ಕ್ರಿಕೆಟ್ ಇತಿಹಾಸದ ಮೊತ್ತಮೊದಲ ಟೆಸ್ಟ್ ಚಾಂಪಿಯನ್’ಶಿಪ್ ನ ಕೊನೆಯ ಹಂತವನ್ನು ನಾವು ತಲುಪಿದ್ದೇವೆ. ಇಂದಿನಿಂದ ಐದು ದಿನಗಳ ನಂತರ ವಿಶ್ವದ ಅತ್ಯುತ್ತಮ ಟೆಸ್ಟ್ ತಂಡ ಯಾವುದು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಪಂದ್ಯ ಸೌತಾಂಪ್ಟನ್’ನಲ್ಲಿ ಜರುಗಲಿದ್ದು, ಮಳೆ ಅಡ್ಡಿ ಪಡಿಸದಿದ್ದರೆ, ಉತ್ತಮ ಪಂದ್ಯದ ನಿರೀಕ್ಷೆಯನ್ನು ಕ್ರಿಕೆಟ್ ಪ್ರೇಮಿಗಳು ಹೊಂದಿದ್ದಾರೆ.
ಸುಮಾರು ಎರಡು ವರ್ಷಗಳಿಂದ ಈ ಪಂದ್ಯಾವಳಿ ನಡೆಯುತ್ತಿದ್ದು, ಕೊರೋನಾ ದೆಸೆಯಿಂದಾಗಿ ಹಿನ್ನಡೆ ಅನುಭವಿಸಿತ್ತು. ಇನ್ನೇನು ಈ ಪಂದ್ಯಾವಳಿ ಹಿಂದಿನ ಪ್ರಯತ್ನದಂತೆಯೇ ಮಕಾಡೆ ಮಲಗಿತು ಎಂದು ಕ್ರಿಕೆಟ್ ಅಭಿಮಾನಿಗಳು ನಿರಾಶರಾಗುವ ಹೊತ್ತಿನಲ್ಲಿ, ಪ್ರೇಕ್ಷಕರಿಲ್ಲದೇ ಎಲ್ಲಾ ರೀತಿಯ ಕ್ರಿಕೆಟ್ ಪಂದ್ಯಾವಳಿಗಳನ್ನು ನಡೆಸುವ ತೀರ್ಮಾನ ತಾಳಿದ್ದು, ಪಂದ್ಯಾವಳಿಗೆ ಮರುಜೀವ ನೀಡಿತು.
ಟೆಸ್ಟ್ ಚಾಂಪಿಯನ್’ಶಿಪ್ ನಡೆಸುವ ಕುರಿತು ಐಸಿಸಿ ಇರಾದೆ ವ್ಯಕ್ತಪಡಿಸಿದ್ದುಇದೇ ಮೊದಲಸಲ ಅಲ್ಲ. 2019 ರಿಂದಲೂ ಈ ಕುರಿತಾಗಿ ಯೋಜನೆಯನ್ನು ಹಮ್ಮಿಕೊಳ್ಳುತ್ತಲೇ ಬಂದಿತ್ತು. 2013 ಹಾಗೂ 2017ರಲ್ಲಿ ಟೆಸ್ಟ್ ಚಾಂಪಿಯನ್’ಶಿಪ್ ಆರಂಭಿಸಿದರೂ, ಅದನ್ನು ಕೊನೆ ತಲುಪಿಸಲು ಐಸಿಸಿಯಿಂದ ಸಾಧ್ಯವಾಗಿರಲಿಲ್ಲ. ಸತತ ಹತ್ತು ವರ್ಷಗಳ ನಿರಂತರ ಪ್ರಯತ್ನಪಟ್ಟ ನಂತರ ಕೊನೆಗೂ ಈ ಬಾರಿಯ ಪ್ರಯತ್ನದಲ್ಲಿ ಯಶಸ್ಸು ಲಭಿಸಿದೆ.
ಫೈನಲ್ ನಲ್ಲಿ ಸೆಣಸಲಿರುವ ಬಲಾಢ್ಯ ತಂಡಗಳು:
ಸಾಮಾನ್ಯವಾಗಿ ಟೆಸ್ಟ್ ಪಂದ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೆಳೆಯುವುದಿಲ್ಲ. ಐದು ದಿನಗಳ ಒಂದು ಪಂದ್ಯವನ್ನು ವೀಕ್ಷಿಸಲು ಕ್ರಿಕೆಟ್’ನ ನಿಜವಾದ ಪ್ರೇಮಿಗಳಿಂದ ಮಾತ್ರ ಸಾಧ್ಯ. ಬಲ್ಲವರೇ ಬಲ್ಲರು ಬೆಲ್ಲದ ರುಚಿಯ ಎಂಬ ಮಾತಿನಂತೆ ಟೆಸ್ಟ್ ಕ್ರಿಕೆಟ್’ನ ಮಹತ್ವ ಎಲ್ಲರಿಂದಲೂ ಅರಿಯಲು ಅಸಾಧ್ಯ.
ಆದರೆ, ಈ ಬಾರಿಯ ಪಂದ್ಯಾವಳಿ ಮಾತ್ರ ಎಷ್ಟು ರೋಚಕವಾಗಿ ಸಾಗಿತ್ತೆಂದರೆ, ಸಂಪೂರ್ಣ ದೇಶವೇ ಭಾರತವನ್ನು ಬೆಂಬಲಿಸಿತ್ತು. ವಿಶೇಷವಾಗಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ, ಗಾಬಾ ನೆಲದಲ್ಲಿ ಐತಿಹಾಸಿಕ ಜಯ ದಾಖಲಿಸಿದಾಗ ಭಾರತೀಯರು ಭಾವನಾತ್ಮಕವಾಗಿ ಸ್ಪಂದಿಸಿದ್ದರು. ನಂತರದಲ್ಲಿ ನಡೆದ ಇಂಗ್ಲೆಡ್ ವಿರುದ್ದದ ಸರಣಿಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದ ನಂತರ ಭಾರತ ಫೈನಲ್ ಗೆ ಲಗ್ಗೆ ಇಡಲು ಸಾಧ್ಯವಾಗಿತ್ತು.
ಇನ್ನೊಂದೆಡೆ ನ್ಯೂಜಿಲ್ಯಾಂಡ್’ನ ಹಾದಿಯು ಅಷ್ಟು ಸುಲಭವಾಗಿರಲಿಲ್ಲ. ಭಾರತ ಮತ್ತು ಇಂಗ್ಲೆಂಡ್ ವಿರುದ್ದದ ಸರಣಿ ಮುಗಿಯುವವರೆಗೂ ಯಾವ ತಂಡ ಫೈನಲ್ ತಲುಪುತ್ತದೆ ಎಂಬ ಕುರಿತು ಸ್ಪಷ್ಟತೆ ಇರಲಿಲ್ಲ. ಸಂಪೂರ್ಣ ಕ್ರಿಕೆಟ್ ಜಗತ್ತು ಈ ಸರಣಿಯನ್ನು ಕಣ್ಣೆವೆಯಿಕ್ಕದೇ ಗಮನಿಸಿತ್ತು. ಆಸ್ಟ್ರೇಲಿಯಾ, ಭಾರತ, ಮತ್ತು ಇಂಗ್ಲೆಂಡ್, ಈ ಮೂರು ತಂಡಗಳು ನ್ಯೂಜಿಲ್ಯಾಂಡ್ ನೊಂದಿಗೆ ಫೈನಲ್ ತಲುಪುವ ಸಾದ್ಯತೆ ಇತ್ತು.
ಇಷ್ಟು ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯಾವಳಿಯ ಕೊನೆಗೆ ಎರಡು ಬಲಿಷ್ಟ ತಂಡಗಳು ಫೈನಲ್ ತಲುಪಿವೆ. ಎರಡೂ ತಂಡಗಳು ಇತ್ತೀಚಿನ ಟೆಸ್ಟ್ ಪಂದ್ಯಗಳಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿವೆ. ಉತ್ತಮ ಫಾರ್ಮ್ ನಲ್ಲಿವೆ. ಕೇನ್ ವಿಲಿಯ್ಸನ್ ನೇತೃತ್ವದ ನ್ಯೂಜಿಲ್ಯಾಂಡ್ ಹಾಗು ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡದ ನಡುವೆ ಉತ್ತಮರಲ್ಲಿ ಅತ್ಯುತ್ತಮರು ಯಾರು ಎಂಬ ಬಗ್ಗೆ ಪೈಪೋಟಿ ಇಂದು ಆರಂಭವಾಗಲಿದೆ.
ಟೆಸ್ಟ್ ಚಾಂಪಿಯನ್’ಶಿಪ್ ನಲ್ಲಿ ಭಾಗವಹಿಸಿದ ತಂಡಗಳು ಯಾವುವು?
2018 ಮಾರ್ಚ್ 31ರ ವೇಳೆಗೆ ಟೆಸ್ಟ್ ರ್ಯಾಕಿಂಗ್ ನಲ್ಲಿ ಉತ್ತಮ ಒಂಬತ್ತು ಸ್ಥಾನಗಳನ್ನು ಹೊಂದಿದ್ದ ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅರ್ಹತೆ ಹೊಂದಿದ್ದವು.
ಇದರ ಪ್ರಕಾರ ಭಾರತ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್, ಬಾಂಗ್ಲಾದೇಶ, ಶ್ರೀಲಂಕಾ, ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ ಮತ್ತು ಪಾಕಿಸ್ತಾನದ ಕ್ರಿಕೆಟ್ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
2019ರ ಆ್ಯಶಸ್ ಸರಣಿಯೊಂದಿಗೆ ಈ ಪಂದ್ಯಾವಳಿಯು ಶುಭಾರಂಭವನ್ನು ಕಂಡಿತ್ತು.
ಟೆಸ್ಟ್ ಚಾಂಪಿಯನ್’ಶಿಪ್ ನ ಉತ್ತಮ ನಾಲ್ಕು ತಂಡಗಳು ಯಾವುವು?
ಸ್ಪರ್ಧಿಸಿದ್ದ ಒಂಬತ್ತು ತಂಡಗಳ ನಡುವೆ ಭಾರತ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳು ಅತೀ ಹೆಚ್ಚು ಅಂಕಗಳನ್ನು ಪಡೆದ ನಾಲ್ಕು ತಂಡಗಳಾಗಿವೆ. ಭಾರತವು 490 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದರೆ, ನ್ಯೂಜಿಲ್ಯಾಂಡ್ 420 ಅಂಕಗಳು, ಆಸ್ಟ್ರೇಲಿಯಾ 332 ಅಂಕಗಳು ಮತ್ತು ಇಂಗ್ಲೆಂಡ್ 442 ಅಂಕಗಳೊಂದಿಗೆ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇಯ ಸ್ಥಾನಗಳಲ್ಲಿವೆ.
ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾಗಿಂತ ಹೆಚ್ಚು ಅಂಕಗಳನ್ನು ಪಡೆದಿದ್ದರೂ, ಶೇಕಡಾವಾರು ಗೆಲುವಿನ ಪ್ರಮಾಣ ಗಮನಿಸಿದಾಗ ಆಸ್ಟ್ರೇಲಿಯಾ 69.2% ಮತ್ತು ಇಂಗ್ಲೆಂಡ್ 64.1% ಹೊಂದಿದ್ದ ಕಾರಣ, ಇಂಗ್ಲೆಂಡ್ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.
ಚಾಂಪಿಯನ್ ಗಾಗಿ ಕ್ಷಣಗಣನೆ:
ಇಂದಿನಿಂದ ಭಾರತವು ತನ್ನ ಅತ್ಯುತ್ತಮ ಟೆಸ್ಟ್ ತಂಡದೊಂದಿಗೆ ನ್ಯೂಜಿಲ್ಯಾಂಡ್ ನ ಅತ್ಯುತ್ತಮ ಟೆಸ್ಟ್ ತಂಡದ ವಿರುದ್ದ ಸೆಣಸಾಡಲಿದೆ. ಎರಡು ವರ್ಷಗಳಿಂದ ಟೆಸ್ಟ್ ಚಾಂಪಿಯನ್ ಗಾಗಿ ಕಾಯುತ್ತಿರುವ ಕ್ರಿಕೆಟ್ ಜಗತ್ತು, ಇನ್ನು ಐದು ದಿನಗಳಲ್ಲಿ ತಮ್ಮ ಪ್ರಶ್ನೆ ಉತ್ತರ ಕಂಡುಕೊಳ್ಳಲಿದೆ. ಅಂದಹಾಗೆ ಈ ಪಂದ್ಯಾವಳಿಗೆ ಈಗ ಮಳೆಯ ಭೀತಿ ಎದುರಾಗಿದ್ದು, ಒಂದು ವೇಳೆ ಫೈನಲ್ ಪಂದ್ಯವು ಮಳೆಗೆ ಆಹುತಿಯಾದರೆ ಎರಡೂ ತಂಡಗಳನ್ನು ಜಯಶಾಲಿ ಎಂದು ಘೋಷಿಸಲಾಗುವುದು ಎಂದು ಐಸಿಸಿ ಈಗಾಗಲೇ ಸ್ಪಷ್ಟನೆ ನಿಡಿದೆ.