ಇಂಧೋರ್: ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(Yashaswi Jaiswal) 68 ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಶಿವಂ ದುಬೆ(Shivam Dube) 63* ಅವರುಗಳ ಸ್ಪೋಟಕ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ(Afghanistan) ವಿರುದ್ಧದ 2ನೇ ಟಿ20ಯಲ್ಲಿ ಭಾರತ(Team India) 6 ವಿಕೆಟ್ಗಳಿಂದ ಗೆಲ್ಲುವ ಮೂಲಕ 2-0 ಅಂತರದಲ್ಲಿ ಸರಣಿ ತನ್ನದಾಗಿಸಿಕೊಂಡಿದೆ.
ಇಂಧೋರ್ನಲ್ಲಿ ಭಾನುವಾರ ನಡೆದ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಅಫ್ಘಾನ್ ಪಡೆ 20 ಓವರ್ಗಳಲ್ಲಿ 172 ರನ್ಗಳಿಸಿ ಆಲೌಟ್ ಆಯಿತು. ಮೊದಲ ಕ್ರಮಾಂಕದ ಬ್ಯಾಟರ್ ಗುಲ್ಬದಿನ್ ನೈಬ್(57 ರನ್, 35 ಬಾಲ್, 5 ಬೌಂಡರಿ, 4 ಸಿಕ್ಸ್) ಭರ್ಜರಿ ಬ್ಯಾಟಿಂಗ್ನಿಂದ ತಂಡಕ್ಕೆ ಆಸರೆಯಾದರು. ಇವರಿಗೆ ಸಾಥ್ ನೀಡಿದ ನಜೀಬುಲ್ಲಾ(23), ಕರೀಮ್ ಜನತ್(20) ಹಾಗೂ ಮುಜೀಬ್(21) ಕೆಳ ಕ್ರಮಾಂಕದಲ್ಲಿ ಉಪಯುಕ್ತ ರನ್ಗಳಿಸಿ ತಂಡದ ಮೊತ್ತವನ್ನು 170ರ ಗಡಿದಾಟಿಸಿದರು. ಭಾರತದ ಪರ ಅರ್ಶದೀಪ್ ಸಿಂಗ್ 3 ವಿಕೆಟ್ ಪಡೆದು ಮಿಂಚಿದರೆ. ಬಿಷ್ಣೋಯಿ, ಅಕ್ಸರ್ ತಲಾ 2 ಹಾಗೂ ಶಿವಂ ದುಬೆ 1 ವಿಕೆಟ್ ಪಡೆದರು.
ಜೈಸ್ವಾಲ್-ದುಬೆ ದರ್ಬಾರ್:
ಪ್ರವಾಸಿ ತಂಡ ನೀಡಿದ 173 ರನ್ಗಳ ಟಾರ್ಗೆಟ್ ಬೆನ್ನತ್ತಿದ ಭಾರತ, ಇನ್ನಿಂಗ್ಸ್ನ ಮೊದಲ ಓವರ್ನಲ್ಲೇ ನಾಯಕ ರೋಹಿತ್ ಶರ್ಮ(0) ವಿಕೆಟ್ ಕಳೆದುಕೊಂಡು ಆಘಾತ ಕಂಡಿತು. ಆದರೆ ನಂತರದಲ್ಲಿ ಜೊತೆಯಾದ ಯಶಸ್ವಿ ಜೈಸ್ವಾಲ್(68 ರನ್, 34 ಬಾಲ್, 5 ಬೌಂಡರಿ, 6 ಸಿಕ್ಸ್) ಹಾಗೂ ವಿರಾಟ್ ಕೊಹ್ಲಿ(29) ಅರ್ಧಶತಕದ ಜೊತೆಯಾಟದಿಂದ ತಂಡಕ್ಕೆ ಚೇತರಿಕೆ ನೀಡಿದರು. ಬಳಿಕ ಬಂದ ಶಿವಂ ದುಬೆ(63* ರನ್, 32 ಬಾಲ್, 5 ಬೌಂಡರಿ, 4 ಸಿಕ್ಸ್) ಅಫ್ಘಾನ್ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿದರು. 3ನೇ ವಿಕೆಟ್ಗೆ 92 ರನ್ಗಳ ಜೊತೆಯಾಟವಾಡಿದ ಜೈಸ್ವಾಲ್ ಹಾಗೂ ದುಬೆ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಂತಿಮವಾಗಿ ಭಾರತ 15.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್ಗಳಿಸಿ 6 ವಿಕೆಟ್ಗಳಿಂದ ಗೆದ್ದುಬೀಗಿತು. ಅಫ್ಘಾನಿಸ್ತಾನದ ಪರ ಜನತ್ 2, ಫಜ಼ಲ್ ಹಾಗೂ ನವೀನ್ ತಲಾ 1 ವಿಕೆಟ್ ಪಡೆದರು.
ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸುವ ಮೂಲಕ ಸರಣಿ ತನ್ನದಾಗಿಸಿಕೊಂಡಿತು. ಭಾರತದ ಪರ ಬೌಲಿಂಗ್ನಲ್ಲಿ ಮಿಂಚಿದ ಆಲ್ರೌಂಡರ್ ಅಕ್ಸರ್ ಪಟೇಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಉಭಯ ತಂಡಗಳ ಮೂರನೇ ಹಾಗೂ ಕೊನೆಯ ಪಂದ್ಯ ಜ.17ರಂದು ಮಧ್ಯಾಹ್ನ 1.30ಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.