• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನತೆಯ ವಿರುದ್ಧವೇ ಸೇನೆ ಬಳಸುವುದು ವ್ಯವಸ್ಥೆಯ ದೌರ್ಬಲ್ಯದ ಲಕ್ಷಣ

ನಾ ದಿವಾಕರ by ನಾ ದಿವಾಕರ
December 10, 2021
in ಅಭಿಮತ
0
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನತೆಯ ವಿರುದ್ಧವೇ ಸೇನೆ ಬಳಸುವುದು ವ್ಯವಸ್ಥೆಯ ದೌರ್ಬಲ್ಯದ ಲಕ್ಷಣ
Share on WhatsAppShare on FacebookShare on Telegram

ನಾಗಾಲ್ಯಾಂಡ್ ರಾಜ್ಯದ ಮಾನ್ ಜಿಲ್ಲೆಯ ಟಿರು ಪ್ರದೇಶದಲ್ಲಿ ಸಶಸ್ತ್ರ ಸೇನಾ ಪಡೆಗಳು 14 ಮಂದಿ ಅಮಾಯಕ ನಾಗರಿಕರನ್ನು ಸುಟ್ಟುಹಾಕಿವೆ. ಸೇನಾಪಡೆಯ ಮೂಲಕ ನಡೆದಿರುವ ಈ ಹತ್ಯಾಕಾಂಡಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿರುವುದೇ ಅಲ್ಲದೆ, ಸೇನೆಗೆ ನಾಗರಿಕರ ಮೇಲೆ ದಾಳಿ ನಡೆಸಲು ಅಧಿಕಾರ ನೀಡಿರುವ ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯ್ದೆ 1958ನ್ನೇ ರದ್ದುಪಡಿಸುವ ಆಗ್ರಹವೂ ಕೇಳಿಬರುತ್ತಿದೆ. ಸೇನಾಪಡೆಗಳಿಂದ ನಡೆದಿರುವ ಈ ಹತ್ಯಾಕಾಂಡ ಒಂದೆಡೆ ಸೇನೆಯ ಅತಿಕ್ರಮಣವನ್ನು ಬಿಂಬಿಸಿದರೆ ಮತ್ತೊಂದೆಡೆ ಅಮಾಯಕ ಪ್ರಜೆಗಳ ಆತಂಕವನ್ನೂ ಬಿಂಬಿಸಿದೆ. ಅಸ್ಸಾಂ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮುಂತಾದ ಈಶಾನ್ಯ ರಾಜ್ಯಗಳಲ್ಲಿ ಸೇನೆಯಿಂದ ಅಮಾಯಕ ಜನತೆಯ ಮೇಲೆ ಈ ರೀತಿಯ ಆಕ್ರಮಣ ನಡೆದಿರುವುದು ಇದೇ ಮೊದಲ ಸಲವೇನಲ್ಲ.

ADVERTISEMENT

ಕಾಶ್ಮೀರ ಸೇರಿದಂತೆ ಈ ರಾಜ್ಯಗಳಲ್ಲಿ ಅನೇಕ ಸಂದರ್ಭಗಳಲ್ಲಿ ನೂರಾರು ‘ಶಂಕಿತರು’ ಇಂತಹ ದಾಳಿಗಳಿಗೆ ತುತ್ತಾಗಿದ್ದಾರೆ. ದಾಳಿಗೊಳಗಾದ ಅಮಾಯಕ ಜನತೆ, ಬದುಕುಳಿದರೆ, ತಮ್ಮ ದೇಶನಿಷ್ಠೆಯನ್ನೋ ಅಥವಾ ಅಸ್ತಿತ್ವವನ್ನೋ ತಾವೇ ನಿರೂಪಿಸಿಕೊಳ್ಳಬೇಕಾದ ಪರಿಸ್ಥಿತಿಯೂ ಇದೆ. ಗುಂಡೇಟಿಗೆ ಬಲಿಯಾದ ವ್ಯಕ್ತಿ ಸಹಜವಾಗಿ ಸಾವಿಗೆ ಅರ್ಹ ವ್ಯಕ್ತಿಯಾಗಿ ಕಾಣುವಂತಹ ಒಂದು ಕ್ರೂರ ವ್ಯವಸ್ಥೆಯನ್ನು ಸ್ವತಂತ್ರ ಭಾರತ ಪೋಷಿಸಿಕೊಂಡು ಬಂದಿದೆ. ಭೌಗೋಳಿಕ ದೇಶಾಭಿಮಾನದ ಉನ್ಮಾದದ ಪರಿಣಾಮ ಸಾರ್ವಜನಿಕ ಅಭಿಪ್ರಾಯವೂ ಸಹ ಈ “ಅರ್ಹತೆಯ ಪ್ರಮಾಣಪತ್ರ” ಕ್ಕೆ ಸಾಕ್ಷಿಯಾಗಿಬಿಡುತ್ತದೆ. ಸತ್ತ ವ್ಯಕ್ತಿಯ ಅಸ್ಮಿತೆ ದಾಳಿ ಮಾಡಿದವರಿಂದಲೇ ನಿರ್ಧಾರವಾಗುತ್ತದೆ, ಬದುಕುಳಿದವರು ತಮ್ಮ ಅಸ್ಮಿತೆಯನ್ನು ನಿರೂಪಿಸಲು ಬಹುದೂರ ಕ್ರಮಿಸಬೇಕಾಗುತ್ತದೆ. ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ 1958, ಇಂತಹ ಸನ್ನಿವೇಶಗಳಿಗೆ ಪದೇ ಪದೇ ಕಾರಣವಾಗುತ್ತಿರುವ ಮತ್ತೊಂದು ಕರಾಳಶಾಸನ ಎಂದರೆ ತಪ್ಪಾಗಲಾರದು.

ಪ್ರಜಾತಂತ್ರ ಮತ್ತು ಪ್ರಜಾದನಿ

ತನ್ನ ಪ್ರಜೆಗಳನ್ನು ದಮನಿಸಲು, ತನ್ನದೇ ಪ್ರಜೆಗಳ ಹಕ್ಕೊತ್ತಾಯದ ದನಿಗಳನ್ನು ಹತ್ತಿಕ್ಕಲು ಮತ್ತು ಸಾಮಾಜಿಕಾರ್ಥಿಕ ನ್ಯಾಯಕ್ಕಾಗಿ ಆಗ್ರಹಿಸುವ ಜನಸಾಮಾನ್ಯರ ದನಿಗಳನ್ನು ಅಡಗಿಸಲು ಸೇನೆಯನ್ನು ಬಳಸುವುದೆಂದರೆ ಪ್ರಜಾತಂತ್ರ ಮೌಲ್ಯಗಳನ್ನು ಸಮಾಧಿ ಮಾಡಿದಂತೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಒಂದು ಪೊಲೀಸ್ ವ್ಯವಸ್ಥೆ ಇದೆ. ಈ ಪೊಲೀಸ್ ವ್ಯವಸ್ಥೆಯ ಕಾರ್ಯಾಚರಣೆಯನ್ನು ಗಮನಿಸಲು ನ್ಯಾಯಾಂಗವೂ ಇದೆ. ದೇಶದ ಅಖಂಡತೆಗೆ, ಭದ್ರತೆಗೆ ಅಪಾಯ ಎದುರಾದ ಸಂದರ್ಭಗಳಲ್ಲಿ ಕೆಲವೊಮ್ಮೆ ಸೇನೆಯನ್ನು ನಿಯೋಜಿಸುವುದು ಎಲ್ಲ ದೇಶಗಳಲ್ಲೂ ಕಂಡುಬರುವ ವಿದ್ಯಮಾನ. ಆದರೆ ಸೇನಾಪಡೆಗಳಿಗೆ ಸ್ವತಂತ್ರ ರಾಷ್ಟ್ರದ ಜನಸಾಮಾನ್ಯರ ಮೇಲೆ ಯಾವುದೇ ಸಂದರ್ಭದಲ್ಲಾದರೂ ದಾಳಿ ನಡೆಸಲು ಮುಕ್ತ ಅವಕಾಶ ಹೊಂದಿರುವ ಒಂದು ಸೇನೆಯನ್ನು ರಚಿಸುವುದು ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗಿದಂತೆ.

ಸರ್ವಾಧಿಕಾರಿ ದೇಶಗಳಲ್ಲಿ, ನಿರಂಕುಶಪ್ರಭುತ್ವ ಇರುವ ರಾಷ್ಟ್ರಗಳಲ್ಲಿ ಸೇನಾ ಪಡೆಗಳು ಸದಾ ಪ್ರಜೆಗಳನ್ನು ತಮ್ಮ ಕಣ್ಗಾವಲಿನಲ್ಲೇ ಇಟ್ಟಿರುತ್ತವೆ. ಏಕೆಂದರೆ ಅಲ್ಲಿ ಪ್ರಭುತ್ವದ ನಿರ್ಧಾರಗಳು ಏಕಪಕ್ಷೀಯವಾಗಿರುತ್ತವೆ, ಜನತೆಯ ಆದ್ಯತೆ ಮತ್ತು ಆಯ್ಕೆಗಳಿಗೆ ಅವಕಾಶ ಇರುವುದಿಲ್ಲ. ಆದರೆ ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆ ಕೆಲವು ಸಾರ್ವಭೌಮ ಹಕ್ಕುಗಳನ್ನು ಹೊಂದಿರುತ್ತಾರೆ. ತಮ್ಮ ಸಾಮಾಜಿಕ, ಆರ್ಥಿಕ, ಪ್ರಾದೇಶಿಕ, ಭೌಗೋಳಿಕ ಮತ್ತು ಭಾಷಿಕ ಹಕ್ಕುಗಳಿಗಾಗಿ ಸಾಂವಿಧಾನಿಕ ಮಾರ್ಗದಲ್ಲಿ ಹೋರಾಡುವ ಪರಮಾಧಿಕಾರವನ್ನು ಸಂವಿಧಾನ ಪ್ರಜೆಗಳಿಗೆ ನೀಡಿದೆ. ಇಂತಹ ಹೋರಾಟಗಳನ್ನು ನಿಗ್ರಹಿಸುವುದಕ್ಕಾಗಿಯೇ ಪೊಲೀಸ್ ವ್ಯವಸ್ಥೆಯಲ್ಲೂ ಸಾಕಷ್ಟು ನಿಬಂಧನೆಗಳನ್ನು ರೂಪಿಸಲಾಗಿದೆ. ಕಾನೂನು ಭಂಜಕ ಗುಂಪುಗಳು, ವಿಧ್ವಂಸಕ ಗುಂಪುಗಳು ಸಾಮಾಜಿಕ ಪರಿಸರವನ್ನು ಪ್ರಕ್ಷುಬ್ಧಗೊಳಿಸುವ ಸಂದರ್ಭಗಳನ್ನು ಹೊರತುಪಡಿಸಿದರೆ, ಉಳಿದಂತೆ ಪೊಲೀಸ್ ವ್ಯವಸ್ಥೆಯೇ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಲು ಸಜ್ಜಾಗಿರಬೇಕು.

ಶತ್ರು ರಾಷ್ಟ್ರಗಳನ್ನು ಎದುರಿಸಲು ಒಂದು ಪ್ರಜಾಪ್ರಭುತ್ವ ರಾಷ್ಟ್ರ ರೂಪಿಸುವ ಸೇನೆ ಮೂಲತಃ ಆಂತರಿಕವಾಗಿ ದೇಶದ ಪ್ರಜೆಗಳನ್ನು ಬಾಹ್ಯ ಶಕ್ತಿಗಳ ಆಕ್ರಮಣದಿಂದ ಕಾಪಾಡಬೇಕಾದ ನೈತಿಕ ಹೊಣೆ ಹೊತ್ತಿರುತ್ತದೆ.  ದೇಶದ ಅಖಂಡತೆಗೆ ಭಂಗ ಉಂಟುಮಾಡುವ ಸಂಭವ ಇದ್ದಾಗ ಮಾತ್ರವೇ ಅಂತಹ ವಿಭಜಕ ಶಕ್ತಿಗಳ ವಿರುದ್ಧ ಸೇನೆಯನ್ನು ಬಳಸುವುದು ವಾಡಿಕೆಯಾಗಿದೆ. ಆದರೆ ಆಂತರಿಕ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಲು ಸೇನೆಯನ್ನು ಬಳಸುವ ಪ್ರಮೇಯ ಎದುರಾಗುತ್ತಿದೆ ಎಂದರೆ ಅಲ್ಲಿ ಆಡಳಿತ ವ್ಯವಸ್ಥೆ ತನ್ನ ಪ್ರಜಾಸತ್ತಾತ್ಮಕ ಕರ್ತವ್ಯಗಳನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದೇ ಹೇಳಬೇಕಾಗುತ್ತದೆ. ಒಂದು ಸಮಾಜದ ಅಥವಾ ಸಮುದಾಯದ ಹಕ್ಕೊತ್ತಾಯಗಳು ಸಂವಿಧಾನಬದ್ಧವಾಗಿದಲ್ಲಿ ಅಥವಾ ಕೆಲವು ಸಂದರ್ಭಗಳಲ್ಲಿ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸುವಂತಿದ್ದರೂ, ಈ ಸಮಸ್ಯೆಗಳನ್ನು ನಿವಾರಿಸಲು ಪ್ರಜಾಸತ್ತಾತ್ಮಕ ಮಾರ್ಗಗಳಿಗೇ ಆದ್ಯತೆ ನೀಡುವುದು ಪ್ರಜಾತಂತ್ರದ ಲಕ್ಷಣ.

ಸ್ವತಂತ್ರ ಭಾರತ ಈ ನಿಟ್ಟಿನಲ್ಲಿ ವಿಭಿನ್ನ ಮಾರ್ಗವನ್ನೇ ಅನುಸರಿಸುತ್ತಾ ಬಂದಿರುವುದನ್ನು 1950ರ ದಶಕದಿಂದಲೂ ಗಮನಿಸಬಹುದು. ಪ್ರತ್ಯೇಕತೆಯ ಬೇಡಿಕೆಯನ್ನೂ ಸೇರಿದಂತೆ ಒಂದು ಭೌಗೋಳಿಕ ಪ್ರದೇಶದ ಅಥವಾ ಸಮುದಾಯದ ಹಕ್ಕೊತ್ತಾಯಗಳನ್ನು ಪ್ರಜಾತಾಂತ್ರಿಕ ಮಾರ್ಗಗಳ ಮೂಲಕವೇ ಬಗೆಹರಿಸುವ ಕ್ಷಮತೆ ಆಳುವ ವರ್ಗಗಳಲ್ಲಿ ಇದ್ದಾಗ ಮಾತ್ರವೇ ಪ್ರಜಾಪ್ರಭುತ್ವದ ಅಸ್ತಿತ್ವ ಉಳಿಯಲು ಸಾಧ್ಯ. ಸ್ವಾತಂತ್ರ್ಯಾನಂತರದಲ್ಲಿ ಭಾರತದ ಹಲವು ಭೌಗೋಳಿಕ ಪ್ರದೇಶಗಳಲ್ಲಿ ಪ್ರಕ್ಷುಬ್ಧ ವಾತಾವರಣ ಇದ್ದುದು ವಾಸ್ತವ. ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಪ್ರತ್ಯೇಕತೆಯ ಆಗ್ರಹವೂ ದಟ್ಟವಾಗಿದ್ದುದೂ ಹೌದು. ಅಖಂಡ ಭಾರತದ ಪರಿಕಲ್ಪನೆಯಲ್ಲಿ ಈ ಬೇಡಿಕೆಗಳನ್ನು ತಿರಸ್ಕರಿಸುವುದು ಆಡಳಿತವ್ಯವಸ್ಥೆಯ ಅನಿವಾರ್ಯತೆಯಾಗಿದ್ದ ಕಾರಣ, ಈ ಜನಾಂದೋಲನಗಳನ್ನು ಹತ್ತಿಕ್ಕುವ ನಿಟ್ಟಿನಲ್ಲೇ ಸರ್ಕಾರಗಳು ಯೋಚಿಸತೊಡಗಿದ್ದವು. ಈಶಾನ್ಯ ರಾಜ್ಯಗಳಲ್ಲಿ ಉಲ್ಬಣಿಸಿದ ಸಶಸ್ತ್ರ ಹೋರಾಟಗಳು ಮತ್ತು ನೆರೆ ರಾಷ್ಟ್ರಗಳ ಬೆಂಬಲದೊಂದಿಗೆ ಕೆಲವು ಗುಂಪುಗಳು ಪ್ರಭುತ್ವದ ವಿರುದ್ಧ ಸಮರ ಸಾರಿದ್ದ ಪರಿಣಾಮ ಈ ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯ್ದೆ 1958.

ಕರಾಳ ಕಾಯ್ದೆಯ ಉಗಮ

1942ರ ಭಾರತ ಬಿಟ್ಟು ತೊಲಗಿ ಅಂದೋಲನದ ಸಂದರ್ಭದಲ್ಲಿ ಬ್ರಿಟೀಷ್ ವಸಾಹತು ಸರ್ಕಾರ ಜಾರಿಗೊಳಿಸಿದ್ದ ಒಂದು ಕರಾಳ ಶಾಸನವನ್ನೇ ಆಧರಿಸಿ ಭಾರತ ಸರ್ಕಾರ 1958ರಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸಿತ್ತು. ನಾಗಾಲ್ಯಾಂಡ್‍ನಲ್ಲಿ ಉಲ್ಬಣಿಸುತ್ತಿದ್ದ ಸಶಸ್ತ್ರ ಬಂಡಾಯವನ್ನು ಮಣಿಸುವುದು ಈ ಕಾಯ್ದೆಯ ಮುಖ್ಯ ಉದ್ದೇಶವೂ ಆಗಿತ್ತು. ತ್ರಿಪುರಾದಲ್ಲಿ ಪ್ರತ್ಯೇಕತಾವಾದಿಗಳ ಸಶಸ್ತ್ರ ಬಂಡಾಯ ಉಲ್ಬಣಿಸಿದ್ದರಿಂದ 1997ರಲ್ಲೇ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. 2015ರಲ್ಲಿ ಒಕ್ಕೂಟ ಸರ್ಕಾರ ಅರುಣಾಚಲ ಪ್ರದೇಶದ, ಅಸ್ಸಾಂ ಗಡಿಗೆ ಹೊಂದಿಕೊಂಡಂತಿರುವ 12 ಜಿಲ್ಲೆಗಳನ್ನು ಪ್ರಕ್ಷುಬ್ಧ ಎಂದು ಘೋಷಿಸಿ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಆದರೆ ರಾಜ್ಯ ಸರ್ಕಾರದ ವಿರೋಧಕ್ಕೆ ಮಣಿದು ಹಿಂಪಡೆಯಬೇಕಾಯಿತು. ಇದರೊಂದಿಗೇ ತ್ರಿಪುರಾದಲ್ಲೂ ಸಹ ಈ ಕಾಯ್ದೆಯನ್ನು ಹಿಂಪಡೆಯಲಾಗಿತ್ತು. ಆದರೆ ಜೂನ್ 4ರಂದು ಮಣಿಪುರದಲ್ಲಿ ಉಗ್ರವಾದಿಗಳು ಹೊಂಚುದಾಳಿಯ ಮೂಲಕ 18 ಸೈನಿಕರ ಹತ್ಯೆ ನಡೆಸಿದ ಹಿನ್ನೆಲೆಯಲ್ಲಿ ಮತೊಮ್ಮೆ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು.

ಈ ಕಾಯ್ದೆಯನ್ನು ಜಾರಿಗೊಳಿಸಿದ ಉದ್ದೇಶ ಸಫಲವಾಗಿದೆಯೇ ಎಂಬ ಪ್ರಶ್ನೆಗೆ ನಿಖರವಾಗಿ ಉತ್ತರಿಸಲಾಗುವುದಿಲ್ಲ. ಈಶಾನ್ಯ ರಾಜ್ಯಗಳಲ್ಲಿ ಇಂದಿಗೂ ಪ್ರಕ್ಷುಬ್ಧ ವಾತಾವರಣ ಮುಂದುವರೆದಿದೆ. ಈ ನಡುವೆಯೇ ಈ ಕಾಯ್ದೆಯಲ್ಲಿರುವ ಕೆಲವು ಜನವಿರೋಧಿ ನಿಯಮಗಳ ಬಗ್ಗೆಯೂ ಆಕ್ಷೇಪ ಕೇಳಿಬರುತ್ತಿದೆ. ಈ ಕಾಯ್ದೆಯು “ ಪ್ರಕ್ಷುಬ್ಧ ಪ್ರದೇಶಗಳ ” ಕೇಂದ್ರ ಪೊಲೀಸ್ ಪಡೆಗಳು , ರಾಜ್ಯ ಪೊಲೀಸರು ಮತ್ತು ಸೇನಾಪಡೆಗಳಿಗೆ ಕೆಲವು ವಿಶೇಷ ಅಧಿಕಾರ ನೀಡುವುದಷ್ಟೇ ಅಲ್ಲದೆ ಹಲವು ವಿನಾಯಿತಿಗಳನ್ನೂ ನೀಡುತ್ತದೆ. ಶಂಕಿತರನ್ನು ಗುಂಡಿಟ್ಟು ಕೊಲ್ಲುವ, ಶಂಕಿತ ಉಗ್ರರು ವಾಸಿಸುವ ಮನೆಗಳ ಮೇಲೆ ಆಕ್ರಮಣ ನಡೆಸುವ, ಸಂದೇಹಾಸ್ಪದ ವ್ಯಕ್ತಿಗಳನ್ನು ವಾರಂಟ್ ಇಲ್ಲದೆಯೇ ಬಂಧಿಸುವ ಅಧಿಕಾರವನ್ನೂ ಈ ಕಾಯ್ದೆ ನೀಡುತ್ತದೆ. ಇಷ್ಟೆಲ್ಲಾ ವಿಶೇಷ ಅಧಿಕಾರವನ್ನು ಸೇನಾ ಪಡೆಗೆ ನೀಡುವುದೇ ಅಲ್ಲದೆ ಕಾನೂನು ಕ್ರಮದಿಂದ ವಿನಾಯಿತಿಯನ್ನೂ ನೀಡುತ್ತದೆ. “ ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆ ಯಾವುದೇ ವ್ಯಕ್ತಿಯ ವಿರುದ್ಧ (ಸೇನಾ ಸಿಬ್ಬಂದಿ) ಕಾನೂನು ಕ್ರಮ ಕೈಗೊಳ್ಳುವುದಾಗಲೀ, ದಾವೆ ಹೂಡುವುದಾಗಲೀ ಅಥವಾ ಮೊಕದ್ದಮೆ ದಾಖಲಿಸುವುದಾಗಲೀ ಸಾಧ್ಯವಾಗುವುದಿಲ್ಲ ” ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಆದರೆ 1991ರಿಂದ 2015ರವರೆಗೆ ಕೇಂದ್ರ ಸರ್ಕಾರದ ಅನುಮತಿ ಕೋರಿ ಸಲ್ಲಿಸಲಾಗಿರುವ 38 ಕೋರಿಕೆಗಳ ಪೈಕಿ 30 ಪ್ರಕರಣಗಳಲ್ಲಿ ಅನುಮತಿ ನಿರಾಕರಿಸಲಾಗಿದೆ.

ಈ ನಿರ್ದಿಷ್ಟ ನಿಯಮವೇ ಅನೇಕ ಅವಘಡಗಳಿಗೂ ಕಾರಣವಾಗಿದೆ.  ಸಶಸ್ತ್ರ ಸೇನಾಪಡೆಗಳಿಂದ ನ್ಯಾಯಾಲಯಾತಿರಿಕ್ತ ಹತ್ಯೆಗಳು, ಅತ್ಯಾಚಾರಗಳು ನಡೆದಿರುವುದು ವರದಿಯಾಗಿದೆ. 2004ರಲ್ಲಿ ಅಸ್ಸಾಂ ರೈಫಲ್ಸ್ ಪಡೆಯ ಸೈನಿಕರು 34 ವರ್ಷದ ತಂಗ್ಜಮ್ ಮನೋರಮಾ ಎಂಬ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದರ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದಿದದವು. 2004ರ ಜುಲೈ 14ರಂದು ಹನ್ನೆರಡು ಮಹಿಳೆಯರು ಇಂಫಾಲದ ಕಾಂಗ್ಲಾ ಫೋರ್ಟ್‍ನಲ್ಲಿರುವ ಅಸ್ಸಾಂ ರೈಫಲ್ಸ್ ಕಚೇರಿಯ ಎದುರು ನಗ್ನರಾಗಿ , ಬನ್ನಿ ನಮ್ಮನ್ನು ರೇಪ್ ಮಾಡಿ ಎಂಬ ಬ್ಯಾನರ್ ಹಿಡಿದು, ಪ್ರತಿಭಟನೆ ನಡೆಸಿದ್ದು ಈಗ ಇತಿಹಾಸ. ಇರೋಂ ಶರ್ಮಿಳಾ 2000ದಿಂದಲೇ ಈ ಕಾಯ್ದೆಯನ್ನು ರದ್ದುಪಡಿಸಲು ಆಗ್ರಹಿಸಿ 15 ವರ್ಷಗಳ ಉಪವಾಸ ಸತ್ಯಾಗ್ರಹ ಮಾಡಿರುವುದೂ ಈ ಕರಾಳ ಚರಿತ್ರೆಯ ಒಂದು ಭಾಗ. ಈ ಪ್ರತಿಭಟನೆಗಳ ಹಿನ್ನೆಲೆಯಲ್ಲೇ ಯುಪಿಎ ಸರ್ಕಾರ ನ್ಯಾಯಮೂರ್ತಿ ಜೀವನ್ ರೆಡ್ಡಿ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿ, ಈ ಕಾಯ್ದೆಯನ್ನು ಪರಿಶೀಲಿಸಿ ಶಿಫಾರಸುಗಳನ್ನು ಸಲ್ಲಿಸಲು ಕೋರಿತ್ತು.

ತಮ್ಮ ಅಂತಿಮ ವರದಿಯಲ್ಲಿ ನ್ಯಾ ಜೀವನ್ ರೆಡ್ಡಿ ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯ್ದೆಯನ್ನು “ ದಬ್ಬಾಳಿಕೆಯ ಸಂಕೇತ, ದ್ವೇಷದ ವಸ್ತು ಮತ್ತು ತಾರತಮ್ಯ ಹಾಗೂ ಸ್ವೇಚ್ಚಾ ಪ್ರವೃತ್ತಿಯ ಸಾಧನ ” ಎಂದು ಬಣ್ಣಿಸಿದ್ದೇ ಅಲ್ಲದೆ ಕಾಯ್ದೆಯನ್ನು ಹಿಂಪಡೆಯುವಂತೆಯೂ ಶಿಫಾರಸು ಮಾಡಿತ್ತು. ಆದರೆ ಈ ನಿಟ್ಟಿನಲ್ಲಿ ಸರ್ಕಾರಗಳು ಈವರೆಗೂ ಆಲೋಚನೆ ಮಾಡಿಲ್ಲ. ಈ ಸಮಿತಿಯ ಸದಸ್ಯರಲ್ಲೊಬ್ಬರಾಗಿದ್ದ ಸಂಜೋಯ್ ಹಜಾರಿಕಾ “ ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯ್ದೆ ಹೋಗುವ ಮುನ್ನ ಇನ್ನೆಷ್ಟು ಸಾವುಗಳು ಸಂಭವಿಸಬೇಕು, ಇನ್ನೆಷ್ಟು ನಗ್ನ ಪ್ರತಿಭಟನೆಗಳು ನಡೆಯಬೇಕು, ಇನ್ನೆಷ್ಟು ಉಪವಾಸ ಸತ್ಯಾಗ್ರಹಗಳು ಬೇಕು, ಇನ್ನೆಷ್ಟು ಸಮಿತಿಗಳು ರಚನೆಯಾಗಬೇಕು, ಇನ್ನೆಷ್ಟು ಸಂಪಾದಕೀಯಗಳು, ಲೇಖನಗಳು, ಪ್ರಸಾರಗಳು ನಡೆಯಬೇಕು ” ಕೇಳುತ್ತಾರೆ.

ಕಾಯ್ದೆಯ ಕರಾಳ ಮುಖ

ಟಿರು ಮತ್ತು ಒಟಿಂಗ್ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಯಿಂದ ಮನೆಗೆ ಹಿಂದಿರುಗುತ್ತಿದ್ದ ಕಾರ್ಮಿಕರ ವಾಹನದ ಮೇಲೆ, ತಪಾಸಣೆಯನ್ನೂ ನಡೆಸದೆ, ವಾಹನದಲ್ಲಿರುವವರ ಗುರುತನ್ನು ಖಚಿತಪಡಿಸಿಕೊಳ್ಳದೆ, ಅಸ್ಸಾಂ ರೈಫಲ್ಸ್‍ನ ಪಡೆ ಕೇವಲ ಅನುಮಾನದ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ಏಳು ಜನರ ಹತ್ಯೆ ನಡೆಸಿದೆ. ಈ ಗುಂಡಿನ ದಾಳಿಯ ಸದ್ದು ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸುವ ವೇಳೆಗೆ ಅಮಾಯಕರ ಶವಗಳನ್ನು ಸೇನಾ ಶಿಬಿರಕ್ಕೆ ತೆಗೆದುಕೊಂಡು ಹೋಗುವ ಸಲುವಾಗಿ ಟಾರ್ಪಲ್‍ನಲ್ಲಿ ಸುತ್ತಿ ಮತ್ತೊಂದು ವಾಹನಕ್ಕೆ ತುಂಬಿಸುತ್ತಿರುವುದನ್ನು ನೋಡಿ ಕೆರಳಿದ್ದಾರೆ. ಈ ಸಂದರ್ಭದಲ್ಲಿ ಸೇನಾ ವಾಹನಗಳ ಮೇಲೆ ಗ್ರಾಮಸ್ಥರು ನಡೆಸಿದ ದಾಳಿಯ ಸಂದರ್ಭದಲ್ಲಿ ಏಳು ಜನ ನಾಗರಿಕರು ಗುಂಡೇಟಿಗೆ ಬಲಿಯಾಗಿದ್ದಾರೆ. 14 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೈನಿಕರು ಕೂಡಲೇ ಪರಾರಿಯಾಗಿದ್ದು, ಈ ದಾಳಿಯ ಸಂದರ್ಭದಲ್ಲಿ ಗಣಿ ಕಾರ್ಮಿಕರ ಗುಡಿಸಲುಗಳ ಮೇಲೆಯೂ ಗುಂಡಿನ ದಾಳಿ ನಡೆದಿರುವುದು ವರದಿಯಾಗಿದೆ. ಈ ಘಟನೆಯ ಸತ್ಯಾಸತ್ಯತೆಗಳು ಸೂಕ್ತ ತನಿಖೆಯ ನಂತರವಷ್ಟೇ ಹೊರಬರಬೇಕಿದೆ.

ಈ ಸಂದರ್ಭದಲ್ಲೇ ಕಳೆದ ತಿಂಗಳಿನಲ್ಲಿ ಮಣಿಪುರದ ಚುರಾಚಂದ್‍ಪುರ ಜಿಲ್ಲೆಯಲ್ಲಿ ಸೇನಾ ಪಡೆಗಳ ಮೇಲೆ ಉಗ್ರವಾದಿಗಳು ನಡೆಸಿದ ಮಾರಣಾಂತಿಕ ದಾಳಿಯನ್ನೂ ಸಹ ಗಂಭೀರವಾಗಿ ಪರಿಗಣಿಸಬೇಕಿದೆ. ಪೀಪಲ್ಸ್ ಲಿಬರೇಷನ್ ಆರ್ಮಿ ಮತ್ತು ಮಣಿಪುರ ನಾಗಾ ಪೀಪಲ್ಸ್ ಫ್ರಂಟ್ ಸಂಘಟನೆಗೆ ಸೇರಿದ ಉಗ್ರರು ಹಠಾತ್ ಹೊಂಚು ದಾಳಿಯ ಮೂಲಕ ಅಸ್ಸಾಂ ರೈಫಲ್ಸ್‍ಗೆ ಸೇರಿದ ಏಳು ಸೈನಿಕರ ಹತ್ಯೆಗೈದಿರುವುದು ಇಡೀ ಪ್ರದೇಶದಲ್ಲಿ ಪ್ರಕ್ಷುಬ್ಧತೆಯನ್ನು ಹೆಚ್ಚಿಸಿದೆ. ಕೇಂದ್ರ ಸರ್ಕಾರದ ಶಾಂತಿ ಮಾತುಕತೆಗಳ ನಡುವೆಯೇ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದು ಯೋಚನೆಗೀಡುಮಾಡುವ ವಿಚಾರ. ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷಗಳು ಈಶಾನ್ಯ ರಾಜ್ಯಗಳಲ್ಲಿ ಯಾವುದೇ ರೀತಿಯ ಹೊಂದಾಣಿಕೆ ರಾಜಕಾರಣದ ಮೂಲಕ ಅಧಿಕಾರದಲ್ಲಿದ್ದರೂ, ಅಲ್ಲಿನ ಜನರ ಪ್ರಾದೇಶಿಕ ಭಾವನೆಗಳು ಮತ್ತು ಭೌಗೋಳಿಕ ಹಕ್ಕೊತ್ತಾಯಗಳನ್ನು ನಿರ್ಲಕ್ಷಿಸಲಾಗುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಈ ಜಟಿಲ ಸಮಸ್ಯೆಯನ್ನು ಬಗೆಹರಿಸಲು ಪ್ರಜಾಸತ್ತಾತ್ಮಕ ಮಾರ್ಗವೊಂದೇ ಸೂಕ್ತ ಎನ್ನುವುದನ್ನು ಸರ್ಕಾರಗಳು ಅರ್ಥಮಾಡಿಕೊಳ್ಳಬೇಕಿದೆ. 2016-18ರ ಅವಧಿಯಲ್ಲೇ ಈ ಭಾಗದಲ್ಲಿ ಉಗ್ರವಾದಿ ಸಂಘಟನೆಗಳ ದಾಳಿಗೆ 334 ಸೈನಿಕರು ಮೃತಪಟ್ಟಿದ್ದಾರೆ. ಇದೇ ವೇಳೆ ಸೇನಾ ಕಾರ್ಯಾಚರಣೆಯಿಂದ ಮೃತಪಟ್ಟ ಅಥವಾ ಹಾನಿಗೊಳಗಾದ ನಾಗರಿಕರ ಸಂಖ್ಯೆಯನ್ನು ಸರ್ಕಾರ ಈವರೆಗೂ ಪ್ರಕಟಿಸಿಯೇ ಇಲ್ಲ.

ಇಲ್ಲಿ ನಾಗರಿಕ ಹಕ್ಕುಗಳು ಮತ್ತು ಪ್ರಜಾತಂತ್ರದ ಮೌಲ್ಯಗಳ ಪ್ರಶ್ನೆ ಮುಖ್ಯವಾಗುತ್ತದೆ. ಅಮಾಯಕ ನಾಗರಿಕರನ್ನು ಕೊಲ್ಲಲು ನಿರ್ಭೀತ ಮುಕ್ತ ಅವಕಾಶ ನೀಡುವಂತಹ ಯಾವುದೇ ಕಾಯ್ದೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶ ಇರಕೂಡದು. ಹಾಗಾಗಿಯೇ ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯ್ದೆಯನ್ನು ರದ್ದುಪಡಿಸುವ ಆಗ್ರಹವೂ ಕಾವು ಪಡೆದುಕೊಳ್ಳುತ್ತಿದೆ. ನ್ಯಾ ಜೀವನ್‍ರೆಡ್ಡಿ ಸಮಿತಿಯ ಶಿಫಾರಸುಗಳನ್ನು ಈಗಲಾದರೂ ಪರಿಶೀಲಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಆದ್ಯತೆಯಾಗಬೇಕಿದೆ. ಈ ಘಟನೆಯಲ್ಲಿ ಮೃತಪಟ್ಟವರೆಲ್ಲರೂ ಕೋನ್ಯಾಕ್ ಬುಡಕಟ್ಟಿಗೆ ಸೇರಿದವರಾಗಿದ್ದು, ಈ ಬುಡಕಟ್ಟಿನ ಸಂಘಟನೆಗಳು ಬಂದ್ ಅಚರಿಸುವುದೇ ಅಲ್ಲದೆ, ಅಸ್ಸಾಂ ರೈಫಲ್ಸ್ ಪಡೆಯನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿವೆ.  ನಾಗಾಲ್ಯಾಂಡ್ ಮುಖ್ಯಮಂತ್ರಿಯೂ ಸಹ ಕಾಯ್ದೆಯ ರದ್ದತಿಗೆ ಆಗ್ರಹಿಸಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾಗರಿಕ ಹಕ್ಕುಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡುವುದು ಒಂದು ಚುನಾಯಿತ ಸರ್ಕಾರದ ಆದ್ಯತೆಯಾಗಬೇಕು. ಯಾವುದೇ ಕಾರಣಗಳಿಂದ ನಾಗರಿಕರಲ್ಲಿ ಉದ್ಭವಿಸುವ ಆಕ್ರೋಶ, ಹತಾಶೆ ಮತ್ತು ವಿರೋಧಗಳನ್ನು ಪ್ರಜಾಸತ್ತಾತ್ಮಕ ಮಾರ್ಗಗಳ ಮೂಲಕವೇ ಆಲಿಸಿ, ಪರಿಹರಿಸುವ ವ್ಯವಧಾನವೂ ಆಡಳಿತಾರೂಢ ಸರ್ಕಾರಗಳಲ್ಲಿ ಇರಬೇಕಾಗುತ್ತದೆ. ಬಂದೂಕಿನ ನಳಿಕೆಯಲ್ಲಿ ನ್ಯಾಯ ದೊರಕಿಸಲಾಗುವುದಿಲ್ಲ ಅಥವಾ ಸೇನೆ ಮತ್ತು ಪೊಲೀಸ್ ಕಾರ್ಯಾಚರಣೆಯ ಮೂಲಕವೇ ಜನರ ಸಮಸ್ಯೆಗೆ ಮುಖಾಮುಖಿಯಾಗುವುದು ಸಮರ್ಥನೀಯವಾಗಲಾರದು. ಯುಎಪಿಎ, ರಾಜದ್ರೋಹ ಕಾಯ್ದೆ ಮತ್ತು ಈ ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯ್ದೆಯಂತಹ ಕರಾಳ ಶಾಸನಗಳಿಂದ ಮುಕ್ತವಾದ ಒಂದು ನೈಜ ಪ್ರಜಾಸತ್ತೆಗಾಗಿ ಇಂದು ಹೋರಾಡಬೇಕಿದೆ.

Tags: BJPHuman RightsIndian security forcesNagalandನರೇಂದ್ರ ಮೋದಿಬಿಜೆಪಿ
Previous Post

ರಾಘವೇಶ್ವರ ಪ್ರಕರಣ : ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿರುದ್ಧವೂ ಅಪಹರಣದ ಆರೋಪ!

Next Post

ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಸಿದ್ಧ: ಸಚಿವ ಕೆ.ಎಸ್.ಈಶ್ವರಪ್ಪ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಸಿದ್ಧ: ಸಚಿವ ಕೆ.ಎಸ್.ಈಶ್ವರಪ್ಪ

ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಸಿದ್ಧ: ಸಚಿವ ಕೆ.ಎಸ್.ಈಶ್ವರಪ್ಪ

Please login to join discussion

Recent News

Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 
Top Story

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

by Chetan
July 2, 2025
ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 
Top Story

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

by Chetan
July 2, 2025
Top Story

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

by ಪ್ರತಿಧ್ವನಿ
July 2, 2025
Top Story

Kannada Cinema: ಯಶೋಧರ ನಿರ್ದೇಶನದದಲ್ಲಿ ಅಭಿಮನ್ಯು ನಾಯಕನಾಗಿ ನಟಿಸಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ .

by ಪ್ರತಿಧ್ವನಿ
July 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada