ತಮಿಳುನಾಡು ಸಿಎಂ, ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ನೀಡಿರುವ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರೋಧ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷಗಳ ಮೈತ್ರಿಕೂಟವಾದ ಇಂಡಿಯಾವು ಹಿಂದೂ ಧರ್ಮವನ್ನು ದ್ವೇಷಿಸುತ್ತದೆ ಎನ್ನುವುದಕ್ಕೆ ಉದಯನಿಧಿ ಹೇಳಿಕೆಯೇ ಸಾಕ್ಷಿ, ಅವರ ಹೇಳಿಕೆಯು ನಮ್ಮ ಸಂಸ್ಕೃತಿಯ ಮೇಲೆ ನಡೆದ ದಾಳಿ ಎಂದು ಅಮಿತ್ ಶಾ ಹೇಳಿದ್ದಾರೆ.
ಚುನಾವಣಾ ಹೊಸ್ತಿಲಲ್ಲಿರುವ ರಾಜಸ್ಥಾನದ ಡುಂಗರ್‌ಪುರದಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿಪಕ್ಷ ಮೈತ್ರಿಕೂಟಗಳ “ವೋಟ್ ಬ್ಯಾಂಕ್ ರಾಜಕೀಯ” ಮತ್ತು “ತುಷ್ಟೀಕರಣ” ತಂತ್ರದ ಭಾಗವಾಗಿದೆ ಎಂದು ಆರೋಪಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿಯವರ ಹೇಳಿಕೆಗಳು ವಿವಾದಕ್ಕೆ ಈಡಾಗಿರುವ ನಡುವೆ ಗೃಹ ಸಚಿವರ ಈ ಹೇಳಿಕೆಗಳು ಬಂದಿವೆ.
ಚೆನ್ನೈನಲ್ಲಿ ನಡೆದ ಬರಹಗಾರರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, “ಸನಾತನ ಧರ್ಮದ ಕಲ್ಪನೆಯು ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧವಾಗಿದೆ, ಹಾಗಾಗಿ ಅದನ್ನು ನಿರ್ಮೂಲನೆ ಮಾಡಬೇಕು” ಎಂದು ಹೇಳಿದ್ದರು. ಸನಾತನ ಧರ್ಮ ಮತ್ತು ಡೆಂಗ್ಯೂ ಮತ್ತು ಮಲೇರಿಯಾದಂತಹ ರೋಗಗಳಿಗೆ ಸಮ. ಅದನ್ನು ಕೇವಲ ವಿರೋಧಿಸಿದರೆ ಸಾಲದು ಅದನ್ನು ನಿರ್ಮೂಲನೆ ಮಾಡಬೇಕು ಎಂದು ಸ್ಟಾಲಿನ್ ಹೇಳಿದ್ದರು.
ಉದಯನಿಧಿ ಹೇಳಿಕೆಗಳು ವೈರಲ್ ಆಗುತ್ತಿದ್ದಂತೆ ಬಿಜೆಪಿ ನಾಯಕರು ಹಿಂದೂಗಳ ನರಮೇಧಕ್ಕೆ ಉದಯನಿಧಿ ಕರೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ನಾಯಕರ ಟೀಕೆಗಳಿಗೆ ಪ್ರತಿಕ್ರಿಯಿಸಿದ್ದ ಉದಯನಿಧಿ ಸ್ಟಾಲಿನ್,”ಸನಾತನ ಧರ್ಮವು ಜನರನ್ನು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ವಿಭಜಿಸುವ ತತ್ವವಾಗಿದೆ. ಆದರೆ, ನಾನು ಸನಾತನ ಧರ್ಮವನ್ನು ಅನುಸರಿಸುವ ಜನರ ನರಮೇಧಕ್ಕೆ ಎಂದಿಗೂ ಕರೆ ನೀಡಿಲ್ಲ, ಸನಾತನ ಧರ್ಮವನ್ನು ಬೇರುಸಹಿತ ಕಿತ್ತುಹಾಕುವುದರಿಂದ ಮಾನವೀಯತೆ ಮತ್ತು ಮಾನವ ಸಮಾನತೆಯನ್ನು ಎತ್ತಿಹಿಡಿಯಬಹುದು, ನಾನು ಹೇಳಿದ ಪ್ರತಿಯೊಂದು ಮಾತಿಗೂ ನಾನು ದೃಢವಾಗಿ ನಿಲ್ಲುತ್ತೇನೆ. ನಾನು ದೀನದಲಿತರು ಮತ್ತು ಹಿಂದುಳಿದವರ ಪರವಾಗಿ ಮಾತನಾಡಿದ್ದೇನೆ’’ ಎಂದು ಹೇಳಿದರು.
ಕಾಂಗ್ರೆಸ್ ನಾಯಕ ಮತ್ತು ಮಾಜಿ ಗೃಹ ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರು ಕೂಡಾ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಸನಾತನ ಧರ್ಮವು “ಜಾತಿ ಶ್ರೇಣೀಕೃತ ಸಮಾಜಕ್ಕೆ ಸಂಕೇತವಾಗಿದೆ” ಎಂದು ಹೇಳಿದ್ದಾರೆ.
ಇಬ್ಬರು ನಾಯಕರ ಟೀಕೆಗಳ ಬಗ್ಗೆ ಡಿಎಂಕೆ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಶಾ, “ಕಳೆದ ಎರಡು ದಿನಗಳಿಂದ ಅವರು (ವಿಪಕ್ಷಗಳು) ಈ ದೇಶದ ಪರಂಪರೆ ಮತ್ತು ಸನಾತನ ಧರ್ಮವನ್ನು ಅವಮಾನಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಡಿಎಂಕೆಯ ಉನ್ನತ ನಾಯಕರ ಪುತ್ರರು ವೋಟ್ ಬ್ಯಾಂಕ್ ಮತ್ತು ಓಲೈಕೆ ರಾಜಕಾರಣಕ್ಕಾಗಿ ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಹಿಂದೂ ಸಂಘಟನೆಗಳನ್ನು ಹೋಲಿಸಿರುವುದರ ಬಗ್ಗೆಯೂ ಅಮಿತ್ ಶಾ ಉಲ್ಲೇಖಿಸಿದ್ದು, “ಲಷ್ಕರ್-ಎ-ತೊಯ್ಬಾಗಿಂತ ಹಿಂದೂ ಸಂಘಟನೆಗಳು ಅಪಾಯಕಾರಿ ಎಂದು ರಾಹುಲ್ ಬಾಬಾ ಹೇಳಿದ್ದರು. ರಾಹುಲ್ ಬಾಬಾ, ನೀವು ಹಿಂದೂ ಸಂಘಟನೆಗಳನ್ನು ಲಷ್ಕರ್-ಎ-ತೊಯ್ಬಾಗೆ ಹೋಲಿಸಿದ್ದೀರಿ ಮತ್ತು ನಿಮ್ಮ ಗೃಹ ಸಚಿವರು ದೇಶದಲ್ಲಿ ‘ಹಿಂದೂ ಭಯೋತ್ಪಾದನೆ’ ಇದೆ ಎಂದು ಹೇಳಿದ್ದಾರೆ” ಎಂದು ಹೇಳಿದರು.
ಸನಾತನ ಧರ್ಮವು ಜನರ ಹೃದಯವನ್ನು ಆಳುತ್ತಿದೆ ಎಂದು. ಮೋದಿ ಗೆದ್ದರೆ ಸನಾತನ ಆಡಳಿತ ಬರುತ್ತದೆ ಎನ್ನುತ್ತಾರೆ. ಸನಾತನವು ಜನರ ಹೃದಯವನ್ನು ಆಳುತ್ತಿದೆ. ಸಂವಿಧಾನದ ಪ್ರಕಾರವೇ ಭಾರತ ಸಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ. ಜನವರಿಯಲ್ಲಿ ರಾಮನ ಜನ್ಮಸ್ಥಳದಲ್ಲಿ ಭವ್ಯ ರಾಮ ಮಂದಿರ ಸಿದ್ಧವಾಗಲಿದೆ. ಭಾರತ ಮೈತ್ರಿಕೂಟ ಇದನ್ನು ತಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ವರ್ಷಗಟ್ಟಲೆ ಅದನ್ನು ತಡೆದಿತ್ತು ಎಂದು ಅಮಿತ್ ಶಾ ಹೇಳಿದ್ದಾರೆ.