ಭಾರತ-ಪಾಕಿಸ್ತಾನ ಮಧ್ಯೆ ಯುದ್ಧದ ಆತಂಕ ದಿನೇ ದಿನೇ ಹೆಚ್ಚಾಗುತ್ತಿದೆ.. ಕಾಶ್ಮೀರದ ಪಹಲ್ಗಾಮ್ ದಾಳಿ ನಂತ್ರ ಪ್ರಧಾನಿ ನರೇಂದ್ರ ಮೋದಿ ಸಭೆ ಮೇಲೆ ಸಭೆ ಮಾಡ್ತಿದ್ದಾರೆ. ವಾಯುಪಡೆ ಮುಖ್ಯಸ್ಥರ ಜೊತೆ ಸಭೆ ನಡೆಸಿದ್ದ ಪ್ರಧಾನಿ ಮೋದಿ, ಆ ನಂತರ ರಕ್ಷಣಾ ಕಾರ್ಯದರ್ಶಿ ಆರ್.ಕೆ ಸಿಂಗ್ ಜೊತೆ ಸಭೆ ನಡೆಸಿದ್ದಾರೆ. ಮುಂದಿನ ಕಾರ್ಯಾಚರಣೆಯ ಬಗ್ಗೆ ಮೋದಿ ನಿರಂತರವಾಗಿ ಸೇನಾಪಡೆಗಳ ಜೊತೆ ಸಭೆ ಮಾಡ್ತಿದ್ದಾರೆ.. ಜೊತೆಗೆ ಗಡಿಯಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸ್ತಿದ್ದಾರೆ. ರಕ್ಷಣಾ ಸಲಹೆಗಾರ ಅಜಿತ್ ಧೋವೆಲ್ ಹಾಗು ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ ಅವರನ್ನೂ ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.

ಪಹಲ್ಗಾಮ್ ದಾಳಿ ಬಗ್ಗೆ ಎನ್ಐಎ ತನಿಖೆ ಚುರುಕುಗೊಂಡಿದೆ.. ಈ ಮಧ್ಯೆ ದಟ್ಟ ಅರಣ್ಯದಲ್ಲಿ ಅಡಗಿರುವ ಉಗ್ರರಿಗೆ ಊಟ ಮತ್ತು ಇನ್ನಿತರ ಸೌಲಭ್ಯ ನೀಡ್ತಿದ್ದ ವ್ಯಕ್ತಿಯನ್ನ ಸೇನೆಪಡೆ ಬಂಧಿಸಿದೆ.. ಆದ್ರೆ ಉಗ್ರರು ಅಡಗಿರುವ ಜಾಗ ತೋರಿಸುವಂತೆ ವ್ಯಕ್ತಿಯನ್ನ ಕರೆದೊಯ್ಯುತ್ತಿದ್ದಾಗ ಆತ ನದಿಗೆ ಹಾರಿ ಪ್ರಾಣ ಬಿಟ್ಟಿದ್ದಾನೆ.. ಇಮ್ತಿಯಾಜ್ ಅಹ್ಮದ್ ಮೃತ ವ್ಯಕ್ತಿಯಾಗಿದ್ದು.. ಈತನನ್ನ ಕುಲ್ಗಾಮ್ನಲ್ಲಿ ಬಂಧಿಸಲಾಗಿತ್ತು.. ವಿಚಾರಣೆಯ ಸಮಯದಲ್ಲಿ, ಕುಲ್ಗಾಮ್‌ನ ಟ್ಯಾಂಗ್ ಮಾರ್ಗ್‌ನಲ್ಲಿರುವ ಕಾಡಿನಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರಿಗೆ ಆಹಾರ ಮತ್ತು ಲಾಜಿಸ್ಟಿಕ್ಸ್ ಒದಗಿಸಿದ್ದಾಗಿ ಒಪ್ಪಿಕೊಂಡಿದ್ದ. ನಂತರ ಉಗ್ರರು ಇದ್ದ ಜಾಗಕ್ಕೆ ಕರೆದೊಯ್ಯುತ್ತಿದ್ದಾಗ, ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ನದಿಗೆ ಹಾರಿ ಮೃತಪಟ್ಟಿದ್ದಾನೆ..

ಪಹಲ್ಗಾಮ್ ದಾಳಿಗೆ ಪ್ರತೀಕಾರಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಪಾಕ್ ವಿರುದ್ಧ ಯುದ್ಧಕ್ಕೆ ಬಾರತ ಸಿದ್ಧತೆ ಮಾಡ್ಕೊಂಡಿದೆ. ಇನ್ನು ಭಾರತದ ನಡೆಗೆ ಪತರಗುಟ್ಟಿರುವ ಪಾಕಿಸ್ತಾನ ತುರ್ತು ಸಂಸತ್ ಅಧಿವೇಶನ ಕರೆದಿದೆ. ಸಂಸತ್ ಅಧಿವೇಶನದ ಸಂದರ್ಭದಲ್ಲಿ ಪಾಕಿಸ್ತಾನ ಪ್ರಧಾನಿ ಚೀನಾ ರಾಯಭಾರಿಯನ್ನ ಭೇಟಿಯಾಗಿ, ಅನೇಕ ವಿಚಾರಗಳ ಕುರಿತು ಚರ್ಚೆ ಮಾಡಿದ್ದಾರೆ.. ಒಂದು ವೇಳೆ ಭಾರತ ಪಾಕ್ ಮೇಲೆ ದಾಳಿ ಮಾಡಿದ್ರೆ ಯಾವ ರೀತಿಯಾಗಿ ಪ್ರತ್ಯುತ್ತರ ನೀಡಬೇಕು.. ದಾಳಿ ನಡೆದಾಗ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು..? ಎನ್ನುವ ವಿಚಾರದ ಬಗ್ಗೆ ಚರ್ಚೆ ಮಾಡಲು ಸಂಸತ್ ಅಧಿವೇಶನ ಕರೆದಿದ್ದಾರೆ ಎನ್ನಲಾಗಿದೆ.

ಕಾಶ್ಮೀರದಲ್ಲಿ 26 ಮಂದಿಯನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಎದುರಾಗಿದೆ. ಈ ನಡುವೆ ಚೀನಾ ಪಾಕಿಸ್ತಾನಕ್ಕೆ ಮತ್ತೊಮ್ಮೆ ತನ್ನ ಬೆಂಬಲ ಘೋಷಿಸಿದೆ.. ಪಾಕಿಸ್ತಾನದಲ್ಲಿರುವ ಚೀನಾ ರಾಯಭಾರಿ ಜಿಯಾಂಗ್ ಜೈಡಾಂಗ್, ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರನ್ನು ಭೇಟಿ ಮಾಡಿ ಪಾಕ್ ಜೊತೆಗೆ ಚೀನಾ ಇರುತ್ತದೆ ಎಂದಿದ್ದಾರೆ. ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಅಥವಾ ಸಿಂಧೂ ನದಿ ನೀರಿನ ಹರಿವನ್ನು ತಡೆದರೆ ನಾವು ಅಣ್ವಸ್ತ್ರ ದಾಳಿ ಮಾಡ್ತೇವೆ ಎಂದು ಪಾಕಿಸ್ತಾನ ಬೆದರಿಸುವ ಕೆಲಸ ಮಾಡಿದೆ. ರಷ್ಯಾದ TASS ನ್ಯೂಸ್ ಏಜೆನ್ಸಿಗೆ ಸಂದರ್ಶನ ನೀಡಿರುವ ರಾಯಭಾರಿ ಮುಹಮ್ಮದ್ ಖಾಲಿ ಜಮಾಲಿ ಭಾರತಕ್ಕೆ ಎಚ್ಚರಿಕೆ ಕೊಟ್ಟಿದ್ದಾನೆ.

ಪಹಲ್ಗಾಮ್ ದಾಳಿ ನಂತರ ಪಾಕಿಸ್ತಾನದ ಮೇಲೆ ಯುದ್ಧಕ್ಕೆ ಸಿದ್ಧತೆ ನಡೆಯುತ್ತಿರುವ ಹೊತ್ತಿನಲ್ಲಿ ಪ್ರಧಾನಿ ಮೋದಿಗೆ ರಷ್ಯಾ ಅಧ್ಯಕ್ಷ ಪುಟಿನ್ ಫೋನ್ ಕರೆ ಮಾಡಿ ಮಾತನಾಡಿದ್ದಾರೆ. ಪಹಲ್ಗಾಮ್ ದಾಳಿ ಖಂಡಿಸಿರುವ ಪುಟಿನ್, ಮೋದಿಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಇದಕ್ಕೂ ಮೊದಲು ಯುದ್ಧ ಮಾಡದಂತೆ ಭಾರತಕ್ಕೆ ಹೇಳಿ ಅಂತ ಪಾಕ್ ಗೋಗರೆದಿತ್ತು. ಆದ್ರೆ ರಷ್ಯಾ ಅಧ್ಯಕ್ಷರು ಮೋದಿಗೆ ಬೆಂಬಲ ಘೋಷಿಸಿದ್ದಾರೆ ಎನ್ನಲಾಗಿದೆ. 26 ಜನ ಅಮಾಯಕರನ್ನ ಕೊಂದಿದ್ದನ್ನು ಯಾರೂ ಸಹಿಸುವುದಿಲ್ಲ, ಅಮಾಯಕರ ಜೀವ ಹಾನಿಗೆ ರಷ್ಯಾ ಪರವಾಗಿ ಸಂತಾಪವಿದೆ ಎಂದಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.