ಬೆಂಗಳೂರಿನ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ ಸಂಶೋಧಕರು ಭಾರತದ ಏಕೈಕ ಖಗೋಳ ಬಾಹ್ಯಾಕಾಶ ಮಿಷನ್ ಆಸ್ಟ್ರೋಸ್ಯಾಟ್‌ನ ಡಾಟಾವನ್ನು ಬಳಸಿಕೊಂಡು ಮೂರು ಗ್ಯಾಲಕ್ಸಿಗಳ ಮೂರು ಅತಿದೊಡ್ಡ ಕಪ್ಪು ಕುಳಿಗಳು ವಿಲೀನಗೊಂಡು ತ್ರಿವಳಿ ಸಕ್ರಿಯ ಗ್ಯಾಲಕ್ಟಿಕ್ ನ್ಯೂಕ್ಲಿಯೈ ಉಂಟಾಗಿರುವದನ್ನು ಕಂಡುಹಿಡಿದಿದ್ದಾರೆ.
“ನಮ್ಮ ಅಧ್ಯಯನವು ಮೂರು ಗೆಲಕ್ಸಿಗಳನ್ನು ಗುರುತಿಸಿದೆ ಮತ್ತು ಪ್ರತಿಯೊಂದು ಸಕ್ರಿಯ ಗ್ಯಾಲಕ್ಸಿಯ ನ್ಯೂಕ್ಲಿಯಸ್ ‘ಟ್ರಿಪಲ್ ಎಜಿಎನ್’ ವ್ಯವಸ್ಥೆಯನ್ನು ರೂಪಿಸುತ್ತದೆ. ಕಾಸ್ಮಾಲಾಜಿಕಲ್ ಮಾಡೆಲಿಂಗ್ ಪ್ರಕಾರ 16% ಟ್ರಿಪಲ್ ಎಜಿಎನ್ ಇರಬೇಕಿತ್ತು ಆದರೆ ಇಲ್ಲಿಯವರೆಗೆ ಬೆರಳೆಣಿಕೆಯಷ್ಟು ಮಾತ್ರ ಕಂಡು ಬಂದಿದೆ” ಎಂದು ಸಂಶೋಧಕರಾದ ಜ್ಯೋತಿ ಯಾದವ್ ಹೇಳಿದ್ದಾರೆ.
ಅತಿ ದೊಡ್ಡ ಕಪ್ಪು ಕುಳಿಗಳು ಯಾವುದೇ ಬೆಳಕನ್ನು ಹೊರಸೂಸದ ಕಾರಣ ಅವುಗಳನ್ನು ಪತ್ತೆ ಮಾಡುವುದು ಕಷ್ಟ. ಆದರೆ, ಕಪ್ಪು ಕುಳಿಗಳು ತಮ್ಮ ಸುತ್ತಮುತ್ತಲಿನೊಂದಿಗೆ ಸಂವಹನ ನಡೆಸಿದಾಗ, ಅವು ಧೂಳು ಮತ್ತು ಅನಿಲಗಳನ್ನು ನುಂಗಿ, ಅದನ್ನು ವಿದ್ಯುತ್ಕಾಂತೀಯ ವಿಕಿರಣವಾಗಿ ಪರಿವರ್ತಿಸಿ ಹೊಳೆಯುತ್ತವೆ.
ಕಪ್ಪು ರಂಧ್ರಗಳನ್ನು ಪತ್ತೆ ಹಚ್ಚಬೇಕಾದರೆ ಗ್ಯಾಲಕ್ಸಿಗಳು ವಿಲಿನಗೊಳ್ಳಬೇಕಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. “ನಾವು ಸಾಮಾನ್ಯವಾಗಿ ಪ್ರತಿ ನಕ್ಷತ್ರಪುಂಜವು ಕಪ್ಪು ಕುಳಿ ಹೊಂದಿದೆ ಎಂದು ಅಂದಾಜಿಸುತ್ತೇವೆ ಆದರೆ ನಾವು ಅದನ್ನು ನೋಡಿರುವುದಿಲ್ಲ. ಆದರೆ ಗ್ಯಾಲಕ್ಸಿಗಳ ಮಧ್ಯ ಭಾಗದ ಕಡೆಗೆ ಅನಿಲಗಳು ಚಲಿಸಿದಾಗ ಮತ್ತು AGN ಚಟುವಟಿಕೆಯನ್ನು ಪ್ರಚೋದಿಸಿದಾಗ ಗ್ಯಾಲಕ್ಸಿಗಳ ಪರಸ್ಪರ ಕ್ರಿಯೆಯನ್ನು ಅಧ್ಯಯನ ಮಾಡುವುದರ ಮೂಲಕ ಇದನ್ನು ಪತ್ತೆಹಚ್ಚಬಹುದು” ಎಂದು ಯಾದವ್ ಹೇಳಿದ್ದಾರೆ.

NGC7733 ಮತ್ತು NGC7734 ಎಂಬ ಜೋಡಿ ಗ್ಯಾಲಕ್ಸಿಗಳನ್ನು ಸಂಶೋಧಕರು ಅಧ್ಯಯನ ಮಾಡುತ್ತಿದ್ದಾಗ ಅವುಗಳಲ್ಲಿ ಒಂದರ ಮಧ್ಯದಲ್ಲಿ ಅಸಾಮಾನ್ಯ ಪ್ರಕಾಶಮಾನವಾದ ಕ್ಲಂಪ್ ಒಂದು ಕಂಡುಬಂದಿತ್ತು. ಆದರೆ ಆ ಕ್ಲಂಪ್ ವಿಭಿನ್ನ ವೇಗದಲ್ಲಿ ಚಲಿಸುತ್ತಿತ್ತು. ಹಾಗಾಗಿ ಆ ಕ್ಲಂಪ್ ಒಂದೇ ನಕ್ಷತ್ರಪುಂಜದ ಭಾಗವಲ್ಲ, ಬದಲಿಗೆ ಅವರು NGC7733N ಎಂದು ಹೆಸರಿಸಲಾದ ಪ್ರತ್ಯೇಕ ಗ್ಯಾಲಕ್ಸಿ ಎಂದು ವಿಜ್ಞಾನಿಗಳು ಅಭಿಪ್ರಾಯಕ್ಕೆ ಬಂದರು.
“ಕೆಲವೊಮ್ಮೆ ಎರಡು ಗೆಲಕ್ಸಿಗಳು ಪರಸ್ಪರ ಬಲವನ್ನು ಅನ್ವಯಿಸಿಕೊಂಡಾಗ ಕೆಲವು ವಸ್ತುಗಳು ಗೆಲಕ್ಸಿಯಿಂದ ಹೊರಬೀಳುತ್ತವೆ. ಕೆಲವೊಮ್ಮೆ ಅದು ತನ್ನದೇ ಗುರುತ್ವಾಕರ್ಷಣೆಯ ಅಡಿಯಲ್ಲಿ ಕುಸಿಯಬಹುದು ಮತ್ತು ಒಂದೇ ಸಣ್ಣ ನಕ್ಷತ್ರಪುಂಜವನ್ನು ರೂಪಿಸಬಹುದು” ಎಂದು ಯಾದವ್ ಹೇಳಿದರು.
IIA ಯಿಂದ ಮೌಸುಮಿ ದಾಸ್ ಮತ್ತು ಸುಧಾಂಶು ಬಾರ್ವೇ, ಕಾಲೇಜ್ ಡಿ ಫ್ರಾನ್ಸ್‌ನ ಚೈರ್ ಗ್ಯಾಲಕ್ಸಿ ಎಟ್ ಕಾಸ್ಮೊಲೊಜಿಪ್ಯಾರಿಸ್‌ನ ಫ್ರಾಂಕೋಯಿಸ್ ಕಾಂಬ್ಸ್ ಸೇರಿದಂತೆ ಹಲವು ಸಂಶೋದಕರು ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದರು. 2015 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಆರಂಭಿಸಿದ ಆಸ್ಟ್ರೋಸಾಟ್‌ನಿಂದ ಡೇಟಾವನ್ನು ಬಳಸಲಾಗಿದೆ ಮತ್ತು ಚಿಲಿಯಲ್ಲಿನ MUSE (ಮಲ್ಟಿ ಯುನಿಟ್ ಸ್ಪೆಕ್ಟ್ರೋಸ್ಕೋಪಿಕ್ ಎಕ್ಸ್‌ಪ್ಲೋರರ್)ನಿಂದಲೂ ಡಾಟಾವನ್ನು ಬಳಸಿಕೊಳ್ಳಲಾಗಿದೆ.
ಬ್ರಹ್ಮಾಂಡದ ವಿಕಾಸವನ್ನು ಅರ್ಥಮಾಡಿಕೊಳ್ಳಲು ಗೆಲಕ್ಸಿಗಳ ವಿಕಾಸವನ್ನು ಅರ್ಥಮಾಡಿಕೊಳ್ಳುವುದು ಅಗತ್ಯ ಎಂದು ಹೇಳುವ ಯಾದವ್ “ಪ್ರಸ್ತುತ ಅನಿಲಗಳು ನಕ್ಷತ್ರಪುಂಜದ ಒಳಗಿನ ಪಾರ್ಸೆಕ್ ಅನ್ನು ಹೇಗೆ ತಲುಪುತ್ತವೆ ಎಂದು ನಮಗೆ ಅರ್ಥವಾಗುತ್ತಿಲ್ಲ (ಪಾರ್ಸೆಕ್ ಎನ್ನುವುದು ಸೌರಮಂಡಲದ ಹೊರಗಿನ ಖಗೋಳ ವಸ್ತುಗಳಿಗಿರುವ ದೊಡ್ಡ ಅಂತರವನ್ನು ಅಳೆಯುವ ಉದ್ದದ ಒಂದು ಘಟಕ). AGN ಗಳು ಗೆಲಕ್ಸಿಗಳ ವಿಕಾಸದ ಮೇಲೂ ಪರಿಣಾಮ ಬೀರುತ್ತವೆ. ನಾವು ಬ್ರಹ್ಮಾಂಡದ ವಿಕಾಸವನ್ನು ಅಧ್ಯಯನ ಮಾಡಬಯಸಿದರೆ ಗೆಲಕ್ಸಿಗಳು ಹೇಗೆ ವಿಕಸನಗೊಳ್ಳುತ್ತವೆ ಎಂಬುದನ್ನೂ ತಿಳಿದುಕೊಳ್ಳಬೇಕಾಗುತ್ತದೆ. ನಕ್ಷತ್ರಪುಂಜದ ಮಧ್ಯದಲ್ಲಿ ಕುಳಿತಿರುವ AGN ಅನಿಲವನ್ನು ತಳ್ಳುವ ಮೂಲಕ ನಕ್ಷತ್ರದ ರಚನೆಯನ್ನು ಪ್ರಾರಂಭಿಸಬಹುದು ಅಥವಾ ನಕ್ಷತ್ರಪುಂಜದಿಂದ ಅನಿಲವನ್ನು ತೆಗೆಯುವ ಮೂಲಕ ಅದನ್ನು ನಿಲ್ಲಿಸಬಹುದು”ಎಂದು ಅವರು ಹೇಳಿದ್ದಾರೆ