ಸಂಸತ್ತಿನ ಇತಿಹಾಸದಲ್ಲಿಯೇ ಮೊದಲ ಬಾರಿ, ರಾಜ್ಯಸಭೆಯಲ್ಲಿ ಈಶಾನ್ಯ ರಾಜ್ಯಗಳಿಂದ ಕಾಂಗ್ರೆಸ್ ಪಕ್ಷದ ಪ್ರತಿನಿಧಿಯೇ ಇಲ್ಲದಂತಾಗಿದೆ. ಗುರುವಾರ, ಬಿಜೆಪಿ ಮತ್ತು ಅದರ ಮಿತ್ರ ಪಕ್ಷವು ಎಲ್ಲಾ ನಾಲ್ಕು ಸ್ಥಾನಗಳನ್ನು ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಸಾಧಿಸಿದೆ.
ತ್ರಿಪುರಾದಲ್ಲಿ ಬಹುಮತ ಇರುವುದರಿಂದ ಅನಾಯಸವಾಗಿ ಗೆಲುವು ಸಾಧಿಸಿದ ಬಿಜೆಪಿ, ನಾಗಾಲ್ಯಾಂಡ್ ಸೀಟನ್ನು ಅವಿರೋಧವಾಗಿ ಗೆದ್ದುಕೊಂಡಿದೆ. ಇನ್ನು ಅಸ್ಸಾಂನಲ್ಲಿ ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿದ್ದು ಹಾಗೂ ಅಸಿಂಧು ಮತಗಳ ಕಾರಣದಿಂದ ಬಿಜೆಪಿ ಮತ್ತು ಅದರ ಮಿತ್ರಪಕ್ಷವಾದ ಯುಪಿಪಿಎಲ್ ತಲಾ ಒಂದು ಸ್ಥಾನಗಳನ್ನು ಗೆದ್ದುಕೊಂಡು ಇತಿಹಾಸ ನಿರ್ಮಿಸಿದೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಸರ್ಮಾ, ಶಾಸಕರ ಆತ್ಮಸಾಕ್ಷಿಯ ಮೇಲೆ ನಮಗೆ ನಂಬಿಕೆ ಇತ್ತು. ಕಾಂಗ್ರೆಸ್’ನ ಏಳು ಶಾಸಕರು ನಮ್ಮ ಪರವಾಗಿ ಮತ ಚಲಾಯಿಸಿದ್ದಾರೆ, ಎಂದು ಹೇಳಿದ್ದಾರೆ.
ಅಸ್ಸಾಂನ ಎರಡೂ ಸ್ಥಾನಗಳನ್ನು ಗೆಲ್ಲಲು ಬಿಜೆಪಿಗೆ ನಾಲ್ಕು ಮತಗಳ ಕೊರತೆಯಿತ್ತು. ಒಂದು ಸ್ಥಾನವನ್ನು ಕಾಂಗ್ರೆಸ್ ಅನಾಯಸವಾಗಿ ಗೆಲ್ಲುತ್ತದೆ ಎಂದು ವಿಶ್ಲೇಷಿಸಲಾಗಿತ್ತು.

ಬಿಜೆಪಿಯ ಪಬಿತ್ರಾ ಮಾರ್ಗೆರಿಟಾ ಮತ್ತು ಯುಪಿಪಿಎಲ್ ಪಕ್ಷದ ರವಾಂಗ್ರ ನರ್ಝರಿ ಎರಡೂ ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್’ನ ರಾಜ್ಯಸಭಾ ಸದಸ್ಯರಾಗಿದ್ದ ರಿಪುನ್ ಬೋರಾ ಅವರು ಸೋಲಿನ ಮುಜುಗರಕ್ಕೆ ಸಿಲುಕಿದ್ದಾರೆ. ಈಗ ಈಶಾನ್ಯ ರಾಜ್ಯಗಳ ಒಟ್ಟು 14 ರಾಜ್ಯಸಭಾ ಸ್ಥಾನಗಳಲ್ಲಿ ಎನ್ ಡಿ ಎ ಮೈತ್ರಿಕೂಟ 13 ಸ್ಥಾನಗಳನ್ನು ಪ್ರತಿನಿಧಿಸುತ್ತಿದೆ. ಒಂದು ಸ್ಥಾನವನ್ನು ಅಸ್ಸಾಂ ರಾಜ್ಯದ ಪಕ್ಷೇತರ ಸಂಸದರು ಪ್ರತಿನಿಧಿಸುತ್ತಿದ್ದಾರೆ.
ರಾಜ್ಯಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಸುಮಾರು ಐದು ಗಂಟೆಗಳಿಗೂ ಹೆಚ್ಚು ಕಾಲ ವಿಳಂಬವಾಗಿತ್ತು. ಮತದಾಣದ ವೇಳೆ ಅಕ್ರಮ ನಡೆಸಲಾಗಿದೆ ಎಂದು ಕಾಂಗ್ರೆಸ್ ದೂರು ನೀಡಿದ ಹಿನ್ನೆಲೆ, ಚುನಾವಣಾ ಆಯೋಗವು ಮತ ಎಣಿಕೆಯನ್ನು ಮುಂದೂಡಿತ್ತು. ರಾತ್ರಿ ಸುಮಾರು 10.25ರ ವೇಳೆ ಮತೆಣಿಕೆ ಆರಂಭವಾಗಿತ್ತು.