ನವದೆಹಲಿ: ಕೇಂದ್ರ ಸರ್ಕಾರವು ದೇಶದ ಪ್ರಮುಖ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಲ್ಲಿ ಒಂದಾದ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ (NSAP) ಹಾಗೂ ಅದರ ಅಡಿಯಲ್ಲಿ ಬರುವ ಪಿಂಚಣಿ ಯೋಜನೆಗಳ ಹೆಸರುಗಳನ್ನು ಬದಲಾಯಿಸಿದೆ. ಈ ಪ್ರಕ್ರಿಯೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರ ಹೆಸರಿನಲ್ಲಿದ್ದ ಮೂರು ಪ್ರಮುಖ ಪಿಂಚಣಿ ಯೋಜನೆಗಳಿಂದ ಅವರ ಹೆಸರನ್ನು ಕೈಬಿಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಐದು ವರ್ಷಗಳವರೆಗೆ ಯೋಜನೆ ವಿಸ್ತರಣೆ ಮತ್ತು ಹೊಸ ಹೆಸರುಗಳು
ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಸ್ತಾವನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದ್ದು, ಈ ಕಾರ್ಯಕ್ರಮವನ್ನು 2026-27 ರಿಂದ 2030-31ರವರೆಗೆ ಮುಂದಿನ ಐದು ವರ್ಷಗಳ ಅವಧಿಗೆ ವಿಸ್ತರಿಸಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಒಟ್ಟು 53,428 ಕೋಟಿ ರೂಪಾಯಿಗಳ ಅನುದಾನವನ್ನು ನಿಗದಿಪಡಿಸಿದೆ. ಇನ್ನು ಮುಂದೆ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮವನ್ನು (NSAP) ‘ಪ್ರಧಾನ ಮಂತ್ರಿ ಸಾಮಾಜಿಕ ಸಹಾಯತಾ ಯೋಜನೆ’ ಎಂದು ಕರೆಯಲಾಗುತ್ತದೆ. ಇದರೊಂದಿಗೆ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆಯನ್ನು ‘ಪ್ರಧಾನ ಮಂತ್ರಿ ವೃದ್ಧಾವಸ್ಥಾ ಪಿಂಚಣಿ ಯೋಜನೆ’ ಎಂದು, ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆಯನ್ನು ‘ಪ್ರಧಾನ ಮಂತ್ರಿ ವಿಧವಾ ಪಿಂಚಣಿ ಯೋಜನೆ’ ಎಂದು, ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವಿಕಲ ಪಿಂಚಣಿ ಯೋಜನೆಯನ್ನು ‘ಪ್ರಧಾನ ಮಂತ್ರಿ ದಿವ್ಯಾಂಗಜನ್ ಪಿಂಚಣಿ ಯೋಜನೆ’ ಎಂದು ಹಾಗೂ ರಾಷ್ಟ್ರೀಯ ಕುಟುಂಬ ಸೌಲಭ್ಯ ಯೋಜನೆಯನ್ನು ‘ಪ್ರಧಾನ ಮಂತ್ರಿ ಪರಿವಾರ ಲಾಭ ಯೋಜನೆ’ ಎಂದು ಮರುನಾಮಕರಣ ಮಾಡಲಾಗಿದೆ.
ದಿವ್ಯಾಂಗರ ಪಿಂಚಣಿ ಹೆಚ್ಚಳ ಮತ್ತು ಅರ್ಹತಾ ಮಾನದಂಡದಲ್ಲಿ ಬದಲಾವಣೆ
ಈ ಯೋಜನೆಯಡಿ ಕೇಂದ್ರ ಸರ್ಕಾರವು ದಿವ್ಯಾಂಗರ ಪಿಂಚಣಿ ಮೊತ್ತ ಹಾಗೂ ಅರ್ಹತಾ ಮಾನದಂಡಗಳಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಹೊಸ ನಿಯಮದ ಪ್ರಕಾರ, ಅಂಗವೈಕಲ್ಯದ ಮಾನದಂಡವನ್ನು ಶೇಕಡಾ 80 ರಿಂದ ಶೇಕಡಾ 40 ಕ್ಕೆ ಇಳಿಸಲಾಗಿದೆ. ಜೊತೆಗೆ ಕನಿಷ್ಠ ವಯಸ್ಸಿನ ಮಿತಿಯನ್ನು ಸಡಿಲಿಸಿ, ಹುಟ್ಟಿನಿಂದಲೇ ಈ ಪಿಂಚಣಿ ಪಡೆಯಲು ಅರ್ಹರಾಗುವಂತೆ ಬದಲಾವಣೆ ತರಲಾಗಿದೆ. ಹಣಕಾಸಿನ ನೆರವಿನಲ್ಲೂ ಹೆಚ್ಚಳ ಮಾಡಲಾಗಿದ್ದು, 0 ದಿಂದ 79 ವರ್ಷದೊಳಗಿನ ದಿವ್ಯಾಂಗ ಫಲಾನುಭವಿಗಳಿಗೆ ನೀಡಲಾಗುತ್ತಿದ್ದ ಪಿಂಚಣಿಯನ್ನು 300 ರೂಪಾಯಿಗಳಿಂದ 375 ರೂಪಾಯಿಗಳಿಗೆ ಮತ್ತು 80 ವರ್ಷ ಹಾಗೂ ಮೇಲ್ಪಟ್ಟ ಫಲಾನುಭವಿಗಳಿಗೆ ನೀಡುತ್ತಿದ್ದ ಮೊತ್ತವನ್ನು 500 ರೂಪಾಯಿಗಳಿಂದ 625 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ವೃದ್ಧರು ಮತ್ತು ವಿಧವೆಯರ ಪಿಂಚಣಿಯಲ್ಲಿ ಬದಲಾವಣೆ ಇಲ್ಲ
ದಿವ್ಯಾಂಗರ ಪಿಂಚಣಿಯಲ್ಲಿ ಹೆಚ್ಚಳ ಮತ್ತು ನಿಯಮಗಳಲ್ಲಿ ಬದಲಾವಣೆ ತಂದಿದ್ದರೂ, ವೃದ್ಧಾಪ್ಯ ಹಾಗೂ ವಿಧವಾ ಪಿಂಚಣಿ ಯೋಜನೆಗಳ ಮೊತ್ತ ಮತ್ತು ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಈ ಹಿಂದಿನಂತೆಯೇ ಅವು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. 1995ರಲ್ಲಿ ಆರಂಭವಾದ ಈ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮವು ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರು, ವಿಧವೆಯರು ಮತ್ತು ವಿಶೇಷ ಚೇತನರಿಗೆ ಆರ್ಥಿಕ ಭದ್ರತೆ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.
ಅಮೆರಿಕದಲ್ಲಿ ಭಾರತೀಯ ಉದ್ಯೋಗಿಗಳಿಗೆ ಹೊಸ ಸಂಕಷ್ಟ; ವರ್ಕ್ ಪರ್ಮಿಟ್ ನಿಯಮದಲ್ಲಿ ಮಹತ್ವದ ಬದಲಾವಣೆ!






