ಬೆಂಗಳೂರು: ನಾವು ಜನರ ಭಾವನೆ ಕೆರಳಿಸುವ ಬದಲು ಅವರ ಬದುಕು ಕಟ್ಟಿಕೊಡಬೇಕಿದೆ. ಹೀಗಾಗಿ ಅನ್ನ, ಅಕ್ಷರ, ಆರೋಗ್ಯ, ಆಶ್ರಯ ಹಾಗೂ ಅಭಿವೃದ್ಧಿ ನಮ್ಮ ಮುಖ್ಯಘೋಷಣೆಯಾಗಿವೆ. ಈ ಐದು ಅಂಶಗಳನ್ನು ಇಟ್ಟುಕೊಂಡು ಪ್ರಚಾರ ಮಾಡುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ. ಪಾಟೀಲ್ ತಿಳಿಸಿದರು.
ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ಪದಗ್ರಹಣ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ, ಬಿಜೆಪಿ ಸರ್ಕಾರದ ವೈಫಲ್ಯಗಳ ಮಾಹಿತಿಯುಳ್ಳ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡುತ್ತೇವೆ. ಜಿಲ್ಲಾ ಸಮಿತಿಯಿಂದ ಬೂತ್ ಸಮಿತಿವರೆಗೆ ಸದಸ್ಯರನ್ನು ಹೊಂದಾಣಿಕೆ ಮಾಡಿ ಮನೆ ಮನೆಗೆ ಇದನ್ನು ತಲುಪಿಸಲಾಗುವುದು ಎಂದರು.
ಬಿಜೆಪಿಯ ಅಪಪ್ರಚಾರಗಳು, ನಾವು ಮಾಡಿರುವ ಸಾಧನೆಗಳ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿ ತಲುಪಿಸಬೇಕು. ನಮ್ಮ ಪದಾಧಿಕಾರಿಗಳಿಗೆ ನಾಳೆ ಒಳಗಾಗಿ ನಿರ್ದಿಷ್ಟ ಜವಾಬ್ದಾರಿ ನೀಡುತ್ತೇವೆ. ಈ ಚುನಾವಣೆಯಲ್ಲಿ ನಮ್ಮ ಪ್ರಚಾರ ಸಮಿತಿ ಬಹಳ ಸಕ್ರಿಯವಾಗಿ ಕೆಲಸ ಮಾಡಲಿದೆ. ಜನರಿಗೆ ನಮ್ಮ ಸಾಧನೆ, ಬಿಜೆಪಿ ವೈಫಲ್ಯದ ಬಗ್ಗೆ ಮಾಹಿತಿ ನೀಡುತ್ತೇವೆ.
ಇನ್ನು ಕೆಪಿಸಿಸಿ ವತಿಯಿಂದ ಘೋಷಣೆ ಮಾಡಲಾಗಿರುವ ಗ್ಯಾರೆಂಟಿ ಯೋಜನೆಗಳನ್ನು ಕೂಡ ಜನರಿಗೆ ಪ್ರಚಾರ ಮಾಡುತ್ತೇವೆ. ಕೆಪಿಸಿಸಿ ಹಾಗೂ ಪ್ರಚಾರ ಸಮಿತಿ ಒಂದು ತಂಡವಾಗಿ ಕೆಲಸ ಮಾಡುತ್ತೇವೆ.
ನಮ್ಮಲ್ಲಿ ಮೋದಿ ಮ್ಯಾಜಿಕ್ ನಡೆಯುವುದಿಲ್ಲ
ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕರ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಮ್ಮಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರು ಸೇರಿದಂತೆ ಸಾಕಷ್ಟು ಸ್ಟಾರ್ ಪ್ರಚಾರಕರಿದ್ದಾರೆ. ಬಿಜೆಪಿಯವರು ರಾಜ್ಯದಲ್ಲಿ ದಿವಾಳಿಯಾಗಿದ್ದಾರೆ. ಅವರಿಗೆ ರಾಜ್ಯದಲ್ಲಿ ನಾಯಕತ್ವವಿಲ್ಲ. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿರುವ ಕಾರಣ ಮೋದಿ, ಅಮಿತ್ ಶಾ ಹಾಗೂ ನಡ್ಡಾ ಅವರನ್ನು ಪ್ರತಿನಿತ್ಯ ಕರೆಸಬೇಕಿದೆ. ಇಲ್ಲಿನ ನಾಯಕತ್ವದಲ್ಲಿ ಯಾವುದೇ ಬಂಡವಾಳ ಇಲ್ಲವಾಗಿದೆ. ಇದೇ ಮೋದಿ ಅವರು ಪ್ರವಾಹ ಬಂದಾಗ ರಾಜ್ಯಕ್ಕೆ ಬರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಸಹಾಯಕ್ಕೆ ಬರಲಿಲ್ಲ. ಆದರೆ ಚುನಾವಣೆ ಬಂದಾಗ ಮಾತ್ರ ಬರುತ್ತಾರೆ. ಅವರು ರಾಜಕೀಯವಾಗಿ ಮಾತ್ರ ನಮಗೆ ಪ್ರಧಾನಿಯಾಗಿದ್ದು, ರಾಜ್ಯಕ್ಕೆ ನೆರವು ನೀಡಲು ಅಲ್ಲ. ನಮ್ಮಲ್ಲಿ ಮೋದಿ ಮ್ಯಾಜಿಕ್ ನಡೆಯುವುದಿಲ್ಲ ಎಂದರು.
ಮೋದಿ ಅವರ ಚೀಪ್ ಗಿಮಿಕ್
ಕಾಂಗ್ರೆಸ್ ನಿಜಲಿಂಗಪ್ಪ, ವಿರೇಂದ್ರ ಪಾಟೀಲ್ ಹಾಗೂ ಖರ್ಗೆ ಅವರಿಗೆ ಅಪಮಾನ ಮಾಡಿದೆ ಎಂಬ ಮೋದಿ ಹೇಳಿಕೆ ಬಗ್ಗೆ ಕೇಳಿದಾಗ, ಇದು ಮೋದಿ ಅವರ ಚೀಪ್ ಗಿಮಿಕ್ ಆಗಿದೆ. ಎಐಸಿಸಿ ಅಧಿವೇಶನದಲ್ಲಿ ಸೋನಿಯಾ ಗಾಂಧಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಭದ್ರತಾ ಸಿಬ್ಬಂದಿ ಛತ್ರಿ ಹಿಡಿದಿದ್ದು, ಇದನ್ನು ಇಟ್ಟುಕೊಂಡು ಖರ್ಗೆ ಅವರಿಗೆ ಯಾಕೆ ಹಿಡಿದಿಲ್ಲ ಎಂದು ಚೀಪ್ ಗಿಮಿಕ್ ಮಾಡುತ್ತಿದ್ದಾರೆ. ಇವರು ಆಡ್ವಾಣಿ ಅವರು ನಮಸ್ಕಾರ ಮಾಡಿದಾಗ ಎಷ್ಟು ಗೌರವ ನೀಡಿದರು? ಆಡ್ವಾಣಿ ಅವರ ಮುಖ ಮೋದಿ ನೋಡಲಿಲ್ಲ. ಇದೇ ಪರಿಸ್ಥಿತಿ ಯಡಿಯೂರಪ್ಪ ಅವರಿಗೆ ಬಂದಿದೆ. ವೀರೇಂದ್ರ ಪಾಟೀಲ್ ಅವರ ವಿಚಾರದಲ್ಲಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಅವರ ಬದಲಿಗೆ ಬೇರೆಯವರಿಗೆ ಅಧಿಕಾರ ನೀಡಲಾಯಿತು. ಅವರು ಚಿಕ್ಕಮಗಳೂರಿನಲ್ಲಿ ಸೋತಾಗ ಅವರನ್ನು ಕೇಂದ್ರದಲ್ಲಿ ಸಚಿವರನ್ನಾಗಿ ಮಾಡಿ ಅಧಿಕಾರ ನೀಡಿದ್ದೆವು. ಆದರೆ ಯಡಿಯೂರಪ್ಪ ಅವರು ಹಾಸಿಗೆ ಹಿಡಿದಿದ್ದರಾ? ಇಲ್ಲ. ಆದರೂ ಯಾಕೆ ಅಧಿಕಾರದಿಂದ ಇಳಿಸಿದ್ದೀರಿ. ಸ್ವಾಮೀಜಿಗಳ ಒತ್ತಡ ಹಾಗೂ ಲಿಂಗಾಯತರು ತಿರುಗಿ ಬೀಳುತ್ತಾರೆ ಎಂಬ ಕಾರಣ ಬೊಮ್ಮಾಯಿ ಅವರನ್ನು ಮಾಡಿದ್ದಾರೆ ಎಂದರು.
ಮೋದಿ ಅಮಿತ್ ಶಾ ಅವರಿಗೆ ಇರುವಷ್ಟು ಚುನಾವಣಾ ಕಾಳಜಿ ಕಾಂಗ್ರೆಸ್ ಹೈಕಮಾಂಡ್ ಗೆ ಇಲ್ಲವೇ ಎಂದು ಕೇಳಿದಾಗ, ಹುಬ್ಬಳ್ಳಿಯಲ್ಲಿ ನಡೆದ ರೋಡ್ ಶೋಗೂ ರಾಯಚೂರಿನಲ್ಲಿ ನಡೆದ ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆಗೂ ಸೇರಿದ್ದ ಜನರನ್ನು ನೋಡಿ. ನಿಮಗೆ ವ್ಯತ್ಯಾಸ ಗೊತ್ತಾಗುತ್ತದೆ ಎಂದರು.
ಇಡಿ, ಐಟಿ ಬಿಜೆಪಿಯ ಘಟಕಗಳೇ ಆಗಿವೆ
ಚುನಾವಣೆ ಸಮಯದಲ್ಲಿ ಇಡಿ, ಐಟಿ ದಾಳಿ ನಡೆಯುವುದೇ ಎಂಬ ಪ್ರಶ್ನೆಗೆ, ಅದು ಅವರ ತಂತ್ರಗಾರಿಕೆಯ ಭಾಗವಾಗಿದೆ. ಈ ಸಂಸ್ಥೆಗಳು ಬಿಜೆಪಿಯ ಘಟಕಗಳೇ ಆಗಿವೆ. ಎಐಸಿಸಿ ಅದಿವೇಶನಕ್ಕೆ ತೊಂದರೆ ಮಾಡಲು ರಾಯ್ ಪುರದಲ್ಲಿ ದಾಳಿ ಮಾಡಿದ್ದರು. ಎಂದಾದರೂ ಈ ಮಟ್ಟಕ್ಕೆ ರಾಜಕೀಯ ಇಳಿದಿತ್ತಾ? ಇದು ಸರಿಯೇ? ನಾವು ಈ ದಾಳಿ ಎದುರಿಸುತ್ತೇವೆ. ಎಷ್ಟು ದಿನ ಈ ದಾಳಿ ಮಾಡುತ್ತಾರೆ 2023ರಲ್ಲಿ ರಾಜ್ಯದಲ್ಲಿ ಬಿಜೆಪಿ ಕಿತ್ತುಹಾಕುತ್ತಾರೆ. 2024ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.