದರೆ ನಿಷ್ಕೃಷ್ಟವಾಗಿ ಗುರುತಿಸಬಹುದಾದ ಜಾತಿ ಸೂಚಕಗಳು ಇದ್ದೆಡೆ ಇಂದಿಗೂ ಅಸ್ಪೃಶ್ಯತೆ ತಾಂಡವಾಡುತ್ತಿರುವುದನ್ನೂ ಇತ್ತೀಚಿನ ಕೆಲವು ಘಟನೆಗಳಲ್ಲಿ ಕಂಡಿದ್ದೇವೆ.  ಧಾರ್ಮಿಕ ಆಚರಣೆಗಳ ಎಷ್ಟೋ ಸಂದರ್ಭಗಳಲ್ಲಿ ಮೇಲ್ಜಾತಿಯ ಪುರೋಹಿತಶಾಹಿಯು ಅನ್ಯ ಜಾತಿಗಳನ್ನು ನಿರ್ಬಂಧಿಸಲು ಕೆಲವು ಕಟ್ಟಳೆಗಳನ್ನೋ ಅಥವಾ ಅನುಸರಿಸಲೇಬೇಕಾದ ನಿಬಂಧನೆಗಳನ್ನೋ ಮುಂದಿಟ್ಟುಕೊಂಡು, ಅನ್ಯ ಜಾತಿಗಳನ್ನು ಗೆರೆಗಳಿಂದಾಚೆಗೆ ಉಳಿಸಿಕೊಳ್ಳುವುದನ್ನು ಕೌಟುಂಬಿಕ ಆಚರಣೆಗಳಲ್ಲೂ ಗಮನಿಸಬಹುದು. ಮೂಲತಃ ಜಾತಿ ವ್ಯವಸ್ಥೆಯ ಮೂಲ ಸ್ಥಾಯಿಯಾದ “ಮುಟ್ಟಿಸಿಕೊಳ್ಳದ” ನಿಯಮ ನಿಬಂಧನೆಗಳು “ಮಡಿ ಮೈಲಿಗೆ”ಯ ಚೌಕಟ್ಟಿನೊಳಗೇ ಜಾರಿಯಾಗುವುದರಿಂದ, ಧಾರ್ಮಿಕ ವಿಧಿವಿಧಾನಗಳಲ್ಲಿ ಹೇರಲಾಗುವ ನಿರ್ಬಂಧಗಳೆಲ್ಲವೂ ವಿಶಾಲ ಸಮಾಜದ ಸ್ವೀಕೃತಿಯನ್ನು ಗಳಿಸಿಬಿಡುತ್ತವೆ. ಹಾಗಾಗಿ ಜಾತಿ ದಿಗ್ಬಂಧನಗಳು ಆಚರಣಾತ್ಮಕ ನಿಯಮಗಳ ರೂಪದಲ್ಲಿ ಕಾರ್ಯಗತವಾಗಿ, ಜಾತಿ ವ್ಯವಸ್ಥೆಯ ಮೂಲ ಸ್ಥಾಯಿಯನ್ನು ಉಳಿಸಿಕೊಳ್ಳುವುದು ಸಾಧ್ಯವಾಗುತ್ತದೆ.

ಈ ಜಾತಿ ಗೋಡೆಗಳನ್ನೂ ದಾಟಿ ಹೋಗಲು ಇರುವ ಏಕೈಕ ಅಸ್ತ್ರವೆಂದರೆ ಅಂತರ್ಜಾತಿ ವಿವಾಹಗಳು. ಹುಟ್ಟಿದ ಜಾತಿ ಗೋಡೆಗಳನ್ನು ಮೀರಿ ಅನ್ಯ-ಮೇಲ್ಜಾತಿಯ-ಕೆಳಜಾತಿಯ ವ್ಯಕ್ತಿಯೊಡನೆ ವಿವಾಹ ಸಂಬಂಧಗಳನ್ನು ಬೆಳೆಸುವ ಮೂಲಕ ವರ್ಣಸಂಕರದ ಹಾದಿಯನ್ನು ಸುಗಮಗೊಳಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ ಈ ವರ್ಣ ಸಂಕರದ ಮಾರ್ಗಗಳಲ್ಲೂ ಅನೇಕ ರೀತಿಯ ತಡೆಗೋಡೆಗಳನ್ನು ಸವರ್ಣೀಯ ಸಮಾಜ ಮತ್ತು ಅದರ ಸುತ್ತಲಿನ ಸಾಂಸ್ಕೃತಿಕ ಚಿಂತನೆಗಳು ಸೃಷ್ಟಿಸುತ್ತವೆ. ಕೆಲವು ವರ್ಷಗಳ ಹಿಂದೆ ದೇವನೂರು ಮಹದೇವ ಅವರು ತಮ್ಮ ಭಾಷಣವೊಂದರಲ್ಲಿ                     “ ಈಗ ವರ್ಣಸಂಕರ ತಡೆಯುವುದಕ್ಕೆ ದೇವರನ್ನೇ ಕಾವಲು ಮಾಡಲಾಗಿದೆ. ದೇಶದಲ್ಲಿ ವ್ಯವಸ್ಥಿತವಾಗಿ ಜಾತಿ ಆಚರಣೆ, ತಾರತಮ್ಯ, ಅನ್ಯಾಯ, ಸುಲಿಗೆಯನ್ನು ಒಪ್ಪಿಕೊಂಡು ಅವರೇ ಅದನ್ನು ಅನುಸರಿಸಿಕೊಂಡು ಹೋಗುವಂತಹ ವ್ಯವಸ್ಥೆ ಹುಟ್ಟು ಹಾಕಲಾಗಿದೆ “ ಎಂದು ಹೇಳಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇದೇ ಅಭಿವ್ಯಕ್ತಿಯ ಮತ್ತೊಂದು ಆಯಾಮವನ್ನು ಡಾ. ಅಂಬೇಡ್ಕರ್‌ ಅವರ ಈ ಮಾತುಗಳಲ್ಲೂ ಗುರುತಿಸಬಹುದು :- “ ಕೆಳಜಾತಿಯ ಸಂಗಾತಿಗಳು ವಿವಾಹದ ನಂತರದ ಬದುಕಿನಲ್ಲಿ ತಮ್ಮ ಜೀವನ ಶೈಲಿಯನ್ನು, ಆಹಾರ ಪದ್ಧತಿಯನ್ನು ಮತ್ತು ವರ್ತನೆಗಳನ್ನು ಪ್ರಬಲ ಜಾತಿಯ ಸಂಸ್ಕೃತಿಗೆ ತಕ್ಕಂತೆ ಬದಲಾಯಿಸಬೇಕಾದ ಒತ್ತಡಗಳನ್ನು ಎದುರಿಸಿದಾಗ, ಜಾತಿ ವ್ಯವಸ್ಥೆಯು ತನ್ನ  ಮೂಲ ತತ್ವಗಳ ಅಸ್ತಿತ್ವವನ್ನು ಕುಟಿಲ ರೀತಿಗಳಲ್ಲಿ ಬಲಪಡಿಸಿಕೊಳ್ಳುತ್ತದೆ ” ಎಂದು ಅಂಬೇಡ್ಕರ್‌ ಹೇಳುತ್ತಾರೆ.

ಈ ಕೆಲವು ದಾರ್ಶನಿಕ ಎಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಇಂದು ಒಂದು ನೆಲೆಯಲ್ಲಿ ಮಾನ್ಯತೆ ಪಡೆದುಕೊಳ್ಳುತ್ತಿರುವ ಅಂತರ್ಜಾತಿ ವಿವಾಹಗಳನ್ನು ಗಮನಿಸಬೇಕಾಗುತ್ತದೆ. ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿರುವುದೇ ಅಲ್ಲದೆ ಸಮಾಜದ ಸದಸ್ಯರ ಪ್ರತಿಯೊಂದು ಚಟುವಟಿಕೆಯನ್ನೂ ನಿಯಂತ್ರಿಸುವ ರೀತಿಯಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆಯ ಬೇರುಗಳು ಸಾಮಾಜಿಕ-ಸಾಂಸ್ಕೃತಿಕ ಬದುಕನ್ನು ಪ್ರಭಾವಿಸುತ್ತಿವೆ. ತುಳಿತಕ್ಕೊಳಗಾದ ತಳಸಮುದಾಯಗಳ ನೋವುಗಳೊಡನೆಯೇ ಶ್ರೇಷ್ಠತೆಯ ಮೇಲರಿಮೆಯೊಂದಿಗೆ ಶೋಷಣೆಯನ್ನು ಸಾಮಾನ್ಯೀಕರಿಸುವ ಅಥವಾ ವೈಭವೀಕರಿಸುವ ಮೇಲ್ಜಾತಿ/ಮೇಲ್ವರ್ಗಗಳ ದರ್ಪ ದಬ್ಬಾಳಿಕೆಯನ್ನೂ ಒಮ್ಮೆಲೆ ನೋಡಬಹುದಾಗಿದೆ. ವ್ಯಕ್ತಿಗತ ನೆಲೆಯಲ್ಲಿ ಬದಲಾವಣೆಗೆ ಸಲ್ಲದ ಮನಸುಗಳು ಸಮಷ್ಟಿ ನೆಲೆಯಲ್ಲಿ ಪರಿವರ್ತನೆಯ ಹಾದಿಯನ್ನು ಒಪ್ಪಿಕೊಳ್ಳುತ್ತವೆ ಎಂಬ ಒಂದು ನಂಬಿಕೆಯಿಂದಲೇ ಜಾತಿ ವ್ಯವಸ್ಥೆಯನ್ನು ವಿರೋಧಿಸುವ ಹೋರಾಟಗಳೂ ರೂಪುಗೊಂಡಿವೆ. ಅಂಬೇಡ್ಕರ್‌ ಅವರೂ ಸಹ ಅಂತರ್ಜಾತಿ ವಿವಾಹಗಳ ಮೂಲಕ ಸಮಾಜದಲ್ಲಿ ಜಾತಿ ಗೋಡೆಗಳನ್ನು ಭೇಧಿಸಲು ಸಾಧ್ಯ ಎಂಬ ಅಭಿಪ್ರಾಯಕ್ಕೆ ಬರಲು ಈ ನಂಬಿಕೆ ಕೊಂಚ ಮಟ್ಟಿಗೆ ಕಾರಣವಾಗಿರಬಹುದು.

ಅಂತರ್ಜಾತಿ ಸಂಬಂಧಗಳ ಜಿಜ್ಞಾಸೆಗಳು

ಜಾತಿ ವಿನಾಶ ಎಂದರೆ ಜಾತಿ ಪ್ರಜ್ಞೆಯ ನಿರ್ಮೂಲನೆಯೋ ಅಥವಾ ಭೌತಿಕ ನೆಲೆಯಲ್ಲಿ ಜಾತಿಗಳನ್ನು ಅಂತ್ಯಗೊಳಿಸುವ ಪ್ರಕ್ರಿಯೆಯೋ ಎಂಬ ಜಿಜ್ಞಾಸೆಯೊಂದಿಗೇ ಅಂತರ್ಜಾತಿ ವಿವಾಹಗಳನ್ನು ಪರಾಮರ್ಶಿಸಬೇಕಾಗುತ್ತದೆ. ವರ್ತಮಾನದ ಸಂದರ್ಭದಲ್ಲಿ ನಿಂತು ನೋಡಿದಾಗ ಸಮಾಜ ಪರಿವರ್ತನೆಯ ಅಥವಾ ಜಾತಿ ನಿರ್ಮೂಲನೆಯ ಒಂದು ಸಾಧನವಾಗಿ ಅಂತರ್ಜಾತಿ ವಿವಾಹಗಳನ್ನು ಎರಡು ಆಯಾಮಗಳಲ್ಲಿ ನಿರ್ವಚಿಸಬಹುದು.

ಮೊದಲನೆಯ ಆಯಾಮ : ಜಾತಿ ವ್ಯವಸ್ಥೆಯ ಗೋಡೆಗಳನ್ನು ಭೇದಿಸಿ, ತಾರತಮ್ಯಗಳನ್ನು ಹೋಗಲಾಡಿಸಿ ಸಮಸಮಾಜವನ್ನು ಕಟ್ಟುವ ಉದಾತ್ತತೆ ಇರುವ ಜಾತ್ಯತೀತ ಮನಸುಗಳು ಅಂತರ್ಜಾತಿ ವಿವಾಹದ ಬಗ್ಗೆ ಮುಕ್ತ ಅಭಿಪ್ರಾಯಗಳನ್ನು ಹೊಂದಿದ್ದು, ಎಷ್ಟೋ ಸಂದರ್ಭಗಳಲ್ಲಿ ಆಚರಣೆಗಳಲ್ಲಿ ಮತ್ತು ದೈನಂದಿನ ಬದುಕಿನಲ್ಲಿ ತಮ್ಮ ಮೂಲ ಜಾತಿ ಪ್ರಜ್ಞೆಯನ್ನು ಉಳಿಸಿಕೊಂಡಿದ್ದರೂ, ಮಕ್ಕಳ ಹಿತಾಸಕ್ತಿಗಾಗಿ ಅಂತರ್ಜಾತಿ ವಿವಾಹ ಸಂಬಂಧಗಳನ್ನು ಅನುಮೋದಿಸುವ ಮೇಲ್ಜಾತಿ ಪೋಷಕರನ್ನೂ ಸಹ ಢಾಳಾಗಿ ಕಾಣಬಹುದು. ಮಾನವ ಸಂಬಂಧಗಳನ್ನು ಬೆಸೆಯಲು ಜಾತಿ-ಮತಧರ್ಮ-ಭಾಷೆಯ ಕಂದರಗಳು ಅಡ್ಡಿಯಾಗಬಾರದು ಎಂಬ ಉದಾತ್ತ ಚಿಂತನೆ ಸಹಜವಾಗಿಯೇ ಇಂತಹ ಸನ್ನಿವೇಶಗಳಲ್ಲಿ ಕಂಡುಬರುತ್ತದೆ. ಆದರೆ ಅಂತರ್ಜಾತಿ ವಿವಾಹವಾಗುವ ಗಂಡು ಮತ್ತು ಹೆಣ್ಣಿನ ನಡುವೆ ಬೆಳೆಯುವ ದಾಂಪತ್ಯ ಸಂಬಂಧಗಳಿಗೂ, ಕೌಟುಂಬಿಕ ನೆಲೆಯಲ್ಲಿ ನಿರ್ವಹಿಸಬೇಕಾದ ನಿತ್ಯ ಬದುಕಿನ ಚಟುವಟಿಕೆಗಳಿಗೂ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸಗಳು ಬದುಕಿನ ಪಯಣದಲ್ಲಿ ನಿರ್ಣಾಯಕವಾಗಿಬಿಡುತ್ತವೆ.

ಭಾರತದ ಜಾತಿ ವ್ಯವಸ್ಥೆಯ ಅಡಿಪಾಯ ಇರುವುದೇ ನಿತ್ಯ ಬದುಕಿನ ಆಚರಣೆಗಳಲ್ಲಿ, ಧಾರ್ಮಿಕ ಪೂಜಾ ವಿಧಿವಿಧಾನಗಳಲ್ಲಿ ಮತ್ತು ಅತೀತ ಶಕ್ತಿಗಳ ಮೇಲಿನ ನಂಬಿಕೆ ವಿಶ್ವಾಸಗಳಲ್ಲಿ. ಎಲ್ಲ ಜಾತಿಗಳಲ್ಲೂ ಈ ನಿತ್ಯದ ಆಚರಣೆಗಳೇ ವ್ಯಕ್ತಿಗತ ನಂಬಿಕೆಗಳೊಡನೆ ಮುಖಾಮುಖಿಯಾಗುತ್ತಾ ಅನುಸಂಧಾನ ಮಾಡಿಕೊಳ್ಳುವುದನ್ನು ಸಾಮಾನ್ಯವಾಗಿ ಗುರುತಿಸಬಹುದು. ನಿರ್ದಿಷ್ಟ ಜಾತಿಗೆ ಸೇರಿದ ಕುಟುಂಬಗಳ ಸಾಮಾಜಿಕ ಸ್ಥಾನಮಾನಗಳೂ ಸಹ ಇದೇ ಆಚರಣೆಗಳನ್ನು, ಶ್ರದ್ಧಾನಂಬಿಕೆಗಳನ್ನು ಆಧರಿಸಿರುತ್ತದೆ. ಜಾತಿ ವ್ಯವಸ್ಥೆಯೊಂದಿಗೇ ಪಿತೃಪ್ರಧಾನತೆಯೂ ಅಷ್ಟೇ ಆಳವಾಗಿ ಬೇರೂರಿರುವುದರಿಂದ ವಿವಾಹಿತ ಪುರುಷನ ಕೌಟುಂಬಿಕ ಆಚರಣೆಗಳೇ ಪತ್ನಿಯ ಮೇಲೆ ಹೇರಲ್ಪಡುವುದು ಭಾರತೀಯ ಸಮಾಜದ ಲಕ್ಷಣ. ಈ ಗುಣಲಕ್ಷಣ ಎಲ್ಲ ಜಾತಿಯ ಪುರುಷರಲ್ಲೂ ಇರುವ ಸಾಧ್ಯತೆಗಳೇ ಹೆಚ್ಚು. ತನ್ನದಲ್ಲದ ಜಾತಿಯ ವ್ಯಕ್ತಿಯನ್ನು ಪ್ರೀತಿಸಿ ವಿವಾಹವಾಗುವವರಲ್ಲಿ ಈ ಪಿತೃಪ್ರಧಾನ ಧೋರಣೆ ಯಥಾಸ್ಥಿತಿಯಲ್ಲಿದ್ದರೆ, ಬಹುಶಃ ಮೇಲ್ಜಾತಿಯವರನ್ನು ವಿವಾಹವಾಗುವ ಕೆಳಜಾತಿಯ ಹೆಣ್ಣುಮಕ್ಕಳು ತಮ್ಮ ಅಭಿವ್ಯಕ್ತಿ/ಆಚರಣೆಯ ಸ್ವಾತಂತ್ರ್ಯವನ್ನು ಸುಲಭವಾಗಿ ಕಳೆದುಕೊಂಡುಬಿಡುತ್ತಾರೆ. ಇದನ್ನು ತಲೆಕೆಳಗು ಮಾಡಿ ನೋಡಿದರೂ, ಹೆಣ್ಣುಮಗಳೇ ತ್ಯಾಗ ಮಾಡಬೇಕಾಗಿ ಬರುವುದು ವಾಸ್ತವ.

ಈ ದೃಷ್ಟಿಯಿಂದ ನೋಡಿದಾಗ ಅಂತರ್ಜಾತಿ ವಿವಾಹವಾಗುವ ವ್ಯಕ್ತಿಯಲ್ಲಿ ತನ್ನ ಸ್ವಧರ್ಮವನ್ನು-ಸ್ವಜಾತಿಯನ್ನು ತಿರಸ್ಕರಿಸುವ ವೈಚಾರಿಕತೆ ಇಲ್ಲದಿದ್ದರೂ,  ಕೌಟುಂಬಿಕ/ವ್ಯಕ್ತಿಗತ ನೆಲೆಯಲ್ಲಿನ ಧಾರ್ಮಿಕ-ಸಾಂಪ್ರದಾಯಿಕ ಆಚರಣೆಗಳನ್ನು ಸಂಗಾತಿಯ ಮೇಲೆ ಹೇರದಿರುವ ವೈಚಾರಿಕ ಮನೋಭಾವವನ್ನು ಹೊಂದಿರದಿದ್ದರೆ, ಅಲ್ಲಿ ಜಾತಿ ವ್ಯವಸ್ಥೆ ಸೂಕ್ಷ್ಮವಾಗಿ ತನ್ನ ಇರುವಿಕೆಯನ್ನು ಸಾಬೀತುಪಡಿಸಿಕೊಳ್ಳುತ್ತಿರುತ್ತದೆ. ಮೇಲೆ ಉಲ್ಲೇಖಿಸಿರುವ ಅಂಬೇಡ್ಕರರ ಅಭಿಪ್ರಾಯದಲ್ಲಿ ಈ ಆತಂಕವನ್ನು ಸ್ಪಷ್ಟವಾಗಿ ಗುರುತಿಸಬಹುದು. ಅಂತರ್‌ ಧರ್ಮೀಯ ಅಥವಾ ಅಂತರ್ಜಾತಿಯ ವಿವಾಹಗಳು ಮೇಲ್ನೋಟಕ್ಕೆ ಜಾತಿ ಧರ್ಮಗಳ ಗೋಡೆಗಳನ್ನು ಭೇದಿಸುವಂತೆ ಕಂಡುಬಂದರೂ ಪಿತೃಪ್ರಧಾನತೆಯ ಧೋರಣೆ ಪುರುಷರಲ್ಲಿ ಮತ್ತು ಕುಟುಂಬದಲ್ಲಿ ಜಾಗೃತವಾಗಿದ್ದಾಗ, ಹೆಣ್ಣುಮಕ್ಕಳೇ ಮಾನಸಿಕವಾಗಿ ಚಿತ್ರಹಿಂಸೆಗೆ ಗುರಿಯಾಗುತ್ತಾರೆ. ಹೆಣ್ಣುಮಕ್ಕಳು ಹುಟ್ಟಿನಿಂದಲೂ ಅನುಸರಿಸಿಕೊಂಡು ಬಂದಿರುವ ಆಚರಣೆ ಮತ್ತು ನಂಬಿಕೆಗಳನ್ನೂ ಸಹ ಕೆಲವೊಮ್ಮೆ ತ್ಯಾಗ ಮಾಡಬೇಕಾಗುತ್ತದೆ. ಇಲ್ಲಿ ವ್ಯಕ್ತವಾಗಬಹುದಾದ ಅತ್ಯಲ್ಪ ಪ್ರತಿರೋಧವೂ ವೈವಾಹಿಕ ಬಂಧನಕ್ಕೆ ಚ್ಯುತಿ ಉಂಟುಮಾಡುವ ಸಾಧ್ಯತೆಗಳೂ ಇರುತ್ತವೆ. ಸ್ತ್ರೀವಾದಿ ನೆಲೆಯಲ್ಲಿ ನಿಂತು ನೋಡಿದಾಗ ಅಂತರ್ಜಾತಿ ವಿವಾಹಗಳು ಈ ದೃಷ್ಟಿಯಿಂದಲೂ ಪರಾಮರ್ಶೆಗೆ ಒಳಪಡಬೇಕಾಗುತ್ತದೆ.

ತನ್ನ ಸ್ವಧರ್ಮ-ಸ್ವಜಾತಿಯನ್ನು ಧಿಕ್ಕರಿಸಿ ಅನ್ಯ ಜಾತಿ-ಧರ್ಮದ ಮಹಿಳೆಯನ್ನು ವರಿಸುವ ಪುರುಷರು ಕೇವಲ ಜಾತಿ-ಧರ್ಮಗಳ ಸಂಹಿತೆಗಳನ್ನು ಮೀರುವುದೇ ಅಲ್ಲದೆ, ತಮ್ಮೊಳಗಿರಬಹುದಾದ ಸಾಂಪ್ರದಾಯಿಕತೆ ಮತ್ತು ಪುರುಷ ಪ್ರಧಾನ ಧೋರಣೆಯನ್ನೂ ಮೀರಿ ನಿಲ್ಲಬೇಕಾಗುತ್ತದೆ. ಮನುಸ್ಮೃತಿಯಲ್ಲಿ ಹೇಳಿರುವ “ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ ” ಎಂಬ ಸಂಹಿತೆಯನ್ನು ಅನುಸರಿಸುವ ಪಿತೃಪ್ರಧಾನ ಲಕ್ಷಣಗಳು ಎಲ್ಲ ಜಾತಿಗಳಲ್ಲೂ, ಎಲ್ಲ ಸ್ತರಗಳಲ್ಲೂ ಸೂಕ್ಷ್ಮ ನೆಲೆಯಲ್ಲಾದರೂ ಜೀವಂತವಾಗಿರುತ್ತವೆ ಎಂಬ ವಾಸ್ತವವನ್ನು ನಾವು ಒಪ್ಪಿಕೊಳ್ಳಲೇಬೇಕಿದೆ. ಹಾಗಾಗಿ ಕೇವಲ ಬ್ರಾಹ್ಯಣ್ಯ ವಿರೋಧ ಅಥವಾ ಮೇಲ್ಜಾತಿ ಸಂಪ್ರದಾಯಗಳ ವಿರೋಧಗಳಷ್ಟೇ ಅಂತರ್ಜಾತಿ ವಿವಾಹಗಳ ಸುಖಾಂತ್ಯಕ್ಕೆ ಸಾಲುವುದಿಲ್ಲ. ಭಾರತದ ಸಾಂಪ್ರದಾಯಿಕ ಸಮಾಜವನ್ನು ಇಡಿಯಾಗಿ ಕಾಡುವ ಎಲ್ಲ ರೀತಿಯ ಸಂವೇದನಾಶೂನ್ಯ ನಿಯಮಗಳನ್ನೂ ಮೀರಿ ನಿಲ್ಲಬೇಕಾಗುತ್ತದೆ. ವಿವಾಹ-ವೈವಾಹಿಕ ಜೀವನ ಮತ್ತು ದಾಂಪತ್ಯವನ್ನು ನಿಷ್ಕರ್ಷೆ ಮಾಡುವ ಹೊತ್ತಿನಲ್ಲಿ ಸ್ತ್ರೀ ಸಂವೇದನೆಯ ದೃಷ್ಟಿಕೋನವನ್ನು ಹೊಂದಿದ್ದರೆ ಮಾತ್ರ ಅಂತರ್ಜಾತಿ ವಿವಾಹ ಜಾತಿ ವಿನಾಶದ ಅಸ್ತ್ರವಾಗಿ ಪರಿಣಮಿಸಲು ಸಾಧ್ಯ. ಇಲ್ಲವಾದಲ್ಲಿ ಅನುಕಂಪ ಅಥವಾ ಔದಾರ್ಯದ ನೆರಳಲ್ಲಿ ಜಾತಿ ಪ್ರಜ್ಞೆ ತನ್ನ ಅಸ್ತಿತವನ್ನು ಉಳಿಸಿಕೊಂಡೇ ಸಾಗುತ್ತದೆ.

ಎರಡನೆಯ ಆಯಾಮ : ಅಂತರ್ಜಾತಿ-ಅಂತರ್ಧರ್ಮೀಯ ವಿವಾಹಗಳು ಸಾಂಪ್ರದಾಯಿಕ ಸಮಾಜದಲ್ಲಿ ಸೃಷ್ಟಿಸುವಂತಹ ಕ್ಷೋಭೆ ಮತ್ತು ಅದರ ಪರಿಣಾಮಗಳು. ಆಧುನಿಕ ಜಗತ್ತಿನಲ್ಲಿ ಯುವ ತಲೆಮಾರಿನ ಅತ್ಯಲ್ಪ ಭಾಗವಾದರೂ, ಜಾತಿ ವ್ಯವಸ್ಥೆಯ ಅಭೇದ್ಯ ಗೋಡೆಗಳನ್ನು ಭಂಗಗೊಳಿಸುವ ನಿಟ್ಟಿನಲ್ಲಿ ಜಾಗೃತರಾಗುತ್ತಿರುವುದು ವಾಸ್ತವ. ನವ ಉದಾರವಾದ ಮತ್ತು ಬಂಡವಾಳಶಾಹಿ ಆರ್ಥಿಕತೆ ಸೃಷ್ಟಿಸಿರುವ ಪರಿಸರದಲ್ಲಿ ಸಾಮಾಜೀಕರಣವೂ ಒಂದು ಪ್ರಧಾನ ಅಂಶವಾಗಿ ರೂಪುಗೊಳ್ಳುತ್ತಿರುವುದರಿಂದ, ಮನುಜ ಸಂಬಂಧಗಳನ್ನು ಬೆಸೆಯುವಲ್ಲಿ ಯುವ ಪೀಳಿಗೆಗೆ ಜಾತಿ ಧರ್ಮಗಳು ಅಡ್ಡಿಯಾಗಿ ಪರಿಣಮಿಸುತ್ತಿಲ್ಲ. ತಮ್ಮ ಪೋಷಕರ ವಿರೋಧವನ್ನೂ ಲೆಕ್ಕಿಸದೆ ಅನ್ಯ ಜಾತಿಯ ಅಥವಾ ಕೋಮಿನ ವ್ಯಕ್ತಿಯನ್ನು ಪ್ರೇಮಿಸಿ ಬಾಳಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಳ್ಳುವ ಪ್ರಸಂಗಗಳು ಹೇರಳವಾಗಿವೆ. ಆದರೆ ಸಮಾಜವು ಬೌದ್ಧಿಕವಾಗಿ ಹೆಚ್ಚು ತೆರೆದುಕೊಂಡಷ್ಟೂ ಸಮಾಜದೊಳಗಿನ ಸಾಂಪ್ರದಾಯಿಕ ಶಕ್ತಿಗಳು ಭೌತಿಕವಾಗಿ ಕಿಟಕಿ ಬಾಗಿಲುಗಳನ್ನು ಮುಚ್ಚಲು ಪ್ರಯತ್ನ ಮಾಡುತ್ತಲೇ ಇರುತ್ತವೆ. ಲವ್‌ ಜಿಹಾದ್ ಅಥವಾ ಗೌರವ ಹತ್ಯೆಯ ಹೆಸರಿನಲ್ಲಿ ವ್ಯಕ್ತವಾಗುತ್ತಿರುವ ಅಮಾನುಷ ಪ್ರವೃತ್ತಿಗಳು ಇದನ್ನೇ ಸೂಚಿಸುತ್ತವೆ.

ತಮ್ಮ ಸಾಮಾಜಿಕ ಅಂತಸ್ತು-ಸ್ಥಾನಮಾನಗಳನ್ನು ಸಾಂಪ್ರದಾಯಿಕವಾಗಿ ಅನುಸರಿಸಲಾಗುವ ಧಾರ್ಮಿಕ ಆಚರಣೆಗಳು, ಪೂಜಾವಿಧಾನಗಳು ಹಾಗೂ ಶ್ರದ್ಧಾನಂಬಿಕೆಗಳ ನೆಲೆಯಲ್ಲೇ ನಿರೂಪಿಸಿಕೊಳ್ಳಲು ಹೆಣಗುವ ಜಾತಿ ಪೀಡಿತ ಕುಟುಂಬಗಳಿಗೆ ಮಕ್ಕಳು ಜಾತಿಯ ಗೆರೆಗಳನ್ನು ಮೀರಿ ನಡೆಯುವುದೂ ಸಹ ಮಹಾಪರಾಧವಾಗಿಯೇ ಕಾಣುತ್ತದೆ. ಭಾರತದ ಶ್ರೇಣೀಕೃತ ಸಮಾಜದಲ್ಲಿ ಜಾತಿ ಶ್ರೇಷ್ಠತೆಯ ಪಾರಮ್ಯವೇ ಸಾಮಾಜಿಕ ಅಂತಸ್ತು-ಸ್ಥಾನಮಾನಗಳನ್ನೂ ನಿರ್ಧರಿಸುವುದರಿಂದ, ಮೇಲ್ಜಾತಿಯವರಲ್ಲಿ ಅಂತರ್ಜಾತಿ ವಿವಾಹ ಎನ್ನುವುದು, ಅದರಲ್ಲೂ ತಮಗಿಂತಲೂ ಕೆಳಜಾತಿಯವರೊಡನೆ ಸಂಬಂಧ ಬೆಳೆಸುವುದು, ತಮ್ಮ ಸ್ಥಾನಮಾನಗಳಿಗೆ ಚ್ಯುತಿ ಉಂಟುಮಾಡುತ್ತದೆ ಎಂಬ ಭಾವನೆ ದಟ್ಟವಾಗಿರುತ್ತದೆ. ಹಾಗಾಗಿಯೇ ಅನ್ಯ ಜಾತಿ ಅಥವಾ ಕೋಮಿನ ಸಂಗಾತಿಯನ್ನು ಬಯಸುವ ಹರೆಯದ ಮಕ್ಕಳು ಪೋಷಕರಿಂದಲೇ ಹತ್ಯೆಗೊಳಗಾಗುತ್ತಿದ್ದಾರೆ ಅಥವಾ ಸಾಮಾಜಿಕ ಬಹಿಷ್ಕಾರಕ್ಕೊಳಗಾಗುತ್ತಿದ್ದಾರೆ. ನಮ್ಮ ಸಮಾಜವೂ ಸಹ ಇಂತಹ ಹತ್ಯೆಗಳನ್ನು ಗೌರವ ಹತ್ಯೆ/ಮರ್ಯಾದಾ ಹತ್ಯೆ ಎಂದು ಬಣ್ಣಿಸುವ ಮೂಲಕ ವೈಭವೀಕರಿಸುತ್ತಿದೆ. ಇಲ್ಲಿ ಜಾತಿ ಶ್ರೇಷ್ಠತೆಯ ಗೌರವ ಅಥವಾ ಮರ್ಯಾದೆ ಉಲ್ಲಂಘಿಸಲ್ಪಡುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಈ ವರ್ಣನೆಗಳು ಸಾಬೀತುಪಡಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಅಂತರ್ಜಾತಿ ವಿವಾಹಗಳು ಹೆಚ್ಚಾಗುತ್ತಿರುವ ಹಾಗೆಯೇ ಈ ಅಮಾನುಷ ಹತ್ಯೆಗಳೂ, ಸಾಮಾಜಿಕ ಬಹಿಷ್ಕಾರಗಳೂ ಹೆಚ್ಚಾಗುತ್ತಲೇ ಇವೆ.

ಸಾಮಾಜಿಕ ದೃಷ್ಟಿಕೋನ

ಸಾಮಾಜಿಕ ಪರಿವರ್ತನೆಯ ಒಂದು ಸಾಧನವಾಗಿ ಅಥವಾ ಮಾರ್ಗವಾಗಿ ಅಂತರ್ಜಾತಿ ವಿವಾಹಗಳನ್ನು ಪರಾಮರ್ಶಿಸುವ ಸಂದರ್ಭದಲ್ಲಿ, ಕೌಟುಂಬಿಕ ಚೌಕಟ್ಟುಗಳನ್ನೂ ದಾಟಿ ಸಮಾಜದಲ್ಲಿ ಈ ವಿದ್ಯಮಾನವು ಯಾವ ರೀತಿಯ ಪರಿಣಾಮ ಉಂಟುಮಾಡಿವೆ ಎಂದು ನಿಷ್ಕರ್ಷೆ ಮಾಡುವ ಅಗತ್ಯವಿದೆ. ಜಾತಿ ಪ್ರಜ್ಞೆಯನ್ನು ಮೀರದೆಯೇ ಅಥವಾ ಜಾತಿ ಅಸ್ಮಿತೆಯ ಚೌಕಟ್ಟುಗಳನ್ನು ದಾಟದೆಯೇ ರೂಪುಗೊಳ್ಳುವ ವ್ಯಕ್ತಿಗತ ನೆಲೆಯ ಅಂತರ್ಜಾತಿ ಸಂಬಂಧಗಳು ಮತ್ತು ಕೌಟುಂಬಿಕ ಚೌಕಟ್ಟುಗಳು ಸಾಮಾಜಿಕವಾಗಿ ಭವಿಷ್ಯದ ಪೀಳಿಗೆಯನ್ನು ಎಷ್ಟರ ಮಟ್ಟಿಗೆ ಪ್ರಭಾವಿಸುತ್ತವೆ ಎನ್ನುವ ಜಟಿಲ ಪ್ರಶ್ನೆಗೆ ಉತ್ತರ ಶೋಧಿಸಬೇಕಿದೆ. ಸಮಾಜ ಅಥವಾ ಸಾಮಾಜಿಕ ಪರಿಸರವನ್ನು ಪಿತೃಪ್ರಧಾನ ದೃಷ್ಟಿಯಿಂದಲೇ ನೋಡುವ ಭಾರತೀಯ ಸಮಾಜದಲ್ಲಿ ಸಾಮಾಜಿಕ ಸ್ಥಾನಮಾನಗಳೂ ಸಹ ಇದೇ ಪಿತೃಪ್ರಧಾನವಾದ ಸಾಂಸ್ಕೃತಿಕ ನಿಬಂಧನೆಗಳಿಗೆ ಒಳಗಾಗಿರುತ್ತವೆ. ಇಲ್ಲಿ ಜಾತಿ ಅಸ್ಮಿತೆಯ ಹೊರತಾಗಿಯೂ ಮಹಿಳೆ ನಿಕೃಷ್ಟವಾಗಿಯೇ ಪರಿಗಣಿಸಲ್ಪಡುತ್ತಾಳೆ. ಇಲ್ಲಿ ಮಹಿಳೆಯ ಆರ್ಥಿಕ ಸಬಲತೆ ಮತ್ತು ಸುಸ್ಥಿರತೆಯೂ ನಿರ್ಣಾಯಕವಾಗುತ್ತದೆ. ಹಾಗಾಗಿಯೇ ಬಡಕುಟುಂಬದ ಹೆಣ್ಣುಮಕ್ಕಳು ಅಂತರ್ಜಾತಿ ವಿವಾಹವಾದರೂ ಸಹ ಪುರುಷಾಧಿಪತ್ಯದ ದರ್ಪ ದಬ್ಬಾಳಿಕೆಗಳನ್ನು ಸಹಿಸಿಕೊಂಡು, ತನ್ನ ಸಂಗಾತಿಯ ಕೌಟುಂಬಿಕ ಸಂಪ್ರದಾಯಗಳಿಗೆ ಶರಣಾಗಿಬಿಡುತ್ತಾರೆ. ಆರ್ಥಿಕ ಸ್ವಾವಲಂಬನೆಯನ್ನು ಹೊಂದಿರುವ ಮಹಿಳೆ ತನ್ನ ಸ್ವಂತಿಕೆಯನ್ನು ಉಳಿಸಿಕೊಳ್ಳಲು ಅವಕಾಶಗಳಿರುತ್ತವೆ.

ಈ ಒಂದು ವಿಶಾಲ Spectrum ಮೂಲಕ ಅಂತರ್ಜಾತಿ ವಿವಾಹಗಳನ್ನು ಪರಾಮರ್ಶಿಸಿದಾಗ, ಸಾಮಾಜಿಕ ಬದಲಾವಣೆ ಅಥವಾ ಪರಿವರ್ತನೆ ಯಾವ ದಿಕ್ಕಿನಲ್ಲಿ ಸಾಗಬೇಕಿದೆ ಎನ್ನುವುದೂ ಸ್ಪಷ್ಟವಾಗುತ್ತದೆ.  ಜಾತಿ ಕುಲಗಳನ್ನು ಭಂಗ ಮಾಡುವುದಕ್ಕೂ ಜಾತಿ ಪ್ರಜ್ಞೆ ಮತ್ತು ವ್ಯವಸ್ಥೆಯನ್ನು ನಿರ್ಮೂಲನ ಮಾಡುವುದಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸ ಹಾಗೂ ಅಂತರವನ್ನು ಇಲ್ಲಿ ಮನನ ಮಾಡಿಕೊಳ್ಳಬೇಕಿದೆ. ಜಾತಿಯ ಮೂಲ ನೆಲೆಗೇ ಅಂಟಿಕೊಂಡಿರುವಾಗ ಸೃಷ್ಟಿಯಾಗುವ ಶ್ರೇಷ್ಠತೆಯ ಅಹಮಿಕೆಯೇ ಜಾತಿ ಭಂಗ ಉಂಟುಮಾಡುವಾಗಲೂ ಮುಂದುವರೆಯುವ ಅಪಾಯಗಳನ್ನೂ ಅಲ್ಲಗಳೆಯಲಾಗುವುದಿಲ್ಲ. ಏಕೆಂದರೆ ಈ ಶ್ರೇಷ್ಠತೆ ಅಥವಾ ಪಾರಮ್ಯದ ಮೂಲಧಾತು ಇರುವುದು ನಮ್ಮ ಸಮಾಜದ ಪಿತೃಪ್ರಧಾನ ವ್ಯವಸ್ಥೆಯಲ್ಲಿ. ಲಿಂಗ ಸಮಾನತೆಯನ್ನು ಪಿತೃ ಪ್ರಧಾನತೆಯ ನೆಲೆಯಲ್ಲಿ ನಿಂತು ನಿರ್ವಚಿಸುವಂತೆಯೇ ಜಾತಿ ಸಮಾನತೆ ಅಥವಾ ಜಾತಿ ರಹಿತ ಸಮ ಸಮಾಜದ ಉದಾತ್ತ ಚಿಂತನೆಯನ್ನೂ ಇದೇ ಪಿತೃಪ್ರಧಾನ ಧೋರಣೆಯ ನೆಲೆಯಲ್ಲಿ ನಿರ್ವಚಿಸಬೇಕಾಗಿದೆ. ಆಗ ಮಾತ್ರವೇ ಅಂತರ್ಜಾತಿ ವಿವಾಹಗಳು ಸಮಾಜ ಪರಿವರ್ತನೆಯ ವಾಹಕಗಳಾಗಿ ಪರಿಣಮಿಸಬಹುದು.

ಅಂತಿಮವಾಗಿ

ಶತಮಾನಗಳ ಕಾಲದ ಶ್ರೇಷ್ಠ-ಕನಿಷ್ಠ,  ಸ್ಪೃಶ್ಯ-ಅಸ್ಪೃಶ್ಯ, ಪವಿತ್ರ-ಅಪವಿತ್ರ ಎಂಬ ಬೌದ್ಧಿಕ/ಭೌತಿಕ ಉಕ್ಕಿನ ಕವಚಗಳಿಂದ ಆವೃತವಾಗಿರುವ ಭಾರತದ ಜಾತಿ ವ್ಯವಸ್ಥೆಯನ್ನು ಭೇದಿಸುವುದು ಸುಲಭವಲ್ಲ ಎನ್ನುವುದನ್ನು ಸ್ವತಂತ್ರ ಭಾರತದ ಅನುಭವಗಳೇ ಸಾರಿಹೇಳುತ್ತವೆ. ಹುಟ್ಟಿನಿಂದಲೇ ಗುರುತಿಸಲ್ಪಡುವ ಜಾತಿ ಮತ್ತು ಇದರೊಟ್ಟಿಗೇ ಬೆಸೆದುಕೊಂಡು ಬರುವ ಶ್ರೇಷ್ಠತೆಯ ಅಹಮಿಕೆ ಮತ್ತು ಪಾರಮ್ಯ ಸಹಜವಾಗಿಯೇ ವ್ಯಕ್ತಿಯ ಬದುಕನ್ನು ರೂಪಿಸುವ ಒಂದು ಪ್ರಧಾನ ವಾಹಕವಾಗಿ ಪರಿಣಮಿಸುತ್ತದೆ. ಹುಟ್ಟಿದ ತನ್ನ ಸುತ್ತ ನಿರ್ಮಿಸುವ ಅಭೇದ್ಯ ಕವಚಗಳನ್ನು ಭೇದಿಸಿ ಹೊರಬರಬೇಕಾದ ವ್ಯಕ್ತಿಯಲ್ಲಿ ವೈಚಾರಿಕ ಪ್ರಜ್ಞೆಯೊಂದಿಗೇ ಸಕಲ ಮನುಷ್ಯ ಜೀವಿಗಳನ್ನೂ ಸಮಾನವಾಗಿ ಕಾಣುವ ಉದಾತ್ತತೆಯೂ ಇರಬೇಕಾಗುತ್ತದೆ. ಕೇವಲ ಶಿಕ್ಷಣದಿಂದ ಈ ಔದಾತ್ಯ ಪಡೆಯುವುದು ಸಾಧ್ಯವಿಲ್ಲ ಎನ್ನುವುದನ್ನು ವರ್ತಮಾನದ ಮೇಲ್ಜಾತಿ ಸಮಾಜದ ವರ್ತನೆಗಳೇ ನಿರೂಪಿಸಿವೆ. ಹಾಗಾಗಿ ಬದುಕನ್ನು ನಾಲ್ಕೂ ದಿಕ್ಕುಗಳಿಂದ ಆವರಿಸುವ ಸಾಂಪ್ರದಾಯಿಕತೆಯ, ಶ್ರದ್ಧಾ ನಂಬಿಕೆಗಳ ಜಾತಿಸೂಚಕ ಕವಚವನ್ನು ಭೇದಿಸಲಿಚ್ಚಿಸುವ, ಜಾತಿ ಗೋಡೆಗಳನ್ನು ದಾಟಿ ನಡೆಯುವ ವ್ಯಕ್ತಿಗೆ ಮೂಲತಃ ತನ್ನ ಸುತ್ತಲಿನ ಸಮಾಜದ ಅಂತರಂಗದ ಕೊಳಕುಗಳನ್ನು ಅರ್ಥಮಾಡಿಕೊಳ್ಳುವ ಕ್ಷಮತೆ ಇರಬೇಕಾಗುತ್ತದೆ. ಈ ಕ್ಷಮತೆಯನ್ನು ಸಂಪಾದಿಸಲು ನಮ್ಮ ವ್ಯವಸ್ಥೆಯೊಳಗಿನ ಸಾಂಪ್ರದಾಯಿಕ ಶಿಕ್ಷಣ ಏನೇನೂ ಸಾಲುವುದಿಲ್ಲ.

ಹಾಗಾಗಿಯೇ ಡಾ. ಬಿ. ಆರ್.‌ ಅಂಬೇಡ್ಕರ್‌ ಅವರ ಓದು ಮತ್ತು ಅಧ್ಯಯನ ಬಹಳ ಮುಖ್ಯವಾಗುತ್ತದೆ. ಅಷ್ಟೇ ಅಲ್ಲದೆ ಭಾರತದ ಶ್ರೇಣೀಕೃತ ಜಾತಿ ಸಮಾಜವನ್ನು ಅರ್ಥಮಾಡಿಕೊಳ್ಳಲು ವರ್ಗಪ್ರಜ್ಞೆಯ ನೆಲೆಯಲ್ಲಿ ಆಲೋಚನೆ ಮಾಡುವುದೂ ಮುಖ್ಯವಾಗುತ್ತದೆ. ಭಾರತದ ಸಾಮಾಜಿಕ ಬದುಕಿನಲ್ಲಿ ಆಳವಾಗಿ ಬೇರೂರಿರುವ ಪಿತೃಪ್ರಧಾನತೆ, ವರ್ಗ ಅಸಮಾನತೆ, ವರ್ಗ ಹಾಗೂ ಲಿಂಗ ತಾರತಮ್ಯ ಮತ್ತು ಮನುಷ್ಯನ ನಿತ್ಯ ಬದುಕನ್ನು ಪ್ರಭಾವಿಸುವ ಬಂಡವಾಳಶಾಹಿ ಆರ್ಥಿಕತೆ ಇವೆಲ್ಲದರ ಹೂರಣವನ್ನು ಅಂಬೇಡ್ಕರ್‌ ಅವರ ಚಿಂತನೆಯ ನೆಲೆಯಲ್ಲಿ ನಿಂತು ಮಾರ್ಕ್ಸ್‌ವಾದದ ವೈಜ್ಞಾನಿಕ ಚಿಂತನೆಯೊಂದಿಗೆ ಅರ್ಥಮಾಡಿಕೊಳ್ಳುವುದರಿಂದ ಜಾತಿ ವ್ಯವಸ್ಥೆಯ ಅಂತರಾಳವನ್ನೂ ಅರ್ಥಮಾಡಿಕೊಳ್ಳುವುದು ಸಾದ್ಯವಾದೀತು. ಇಲ್ಲಿಯೇ ನಮಗೆ ಮಾರ್ಕ್ಸ್‌ ಮತ್ತು ಅಂಬೇಡ್ಕರ್‌ ಅವರನ್ನು ಮುಖಾಮುಖಿಯಾಗಿಸುವ, ಇಬ್ಬರ ಚಿಂತನೆಗಳ ನಡುವೆ ಅನುಸಂಧಾನ ನಡೆಸುವ ಅಗತ್ಯತೆ, ಅನಿವಾರ್ಯತೆ ಎದ್ದು ಕಾಣುತ್ತದೆ. ಜಾತಿ ಮತ್ತು ವರ್ಗವನ್ನು ಪ್ರತ್ಯೇಕಿಸಿ ನೋಡುವ ಕಣ್ಣೋಟದಲ್ಲಿ ಬಹುಮುಖ್ಯವಾದ ಪಿತೃಪ್ರಧಾನತೆ ನೇಪಥ್ಯಕ್ಕೆ ಜಾರಿಬಿಡುವ ಅಪಾಯವನ್ನು ನಾವು ಮನಗಾಣಬೇಕಿದೆ.

ಅಂತರ್ಜಾತಿ ವಿವಾಹಗಳು ಸಮಾಜ ಪರಿವರ್ತನೆಯ ವಾಹಕವಾಗಿ ಪರಿಣಮಿಸಬೇಕೆಂದರೆ ಸಮಾಜವನ್ನು ನಾವು ಅರ್ಥಮಾಡಿಕೊಳ್ಳುವ ವಿಧಾನ ಮತ್ತು ತಾತ್ವಿಕ ನೆಲೆಗಳು ಭಿನ್ನ ಹಾದಿಯಲ್ಲೇ ಸಾಗಬೇಕಾಗುತ್ತದೆ. ಆಗ ಮಾತ್ರವೇ ಅಂತರ್ಜಾತಿ ವಿವಾಹಗಳು ಪೂರಕವೋ ಅಥವಾ ಪ್ರೇರಕವೋ ಎಂಬ ಜಟಿಲ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಸಾಧ್ಯವಾದೀತು.

Tags: Caste ContagionDr. BR AmbedkarIntercaste MarriageSocial Perspective
Previous Post

ಸತೀಶ್​ ಜಾರಕಿಹೊಳಿಯನ್ನು ಸಿಎಂ ಮಾಡುವುದೇ ನಮ್ಮ ಗುರಿ : ಸಚಿವ ಕೆ.ಎನ್​ ರಾಜಣ್ಣ

Next Post

ಅಮೆರಿಕ ಭಾರತೀಯ ವಾಸಿಗಳೊಂದಿಗೆ ಪ್ರಧಾನಿ ಮೋದಿ ಕಾರ್ಯಕ್ರಮ : ಹೇಗಿದೆ ತಯಾರಿ ?

Related Posts

Top Story

ಡೀಪ್ಟೆಕ್ ದಶಕಕ್ಕೆ ಮುನ್ನುಡಿ ಬರೆದ ಬೆಂಗಳೂರು ಟೆಕ್ ಮೇಳ, ಡೀಪ್ಟೆಕ್ ನವೋದ್ಯಮಗಳಿಗೆ ₹ 400 ಕೋಟಿ ನೆರವು: ಸಚಿವ ಪ್ರಿಯಾಂಕ್ ಖರ್ಗೆ

by ಪ್ರತಿಧ್ವನಿ
November 20, 2025
0

ರಾಜ್ಯ ಸರ್ಕಾರದ ಜೊತೆ ಕೈಜೋಡಿಸಿರುವ ಭವಿಷ್ಯ ರೂಪಿಸುವವರು, ವೆಂಚರ್ ಕ್ಯಾಪಿಟಲ್ (ವಿಸಿ) ಹೂಡಿಕೆದಾರರಿಗೆ ಐಟಿ- ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅಭಿನಂದನೆ ಬೆಂಗಳೂರು, ನವೆಂಬರ್ 20: ಇಲ್ಲಿ...

Read moreDetails

“ಜಾಗತಿಕ ಸೆಮಿಕಂಡಕ್ಟರ್ ಮಾರುಕಟ್ಟೆ ಮೂರು ವರ್ಷಗಳಲ್ಲಿ ರೂ 88 ಲಕ್ಷ ಕೋಟಿಗೆ ಏರಿಕೆ”

November 20, 2025

ಟೆಕ್ ಮೇಳದಲ್ಲಿ ಭವಿಷ್ಯದ ಇಂಧನ ಕ್ಷೇತ್ರ ಕುರಿತು ಸಂವಾದ ನಡೆಸಿದ ಸಚಿವ ಪ್ರಿಯಾಂಕ ಖರ್ಗೆ..!!

November 20, 2025

ವಿದ್ಯಾರ್ಥಿಗಳೊಂದಿಗೆ ಅಂತರಿಕ್ಷ ಯಾತ್ರಿಕ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ ಅವರೊಂದಿಗೆ ಸಂವಾದ ಕಾರ್ಯಕ್ರಮ: ಸಚಿವ ಎನ್‌ ಎಸ್‌ ಭೋಸರಾಜು

November 20, 2025

Lakshmi Hebbalkar: ಅಧಿಕಾರ ಎಂಬುದು ಶಾಶ್ವತ ಅಲ್ಲ,‌ ಅದು ಅವಕಾಶ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

November 20, 2025
Next Post
ಅಮೆರಿಕ ಭಾರತೀಯ ವಾಸಿಗಳೊಂದಿಗೆ ಪ್ರಧಾನಿ ಮೋದಿ ಕಾರ್ಯಕ್ರಮ : ಹೇಗಿದೆ ತಯಾರಿ ?

ಅಮೆರಿಕ ಭಾರತೀಯ ವಾಸಿಗಳೊಂದಿಗೆ ಪ್ರಧಾನಿ ಮೋದಿ ಕಾರ್ಯಕ್ರಮ : ಹೇಗಿದೆ ತಯಾರಿ ?

Please login to join discussion

Recent News

ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!
Top Story

ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

by ಪ್ರತಿಧ್ವನಿ
November 21, 2025
ನಟ, ನಿರೂಪಕ  ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು
Top Story

ನಟ, ನಿರೂಪಕ ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು

by ಪ್ರತಿಧ್ವನಿ
November 21, 2025
ಹೈಕಮಾಂಡ್‌ ಮಾತನ್ನು ನಾನೂ ಕೇಳಬೇಕು..ಡಿ.ಕೆ ಶಿವಕುಮಾರೂ ಕೇಳಬೇಕು-ಸಿದ್ದರಾಮಯ್ಯ
Top Story

ಹೈಕಮಾಂಡ್‌ ಮಾತನ್ನು ನಾನೂ ಕೇಳಬೇಕು..ಡಿ.ಕೆ ಶಿವಕುಮಾರೂ ಕೇಳಬೇಕು-ಸಿದ್ದರಾಮಯ್ಯ

by ಪ್ರತಿಧ್ವನಿ
November 21, 2025
ಮಹಿಷಾಸುರ ವೇಷ ಕಳಚುತ್ತಿದ್ದಂತೆ ಹೃದಯಾಘಾತ: ಯಕ್ಷಗಾನ ಕಲಾವಿದ ಸಾ**
Top Story

ಮಹಿಷಾಸುರ ವೇಷ ಕಳಚುತ್ತಿದ್ದಂತೆ ಹೃದಯಾಘಾತ: ಯಕ್ಷಗಾನ ಕಲಾವಿದ ಸಾ**

by ಪ್ರತಿಧ್ವನಿ
November 21, 2025
ನನಗೆ 5 ವರ್ಷ ಅವಕಾಶ ಕೊಟ್ಟಿದ್ದಾರೆ ಅಂತಾ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ: ಪರಮೇಶ್ವರ್
Top Story

ನನಗೆ 5 ವರ್ಷ ಅವಕಾಶ ಕೊಟ್ಟಿದ್ದಾರೆ ಅಂತಾ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ: ಪರಮೇಶ್ವರ್

by ಪ್ರತಿಧ್ವನಿ
November 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

November 21, 2025
ನಟ, ನಿರೂಪಕ  ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು

ನಟ, ನಿರೂಪಕ ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು

November 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada