ಕೋವಿಡ್ -19ರ ಸಾಮಾಜಿಕ ಪರಿಣಾಮದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಕಾಣೆಯಾದ ಮಕ್ಕಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದೆ ಎಂದು ‘ಚೈಲ್ಡ್ ರೈಟ್ಸ್’ ಎನ್‌ಜಿಒ
ಆತಂಕ ವ್ಯಕ್ತಪಡಿಸಿದ್ದು ಪರಿಸ್ಥಿತಿ ಇನ್ನಷ್ಟು ಹದಗೆಡುವುದನ್ನು ತಡೆಯಲು ಗ್ರಾಮ ಮಟ್ಟದಲ್ಲಿ ಪೋಷಕರಿಗೆ ತಿಳುವಳಿಕೆ ನೀಡಲು ಮತ್ತು ಮಕ್ಕಳ ಹಕ್ಕು ಸಂರಕ್ಷಣಾ ಸಂಸ್ಥೆಗಳಿಗೆ ಸಾಕಷ್ಟು ಬಜೆಟ್ ಹಂಚಿಕೆ ಮಾಡಲು ಸರ್ಕಾರವನ್ನು ಒತ್ತಾಯಿಸಿದದೆ.
ರಾಷ್ಟ್ರೀಯ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್ಸಿಆರ್ಬಿ) ನ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ 2020 ರಲ್ಲಿ ಭಾರತದಲ್ಲಿ 59,262 ಮಕ್ಕಳು ಕಾಣೆಯಾಗಿದ್ದಾರೆ. ಅದಕ್ಕೂ ಹಿಂದೆಯೇ ನಾಪತ್ತೆಯಾಗಿದ್ದ 48,972 ಮಕ್ಕಳು ಸೇರಿದಂತೆ ಒಟ್ಟು 1,08,234 ಮಕ್ಕಳು ಕಾಣೆಯಾಗಿದ್ದಾರೆ. ಅಧಿಕೃತ ಡೇಟಾ ಪ್ರಕಾರ 2008 ರಲ್ಲಿ 7,650 ಮಕ್ಕಳ ನಾಪತ್ತೆ ಪ್ರಕರಣಗಳು ವರದಿಯಾಗಿತ್ತು. ಅಂದರೆ 2008 ಮತ್ತು 2020 ರ ನಡುವೆ ವಾರ್ಷಿಕವಾಗಿ ವರದಿಯಾದ ಮಕ್ಕಳ ನಾಪತ್ತೆ ಪ್ರಕರಣಗಳಲ್ಲಿ ಸುಮಾರು 13 ಪಟ್ಟು ಏರಿಕೆಯಾಗಿದೆ.
ಕಳೆದ ಎರಡು ವರ್ಷಗಳಲ್ಲಿ, ‘ಬಚ್‌ಪನ್ ಬಚವೋ ಆಂದೋಲನ್’ (ಬಿಬಿಎ) ಸಂಘಟನೆಯೊಂದೇ 12,000 ಮಕ್ಕಳನ್ನು ರಕ್ಷಿಸಿದೆ ಎಂದು ಅದರ ಕಾರ್ಯನಿರ್ವಾಹಕ ನಿರ್ದೇಶಕರಾದ ಧನಂಜಯ್ ಟಿಂಗಾಲ್ ಹೇಳಿದ್ದಾರೆ. “ಕೋವಿಡ್ ನಂತರ, ಮಕ್ಕಳ ಕಳ್ಳಸಾಗಣೆಯ ಹೆಚ್ಚಾಗಿದೆ ಎಂಬುವುದಕ್ಕೆ ಇದು ಒಂದೇ ಉದಾಹರಣೆ ಸಾಕು” ಎಂದು ಅವರು ಪಿಟಿಐ ಜೊತೆ ಮಾತಾಡುತ್ತಾ ತಿಳಿಸಿದ್ದಾರೆ.

Child Rights and You (CRY) ಎನ್‌ಜಿಒ ಆರ್‌ಟಿಐ ಮೂಲಕ ಸಂಗ್ರಹಿಸಿದ ಮಾಹಿತಿಯ ಪ್ರಕಾರ 2021ರಲ್ಲಿ ಪ್ರತಿದಿನ ಮಧ್ಯಪ್ರದೇಶದಲ್ಲಿ ಸರಾಸರಿ 29 ಮಕ್ಕಳು ಮತ್ತು ರಾಜಸ್ಥಾನದಲ್ಲಿ 14 ಮಕ್ಕಳು ನಾಪತ್ತೆಯಾಗಿದ್ದಾರೆ. ಟಿಂಗಾಲ್ ಹೇಳುವಂತೆ ಕೆಲವು ಮಕ್ಕಳನ್ನು ತಮ್ಮ ಹೆತ್ತವರೇ ಸಾಗಾಣಿಕೆ ಮಾಡಿದ್ದರೆ, ಕೆಲವು ಮಕ್ಕಳು ಸ್ವಯಂಪ್ರೇರಣೆಯಿಂದ ಸಾಗಣೆದಾರರೊಂದಿಗೆ ಹೋಗಿದ್ದಾರೆ. ಯಾವುದೇ ಪ್ರಕಾರದ ಸಾರ್ವಜನಿಕ ಸಾರಿಗೆಯಲ್ಲಿ, ರಸ್ತೆ ಮಧ್ಯೆ ಒಂಟಿಯಾಗಿರುವ ಅಥವಾ ಭಿಕ್ಷೆ ಬೇಡುತ್ತಿರುವ ಮಕ್ಕಳು ಕಂಡು ಬಂದರೆ ಅವರ ಬಗ್ಗೆ ಮಾಹಿತಿ ನೀಡಬೇಕು ಎಂದು ಅವರು ರೈಲ್ವೇಯ ಅಧಿಕಾರಿಗಳು, ನೌಕರರು ಮತ್ತು ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಳ್ಳುತ್ತಾರೆ. “ಅಂತಹ ಮಕ್ಕಳಿಗೆ ನಂತರ ಸರ್ಕಾರದ ಸುರಕ್ಷಾ ಸಂಸ್ಥೆಗಳಲ್ಲಿ ಆಶ್ರಯ ನೀಡಬೇಕು” ಎಂದೂ ಅವರು ಹೇಳುತ್ತಾರೆ.
‘ Child Protection, Save the Children’ ಉಪ ನಿರ್ದೇಶಕರಾಗಿರುವ ಪ್ರಭಾತ್ ಕುಮಾರ್ ಮಕ್ಕಳ ಕಳ್ಳಸಾಗಣೆ ಮತ್ತು ನಾಪತ್ತೆಯಾಗುವಿಕೆಗೆ ಬಡತನ ಮುಖ್ಯ ಕಾರಣ ಎನ್ನುತ್ತಾರೆ. . ಕೊವಿಡ್ -19 ಸಮಯದಲ್ಲಿ ಜಾರಿಗೊಳಿಸಿದ ಲಾಕ್ಡೌನ್ ಮತ್ತು ಶಾಲೆ ಮುಚ್ಚಿದ್ದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. CRYಯ ಪ್ರಾದೇಶಿಕ ನಿರ್ದೇಶಕ (ಉತ್ತರ) ರಾದ ಸೋಹಾ ಮೊಯಿತ್ರಾ “ಮೊದಲೇ ಸಾಲದ ಹೊರೆಯಲ್ಲಿದ್ದ ಗ್ರಾಮೀಣ ಪ್ರದೇಶಗಳಲ್ಲಿನ ಅನೇಕ ಕುಟುಂಬಗಳ ಆರ್ಥಿಕ ಹೊರೆಯು ಕೋವಿಡ್‌ನಿಂದಾಗಿ ಮತ್ತಷ್ಟು ಹೆಚ್ಚಾಯಿತು. ಸಾಲಗಳನ್ನು ಮರು ಪಾವತಿಸುವ ಒತ್ತಡವು ಕಾರ್ಮಿಕ ಮತ್ತು ಮದುವೆಗಾಗಿ ಇಂತಹ ಕುಟುಂಬಗಳ ಮಕ್ಕಳ ಕಳ್ಳಸಾಗಣೆಗೆ ಕಾರಣವಾಯಿತು” ಎನ್ನುತ್ತಾರೆ.
ಇದರ ಜೊತೆಗೆ, ಮಾಸ್ಕ್ ಕಡ್ಡಾಯವಾದ ಬಳಿಕ ಕಳ್ಳಸಾಗಣೆದಾರರು ಮತ್ತು ಅಪಹರಣಕಾರರನ್ನು ಗುರುತಿಸುವುದು ಜನಸಾಮಾನ್ಯರಿಗೆ ಕಷ್ಟವಾಗತೊಡಗಿತು. “ಸ್ಥಳೀಯ ಸಂಸ್ಥೆಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳ ಸಹಯೋಗದೊಂದಿಗೆ ಸಂಬಂಧಿಸಿದ ಸರ್ಕಾರಿ ಇಲಾಖೆಗಳು ರಚನಾತ್ಮಕ ಚಟುವಟಿಕೆಗಳೊಂದಿಗೆ ಮಕ್ಕಳ ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ನಿಯಮಿತ ಜಾಗೃತಿ ಮೂಡಿಸಲು ಮುಂದೆ ಬರಬೇಕು” ಎನ್ನುತ್ತಾರೆ ಮೊಯಿತ್ರಾ. ಎನ್‌ಸಿಆರ್ಬಿ ಡಾಟಾ ಪ್ರಕಾರ 2020 ರಲ್ಲಿ, ಸುಮಾರು ನಾಲ್ಕು ತಿಂಗಳ ಕಾಲ ಹೇರಿದ್ದ ಸಂಪೂರ್ಣ ರಾಷ್ಟ್ರವ್ಯಾಪಿ ಲಾಕ್ಡೌನ್ ಹೊರತಾಗಿಯೂ ಮಾರ್ಚ್ ನಿಂದ ಜೂನ್‌ವರೆಗೆ 59,262 ಮಕ್ಕಳು ಕಾಣೆಯಾಗಿದ್ದಾರೆ, ಅದರಲ್ಲಿ 13,566 ಗಂಡು ಮಕ್ಕಳು, 45,687 ಹೆಣ್ಣು ಮಕ್ಕಳು ಮತ್ತು ಒಂಬತ್ತು ಟ್ರಾನ್ಸ್ಜೆಂಡರ್ ಮಕ್ಕಳು. 2019 ರಲ್ಲಿ ಕಾಣೆಯಾದ ಮಕ್ಕಳಲ್ಲಿ ಹೆಣ್ಣುಮಕ್ಕಳ ಶೇಕಡಾವಾರು ಸಂಖ್ಯೆ 71 ಆದರೆ ಇದು 2020ರಲ್ಲಿ 77ಕ್ಕೆ ಏರಿದೆ. ಮತ್ತೊಂದೆಡೆ, 2018 ರಲ್ಲಿ ಕಾಣೆಯಾದ ಮಕ್ಕಳಲ್ಲಿ ಶೇಕಡ 42ರಷ್ಟು ಮಕ್ಕಳನ್ನು ಪತ್ತೆ ಹಚ್ಚಲಾಗಿದ್ದರೆ 2019 ರಲ್ಲಿ ಶೇಕಡ 32, ಮತ್ತು 2020 ರಲ್ಲಿ ಶೇಕಡ 45 ರಷ್ಟು ಮಕ್ಕಳನ್ನು ಪತ್ತೆ ಹಚ್ಚಲಾಗಿಲ್ಲ.








