ರಾಜಭವನದ ಗಾಜಿನ ಮನೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ಮೊದಲ ಸಚಿವ ಸಂಪುಟ ವಿಸ್ತರಣೆ ಮಾಡಲಾಗ್ತಿದೆ. ಸಂಪೂರ್ಣ ಸಂಪುಟ ವಿಸ್ತರಣೆ ಮಾಡಿದ್ದು, ಎಲ್ಲಾ ಸಚಿವರಿಗೂ ಸಿದ್ದರಾಮಯ್ಯ ಖಾತರ ಹಂಚಿಕೆ ಮಾಡುತ್ತಿದ್ದಾರೆ. ಇಂದು ಸಂಜೆಯೊಳಗಾಗಿಯೇ ಎಲ್ಲಾ ಸಚಿವರಿಗೂ ಖಾತೆ ಬಗ್ಗೆ ಸ್ಪಷ್ಟತೆ ಸಿಗಲಿದ್ದು, ಆ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಯಾವ ಸಚಿವರಿಗೆ ಯಾವ ಖಾತೆ ಸಿಗಲಿದೆ..?
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಸಿಎಂ ಸಚಿವ ಸಂಪುಟ ಕರೆಯಲಿದ್ದು, ನೂತನ ಸಚಿವರಿಗೆ ಖಾತೆ ಹಂಚಿಕೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲೇ ಮಾಹಿತಿ ನೀಡಲಿದ್ದು, ಸಂಜೆ ಬಳಿಕ ಸಂಪುಟ ಸಚಿವರಿಗೆ ಖಾತೆ ಹಂಚಿಕೆ ಮಾಡಿ ರಾಜ್ಯಪಾಲರಿಗೆ ಕಳುಹಿಸಲಾಗುತ್ತದೆ. ಪ್ರತಿಧ್ವನಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಲಿಂಗಾಯತ ನಾಯಕ ಎಂಬಿ ಪಾಟೀಲ್ ಅವರಿಗೆ ಬೃಹತ್ ಕೈಗಾರಿಕೆ ಖಾತೆ ಫಿಕ್ಸ್ ಆಗಿದೆ. ಇನ್ನುಳಿದಂತೆ ಸತೀಶ್ ಜಾರಕಿಹೊಳಿಗೆ ಲೋಕೋಪಯೋಗಿ ಖಾತೆ, ಡಾ ಜಿ ಪರಮೇಶ್ವರ್‌ಗೆ ಗೃಹ ಖಾತೆ, ಹೆಚ್.ಸಿ ಮಹದೇವಪ್ಪಗೆ ಆರೋಗ್ಯ ಖಾತೆ, ಕೆ.ಹೆಚ್ ಮುನಿಯಪ್ಪಗೆ ಕಂದಾಯ, ಎನ್ ಚಲುವರಾಯಸ್ವಾಮಿಗೆ ಸಾರಿಗೆ ಖಾತೆ ಸಿಗಲಿದೆ ಎನ್ನಲಾಗಿದೆ.
ಆಪ್ತರಿಗೆ ಒಳ್ಳೊಳ್ಳೆ ಖಾತೆ ಕೊಡ್ತಿರೋ ಸಿದ್ದರಾಮಯ್ಯ..
ಸಿದ್ದರಾಮಯ್ಯ ಪರಮಾಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಹೆಬ್ಬಾಳ ಶಾಸಕ ಬೈರತಿ ಸುರೇಶ್‌ಗೆ ಬಂಪರ್ ಲಾಟರಿ ಹೊಡೆದಿದ್ದು, ಗ್ರಾಮೀಣಾಭಿವೃದ್ಧಿ ಖಾತೆ ಸಿಗಲಿದೆ. ಇನ್ನು ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ, ನಾಗೇಂದ್ರ ಅವರಿಗೆ ಯುವಜನ ಮತ್ತು ಕ್ರೀಡಾ ಖಾತೆ, ಪಿರಿಯಾಪಟ್ಟಣದ ವೆಂಕಟೇಶ್‌ಗೆ ಪಶುಸಂಗೋಪನೆ, ಆರ್.ಬಿ ತಿಮ್ಮಾಪುರಗೆ ಅಬಕಾರಿ ಖಾತೆ ಸಿಗಲಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಪ್ರಮುಖ ಖಾತೆಗಳ ಮೇಲೆ ಡಿಕೆ ಶಿವಕುಮಾರ್ ಕಣ್ಣು..
ವಿದ್ಯುತ್ ಫ್ರೀ ಕೊಡುವುದಾಗಿ ಈಗಾಗಲೇ ಘೋಷಣೆ ಮಾಡಿರುವ ಕಾಂಗ್ರೆಸ್, ಇಂಧನ ಇಲಾಖೆಯನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ನೋಡಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಇಂಧನ ಅಷ್ಟೇ ಅಲ್ಲದೆ ಜಲಸಂಪನ್ಮೂಲ ಖಾತೆ ಸೇರಿದಂತೆ ಪ್ರಮುಖವಖಾತೆಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ ಎನ್ನಲಾಗ್ತಿದೆ. ಇನ್ನು ಸಿಎಂ ಸಿದ್ದರಾಮಯ್ಯ ಹಣಕಾಸು ಖಾತೆ ಮಾತ್ರ ನಿರ್ವಹಣೆ ಮಾಡಲಿದ್ದಾರೆ ಎನ್ನಲಾಗಿದೆ.
ಕೃಷ್ಣಮಣಿ