ದೇಶದಲ್ಲಿ ಕೋವಿಡ್ ಎರಡನೇ ಅಲೆ ವಿಪರೀತ ವೇಗವಾಗಿ ಹಬ್ಬಿದ್ದು, ದಿನವೊಂದಕ್ಕೆ ಒಂದುವರೆ ಲಕ್ಷಕ್ಕೂ ಅಧಿಕ ಕರೋನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈ ನಡುವೆ, ಕರೋನಾ ಸೋಂಕಿತರ ಚಿಕಿತ್ಸೆಗೆ ಬಳಸುವ ಔಷಧಗಳು, ಕರೋನಾ ಲಸಿಕೆಗಳ ಕೊರತೆ ಎದುರಾಗಿದ್ದು, ಕೇಂದ್ರ ಸರ್ಕಾರವು ಕರೋನಾ ಸೋಂಕಿತರ ಚಿಕಿತ್ಸೆಗೆ ಬಳಸಲಾಗುವ ಔಷಧ ರೆಮ್‌ಡಿಸಿವಿರ್ ನ ರಫ್ತಿಗೆ ತಾತ್ಕಾಲಿಕ ತಡೆ ನೀಡಿದೆ.
ಈ ಕುರಿತು ಭಾನುವಾರ ಪ್ರಕಟಣೆ ಹೊರಡಿಸಿರುವ ಕೇಂದ್ರ ಸರ್ಕಾರ, ‘ ದೇಶದಲ್ಲಿ ಕೋವಿಡ್ ತಹಬದಿಗೆ ಬರುವ ವರೆಗೆ ರೆಮ್‌ಡಿಸಿವಿರ್ ಚುಚ್ಚು ಮದ್ದು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಔಷಧದ ಸಾಮಾಗ್ರಿಗಳ ರಫ್ತಿನ ಮೇಲೆ ನಿಷೇಧ ಹೇರಲಾಗಿದೆ,’ ಎಂದು ತಿಳಿಸಿದೆ.
ರೆಮ್‌ಡಿಸಿವಿರ್ ಕೊರತೆ
ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದಂತೆಲ್ಲ ರೆಮ್‌ಡಿಸಿವಿರ್ ಔಷಧದ ಬೇಡಿಕೆಯೂ ಹೆಚ್ಚತೊಡಗಿದ್ದು, ಕೆಲವೆಡೆ ಈ ಔಷಧದ ಅಭಾವ ತಲೆದೋರಿತ್ತು. ಈ ನಡುವೆ, ಈ ಔಷಧ ಕಾಳಸಂತೆಗೆ ಲಗ್ಗೆ ಇಟ್ಟಿದ್ದು, ದುಪ್ಪಟ್ಟು ಬೆಲೆಯಲ್ಲಿ ಔಷಧವು ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಕೇವಲ ಎರಡು ದಿನಗಳ ಹಿಂದೆಯಷ್ಟೇ ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳು ಅಕ್ರಮವಾಗಿ ರೆಮ್‌ಡಿಸಿವಿರ್ ಸಾಗಿಸುತ್ತಿದ್ದಾತನು ವಶಕ್ಕೆ ಪಡೆದುಕೊಂಡಿದ್ದರು.
‘ರಾಜ್ಯದಲ್ಲಿ ರೆಮ್‌ಡಿಸಿವರ್ ಇಂಜೆಕ್ಷನ್ ಕೊರತೆಯಾಗಿದೆ. ಜತೆಗೆ ಲಸಿಕೆ ಪೂರೈಕೆಯೂ ಕಡಿಮೆಯಾಗಿದೆ’ ಎಂದು ಮಹಾರಾಷ್ಟ್ರದ ಕಂದಾಯ ಸಚಿವ ಬಾಳಾಸಾಹೇಬ್ ತೋರಾಟ್ ಶನಿವಾರ ಹೇಳಿಕೆ ನೀಡಿದ್ದರು.
ಭಾರತದ ಏಳು ಫಾರ್ಮಾ ಕಂಪೆನಿಗಳು ಅಮೇರಿಕಾದ ಗಿಲೀಡ್ ಸೈನ್ಸ್ ನ ಸ್ವಯಂ ಪ್ರೇರಿತ ಪರವಾನಗಿ ಅನುಮತಿ ಪಡೆದು ರೆಮ್‌ಡಿಸಿವಿರ್ ಅನ್ನು ಉತ್ಪಾದಿಸುತ್ತಿವೆ. ಒಂದು ತಿಂಗಳಿಗೆ 38.80 ಲಕ್ಷ ಯುನಿಟ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಈ ಕಂಪೆನಿಗಳು ಹೊಂದಿವೆ.
ಹೆಚ್ಚಿನ ಜನರು ರೆಮ್‌ಡೆಸಿವಿರ್ ಪಡೆಯುವಂತೆ ಅನುಕೂಲವಾಗಲು, ರೆಮ್‌ಡೆಸಿವಿರ್ ತಯಾರಕರು ತಮ್ಮ ಸಂಗ್ರಹಕಾರರನ್ನು ಮತ್ತು ವಿತರಕರ ವಿವರಗಳನ್ನು ತಮ್ಮ ವೆಬ್‌ಸೈಟ್‌ನಲ್ಲಿ ತೋರಿಸಲು ಎಂದು ಸರ್ಕಾರ ಹೇಳಿದೆ. ಹಾಗೂ, ಕಾಳಸಂತೆಯಲ್ಲಿ ಈ ಔಷಧದ ಜಾಲವನ್ನು ನಿಗ್ರಹಿಸಲು ಡ್ರಗ್ ಅಧಿಕಾರಿಗಳು ಕಣ್ಗಾವಲಿಟ್ಟಿದ್ದಾರೆ.