ವಾಸ್ತವಗಳಿಗೆ ವಿಮುಖವಾಗಿ ಆಶಯಗಳತ್ತ ಸಾಗುವುದು ಸಮಾಜವನ್ನು ಭ್ರಮಾವಸ್ಥೆಗೆ ದೂಡುತ್ತದೆ
ನಾ ದಿವಾಕರ
“ ಹರ್ ಘರ್ ತಿರಂಗಾ-ಘರ್ ಘರ್ ತಿರಂಗಾ ” ಘೋಷಣೆಯೊಂದಿಗೆ ಭಾರತ ಮತ್ತೊಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. 76ನೆಯ ವರ್ಷದ ಆಚರಣೆಗಳ ನಡುವೆ ಮನೆ ಮನೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಭಾರತದ ಪ್ರತಿಯೊಬ್ಬ ಪ್ರಜೆಯೂ ತನ್ನ ದೇಶಪ್ರೇಮವನ್ನು ವ್ಯಕ್ತಪಡಿಸಲು ಇದೊಂದು ಸುಸಂದರ್ಭ. ಕಳೆದ ವರ್ಷದಿಂದಲೇ ಆರಂಭವಾದ ಈ ಅಭಿಯಾನ ದೇಶದ ನಾಗರಿಕರಲ್ಲಿ, ಯುವ ಸಮುದಾಯದಲ್ಲಿ ಹಾಗೂ ಎಳೆಯ ಮಕ್ಕಳಲ್ಲೂ ಸಹ ರಾಷ್ಟ್ರದ ಬಗ್ಗೆ ಹೆಮ್ಮೆ, ಅಭಿಮಾನ ಮತ್ತು ವಿಶ್ವಾಸವನ್ನು ಮೂಡಿಸಲು ಒಂದು ಸಾಧನವಾಗಿ ಕಾಣುವುದು ಸಹಜ. ಯಾವುದೇ ದೇಶ ವಸಾಹತು ದಾಸ್ಯದಿಂದ ವಿಮೋಚನೆ ಪಡೆದು 76 ವರ್ಷಗಳ ಸ್ವತಂತ್ರ ಆಳ್ವಿಕೆಯನ್ನು ಯಶಸ್ವಿಯಾಗಿ ನಡೆಸಿರುವುದನ್ನು ಸಂಭ್ರಮಿಸುವುದು ಆ ದೇಶದ ನಾಗರಿಕರ ನೈತಿಕ ಕರ್ತವ್ಯವೂ ಹೌದು. ಒಂದು ವಾರದ ಮುನ್ನ ಆಗಸ್ಟ್ 9ರಂದು ನಾವು ಕ್ವಿಟ್ ಇಂಡಿಯಾ ಚಳುವಳಿಯ 83ನೆಯ ವಾರ್ಷಿಕೋತ್ಸವವನ್ನು ಆಚರಿಸಿದ್ದೇವೆ. ಅದಕ್ಕೂ ಎರಡು ದಿನಗಳ ಮುಂಚೆ ಅಗಸ್ಟ್ 6ರಂದು ಹಿರೋಷಿಮಾ ದಿನವನ್ನು ಆಚರಿಸುವ ಮೂಲಕ, ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದ್ದೇವೆ.
ಈ ಮೂರೂ ಆಚರಣೆಗಳು ಹತ್ತು ದಿನಗಳ ಅಂತರದಲ್ಲಿ ಆಚರಿಸಲ್ಪಡುವುದು ಒಂದು ರೀತಿಯಲ್ಲಿ ಶ್ರೀಸಾಮಾನ್ಯರ ಆತ್ಮಾವಲೋಕನದ ಹಾಗೂ ಆಳುವವರ ಆತ್ಮಸಾಕ್ಷಿಯ ಮಾರ್ಗಗಳನ್ನು ಸುಗಮಗೊಳಿಸುತ್ತದೆ. 21ನೆಯ ಶತಮಾನದ ಅತ್ಯಾಧುನಿಕ ತಂತ್ರಜ್ಞಾನದ ವಾರಸುದಾರರಾಗಿ ಚಂದ್ರಯಾನದಂತಹ ಮಹತ್ಸಾಧನೆಯನ್ನು ನಮ್ಮದಾಗಿಸಿಕೊಂಡಿರುವ ಭಾರತದ ಜನತೆಗೆ ಇದು ಹೆಮ್ಮೆಯ ಕ್ಷಣ. ಹಿರೋಷಿಮಾ ದಿನಾಚರಣೆಯ ಸಂದರ್ಭದಲ್ಲಿ ದೇಶದ ಸಮಸ್ತ ಜನತೆ ಯುದ್ಧ ಪರಂಪರೆಗಳ ಭೀಕರತೆಯನ್ನು, ಯುದ್ಧೋನ್ಮಾದ ಸೃಷ್ಟಿಸುವ ಜೀವವಿರೋಧಿ ಮನುಜ ಲಕ್ಷಣಗಳನ್ನು, ವಿನಾಶಕಾರಿ ಶಸ್ತ್ರಾಸ್ತ್ರಗಳ ಬಳಕೆಯಿಂದ ಉಂಟಾಗಬಹುದಾದ ದುಷ್ಪರಿಣಾಮಗಳನ್ನು ಅರಿತುಕೊಳ್ಳಲು ಪ್ರಯತ್ನಿಸಿರುತ್ತೇವೆ. ಕ್ವಿಟ್ ಇಂಡಿಯಾ ಚಳುವಳಿಯ ವಾರ್ಷಿಕೋತ್ಸವದಂದು ನಮ್ಮೊಳಗಿನ ಜೀವವಿರೋಧಿ ಧೋರಣೆಗಳನ್ನು, ಅಸೂಕ್ಷ್ಮತೆಗಳನ್ನು ಹಾಗೂ ಸಮಾಜದೊಳಗಿನ ಅಸಮಾನತೆಯ ನೆಲೆಗಳನ್ನು ದೂರಗೊಳಿಸುವ ಪಣ ತೊಟ್ಟಿರುತ್ತೇವೆ. ಇಂದು, ಸ್ವಾತಂತ್ರ್ಯೋತ್ಸವದ ದಿನದಂದು ನಾವು ಪಡೆದ ಸ್ವಾತಂತ್ರ್ಯದ ಸಾರ್ಥಕತೆಯನ್ನು ಹಾಗೂ ನಡೆದುಬಂದ ಹಾದಿಯನ್ನು ಅವಲೋಕನ ಮಾಡುತ್ತೇವೆ.
ಸ್ವಾತಂತ್ರ್ಯದ ಆಶಯಗಳ ಚೌಕಟ್ಟು
ವಸಾಹತು ದಾಸ್ಯದಿಂದ ಬಿಡುಗಡೆ ಹೊಂದಿದ ಭಾರತದ ಸಮಾಜ ಸ್ವಾತಂತ್ರ್ಯವನ್ನು ಬಯಸಿದ್ದು ಕೇವಲ ವಿದೇಶಿ ಆಳ್ವಿಕೆಯಿಂದ ಮಾತ್ರವೇ ಅಲ್ಲ. ಅದು ಕೇವಲ ರಾಜಕೀಯ ಸ್ವಾತಂತ್ರ್ಯ. ದೇಶ ನಮ್ಮನ್ನು ನಾವು ಆಳಿಕೊಳ್ಳುವ ಹಕ್ಕು. ಈ ಹಕ್ಕನ್ನು ಸಾಕಾರಗೊಳಿಸಲೆಂದೇ 1950ರಲ್ಲಿ ಅಂಗೀಕರಿಸಿ ಅರ್ಪಿಸಿಕೊಳ್ಳಲಾದ ಸಂವಿಧಾನವು “ ಭಾರತದ ಜನಗಳಾದ ನಾವು ,,,,,” ಎಂಬ ವಾಕ್ಯದೊಂದಿಗೆ ಆರಂಭವಾಗುತ್ತದೆ. ಅಂದರೆ ವ್ಯಕ್ತಿಗತವಾಗಿ ಭಾರತದ ಸಮಸ್ತ ಸಾರ್ವಭೌಮ ಜನಗಳು ಒಂದು ಸಾರ್ವಭೌಮ ರಾಷ್ಟ್ರ ನಿರ್ಮಾಣಕ್ಕಾಗಿ ತಮ್ಮ ತನುಮನಧನ ಅರ್ಪಿಸುವುದೇ ಅಲ್ಲದೆ, ಈ ದೇಶದ ನೆಲ ಶತಮಾನಗಳಿಂದ ಕಾಪಾಡಿಕೊಂಡು ಬಂದಿರುವ ಸೋದರತ್ವ ಮತ್ತು ಬಹುಸಾಂಸ್ಕೃತಿಕ ಆಲೋಚನಾ ವಿಧಾನಗಳನ್ನು ಸಂರಕ್ಷಿಸುವುದೇ ಅಲ್ಲದೆ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನ ನೀಡಿರುವಂತಹ ತನ್ನ ಸಹಜೀವಿಯ-ಸಹಪ್ರಜೆಯ ಆಲೋಚನೆಯ-ಆರಾಧನೆಯ-ಆಚರಣೆಯ ಸ್ವಾತಂತ್ರ್ಯವನ್ನು ರಕ್ಷಿಸಲು ಬದ್ಧವಾಗಿರಬೇಕಾಗುತ್ತದೆ. ಸಂವಿಧಾನದ ಅಂಗೀಕಾರ ಮೂರು ವರ್ಷಗಳ ನಂತರವೇ ಆಗಿದ್ದರೂ, ಸಾಂವಿಧಾನಿಕ ಆಶಯಗಳು ಸ್ವಾತಂತ್ರ್ಯದ ಪರಿಕಲ್ಪನೆಯ ಒಂದು ಅಂಶಿಕ ಭಾಗವಾಗಿದ್ದುದನ್ನು ನಾವಿಂದು ಮನದಟ್ಟುಮಾಡಿಕೊಳ್ಳಬೇಕಿದೆ.
ಈ ದೃಷ್ಟಿಯಿಂದ ನೋಡಿದಾಗ 76 ವರ್ಷಗಳ ಸ್ವತಂತ್ರ ನಡಿಗೆಯಲ್ಲಿ ಸಾಮಾನ್ಯ ನಾಗರಿಕರಾದ ನಾವು ನಮ್ಮ ನಾಡಿನ ಶತಮಾನಗಳ ಚಾರಿತ್ರಿಕ ನಡೆಯನ್ನು ಎಷ್ಟರ ಮಟ್ಟಿಗೆ ಕಾಪಾಡಿಕೊಳ್ಳಲು ನೆರವಾಗಿದ್ದೇವೆ ಎಂಬ ಪ್ರಶ್ನೆಯನ್ನೂ ಹಾಕಿಕೊಳ್ಳಬೇಕಾಗುತ್ತದೆ. ವಸಾಹತುಶಾಹಿಯ ಕ್ರೂರ ದಬ್ಬಾಳಿಕೆಯ ನಡುವೆಯೂ ನಾವು ಕಾಪಾಡಿಕೊಂಡು ಬಂದಂತಹ ಬಹುಸಾಂಸ್ಕೃತಿಕ ನೆಲೆಗಳನ್ನು ಸ್ವಾತಂತ್ರ್ಯಾನಂತರದಲ್ಲಿ ಮತ್ತಷ್ಟು ಗಟ್ಟಿಗೊಳಿಸುವುದು ನಮ್ಮ ಆದ್ಯತೆಯಾಗಬೇಕಿತ್ತು. ಈ ಮುಂಗಾಣ್ಕೆಯೊಂದಿಗೇ ನಾಡಿನ ಹಿರಿಯ ಮುತ್ಸದ್ದಿಗಳು, ಸ್ವಾತಂತ್ರ್ಯ ಸಂಗ್ರಾಮಿಗಳು ಹಾಗೂ ಎರಡು ಶತಮಾನಗಳ ಕಾಲ ಭಾರತೀಯ ಸಮಾಜದ ಬೌದ್ಧಿಕ-ಭೌತಿಕ ಸುಧಾರಣೆಗಾಗಿ ಶ್ರಮಿಸಿದ ಮಹನೀಯರು ಭಾರತದ ಮುನ್ನಡೆಗೆ ಪೂರಕವಾದ ಒಂದು ಸಾಂಸ್ಕೃತಿಕ ನೀಲನಕ್ಷೆಯನ್ನು ಬಿಟ್ಟುಹೋಗಿದ್ದಾರೆ. ಸಮಾನತೆ, ಸೋದರತ್ವ ಹಾಗೂ ಎಲ್ಲರನ್ನೂ ಒಳಗೊಳ್ಳುವಂತಹ ಜಾತ್ಯತೀತತೆಯ ತಾತ್ವಿಕ ನೆಲೆಗಳನ್ನು ಭದ್ರಪಡಿಸಲೆಂದೇ ಒಂದು ಸಂವಿಧಾನವನ್ನೂ ಜನತೆಯ ಮಡಿಲಲ್ಲಿರಿಸಿ ಹೋಗಿದ್ದಾರೆ.
ಆಶಯಗಳ ಸಾಕಾರ
ನಾವು ಇಂದು ಹೆಮ್ಮೆಯಿಂದ ನೆನೆಯುವ ಇದೇ ಸ್ವಾತಂತ್ರ್ಯ ಸಂಗ್ರಾಮಿಗಳ ಆಶಯಗಳನ್ನು ಸಂಪೂರ್ಣವಾಗಿ ಸಾಕಾರಗೊಳಿಸಲು ಸಾಧ್ಯವಾಗದೆ ಹೋದರೂ, ಆ ಹಾದಿಯಲ್ಲಿ ಸಾಗುತ್ತಿದ್ದೇವೆಯೇ ಎಂಬ ಸಂಕೀರ್ಣ ಪ್ರಶ್ನೆಯೇ ನಮ್ಮೊಳಗಿನ ಅಸೂಕ್ಷ್ಮತೆಗಳನ್ನು ಜಾಗೃತಗೊಳಿಸಬೇಕಿದೆ. ಲಿಖಿತ ಚರಿತ್ರೆಯ ಪುಟಗಳಲ್ಲಿ ನಮಗೆ ಕಾಣಸಿಗುವ ಮಹಾತ್ಮ ಫುಲೆ-ರವೀಂದ್ರನಾಥ ಠಾಗೂರರಿಂದ ಗಾಂಧಿ-ಅಂಬೇಡ್ಕರ್‌ವರೆಗಿನ ದಾರ್ಶನಿಕರ ಹೊರತಾಗಿಯೂ ಅನೇಕ ಮಹನೀಯರು ಸ್ವತಂತ್ರ ಭಾರತ ನಡೆಯಬೇಕಾದ ಹಾದಿಗೆ ತಮ್ಮದೇ ನಿರ್ದಿಷ್ಟ ತಾತ್ವಿಕ, ಸೈದ್ಧಾಂತಿಕ ಹಾಸುಗಲ್ಲುಗಳನ್ನು ಹರಡಿದ್ದಾರೆ. ದೇಶದ ಭೌಗೋಳಿಕ ಅಖಂಡತೆಗೂ ಆಂತರಿಕವಾಗಿ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಮಾನತೆಗೂ ಇರುವ ಸಂಬಂಧವನ್ನು ಅನೇಕಾನೇಕ ಮಹನೀಯರು, ಹೋರಾಟಗಾರರು, ಚಿಂತಕರು, ವಿದ್ವಾಂಸರು ನಮ್ಮ ನಡುವೆ ಅಕ್ಷರ ರೂಪದಲ್ಲೇ ಬಿಡಿಸಿಟ್ಟು ಹೋಗಿದ್ದಾರೆ.
ಈ ತಾತ್ವಿಕ ನೆಲೆಗಳನ್ನು ನಾವು ನಮ್ಮದೇ ಆದ ಸೈದ್ಧಾಂತಿಕ ವಿಚಾರ ಧಾರೆಗಳಿಗೆ ಅನುಗುಣವಾಗಿ ವ್ಯಾಖ್ಯಾನಿಸಿದರೂ, ಅಂತಿಮವಾಗಿ ಎಲ್ಲವೂ ತಲುಪುವುದು ಒಂದೇ ಗುರಿಯನ್ನು. ಅ ಗುರಿಯನ್ನು ಭಾರತೀಯ ಸಮಾಜದ ಬಹುಸಾಂಸ್ಕೃತಿಕ ಆಲೋಚನಾ ವಿಧಾನಗಳ ಮೂಸೆಯಲ್ಲಿ ನಾವು ಗುರುತಿಸಬೇಕಿದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯ ಕ್ರೂರ ಶ್ರೇಣೀಕರಣದ ಹೊರತಾಗಿಯೂ ನಮ್ಮ ನಡುವೆ ಇರುವ ಸೋದರತ್ವದ ಭಾವನೆಗಳಿಗೆ ಮೂಲ ಕಾರಣವೇ ಈ ಬಹುಸಾಂಸ್ಕೃತಿಕ ನಾಗರಿಕತೆಯಾಗಿದೆ. ಆದರೆ ಇನ್ನೆಷ್ಟು ವರ್ಷಗಳ ಕಾಲ ಶತಮಾನಗಳಷ್ಟು ಹಳೆಯದಾದ ಶ್ರೇಣೀಕೃತ ಭಾವನೆಗಳನ್ನು ಪೋಷಿಸಿಕೊಂಡಿರಲು ಸಾಧ್ಯ ? ಈ ಶ್ರೇಣೀಕರಣವು ಮನುಷ್ಯ ಹುಟ್ಟಿದ ಕ್ಷಣದಿಂದಲೇ ಸೃಷ್ಟಿಸುವ ಶ್ರೇಷ್ಠತೆಯ ಅಹಮಿಕೆ ಮತ್ತು ಪಾರಮ್ಯಗಳನ್ನು, ಅಸಮಾನತೆಯ ಧೋರಣೆಗಳನ್ನು, ಆಧಿಪತ್ಯದ ಚಿಂತನೆಗಳನ್ನು ಈ 76 ವರ್ಷಗಳಲ್ಲಿ ಹಿಮ್ಮೆಟ್ಟಿಸಲು ನಮ್ಮಿಂದ ಸಾಧ್ಯವಾಗಿದೆಯೇ ? ಆಗಿದೆ ಎಂದಾದರೆ ಇಂದಿಗೂ ಏಕೆ ಅಸ್ಪೃಶ್ಯತೆಯನ್ನು ಆಚರಿಸಲಾಗುತ್ತಿದೆ ? ಸಾಮಾಜಿಕ ಬಹಿಷ್ಕಾರವನ್ನು ಏಕೆ ಹೇರಲಾಗುತ್ತಿದೆ ? ಜಾತಿಯ ಗೆರೆ ಮೀರಿದವರ ಹತ್ಯೆ ಏಕೆ ನಡೆಯುತ್ತಿದೆ ? ಆಹಾರದ ಮೇಲೆ ದಾಳಿ ನಡೆಯುತ್ತಿದೆ ?
ಚಂದ್ರನ ಅಂಗಳಕ್ಕೆ ಕಾಲಿಟ್ಟಿರುವ ಭಾರತದ ಯಾವುದೋ ಒಂದು ಮೂಲೆಯಲ್ಲಿ ಮನೆಯಂಗಳದಲ್ಲಿ ಮನುಷ್ಯನನ್ನು ಮನುಷ್ಯ ಮುಟ್ಟಲೊಲ್ಲದ ಚಿಂತನೆ ಜೀವಂತವಾಗಿದೆ ಎಂದರೆ ನಾವು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕೇವಲ ಭೌತಿಕ ಬೆಳವಣಿಗೆಯ ಸಾಧನಗಳಾಗಿ ಮಾತ್ರವೇ ಬಳಸುತ್ತಿದ್ದೇವೆ ಎಂದೇ ಅರ್ಥವಲ್ಲವೇ ? ಭಾರತವು ಬ್ರಿಟೀಷರ ದಾಸ್ಯದಿಂದ ವಿಮೋಚನೆ ಪಡೆದ ಸಂದರ್ಭದಲ್ಲಿ ಬರಿದಾಗಿದ್ದ ದೇಶದ ಬೊಕ್ಕಸ ಇಂದು ಅನ್ಯ ದೇಶಗಳಿಗೆ ನೆರವಾಗುವಷ್ಟು ಮಟ್ಟಿಗೆ ತುಂಬಿ ಹರಿದಿದೆ ಎಂದರೆ ಈ ಸಮೃದ್ಧಿಯ ಹಿಂದೆ ಅಡಗಿರುವ ಚೈತನ್ಯ ಯಾವುದು ? ಒಂದೆಡೆ ವಿಜ್ಞಾನ, ತಂತ್ರಜ್ಞಾನ ಮತ್ತು ಆಧುನಿಕ ಉಪಕರಣಗಳಾದರೆ ಮತ್ತೊಂದೆಡೆ ಕೋಟ್ಯಂತರ ಪ್ರಜೆಗಳ ಮಾನವ ಸಂಪನ್ಮೂಲ ಮತ್ತು ಬೌದ್ಧಿಕ ಶಕ್ತಿ ಸಾಮರ್ಥ್ಯಗಳಲ್ಲವೇ ? 76 ವರ್ಷಗಳ ಈ ಸಾಧನೆಗೆ ನೆರವಾದ ಕೈಗಳನ್ನು, ಹೆಗಲುಗಳನ್ನು ಮತ್ತು ಮಿದುಳುಗಳನ್ನು ಜಾತಿ-ಮತ-ಧರ್ಮ-ಪಂಥ ಅಥವಾ ಪ್ರಾದೇಶಿಕ ಅಸ್ಮಿತೆಗಳಿಗೆ ಅನುಗುಣವಾಗಿ ವಿಂಗಡಿಸಲು ಸಾಧ್ಯವೇ ?
ಸಾಧ್ಯವಾಗದು ಎನ್ನುವುದೇ ಆದರೆ, ಈ ಚೈತನ್ಯದ ಹಿಂದೆ ಅಡಗಿರುವ ಬಹುಸಂಸ್ಕೃತಿಯ ಮೂಲ ನೆಲೆಗಳನ್ನು ನಾವು ಗೌರವಿಸಲೇಬೇಕಾಗುತ್ತದೆ. ಊಳಿಗಮಾನ್ಯ ಶೋಷಣೆ, ದಬ್ಬಾಳಿಕೆ, ಪಿತೃಪ್ರಧಾನತೆ, ಪುರುಷಾಧಿಪತ್ಯ ಮತ್ತು ಜಾತಿ ಶ್ರೇಷ್ಠತೆಯ ನೆಲೆಗಳೆಲ್ಲವೂ ಇಂದಿಗೂ ಜೀವಂತವಾಗಿದ್ದರೂ ಸಹ ಭಾರತ ತನ್ನ 76 ವರ್ಷಗಳ ಸ್ವತಂತ್ರ ನಡಿಗೆಯಲ್ಲಿ ಮುನ್ನಡೆ ಸಾಧಿಸಿರುವುದೇ ಆದರೆ ಅದರ ಶ್ರೇಯಸ್ಸು ಈ ದೇಶದ ಸಾಮಾನ್ಯ ಜನತೆಯ ಜಾತ್ಯತೀತ ಮನೋಭಾವ ಮತ್ತು ಸೋದರತ್ವದ ಮನಸ್ಥಿತಿಗೆ ಸಲ್ಲಬೇಕಲ್ಲವೇ ? ತಮ್ಮ ಮೇಲೆ ನಡೆಯುವ ಸಾಮಾಜಿಕ ಅನ್ಯಾಯಗಳನ್ನು, ಸಾಂಸ್ಕೃತಿಕ ದೌರ್ಜನ್ಯಗಳನ್ನು ಹಾಗೂ ತಾರತಮ್ಯಗಳನ್ನು ಸಹಿಸಿಕೊಂಡೇ ಈ ದೇಶದ ಮಹಿಳೆಯರು, ಅಸ್ಪೃಶ್ಯ ಸಮುದಾಯದ ಶ್ರಮಜೀವಿಗಳು, ಅಲ್ಪಸಂಖ್ಯಾತರು ಹಾಗೂ ಆದಿವಾಸಿಗಳು ದೇಶದ ಸಮೃದ್ಧಿಗೆ ತಮ್ಮ ತನುಮನಧನ ಅರ್ಪಿಸಿ ದೇಶ ಕಟ್ಟಿದ್ದಾರೆ. ಅದೇ ವೇಳೆ ತಮಗಾಗುವ/ಆಗಬಹುದಾದ/ಆಗುತ್ತಿರುವ ಅನ್ಯಾಯಗಳ ವಿರುದ್ಧ ಪ್ರತಿರೋಧದ ಧ್ವನಿಗಳನ್ನೂ ದಾಖಲಿಸುತ್ತಲೇ ಬಂದಿದ್ದಾರೆ. ಶ್ರೀಸಾಮಾನ್ಯರ ಈ ಪರಿಶ್ರಮವನ್ನು ಗೌರವಿಸುವುದೇ ಆದರೆ ನಾವು ಅವರ ಪ್ರತಿರೋಧದ ಧ್ವನಿಯನ್ನೂ ಸಂಯಮದಿಂದ ಆಲಿಸಬೇಕಾಗುತ್ತದೆ.
ಆಳ್ವಿಕೆಯ ಸದಾಶಯಗಳ ನಡುವೆ
ಈ ಸಂಯಮದ ಆಲಿಕೆ ಮತ್ತು ಸೌಜನ್ಯಯುತ ಮನ್ನಣೆಯ ಸದ್ಭಾವನೆಗಳೇ ಈ ದೇಶದ ಪ್ರತಿಯೊಂದು ಕಾಯ್ದೆ ಕಾನೂನುಗಳ ಬುನಾದಿಯಾಗಬೇಕಾಗುತ್ತದೆ. ಜನರಿಂದಲೇ ಚುನಾಯಿತರಾದ ಜನಪ್ರತಿನಿಧಿಗಳು ರೂಪಿಸುವ ಪ್ರತಿಯೊಂದು ಆಡಳಿತ ನೀತಿಯೂ ಸಮಸ್ತ ಭಾರತೀಯರು ಪ್ರತಿನಿಧಿಸುವ ಇದೇ ಸದ್ಭಾವನೆಗಳನ್ನು ಗೌರವಿಸಬೇಕಾಗುತ್ತದೆ. ಹಸಿವು, ಬಡತನ, ದಾರಿದ್ರ್ಯ, ಅಕ್ಷರಹೀನತೆ, ಅಪೌಷ್ಟಿಕತೆ, ವಸತಿಹೀನತೆ, ನಿರ್ಗತಿಕತೆ ಮತ್ತು ಮೇಲ್ಪದರ ಸಮಾಜದ ತೀವ್ರವಾದ ಶೋಷಣೆಯ ಹೊರತಾಗಿಯೂ ಭಾರತದ ದುಡಿಯುವ ಜನತೆ 76 ವರ್ಷಗಳ ಸ್ವಾತಂತ್ರ್ಯವನ್ನು ಸಾಕಾರಗೊಳಿಸಲು ಶ್ರಮಿಸುತ್ತಲೇ ಇದ್ದಾರೆ. ಈ ಕೋಟ್ಯಂತರ ಜನತೆಯ ಬೆವರಿನ ದುಡಿಮೆಯ ಒಂದು ಅತ್ಯುನ್ನತ ಹಂತವನ್ನು ನಮ್ಮ ಸಾರ್ವಜನಿಕ ಉದ್ದಿಮೆಗಳಲ್ಲಿ, ಆರ್ಥಿಕ-ಬೌದ್ಧಿಕ ಸಂಸ್ಥೆಗಳಲ್ಲಿ ಹಾಗೂ ಚಂದ್ರಯಾನದಂತಹ ವೈಜ್ಞಾನಿಕ ಮುನ್ನಡೆಯಲ್ಲಿ ನಾವು ಗುರುತಿಸಬಹುದಾಗಿದೆ. ಹಾಗೆ ನೋಡಿದರೆ ಚಂದ್ರಯಾನದ ನೌಕೆಯನ್ನು ಅರ್ಪಿಸಬೇಕಿರುವುದು ಇದೇ ದುಡಿಯುವ ಕೈಗಳಿಗೆ ಅಲ್ಲವೇ ?
ಈ ವೈಚಾರಿಕತೆಯ ನೆಲೆಯಲ್ಲೇ ನಾವು 76 ವರ್ಷದ ನಡಿಗೆಯ ಪ್ರತಿ ಹೆಜ್ಜೆಯನ್ನೂ ಗುರುತಿಸಬೇಕಿದೆ. ಇನ್ನು ಮುಂದಿನ 25 ವರ್ಷಗಳಲ್ಲಿ ಭಾರತ ವಿಶ್ವ ಭೂಪಟದಲ್ಲಿ ಒಂದು ಅಗ್ರಮಾನ್ಯ ರಾಷ್ಟ್ರವಾಗಿ ಹೊರಹೊಮ್ಮಬೇಕಾದರೆ ಗತಕಾಲದ ನಡಿಗೆಯ ಪ್ರತಿಯೊಂದು ಮೈಲಿಗಲ್ಲುಗಳನ್ನೂ ಗಮನಿಸುತ್ತಲೇ ಮುನ್ನಡೆಯಬೇಕಲ್ಲವೇ ? ಚಂದ್ರಯಾನದ ರೂವಾರಿ ಸಂಸ್ಥೆಯಾದ ಇಸ್ರೋ ಸಂಸ್ಥೆಯ ಆವರಣದಲ್ಲಿ ನಿಂತು ದೇಶವು 70 ವರ್ಷಗಳಲ್ಲಿ ಏನೂ ಸಾಧಿಸಿರಲಿಲ್ಲ ಎಂದು ಹೇಳುವುದು ಅಸಂಬದ್ಧ ಎನಿಸುವುದಿಲ್ಲವೇ ? ಈ ಏಳೂವರೆ ದಶಕಗಳಲ್ಲಿ ಭಾರತ ಏನೇನನ್ನು ಗೆದ್ದಿದೆ ಎಂದು ಯೋಚಿಸಿದಾಗ ನಮಗೆ ಕೇವಲ ಎರಡು ಮೂರು ಯುದ್ಧಗಳು ನೆನಪಾಗಬಹುದು. ಆದರೆ ವಿಸ್ಮೃತಿಯ ಲೋಕದಿಂದ ಹೊರಬಂದು ನೋಡಿದಾಗ ನಾವು ಹಸಿವು, ಕ್ಷಾಮ, ಬರಗಾಲ, ಪ್ರವಾಹ, ಅನಕ್ಷರತೆ, ಬಡತನ ಇವೆಲ್ಲವನ್ನೂ ಗೆದ್ದಿರುವುದು ಕಾಣಲೇಬೇಕಲ್ಲವೇ ?
ಈ ಗೆಲುವಿನ ಸಂಭ್ರಮದಲ್ಲೇ ಆತ್ಮಾವಲೋಕನ ಮಾಡಿಕೊಂಡಾಗ ನಾವು ಸೋತಿರುವುದೆಲ್ಲಿ ಎಂದೂ ಅರಿವಾಗಬೇಕಲ್ಲವೇ ? ಆಗ ನಮಗೆ ಮಹಿಳಾ ದೌರ್ಜನ್ಯ, ಅತ್ಯಾಚಾರಗಳು, ಮರ್ಯಾದೆಗೇಡು ಹತ್ಯೆ, ಅಸ್ಪೃಶ್ಯತೆ, ಜಾತಿ ತಾರತಮ್ಯ, ಮತಾಂಧತೆ, ಕೋಮುವಾದ, ದ್ವೇಷ-ಅಸೂಯೆ , ಜಾತಿ ಶ್ರೇಷ್ಠತೆ, ಪುರುಷಾಧಿಪತ್ಯ, ಪಿತೃಪ್ರಧಾನತೆ ಹಾಗೂ ಊಳಿಗಮಾನ್ಯ ಶೋಷಣೆಯ ವಿಭಿನ್ನ ಆಯಾಮಗಳು ಸಹಜವಾಗಿಯೇ ಎದುರಾಗುತ್ತವೆ. 76 ನೆಯ ಸ್ವಾತಂತ್ರ್ಯೋತ್ಸವದ ಸಂಭ್ರಮದ ನಡುವೆಯೇ ನಾವು ಗೆಲ್ಲಬೇಕಿರುವುದು ಈ ಅಪಸವ್ಯಗಳನ್ನು. ಹಿರೋಷಿಮಾ-ನಾಗಸಾಕಿಯ ವಿನಾಶಕ್ಕೆ ಕಾರಣವಾದ ಪರಮಾಣು ಬಾಂಬುಗಳಂತೆಯೇ ಈ ಸಾಮಾಜಿಕ ಅಪಸವ್ಯಗಳು ಬಹುತ್ವ ಭಾರತದ ಬುನಾದಿಯನ್ನು ಸಡಿಲಗೊಳಿಸುತ್ತವೆ. ಹಾಗಾಗಿ ಬ್ರಿಟೀಷ್ ವಸಾಹತು ಆಳ್ವಿಕೆಗೆ ಕ್ವಿಟ್ ಇಂಡಿಯಾ ಎಂದು ಹೇಳಿದಂತೆಯೇ ನಾವು ಈ ಅನಿಷ್ಟಗಳಿಗೂ ಕ್ವಿಟ್ ಇಂಡಿಯಾ ಎಂದು ಹೇಳುತ್ತಲೇ ಮನೆಮನೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಬೇಕಿದೆ. ನಾವು ಗೌರವದಿಂದ ವಂದಿಸುವ ತ್ರಿವರ್ಣ ಧ್ವಜದ ಮಧ್ಯೆ ಇರುವ ಅಶೋಕ ಚಕ್ರವೂ ಇದನ್ನೇ ಹೇಳುತ್ತದೆ ಅಲ್ಲವೇ ?
-೦-೦-೦-೦-೦-