ಬೆಂಗಳೂರು: ”ದೇಶಕ್ಕಾಗಿ ನೆಹರು ಕುಟುಂಬದವರು ಬಲಿದಾನ ಮಾಡಿದ್ದಾರೆ. ಆದ್ರೆ, ಬಿಜೆಪಿಯವರು ದೇಶಕ್ಕಾಗಿ ಏನೂ ಮಾಡಿಲ್ಲ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಕೆಪಿಸಿಸಿ ಕಚೇರಿ ಬಳಿಯ ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ಇಂದಿರಾ ಗಾಂಧಿ 39ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

”ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ಕಳೆದುಕೊಂಡರು. ಅಟಲ್ ಬಿಹಾರಿ ವಾಜಪೇಯಿ ಅವರು ಇಂದಿರಾ ಗಾಂಧಿಯನ್ನು ದುರ್ಗೆ ಎಂದು ಕರೆದಿದ್ದರು. ಬಿಜೆಪಿಗರು ರಾಷ್ಟ್ರ ಪ್ರೇಮದ ಬಗ್ಗೆ ಮಾತನಾಡುತ್ತಾರೆ. ಆದರೆ, ದೇಶಕ್ಕಾಗಿ ಅವರ್ಯಾರು ಬಲಿದಾನ ಮಾಡಿಲ್ಲ. ದೇಶಕ್ಕಾಗಿ ಬಲಿದಾನ ಮಾಡಿದವರು ನೆಹರು ಕುಟುಂಬದವರು” ಎಂದು ಪ್ರತಿಪಾದಿಸಿದರು.
”ಅವರು ದೇಶ ಕಂಡ ಜನಪ್ರಿಯ ರಾಜಕಾರಣಿ. ಬಹಳ ಧೈರ್ಯ ಇದ್ದ ಮಹಿಳೆಯಾಗಿದ್ದರು. ನಾನು ಹಾರೋಹಳ್ಳಿಯಲ್ಲಿ ರಾಜಶೇಖರ್ ಮೂರ್ತಿ ಜೊತೆ ವೋಟ್ ಕೇಳಲು ಹೋಗಿದ್ದೆ. ನಾವು ಆವಾಗ ಜನತಾ ಪಾರ್ಟಿಯಲ್ಲಿದ್ದೆವು. ಆವಾಗ ಅಲ್ಲಿನ ಮನೆಗಳಲ್ಲಿ ಇಂದಿರಾ ಗಾಂಧಿ ಭಾವಚಿತ್ರ ಇತ್ತು. ನಾನು ಅವರನ್ನು ಕೇಳಲು ಹೋದಾಗ ರಾಜಶೇಖರ್ ಮೂರ್ತಿ ನೀವು ಏನೇ ಹೇಳಿ ನಾವು ಇಂಧಿರಾ ಗಾಂಧಿಗೇ ವೋಟ್ ಹಾಕುತ್ತೇವೆ ಎಂದಿದ್ದರು. ಅವರು ನಮಗೆ ಅಷ್ಟು ಕೆಲಸ ಮಾಡಿದ್ದಾರೆ ಎಂದಿದ್ದರು. ಅಷ್ಟರ ಮಟ್ಟಿಗೆ ಇಂದಿರಾ ಗಾಂಧಿ ಬಡವರ ಮನಸ್ಸಿನಲ್ಲಿ ನೆಲೆ ಊರಿದ್ದರು. ಬಡವರು ಅವರನ್ನು ಆರಾಧ್ಯ ದೈವವಾಗಿ ಪೂಜಿಸುತ್ತಿದ್ದರು. ಅಂಥ ಜನಪ್ರಿಯ ನಾಯಕರನ್ನು ಬೇರೆ ಯಾರನ್ನೂ ಕಾಣಲು ಆಗಲ್ಲ” ಎಂದರು.