ಸದ್ಯ ಕ್ರಿಕೆಟ್ ರಂಗದಲ್ಲಿ ಹಲವಾರು ಜನರ ಕಣ್ಣು 14 ವರ್ಷದ ವೈಭವ್ ಸೂರ್ಯವಂಶಿ ಮೇಲಿದೆ. ವೈಭವ್ ವಿಶ್ವಕಪ್ ಆಡದೇ ಇರಬಹುದು, ಆದರೆ ಈಗಾಗಲೇ ಅವರ ಪರ ಪ್ರಚಾರ, ನಿರೀಕ್ಷೆಗಳು ಹೆಚ್ಚಿವೆ. ಆದರೆ ಈ ಬಾರಿಯ ಅಂಡರ್ 19ರ ವಿಶ್ವಕಪ್ ಪಂದ್ಯದಲ್ಲಿಯೂ 14ರ ಪೋರ ಎಲ್ಲರನ್ನೂ ತನ್ನತ್ತ ಗಮನ ಸೆಳೆಯುವಂತೆ ಮಾಡಿದ್ದು, ರಾಷ್ಟ್ರಪತಿಗಳಿಂದ ಇತ್ತೀಚಿಗಷ್ಟೇ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕಳೆದ ವರ್ಷ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ 35 ಎಸೆತಗಳಲ್ಲಿ ಶತಕ ಗಳಿಸಿದ್ದರು. ಬಳಿಕ ಪುರುಷರ ಟಿ20ಯಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ವೈಭವ್ ಪಾತ್ರರಾಗಿದ್ದರು. ಅಲ್ಲದೆ ದೇಶೀಯ ಕ್ರಿಕೆಟ್‌ನಲ್ಲೂ ಅವರು ಹೆಚ್ಚು ಆಶಾಭಾವ ಸೃಷ್ಟಿಸುತ್ತಿದ್ದಾರೆ. ಟಿ20ಯಲ್ಲಿ 18 ಪಂದ್ಯಗಳಲ್ಲಿ 701 ರನ್ ಅಂದರೆ ಸರಾಸರಿ 41.23 ಸ್ಟ್ರೈಕ್ ರೇಟ್, ಲಿಸ್ಟ್ ಎ ನಲ್ಲಿ ಎಂಟು ಪಂದ್ಯಗಳಲ್ಲಿ 353 ರನ್ ಅಂದರೆ ಸರಾಸರಿ 44.12 ಮತ್ತು ಮೊದಲ ಶ್ರೇಣಿಯ ಎಂಟು ಪಂದ್ಯಗಳಲ್ಲಿ 207 ರನ್ ಗಳಿಸಿದ್ದಾರೆ. ಇನ್ನೂ ಯೂತ್ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಐದು ಶತಕಗಳನ್ನು ದಾಖಲಿಸಿದ್ದಾರೆ.
ಇನ್ನೂ 16ನೇ ಆವೃತ್ತಿಯ ಐಸಿಸಿ ಅಂಡರ್-19 ವಿಶ್ವಕಪ್ ಜನವರಿ 15ರ ಗುರುವಾರದಿಂದ ಆರಂಭಗೊಳ್ಳಲಿದೆ. ಪಂದ್ಯಾವಳಿಯ ಮೊದಲ ಪಂದ್ಯದಲ್ಲೇ ಭಾರತ ಕಣಕ್ಕಿಳಿಯುತ್ತಿದ್ದು ಅಮೆರಿಕ ತಂಡವನ್ನು ಎದುರಿಸುತ್ತಿದೆ. ಕ್ರಿಕೆಟ್ ಜಗತ್ತಿನ ಬಲಿಷ್ಠ ರಾಷ್ಟ್ರಗಳ ಭವಿಷ್ಯದ ಆಟಗಾರರು ಹಾಗೂ ಸಣ್ಣಪುಟ್ಟ ಕ್ರಿಕೆಟಿಂಗ್ ರಾಷ್ಟ್ರಗಳ ಪ್ರತಿಭೆಗಳ ನಡುವಿನ ಪೈಪೋಟಿ, ಪ್ರೇಕ್ಷಕರಿಗೆ ಸದಾ ರೋಚಕ ಅನುಭವವನ್ನು ನೀಡಲಿದೆ. ಈ ಬಾರಿ ಟೂರ್ನಿಯ ಆತಿಥ್ಯವನ್ನು ಜಿಂಬಾಬ್ವೆ ಹಾಗೂ ನಮೀಬಿಯಾ ವಹಿಸಿಕೊಂಡಿವೆ. ಪ್ರತಿ ಸಲದಂತೆ ಈ ಸಲವೂ 50 ಓವರ್ ಮಾದರಿಯಲ್ಲಿ ಟೂರ್ನಿ ಜರುಗಲಿದೆ.

ಈ ಅಂಡರ್-19 ವಿಶ್ವಕಪ್‌ನಲ್ಲಿ ಹದಿನಾರು ತಂಡಗಳು ಭಾಗವಹಿಸುತ್ತಿವೆ. ಭಾರತ ತಂಡವು ಯುಎಸ್ಎ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ಜೊತೆಗೆ ಸೇರಿಕೊಂಡು ಎ ಗುಂಪಿನಲ್ಲಿದೆ. ಪ್ರತಿ ಗುಂಪಿನಲ್ಲಿ ನಾಲ್ಕು ತಂಡಡಗಳಿವೆ. ಇನ್ನೂ ಆಯುಷ್ ಮ್ಹಾತ್ರೆ ಭಾರತ ತಂಡದ ನಾಯಕನಾಗಿ ಜವಾಬ್ದಾರಿ ಹೊತ್ತಿದ್ದಾರೆ. ತಂಡದಲ್ಲಿ ಗುರುತಿಸಿಕೊಂಡಿರುವ ವೈಭವ್ ಸೂರ್ಯವಂಶಿಯ ಆಟದತ್ತ ಕ್ರಿಕೆಟ್ ಪ್ರೇಮಿಗಳ ಚಿತ್ತ ನೆಟ್ಟಿದೆ. ಭಾರತದ ಪರ ಆಟವಾಡಿ ಎದುರಾಳಿಗಳಿಗೆ ನಡುಕ ಹುಟ್ಟಿಸಲು ಭಾರತದ ಯುವ ಕ್ರಿಕೆಟ್ ತಂಡ ಸಿದ್ಧವಾಗಿದೆ.

ಭಾರತ ತಂಡದಲ್ಲಿ ನಾಯಕನಾಗಿ ಆಯುಷ್ ಮ್ಹಾತ್ರೆ, ಆಟಗಾರರಾಗಿ ಆರ್.ಎಸ್. ಅಂಬರೀಶ್, ಕಾನಿಷ್ಕ್ ಚೌಹಾಣ್, ಡಿ.ದೀಪೇಶ್, ಮೊಹಮ್ಮದ್ ಅನನ್, ಆರನ್ ಜಾರ್ಜ್, ಅಭಿಜ್ಞಾನ್ ಕುಂದು, ಕಿಶನ್ ಕುಮಾರ್ ಸಿಂಗ್, ವಿಹಾನ್ ಮಲ್ಹೋತ್ರಾ, ಉದ್ಧವ್ ಮೋಹನ್, ಹೆನಿಲ್ ಪಟೇಲ್, ಖಿಲಾನ್ ಪಟೇಲ್, ಹರ್ವಂಶ್ ಸಿಂಗ್, ವೈಭವ್ ಸೂರ್ಯವಂಶಿ , ವೇದಾಂತ್ ತ್ರಿವೇದಿ ಇವರುಗಳು ತಮ್ಮ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.

ಅಮೆರಿಕದ ತಂಡದಲ್ಲಿ ನಾಯಕನಾಗಿ ಉತ್ಕರ್ಷ್ ಶ್ರೀವಾಸ್ತವ, ಇನ್ನುಳಿದಂತೆ ಅದ್ನೀತ್ ಜಾಂಬ್, ಶಿವ ಶಾನಿ, ನಿತೀಶ್ ಸುದಿನಿ, ಅದ್ವೈತ್ ಕೃಷ್ಣ, ಸಾಹಿರ್ ಭಾಟಿಯಾ, ಅರ್ಜುನ್ ಮಹೇಶ್, ಅಮರಿಂದರ್ ಗಿಲ್, ಸಬರೀಶ್ ಪ್ರಸಾದ್, ಆದಿತ್ ಕಪ್ಪಾ, ಸಾಹಿಲ್ ಗಾರ್ಗ್, ಅಮೋಘ್ ರೆಡ್ಡಿ ಅರೆಪಲ್ಲಿ, ರಿತ್ವಿಕ್ ಅಪ್ಪಿಡಿ, ರಯಾನ್ ತಾಜ್, ರಿಷಬ್ ಶಿಂಪಿ ಈ ಎಲ್ಲ ಆಟಗಾರರು ಯುಎಸ್‌ಎ ತಂಡದಲ್ಲಿ ಆಡಲಿದ್ದಾರೆ.











