ವಿಶ್ವಕಪ್ ನ ಪಂದ್ಯದಲ್ಲಿ ಭಾರತ ತಂಡ ಅಮೆರಿಕ ವಿರುದ್ಧ ಗೆದ್ದಿದೆ. ಆತಿಥೇಯ ಅಮೆರಿಕ ತಂಡವನ್ನು (IND vs USA) 7 ವಿಕೆಟ್ ಗಳಿಂದ ಮಣಿಸಿ ಸೂಪರ್ 8 ಸುತ್ತಿಗೆ ಪ್ರವೇಶಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಮೆರಿಕ 20 ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 110 ರನ್ ಗಳಿಸಿತ್ತು. ಸವಾಲು ಬೆನ್ನಟ್ಟಿದ್ದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಆದರೂ ಭಾರತ ತಂಡ 18.2 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ಶಿವಂ ದುಬೆ (Shivam Dube) ತಂಡವನ್ನು ದಡ ಸೇರಿಸಿದರು. ಈ ಜೋಡಿ 4 ನೇ ವಿಕೆಟ್ಗೆ 72 ರನ್ ಗಳ ಕಾಣಿಕೆ ನೀಡಿತು.
ಭಾರತದ ವಿರುದ್ಧ ಅಮೆರಿಕದ ಹೋರಾಟ ನಿಜಕ್ಕೂ ಆಶ್ಚರ್ಯ ಎಂಬುವಂತೆಯೇ ಇತ್ತು. ಅಲ್ಪ ಟಾರ್ಗೆಟ್ ನೀಡಿಯೂ ಗೆಲುವಿಗಾಗಿ ಅಮೆರಿಕ ಹೋರಾಟ ನಡೆಸಿತು. ಸ್ಟಾರ್ ಆಟಗಾರರೇ ಹೊಂದಿರುವ ಟೀಂ ಇಂಡಿಯಾವನ್ನು ಅಮೆರಿಕ ವೇಗಿಗಳು ಕಟ್ಟಿಹಾಕಿದ್ದು ನಿಜಕ್ಕೂ ಮೆಚ್ಚುವಂತಿತ್ತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಮೆರಿಕಕ್ಕೆ ವೇಗದ ಬೌಲರ್ ಅರ್ಶ್‌ದೀಪ್ ಸಿಂಗ್ ಶಾಕ್ ನೀಡಿದರು. ಮೊದಲ ಓವರ್ ನಲ್ಲೇ ಡಬಲ್ ಹೊಡೆತ ನೀಡಿದರು. ಇದರಿಂದ ತಂಡವು ಕೊನೆಯವರೆಗೂ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಅಮೆರಿಕ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 110 ರನ್ ಗಳಿಸಿತು. ತಂಡದ ಪರ ಸ್ಟೀವನ್ ಟೇಲರ್ 24 ರನ್ ಹಾಗೂ ನಿತೀಶ್ ಕುಮಾರ್ 27 ರನ್, ಆರನ್ ಜೋನ್ಸ್ 11, ಕೋರಿ ಆಂಡರ್ಸನ್ 15, ಹರ್ಮೀತ್ ಸಿಂಗ್ 10, ವ್ಯಾನ್ ಶಾಲ್ಕ್‌ವಿಕ್ 11 ರನ್ ಗಳಿಸಿದರು. ಭಾರತದ ಪರ ಅರ್ಷದೀಪ್ ಸಿಂಗ್ 4 ಓವರ್‌ಗಳಲ್ಲಿ 9 ರನ್ ನೀಡಿ 4 ವಿಕೆಟ್ ಪಡೆದರು.
111 ರನ್ ಗಳ ಗುರಿ ಬೆನ್ನಟ್ಟಿದ್ದ ಭಾರತಕ್ಕೂ ಅಮೆರಿಕ ಆರಂಬಿಕ ಆಘಾತ ನೀಡಿ ಸೇಡು ತೀರಿಸಿಕೊಂಡಿತು. ಭಾರತೀಯದವರೇ ಆಗಿರುವ ಸೌರಭ್ ನೇತ್ರವಾಲ್ಕರ್ ಅವರು ವಿರಾಟ್ ಕೊಹ್ಲಿಯನ್ನು ಡಕ್ ಔಟ್ ಮಾಡಿದರು. 3 ರನ್ ಗಳಿಸಿದ್ದ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದರು. ರಿಷಬ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್ ಮೂರನೇ ವಿಕೆಟ್‌ಗೆ 29 ರನ್ ಗಳಿಸಿದರು. ರಿಷಬ್ ಔಟ್ ಆಗುತ್ತಿದ್ದಂತೆ ಯಾದವ್ ಹಾಗೂ ದುಬೆ ಗೆಲುವಿನ ದಡ ಸೇರಿಸಿದರು.
ಯಾದವ್ 49 ಎಸೆತಗಳಲ್ಲಿ 50 ರನ್, ಶಿವಂ 35 ಅಜೇಯ 31 ರನ್ ಗಳಿಸಿದರು.