ನವದೆಹಲಿ:ಏ.೦೨: ದೇಶದ ಉದ್ಯೋಗ ಮಾರುಕಟ್ಟೆಯು ಹದಗೆಟ್ಟಿರುವುದರಿಂದ ಭಾರತದ ನಿರುದ್ಯೋಗ ದರವು ಮಾರ್ಚ್ 2023ರಲ್ಲಿ ಕಳೆದ ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ವರದಿ ತಿಳಿಸಿದೆ. ಕಳೆದ ತಿಂಗಳು ದೇಶದ ನಿರುದ್ಯೋಗ ದರವು ಶೇಕಡ 7.8ಕ್ಕೆ ತಲುಪಿದೆ.
ದೇಶದಲ್ಲಿ ನಿರುದ್ಯೋಗ ದರವು ಡಿಸೆಂಬರ್ 2022 ರಲ್ಲಿ ಶೇಕಡಾ 8.30 ಕ್ಕೆ ಏರಿಕೆ ಕಂಡಿತ್ತು. ಆದರೆ ಜನವರಿಯಲ್ಲಿ ಶೇಕಡಾ 7.14 ಕ್ಕೆ ಇಳಿದಿತ್ತು. ಬಳಿಕ ಫೆಬ್ರವರಿಯಲ್ಲಿ ಮತ್ತೆ ಶೇಕಡಾ 7.45 ಕ್ಕೆ ಏರಿದೆ ಎಂದು ಶನಿವಾರ ಬಿಡುಗಡೆಯಾದ ಸಿಎಂಐಇ ಅಂಕಿಅಂಶಗಳಿಂದ ತಿಳಿದುಬಂದಿದೆ. ಮಾರ್ಚ್‌ನಲ್ಲಿ, ನಗರ ಪ್ರದೇಶಗಳಲ್ಲಿ ನಿರುದ್ಯೋಗ ದರವು ಶೇಕಡಾ 8.4 ರಷ್ಟಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಇದು ಶೇಕಡಾ 7.5 ರಷ್ಟಿದೆ.
“ಮಾರ್ಚ್ 2023 ರಲ್ಲಿ ಭಾರತದ ಕಾರ್ಮಿಕ ಮಾರುಕಟ್ಟೆ ಆಶಾದಾಯಕವಾಗಿರಲಿಲ್ಲ.. ನಿರುದ್ಯೋಗ ದರವು ಫೆಬ್ರವರಿಯ ಶೇಕಡಾ 7.5 ರಿಂದ ಮಾರ್ಚ್‌ನಲ್ಲಿ ಶೇಕಡಾ 7.8 ಕ್ಕೆ ಏರಿಕೆ ದಾಖಲಿಸಿದೆ. ಕಾರ್ಮಿಕ ಪಡೆಯ ಭಾಗವಹಿಸುವಿಕೆ ದರವೂ ಇದೇ ಸಮಯದಲ್ಲಿ ಕುಸಿದಿದೆ. ಇದು ಶೇಕಡಾ 39.9 ರಿಂದ ಶೇಕಡ 39.8ಕ್ಕೆ ಕುಸಿದಿದೆ” ಎಂದು ಸಿಎಂಐಇ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ವ್ಯಾಸ್ ಅವರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಈ ದರವು ಫೆಬ್ರವರಿಯಲ್ಲಿ 36.9 ಇತ್ತು. ಇದು ಮಾರ್ಚ್‌ನಲ್ಲಿ ಶೇಕಡ 36.7 ಕ್ಕೆ ಕುಸಿದಿದೆ. ಇದು ಕೂಡ ಒಟ್ಟಾರೆ ನಿರುದ್ಯೋಗ ದರ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ನಿರುದ್ಯೋಗ ದರವು 409.9 ಮಿಲಿಯನ್‌ನಿಂದ 407.6 ಮಿಲಿಯನ್‌ಗೆ ಇಳಿದಿದೆ ಎಂದು ವ್ಯಾಸ್ ತಿಳಿಸಿದ್ದಾರೆ.
ಯಾವ ರಾಜ್ಯದಲ್ಲಿ ಹೆಚ್ಚು
ರಾಜ್ಯವಾರು ನೋಡಿದರೆ ನಿರುದ್ಯೋಗ ದರವು ಹರ್ಯಾಣದಲ್ಲಿ ಅತ್ಯಧಿಕವಿದೆ. ಅಲ್ಲಿ ಶೇಕಡ 26.8 ರಷ್ಟು ನಿರುದ್ಯೋಗ ದರವಿದೆ. ನಂತರದ ಸ್ಥಾನವನು ರಾಜಸ್ಥಾನ (ಶೇಕಡ 26.4), ಜಮ್ಮು ಮತ್ತು ಕಾಶ್ಮೀರ (ಶೇಕಡ 23.1 ), ಸಿಕ್ಕಿಂ (ಶೇಕಡ 20.7), ಬಿಹಾರ (ಶೇಕಡ 17.6 ) ಮತ್ತು ಜಾರ್ಖಾಂಡ್ (ಶೇಕಡ 17.5 ) ಪಡೆದಿವೆ.
ಎಲ್ಲಿ ನಿರುದ್ಯೊಗ ಪ್ರಮಾಣ ಕಡಿಮೆ?
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆ ಇದೆ. ಉತ್ತರಖಂಡಾ ಮತ್ತು ಛತ್ತಿಸ್‌ಗಢದಲ್ಲಿ ನಿರುದ್ಯೋಗ ಪ್ರಮಾಣವು ಶೇಕಡ 0.8 ರಷ್ಟಿದೆ. ನಂತರದ ಸ್ಥಾನವನ್ನು ಪಾಂಡಿಚೇರಿ ಪಡೆದಿದೆ. ಪಾಂಡಿಚೇರಿಯಲ್ಲಿ ಶೇಕಡ 1.5 ನಿರುದ್ಯೋಗವಿದೆ. ಗುಜರಾತ್‌ನಲ್ಲಿ ಶೇಕಡ 1.8 ನಿರುದ್ಯೋಗ ದರವಿದೆ. ನಂತರದ ಸ್ಥಾನವನ್ನು ಕರ್ನಾಟಕ ಪಡೆದಿದೆ. ಕರ್ನಾಟಕದಲ್ಲಿ ನಿರುದ್ಯೋಗ ದರ ಶೇಕಡ 2.3 ರಷ್ಟಿದೆ. ಮೇಘಾಲಯ ಮತ್ತು ಒಡಿಸ್ಸಾ ರಾಜ್ಯಗಳಲ್ಲಿ ನಿರುದ್ಯೋಗ ಪ್ರಮಾಣವು ತಲಾ ಶೇಕಡ 2.6 ರಷ್ಟಿದೆ.
“ಅಕ್ಟೋಬರ್-ಜನವರಿ ಹಬ್ಬದ ಅವಧಿಯ ನಂತರ ಚಿಲ್ಲರೆ ವ್ಯಾಪಾರ, ಪೂರೈಕೆ ಸರಪಳಿ, ಲಾಜಿಸ್ಟಿಕ್ಸ್, ಹಣಕಾಸು ಸೇವೆಗಳು ಮತ್ತು ಇ-ಕಾಮರ್ಸ್ ಮುಂತಾದ ಕ್ಷೇತ್ರಗಳಲ್ಲಿ ಉದ್ಯೋಗ ಕಡಿಮೆಯಾಗಿದೆ” ಎಂದು ಸಿಐಇಎಲ್ ಎಚ್‌ಆರ್ ಸರ್ವೀಸ್‌ನ ನಿರ್ದೇಶಕ ಮತ್ತು ಸಿಇಒ ಆದಿತ್ಯ ಮಿಶ್ರಾ ಹೇಳಿದ್ದಾರೆ.
“ಇದೇ ಸಮಯದಲ್ಲಿ ಐಟಿ, ತಂತ್ರಜ್ಞಾನ ಮತ್ತು ಸ್ಟಾರ್ಟಪ್ ವಲಯಗಳು ನೇಮಕಾತಿ ವಿಷಯದಲ್ಲಿ ಬಿಗು ಪ್ರದರ್ಶಿಸುತ್ತಿವೆ. ಇದು ತಾಜಾ ನೇಮಕಾತಿ ನಿಧಾನಗತಿಗೆ ಕಾರಣವಾಗಿದೆ. ಮಾರ್ಚ್ ತಿಂಗಳು ಆರ್ಥಿಕ ವರ್ಷಾಂತ್ಯದ ತಿಂಗಳಾಗಿದೆ, ಈ ಸಮಯದಲ್ಲಿ ಪರೀಕ್ಷೆಗಳು, ಪ್ರವಾಸಗಳು, ಮನರಂಜನೆ ಇತ್ಯಾದಿಗಳು ಹೆಚ್ಚಿರುತ್ತವೆ. ಇದು ನೇಮಕಾತಿ ಮೇಲೆ ಪರಿಣಾಮ ಬೀರಿರುತ್ತದೆ” ಎಂದು ಅವರು ಹೇಳಿದ್ದಾರೆ.