ಅಸ್ಸಾಂಗಿರ ಬೋಹಾಗ್ ಬಿಹು ಹಬ್ಬವು ವರ್ಷದ ಆರಂಭವನ್ನಷ್ಟೇ ಅಲ್ಲದೆ ಬೆಳೆ ನಾಟಿ ಋತುವನ್ನು ಸಂಭ್ರಮದಿಂದ ಆಚೊರಿಸಲ್ಪಡುವ ವಿಶಿಷ್ಟ ಪರಿಸರದ ಹಬ್ಬವೂ ಹೌದು. ಇತರ ಹಬ್ಬಗಳಿಗಿಂತ ಭಿನ್ನವಾಗಿ, ಬಿಹು ವಸಂತ ಅಥವಾ ಬೋಹಾಗ್‌ನ ಆರಂಭವನ್ನು ಎಲ್ಲಾ ಧರ್ಮಗಳು ಮತ್ತು ಸಮುದಾಯಗಳಿಂದ ತಮ್ಮದೇ ಆದ ರೀತಿಯಲ್ಲಿ ಆಚರಿಸಲ್ಪಡುತ್ತದೆ.
ಬೋಹಾಗ್ ಬಿಹು ಫಲವತ್ತತೆಯ ಕಾಲ. ಒಣ ಭೂಮಿಯು ಮಳೆಯಿಂದ ತುಂಬಿ ಬೆಳೆಗಳು ಮತ್ತು ಸಸ್ಯವರ್ಗದಿಂದ ಸಮೃದ್ಧವಾಗುತ್ತದೆ. ಅಹೋಮ್ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಐತಿಹಾಸಿಕ ವೃತ್ತಾಂತಗಳು ಮತ್ತು ಹಸ್ತಪ್ರತಿಯಾದ ‘ದಿಯೋಬುರಂಜಿ’ ಯಲ್ಲೂ ಬೊಹಾಗ್ ಬಿಹುವನ್ನು ಎಲ್ಲಾ ರೀತಿಯ ಹೂವುಗಳು ಅರಳುವ ಸಮಯ ಎಂದು ಉಲ್ಲೇಖಿಸಲಾಗಿದೆ.
ಬಿಹು ಹಾಡುಗಳಲ್ಲಿ ವಸಂತ ಋತುವಿನ ಬಗ್ಗೆ ವ್ಯಾಪಕ ಉಲ್ಲೇಖಗಳು ಮತ್ತು ವಿವರಣೆಗಳಿರುತ್ತವೆ. ನಹೋರ್‌ನ ಹೂಬಿಡುವಿಕೆ, ಕಾಡು ಆರ್ಕಿಡ್‌ಗಳು, ವಸಂತಕಾಲದ ಗಾಳಿ, ಗಾಢವಾದ ಭಾರೀ ಮೋಡಗಳು, ಬೋರ್ಡೋಸಿಲಾ ಎಂದು ಕರೆಯಲ್ಪಡುವ ಕಾಡು ಬಿರುಗಾಳಿಯು ಈ ಹಾಡುಗಳಲ್ಲಿ ವಿವರಿಸಲ್ಪಡುತ್ತವೆ. ಈ ಹಾಡುಗಳಲ್ಲಿ ನಿರ್ಜೀವ, ಬಂಜರು ಸ್ಥಿತಿಯಿಂದ ಭೂಮಿ ಹೇಗೆ ಫಲವತ್ತತೆಯ ಕಡೆ ತಿರುಗುತ್ತವೆ ಎನ್ನುವುದನ್ನು ಅತ್ಯಂತ ಸುಂದರವಾಗಿ ಹೇಳಲಾಗುತ್ತವೆ.
ಬಿಹು ಹಾಡುಗಳಲ್ಲಿ ವೈವಿಧ್ಯಮಯ ಸಸ್ಯವರ್ಗದ ಉಲ್ಲೇಖಗಳೂ ಇರುತ್ತವೆ. ಅವುಗಳಲ್ಲಿ ನಹೋರ್, ಕೇತೆಕಿ, ಭೇಬೆಲಿ ಲೋಟ, ಮಧೋಯಿಮಲೋಟಿ ಸೇರಿವೆ. ಬಾಳೆ ಜಾತಿಗಳು ಮತ್ತು ಹುಲ್ಲುಗಳಾದ ಖಗೋರಿ, ಬಿರಿನಾ, ಕೀಯಾ-ಬಾನ್ ಗಳು ಹಾಡುಗಳಲ್ಲಿ ಅವುಗಳ ದೈನಂದಿನ ಬಳಕೆಯೊಂದಿಗೆ ಪ್ರಸ್ತಾಪವಾಗುತ್ತದೆ. ಬೋಹಾಗ್‌ನ ಮೊದಲ ದಿನದಂದು ಮಾಹ್ (ಕಪ್ಪು) ಮತ್ತು ಹಲೋದಿ (ಅರಿಶಿನ ಪೇಸ್ಟ್) ನೊಂದಿಗೆ ಸ್ನಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಸೂಕ್ಷ್ಮಜೀವಿಗಳನ್ನು ತೊಳೆಯುತ್ತದೆ ಮತ್ತು ಮುಂಬರುವ ವರ್ಷದಲ್ಲಿ ಅನಾರೋಗ್ಯದಿಂದ ರಕ್ಷಣೆ ನೀಡುತ್ತದೆ ಎನ್ನಲಾಗುತ್ತದೆ.
ಅಸ್ಸಾಮಿನ ಜೀವಾಳವಾಗಿರುವ ಕೃಷಿ ಕೇವಲ ಪ್ರಕೃತಿಯ ಶಕ್ತಿಗಳ ಮೇಲೆ ಮಾತ್ರ ಅವಲಂಬಿತವಾಗಿಲ್ಲ. ಖಾಲಿ ಭೂಮಿಯೊಳಗಿಂದ ಕಣ್ಣಿಗೆ ತಂಪೆರೆಯುವ ಹಸಿರು ಹೊಮ್ಮಬೇಕೆಂದರೆ ರೈತನ ಶ್ರಮವೂ ಅಷ್ಟೇ ಮುಖ್ಯ. ಹಾಗಾಗಿಯೇ ಈ ಹಬ್ಬದ ಆಚರಣೆಯನ್ನು ನಿರೂಪಿಸುವ ಫಲವತ್ತತೆಯ ಸಂಕೇತವು ಕೇವಲ ಪ್ರಕೃತಿಗೆ ಸೀಮಿತವಾಗಿರದೆ ಮನುಷ್ಯರನ್ನೂ ಒಳಗೊಂಡಿದೆ.

ಬಿಹು ನರ್ತಕರ ಭಂಗಿಗಳು, ವಿಶೇಷವಾಗಿ ಹುಡುಗರ ಭಂಗಿಯು ಸಂತಾನೋತ್ಪತ್ತಿಯನ್ನು ಸಂಕೇತಿಸುತ್ತದೆ ಎಂದು ಹೇಳುತ್ತಾರೆ ಪ್ರಮುಖ ಅಸ್ಸಾಮಿ ಕವಿ ಮತ್ತು ರಾಜಕಾರಣಿ ಹೆಮ್ ಬರುವಾ. ಬಿಹು ಹಾಡುಗಳು, ಡ್ರಮ್ಸ್ ಮತ್ತು ಎಮ್ಮೆ-ಕೊಂಬುಗಳ ಸಂಗೀತದೊಂದಿಗೆ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ತೀವ್ರಗೊಳಿಸುತ್ತವೆ. ಮತ್ತು ಬಿಹು ನೃತ್ಯ ರಂಗದಲ್ಲಿ ಜೀವನ ಸಂಗಾತಿಗಳು ಹೆಚ್ಚಾಗಿ ಕಂಡುಬರುತ್ತಾರೆ.
ಸಸ್ಯವರ್ಗದಂತೆಯೇ, ಬಿಹು ಪ್ರಾಣಿಗಳಿಗೂ ಪ್ರಾಮುಖ್ಯತೆಯನ್ನು ನೀಡುತ್ತದೆ. ಮಳೆ ಮತ್ತು ಕಾರ್ಮಿಕರ ಜೊತೆಗೆ ಜಾನುವಾರು ಶಕ್ತಿ ಕೂಡ ಕೃಷಿಗೆ ಅತ್ಯಗತ್ಯವಾಗಿದ್ದು ಹಬ್ಬದ ಮೊದಲ ದಿನವಾದ ‘ಗರು ಬಿಹು’ದಲ್ಲಿ ಜಾನುವಾರುಗಳಿಗೆ ಮೇವು ನೀಡಿ ಉಪಚರಿಸಲಾಗುತ್ತದೆ.
ಅಸ್ಸಾಮಿನ ಅತ್ಯಂತ ದೊಡ್ಡ ಬುಡಕಟ್ಟು ಜನಾಂಗವಾದ ಬೋಡೋಗಳು ಪ್ರತಿ ದಿನವನ್ನು ವಿಭಿನ್ನ ಪ್ರಾಣಿಗಳನ್ನು ಗೌರವಿಸಲು ಮೀಸಲಿಡುತ್ತಾರೆ. ಇದು ಮಾನವರು ಮತ್ತು ಪ್ರಾಣಿಗಳ ನಡುವಿನ ಸಹಜೀವನ ಮತ್ತು ಗೌರವದ ಸಂಬಂಧವನ್ನು ಸಂಕೇತಿಸುತ್ತದೆ.
ಕೋಯೆಲ್ ಮತ್ತು ಕಪ್ಪು ಕತ್ತಿನ ಕೊಕ್ಕರೆಗಳು ಬಿಹು ಹಾಡುಗಳಲ್ಲಿ ಉಲ್ಲೇಖ ಪಡೆಯುವ ಕೆಲವು ಪಕ್ಷಿಗಳಾದರೆ ಕ್ಸೋಲ್, ಕ್ಸಿಂಗಿ, ಬೊರಾಲಿ, ಎಲೆಂಗಾ, ಸಿಟಲ್ ಮುಂತಾದ ಮೀನುಗಳೂ ಸಹ ಹಾಡಿನಲ್ಲಿ ಸ್ಥಾನ ಪಡೆದುಕೊಂಡಿವೆ. ಅಂದರೆ ಪ್ರಕೃತಿಯ ಭಾಗವಾಗಿರುವ ಎಲ್ಲಾ ಜೀವಿಗಳನ್ನೂ ಬಿಹು ಹಾಡು ಒಳಗೊಳ್ಳುತ್ತದೆ.
ಆದರೆ ಬಿಹು ಹಾಡುಗಳು ಪ್ರಕೃತಿಯನ್ನು ಅದರ ಬಳಕೆಯ ಮೂಲಕ ನೋಡುವುದಿಲ್ಲ, ಬದಲಾಗಿ ಅದರ ಅಸ್ತಿತ್ವದ ಮೂಲಕ ನೋಡುತ್ತವೆ. ಪ್ರಕೃತಿಯು ಮನುಷ್ಯರಂತೆ ಹಾಡುಗಳಲ್ಲಿ ಜೀವಂತವಾಗಿದೆ ಮತ್ತು ಉಸಿರಾಡುತ್ತದೆ ಮತ್ತು ಹಬ್ಬಗಳ ಅವಿಭಾಜ್ಯ ಅಂಗವಾಗಿದೆ.
ಅಸ್ಸಾಮ್ ಕವಿ ಭೂಪೇನ್ ಹಜಾರಿಕಾ ಅವರು ತಮ್ಮ ಜನಪ್ರಿಯ ಬಿಹು ಗೀತೆ ಮೊದರೋರೆ ಫುಲ್ ಹೆನು (Modarore Phul Henu)ವಿನಲ್ಲಿ ಹೂವುಗಳನ್ನು ಪೂಜೆ ಅಥವಾ ಸಮಾರಂಭಗಳಲ್ಲಿ ಬಳಸುವುದಕ್ಕಿಂತ ಬೊಹಾಗ್‌ನಲ್ಲಿ ಪ್ರಕೃತಿಯನ್ನು ಬಣ್ಣದಿಂದ ಅಲಂಕರಿಸುವುದನ್ನು ನೋಡುವುದೇ ಚಂದ ಎನ್ನುತ್ತಾರೆ. ಇದು ಪ್ರಕೃತಿಯ ಭಾಗಗಳ ಉಪಯುಕ್ತತೆಯನ್ನು ಆರ್ಥಿಕ ಕಾರಣಗಳಿಂದ ಅಳೆಯುವ ಆಧುನಿಕ ಪರಿಕಲ್ಪನೆಯನ್ನು ಸಾರಾಸಗಟಾಗಿ ತಿರಸ್ಕರಿಸುತ್ತದೆ.
ಆದರೆ ಬಿಹುವಿನ ರೂಪ ಕಾಲಕಾಲಕ್ಕೆ ಬದಲಾಗುತ್ತಾ ಬಂದಿದೆ ಎನ್ನುವುದನ್ನು ನಾವು ಮರೆಯುವಂತಿಲ್ಲ. ತೆರೆದ ಮೈದಾನಗಳಲ್ಲಿ ಮರಗಳ ಕೆಳಗೆ ಸ್ವಾಭಾವಿಕವಾಗಿ ಆಚರಿಸಲಾಗುತ್ತಿದ್ದುದು ಈಗ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವೇದಿಕೆಗಳಲ್ಲಿ ಸಂಘಟಿತವಾಗಿ ಆಚರಿಸಲಾಗುತ್ತಿದೆ. ಆದರೆ ಈ ಬದಲಾವಣೆ ದಿಢೀರ್ ಆಗಿ ಸಂಭವಿಸಲಿಲ್ಲ ಎನ್ನುವುದು ಅನೇಕ ತಜ್ಞರ ವಾದ.
ಈ ಬಗ್ಗೆ ಮಾತನಾಡಿರುವ ಹೆಮ್ ಬರುವಾ ಊಳಿಗಮಾನ್ಯ ಸಮಾಜದ ಆಗಮನದೊಂದಿಗೆ, ರಾಜರು ಮತ್ತು ಶ್ರೀಮಂತರು ತಮ್ಮ ಆವರಣದಲ್ಲಿ ಬಿಹುವನ್ನು ಪ್ರದರ್ಶಿಸಲು ಪ್ರಾರಂಭಿಸಿದರು. ಇದು ಬಿಹು ನೃತ್ಯದ ಹೊಸ ರೂಪವಾದ ಹುಸೋರಿ ನೃತ್ಯ ಮತ್ತು ಬಿಹು ಆಚರಣೆಯ ಹೊಸ ರೂಪವಾದ ಮೊಂಚೋ ಬಿಹು ರಚನೆಗೆ ಕಾರಣವಾಗಿರಬಹುದು ಎನ್ನುತ್ತಾರೆ.
ಬಿಹುವಿನ ವ್ಯಾಪಾರೀಕರಣದ ಬಗ್ಗೆ ವಿಷಾದಿಸುವ ಹಲವರು ಹೆಚ್ಚು ಸಂಭಾವನೆ ಪಡೆಯುವ ಕಲಾವಿದರು ಸಾಮಾನ್ಯವಾಗಿ ಹುಸೋರಿ ಮತ್ತು ಬಿಹು ಗುಂಪುಗಳನ್ನು ಮರೆಮಾಡುತ್ತಾರೆ ಎನ್ನುತ್ತಾರೆ. ಆದರೆ ಪರಿಸರ, ಆರ್ಥಿಕ ಮತ್ತು ಸಾಮಾಜಿಕ ಸಂದರ್ಭಗಳಲ್ಲಿ ಹಾಡುವ ಹಾಡುಗಳ ಮೂಲಕ , ಪ್ರಕೃತಿಯ ರಾಗವನ್ನು ಗುನುಗುವ ಹಾಡುಗಳ ಮೂಲಕ ಬಿಹುವಿನ ಸಾರವು ಇತಿಹಾಸದುದ್ದಕ್ಕೂ ಜೀವಿಸುವಷ್ಟು ಸಶಕ್ತವಾಗಿರುವ ಒಂದು ಸಾಂಸ್ಕೃತಿಕ ಕೊಂಡಿ ಎನ್ನುವುದು ಮಾತ್ರ ಯಾರೂ ನಿರಾಕರಿಸಲಾಗದ ಸತ್ಯ.
ಇನ್ಪುಟ್ಸ್: ಸ್ಕ್ರೋಲ್. ಇನ್