ಕೆಲವು ದಿನಗಳ ಹಿಂದೆ ಅಲಹಾಬಾದ್ನ ‘ಜಿಬಿ ಪಂತ್ ಸಮಾಜ ವಿಜ್ಞಾನ ಸಂಸ್ಥೆ’ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಕರೆದಿದ್ದ 16 ಒಬಿಸಿ ಅಭ್ಯರ್ಥಿಗಳಲ್ಲಿ ಯಾರೂ ಅರ್ಹತೆ ಗಳಿಸಿಲ್ಲ ಎಂದು ಆಯ್ಕೆ ಸಮಿತಿಯು ಘೋಷಿಸಿತ್ತು. ಈ ಸುದ್ದಿಯು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಪರಿಣಾಮ ಸಂಸ್ಥೆಯು ಎರಡೇ ದಿನಗಳಲ್ಲಿ ಖಾಲಿ ಹುದ್ದೆಗಳಿಗಾಗಿ ಮರು-ಜಾಹೀರಾತು ನೀಡಬೇಕಾಗಿ ಬಂತು.
ಭಾರತದಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಉದ್ಯೋಗಗಳಲ್ಲಿ ಕನಿಷ್ಠ ಅರ್ಹತೆಯ ಕೊರತೆಯಿದೆ ಎಂಬ ನೆಪದಲ್ಲಿ ಕೆಳ ವರ್ಗಗಳ ಆಕಾಂಕ್ಷಿಗಳಿಗೆ ಉದ್ದೇಶಪೂರ್ವಕವಾಗಿ ಪ್ರವೇಶವನ್ನು ‘ಸಂದರ್ಶನ’ದ ಹೆಸರಲ್ಲಿ ನಿರಾಕರಿಸುವುದು ಹೊಸ ವಿದ್ಯಮಾನವೇನಲ್ಲ.
ಭಾರತದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದು, ಅತ್ಯಂತ ಪ್ರಗತಿಪರ ವಿಶ್ವವಿದ್ಯಾಲಯವೆಂದೇ ಹೆಸರಾಗಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪಿಎಚ್ಡಿ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಇತ್ತೀಚೆಗೆ ಪ್ರಕಟಿಸಿಲಾಗಿತ್ತು. ಅದರಲ್ಲಿ, ಮೀಸಲಾತಿ ವರ್ಗಗಳು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು OBC ಗಳ ಹಲವಾರು ಅಭ್ಯರ್ಥಿಗಳಿಗೆ ಮೌಖಿಕ ಪರೀಕ್ಷೆಗಳಲ್ಲಿ 30 ರಲ್ಲಿ ಒಂದರಿಂದ ನಾಲ್ಕರವರೆಗಿನ ಅಂಕಗಳನ್ನು ನೀಡಲಾಗಿರುವುದು ದೊಡ್ಡ ಸುದ್ದಿಯಾಗಿತ್ತು. ಕೆಳವರ್ಗದ ವಿದ್ಯಾರ್ಥಿಗಳ ಸಾಮಾಜಿಕ-ಆರ್ಥಿಕ ಆಂದೋಲನವನ್ನು ಗುರಿಯಾಗಿಟ್ಟುಕೊಂಡು ಅವರ ಪ್ರಗತಿಯನ್ನು ಮೊಟಕುಗೊಳಿಸಲು ಬಯಸುತ್ತಿರುವವರು ‘ಗುಣಮಟ್ಟ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳುವ’ ಹೆಸರಿನಲ್ಲಿ ಈ ಅವ್ಯವಹಾರವನ್ನು ದಶಕಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಮುಖ್ಯವಾಹಿನಿಯ ಮಾಧ್ಯಮಗಳ ಸುದೀರ್ಘ ಮೌನದಿಂದ ಇದು ಸಮಾಜದ ಗಮನಕ್ಕೂ ತಡವಾಗಿ ಬಂದಿದೆ.
ಆರ್ಟಿಐ ಕಾಯಿದೆಯ ಅನುಷ್ಠಾನ ಮತ್ತು ಇತ್ತೀಚಿನ ಸಾಮಾಜಿಕ ಮಾಧ್ಯಮಗಳ ಕ್ರಾಂತಿ ಮೇಲ್ಜಾತಿ ಸಂದರ್ಶಕರ ಜಾತಿ ಪೂರ್ವಾಗ್ರಹದ ವಿರುದ್ಧ ಸಾರ್ವಜನಿಕ ಅಭಿಪ್ರಾಯಗಳನ್ನು ರೂಪಿಸುತ್ತಿವೆ. ಪ್ರಗತಿಪರ ಸಮಾಜ ವಿಜ್ಞಾನಿಗಳು ಮತ್ತು ಇತಿಹಾಸಕಾರರ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿರುವ JNU ನಂತಹ ಸಂಸ್ಥೆ ಸೇರಿದಂತೆ ದೇಶದ ಬಹುತೇಕ ಸಂಸ್ಥೆಗಳು ಮೌಖಿಕ ಪರೀಕ್ಷೆಯನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಮೀಸಲಾತಿಯನ್ನೇ ಧಿಕ್ಕರಿಸಹೊರಟಿರುವುದೂ ಹೊರ ಜಗತ್ತಿಗೆ ತಿಳಿಸಿದ್ದು ಸಾಮಾಜಿಕ ಮಾಧ್ಯಮಗಳೇ.
ಒಂದೆರಡು ವರ್ಷಗಳ ಹಿಂದೆ, ಪ್ರೊಫೆಸರ್ ಅಬ್ದುಲ್ ನಫೀ ಅವರ ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾನಿಲಯದ ಆಂತರಿಕ ಸಮಿತಿಯು ಎಲ್ಲಾ ಸಾಮಾಜಿಕ ವರ್ಗಗಳಲ್ಲಿ ಲಿಖಿತ ಮತ್ತು ಮೌಖಿಕ ಪರೀಕ್ಷೆಗಳಲ್ಲಿನ ಮಾರ್ಕ್ಗಳಲ್ಲಿನ ವ್ಯತ್ಯಾಸವನ್ನು ಗಮನಿಸಿ ಮೌಖಿಕ ಪರೀಕ್ಷೆಯ ಅಂಕಗಳನ್ನು 30 ರಿಂದ 15 ಕ್ಕೆ ಇಳಿಸಿತ್ತು.
2010ರಲ್ಲಿ ಜೋಶಿಲ್ ಕೆ. ಅಬ್ರಹಾಂ ಮತ್ತು ಸಂತೋಷ್ ಎಸ್. ಎಂಬ ಇಬ್ಬರು ವಿದ್ವಾಂಸರು ಅಧ್ಯಯನ ವೊಂದನ್ನು ನಡೆಸಿದ್ದು ವಿಶ್ವವಿದ್ಯಾನಿಲಯದಲ್ಲಿ ಕೇವಲ 3.29% ರಷ್ಟು ಅಧ್ಯಾಪಕರು ದಲಿತರು ಮತ್ತು 1.44% ಆದಿವಾಸಿಗಳು ಎಂದು ದಾಖಲಿಸಿದ್ದಾರೆ. IIT ಗಳು ಮತ್ತು IIM ಗಳಂತಹ ಇತರ ಉನ್ನತ ವಿದ್ಯಾ ಸಂಸ್ಥೆಗಳಲ್ಲೂ ಇದೇ ರೀತಿಯ ಪರಿಸ್ಥಿತಿ ಇದೆ. ಅಲ್ಲಿ ಮೀಸಲಾತಿಯಲ್ಲಿರುವ ವರ್ಗಗಳಿಗೆ ಮೀಸಲಿಟ್ಟಿರುವ ಅಧ್ಯಾಪಕರ ಸ್ಥಾನಗಳನ್ನು ಒಂದಲ್ಲ ಒಂದು ನೆಪದಲ್ಲಿ ಖಾಲಿ ಬಿಡಲಾಗುತ್ತದೆ ಮತ್ತು ‘ಯಾರೂ ಸೂಕ್ತರಲ್ಲ’ ಎಂಬ ಷರತ್ತುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಜುಲೈ 2019 ರಲ್ಲಿ, ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, 23 ಐಐಟಿಗಳಲ್ಲಿನ 6,043 ಅಧ್ಯಾಪಕರ ಪೈಕಿ ಎಸ್ಸಿಗಳಿಗೆ 15% ಮತ್ತು ಎಸ್ಟಿಗಳಿಗೆ 7.5% ಕೋಟಾ ಮೀಸಲಿಡಲಾಗಿದ್ದು ಕೇವಲ 2.5% ಎಸ್ಸಿಗಳು ಮತ್ತು 0.34% ಎಸ್ಟಿಗಳಿದ್ದಾರೆ ಎಂದಿದ್ದಾರೆ.
IIT-ಮುಂಬೈನಲ್ಲಿ, 684 ಅಧ್ಯಾಪಕ ಹುದ್ದೆಗಳಲ್ಲಿ ಕೇವಲ ಆರು (0.9%) SC ಸಮುದಾಯದಿಂದ, ಒಂದು (0.1%) ST ಮತ್ತು 10 (1.5 %) OBC ವರ್ಗದವರಿದ್ದರೆ IIT-ಚೆನ್ನೈನಲ್ಲಿ, 596 ಅಧ್ಯಾಪಕರಲ್ಲಿ16 (2.7%) SC ಗಳು, ಮೂರು (0.5%) ST ಗಳು ಮತ್ತು 62 (10.4%) OBC ಗಳಿದ್ದಾರೆ.
ಸಾರ್ವಜನಿಕ ಸಂಸ್ಥೆಗಳಲ್ಲಿನ ಆಯ್ಕೆ ಪ್ರಕ್ರಿಯೆಗಳಲ್ಲಾಗುವ ಇಂತಹ ತಾರತಮ್ಯವನ್ನು ತಗ್ಗಿಸಬೇಕೆಂದರೆ ಸಂದರ್ಶನ ಪ್ಯಾನಲ್ಗಳ ಸದಸ್ಯರಿಗೆ ಅಭ್ಯರ್ಥಿಗಳ ಜಾತಿಯನ್ನು ಯಾವ ಕಾರಣಕ್ಕೂ ಬಹಿರಂಗಪಡಿಸಬಾರದು. ಸಂದರ್ಶನ ಪ್ಯಾನೆಲ್ಗಳಲ್ಲಿನ ಮೀಸಲಾತಿಯಿಂದ ಬಂದಿರುವ ವೀಕ್ಷಕರು ಇನ್ಸ್ಟಿಟ್ಯೂಟ್ನ ಹೊರಗಿನವರಾಗಿರಬೇಕು ಮತ್ತು ಸಂದರ್ಶನ ಪ್ಯಾನೆಲ್ಗಳಲ್ಲಿ ಅವರ ಅಭಿಪ್ರಾಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕು. ಆಯ್ಕೆ ಪ್ರಕ್ರಿಯೆಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ‘ಸೂಕ್ತವಾದ ಅಭ್ಯರ್ಥಿಗಳು ಕಂಡುಬಂದಿಲ್ಲ’ ಎಂಬ ಮಾನದಂಡವನ್ನು ಬಳಸಬಾರದು ಎಂಬುವುದನ್ನು ಕಡ್ಡಾಯಗೊಳಿಸಬೇಕು.