ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಆಗುವುದಕ್ಕೆ ಸಕಲ ತಯಾರಿ ನಡೆಯುತ್ತಿದೆ. ಇನ್ನು ಒಂದೇ ದಿನ ಬಾಕಿ ಇರುವುದು, ಸೋಮವಾರ ಮಧ್ಯಾಹ್ನದ ವೇಳೆಗೆ ರಾಮ ಮಂದಿರ ಲೋಕಾರ್ಪಣೆ ಆಗಿರುತ್ತದೆ. ಲೋಕಾರ್ಪಣೆ ವೇಳೆ ಗೋಧ್ರಾ ರೀತಿಯ ಘಟನೆಗಳು ನಡೆಯಬಹುದು ಅನ್ನೋ ಆತಂಕ ಈ ಹಿಂದೆಯೇ ಮನೆ ಮಾಡಿತ್ತು. ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಕೂಡ ಅದನ್ನು ಹೇಳಿದ್ದರು. ಮಹರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆಯೂ ಅದನ್ನೇ ಹೇಳಿದ್ದರು. ಆದರೆ ಆ ರೀತಿಯ ಘಟನೆ ನಿಜವಾಗಲೂ ನಡೆಯುತ್ತಾ ಅನ್ನೋ ಪ್ರಶ್ನೆಯನ್ನು ಹುಟ್ಟು ಹಾಕಿದೆ ಸಿಎಂ ಸಿದ್ದರಾಮಯ್ಯ ಮಾಡಿರುವ ಎಕ್ಸ್ ಪೋಸ್ಟ್. ಆಗಿದ್ರೆ ರಾಜ್ಯದ ಗುಪ್ತಚರ ಇಲಾಖೆ ಕೊಟ್ಟಿರುವ ಮಾಹಿತಿ ಏನು..? ಸಿದ್ದರಾಮಯ್ಯ ಏನ್ ಹೇಳಿದ್ದಾರೆ ಅಂತಾ ನೋಡೋದಾದರೆ..

ಅಯೋಧ್ಯೆ ರಾಮಮಂದಿರದ ಪ್ರತಿಷ್ಠಾಪನಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಶಾಂತಿ-ಸುವ್ಯವಸ್ಥೆ ಕಾಪಾಡಬೇಕೆಂದು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಸಿಎಂ ಸಿದ್ದರಾಮಯ್ಯ, ಈಗಾಗಲೇ ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ಅಮಾಯಕ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಸುದ್ದಿಗಳು ಕಿವಿಗೆ ಬಿದ್ದ ತಕ್ಷಣ ಆತುರಕ್ಕೆ ಬಿದ್ದು ಆವೇಶಕ್ಕೆ ಒಳಗಾಗದೆ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು ಎಂದು ಜನತೆಗೆ ಕರೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕ ಪ್ರಸಂಗತನ ಮಾಡಬಾರದು ಎಂದು ರಾಜ್ಯದ ಜನತೆಯನ್ನು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ಕಾಂಗ್ರೆಸ್ ಸರ್ಕಾರ ಹೊಣೆಯಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಈ ಹೇಳಿಕೆಯಲ್ಲಿ ಶಾಂತಿ ಕಾಪಾಡಿಕೊಂಡು ಬರಬೇಕೆಂಬ ಸದಾಶಯಕ್ಕಿಂತ ಹೆಚ್ಚಾಗಿ ಬೆದರಿಕೆ ಮತ್ತು ಪ್ರಚೋದನೆಯ ದನಿ ಇದೆ ಎಂದಿರುವ ಸಿಎಂ, ಸರ್ಕಾರಕ್ಕೆ ಅದರ ಕರ್ತವ್ಯದ ಅರಿವಿದೆ. ತಪ್ಪು ನಡೆದರೆ ಕಾನೂನು ಅದರ ಕೆಲಸ ಮಾಡುತ್ತದೆ. ಬಿಜೆಪಿಯ ಕೆಲವು ಶಾಸಕರು, ಸಂಸದರು ಈಗಾಗಲೇ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ರಾಜ್ಯ ಸರ್ಕಾರ ಗಮನಿಸಿದೆ. ಇಂತಹವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರು ಕಠಿಣ ಕ್ರಮಗಳನ್ನು ಕೈಗೊಂಡರೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಸರ್ಕಾರಕ್ಕೆ ಸುಲಭವಾಗುತ್ತದೆ ಎಂದು ವಿಜಯೇಂದ್ರಗೆ ತಿರುಗೇಟು ನೀಡಿದ್ದಾರೆ.

ದೇವರು – ಧರ್ಮ – ಪೂಜೆ – ಆರಾಧನೆಗಳೆಲ್ಲ ವೈಯಕ್ತಿಕ ವಿಚಾರಗಳು. ಇದನ್ನು ವೈಯಕ್ತಿಕ ಮಟ್ಟದಲ್ಲಿಯೇ ಉಳಿಸಿಕೊಂಡರೆ ದೇವರು – ಧರ್ಮ ಎಲ್ಲರಿಗೂ ಗೌರವ ಮತ್ತು ಸಮಾಜಕ್ಕೂ ಕ್ಷೇಮ. ಇದು ಎಲ್ಲ ಧರ್ಮದ ಅನುಯಾಯಿಗಳಿಗೂ ಅನ್ವಯಿಸುತ್ತದೆ. ಪ್ರಚೋದನಾಕಾರಿ ಹೇಳಿಕೆ ನೀಡುವ ಬಿಜೆಪಿ ನಾಯಕರಿಗೆ ಎಕ್ಸ್ ಮೂಲಕ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ರಾಜ್ಯದಲ್ಲಿ ಹಿಂಸಾಚಾರ ನಡೆಸುವುದಕ್ಕೆ ಸಂಚು ನಡೆದಿದೆ, ಜಾಲತಾಣದಲ್ಲಿ ಯಾವುದೇ ರೀತಿಯ ಪೋಸ್ಟರ್ ಕಾಣಿಸಿದರೂ ಪ್ರಚೋದನೆಗೆ ಒಳಗಾಗಬೇಡಿ. ಕಾನೂನು ಕೈಗೆತ್ತಿಕೊಳ್ಳಬೇಡಿ. ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿ ಎಂದಿದ್ದಾರೆ. ಜೊತೆಗೆ ಬಿಜೆಪಿ ಪ್ರಚೋದನೆ ಮಾಡಲು ಸಿದ್ಧವಿದೆ ಎನ್ನುವುದನ್ನೂ ಹೇಳಿದ್ದಾರೆ. ಅಂದರೆ ಬಿಜೆಪಿ ಮುಸ್ಲಿಂ ಸಮುದಾಯವನ್ನು ಕೆಣಕುತ್ತದೆ ಎನ್ನುವುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.
ಕೃಷ್ಣಮಣಿ