ಶ್ರೀಲಂಕಾ ಬಿಕ್ಕಟ್ಟು ವಿಚಾರದಲ್ಲಿ ಭಾರತ ಮಧ್ಯ ಪ್ರವೇಶಿಸಬೇಕೆಂದು ತಮಿಳುನಾಡು ರಾಜಕೀಯ ಪಕ್ಷಗಳು ಒತ್ತಾಯ ಮಾಡಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಜುಲೈ 19, ಮಂಗಳವಾರದಂದು ಸರ್ವಪಕ್ಷಗಳ ಸಭೆ ಕರೆದಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರ ನೇತೃತ್ವದಲ್ಲಿ ಮಂಗಳವಾರ ಸಭೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ಭಾನುವಾರ ಕರೆಯಲಾಗಿದ್ದ ಸರ್ವ ಪಕ್ಷ ಸಭೆಯಲ್ಲಿ ತಮಿಳುನಾಡಿನ ಡಿಎಂಕೆ ಮತ್ತು ಎಐಎಡಿಎಂಕೆ ಸೇರಿದಂತೆ ವಿವಿಧ ಪಕ್ಷಗಳು ಶ್ರೀಲಂಕಾ ಬಿಕ್ಕಟ್ಟಿನ ವಿಚಾರದಲ್ಲಿ ಸಭೆ ನಡೆಸಿವೆ. ಕಳೆದ ಎಪ್ಪತ್ತು ವರ್ಷಗಳಲ್ಲಿ ಶ್ರೀಲಂಕಾದಲ್ಲಿ ಅತಿ ದೊಡ್ಡ ಆರ್ಥಿಕ ವಿಪತ್ತು ಸಂಭವಿಸುತ್ತಿದ್ದು, ಭಾರತ ಸಮಸ್ಯೆ ಪರಿಹಾರಕ್ಕೆ ಏನಾದರೂ ಮಾಡಬೇಕು ಎಂದು ಈ ಪಕ್ಷಗಳು ಒತ್ತಾಯಿಸಿವೆ.

ಶ್ರೀಲಂಕಾದಲ್ಲಿ ಜನರ ಪ್ರತಿಭಟನೆಯು 100ನೇ ದಿನ ಪೂರೈಸಿದೆ. ಜನರ ಪ್ರತಿಭಟನೆಯ ತಾಪದಿಂದ ತಪ್ಪಿಸಿಕೊಂಡು ಮಾಲ್ಡೀವ್ಸ್‌ಗೆ ಪಲಾಯನ ಮಾಡಿ, ಅಲ್ಲಿಂದ ಗುರುವಾರ ಸಿಂಗಪುರ ಪ್ರವೇಶಿಸಿದ ಗೊಟಬಯ ರಾಜಪಕ್ಸ ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಂಸತ್ತಿನ ಸ್ಪೀಕರ್‌ಗೆ ಇಮೇಲ್ ಮೂಲಕ ರಾಜೀನಾಮೆ ಪತ್ರ ರವಾನಿಸಿದ್ದರು.
225 ಸದಸ್ಯಬಲದ ಶ್ರೀಲಂಕಾ ಸಂಸತ್ತು ಜುಲೈ 20ರಂದು ಅಧ್ಯಕ್ಷರನ್ನು ಆಯ್ಕೆ ಮಾಡಲು ಚುನಾವಣೆ ನಡೆಸಲಿದೆ. ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಕೇಳಿಬರುತ್ತಿರುವ ಪ್ರಮುಖ ಹೆಸರುಗಳಲ್ಲಿ ಹಾಲಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆಯವರ ಹೆಸರೂ ಇದೆ.