ಐಐಎಸ್ಸಿ, ಐಐಟಿ ಮಾದರಿ ಸಂಸ್ಥೆಗಳಿಂದ ಪರಿಶೀಲನೆ

ರಾಜ್ಯದ ಎಲ್ಲಾ 215 ಕೈಗಾರಿಕಾ ಪ್ರದೇಶಗಳಲ್ಲಿ ಇರುವ ಕೈಗಾರಿಕೆಗಳಿಂದ ಉಂಟಾಗುತ್ತಿರುವ ವಿವಿಧ ರೀತಿಯ ಮಾಲಿನ್ಯ ಕುರಿತು ಭಾರತೀಯ ವಿಜ್ಞಾನ ಸಂಸ್ಥೆ (IISC), ಐಐಟಿ ತರಹದ ಉನ್ನತ ಮಟ್ಟದ ಸಂಸ್ಥೆಗಳಿಂದ ವಿಸ್ತೃತ ಅಧ್ಯಯನ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ (Industries Minister M.B. Patil) ಅವರು ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ್(Dr Selva Kumar) , ಆಯುಕ್ತರಾದ ಗುಂಜನ್ ಕೃಷ್ಣ(Commissioner Gunjan Krishna), ಕೆಐಎಡಿಬಿ ಸಿಇಒ ಡಾ.ಮಹೇಶ (KIADB CEO Dr Mahesh) ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಅವರು ಸೋಮವಾರ ಸಭೆ ನಡೆಸಿದರು.

ಕೈಗಾರಿಕಾ ಪ್ರದೇಶಗಳಲ್ಲಿ ಉದ್ಯಮ ನಡೆಸಲು ಅನುಮತಿ ನಡೆಸುವಾಗ ಸರಕಾರವು ಹಲವು ಮಾನದಂಡಗಳನ್ನು ನೀಡಿರುತ್ತದೆ. ಆದರೆ ನಂತರದ ದಿನಗಳಲ್ಲಿ ಏನಾಗುತ್ತದೆ ಎನ್ನುವುದರ ಪರಿಶೀಲನೆ ಕೂಡ ಅಗತ್ಯ. ಉದ್ಯಮಗಳನ್ನು ಬೆಳೆಸುವ ಜೊತೆಯಲ್ಲೇ ನಾವು ನೆಲ, ಜಲ, ವಾಯು, ಕೃಷಿ ಮತ್ತು ಮನುಷ್ಯರ ಮೇಲಾಗುತ್ತಿರುವ ಪರಿಣಾಮಗಳನ್ನೂ ಅಧ್ಯಯನ ಮಾಡಿ, ಅವುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ ಎಂದು ಅವರು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಕೈಗಾರಿಕಾ ಮಾಲಿನ್ಯ ಕುರಿತು ಉನ್ನತ ಮಟ್ಟದ ತಂಡಗಳಿಂದ ಅಧ್ಯಯನ ನಡೆಸಲಾಗುವುದು. ಈ ತಂಡಗಳು ಎಲ್ಲಾ ಕೈಗಾರಿಕಾ ಪ್ರದೇಶಗಳಿಗೂ ಖುದ್ದು ಭೇಟಿ ನೀಡಲಿವೆ. ಜತೆಗೆ ಮಾಲಿನ್ಯದ ತೀವ್ರತೆ ಆಧರಿಸಿ, ಆಯಾ ಉದ್ಯಮಗಳು ಯಾವ ಬಗೆಯ ಪರಿಹಾರ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎನ್ನುವುದನ್ನೂ ಈ ಸಮಿತಿಯೇ ತಿಳಿಸಲಿದೆ ಎಂದು ಅವರು ವಿವರಿಸಿದ್ದಾರೆ.

ಈ ಉದ್ದೇಶಕ್ಕಾಗಿ ಸೂಕ್ತ ಸಂಸ್ಥೆಯನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ತಂಡಗಳು ನಿರ್ದಿಷ್ಟ ಕಾಲಮಿತಿಯಲ್ಲಿ ತಮ್ಮ ವರದಿ ಸಲ್ಲಿಸುವಂತೆ ಸೂಚಿಸಬೇಕು ಅವರು ಸಲಹೆ ನೀಡಿದ್ದಾರೆ.
ಸಭೆಯಲ್ಲಿ ಸಚಿವರ ತಾಂತ್ರಿಕ ಸಲಹೆಗಾರ ಡಾ.ಅರವಿಂದ ಗಲಗಲಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.