‘ಬೆಂಗಳೂರು ನಗರದಲ್ಲಿ 20 ಲಕ್ಷ ಆಸ್ತಿಗಳಿದ್ದು, ಅದರಲ್ಲಿ 18 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬರುತ್ತವೆ. ಈ ಪೈಕಿ ಪಾಲಿಕೆ ತಮ್ಮ ಅಧಿಕಾರಿಗಳ ತಪ್ಪಿನಿಂದ ಆಗಿರುವ ಅಚಾತುರ್ಯಕ್ಕೆ 78 ಸಾವಿರ ಆಸ್ತಿಗಳ ಮಾಲೀಕರಿಗೆ ತೆರಿಗೆ ಪಾವತಿ ಮಾಡಿಲ್ಲ ಎಂದು ಎರಡರಿಂದ ಮೂರು ಪಟ್ಟು ದುಬಾರಿ ದಂಡ ವಿಧಿಸಿದೆ. ಈ ಆಸ್ತಿ ಮಾಲೀಕರಿಂದ 120 ಕೋಟಿ ರೂ. ತೆರಿಗೆ ಬಾಕಿ ಬರಬೇಕಾಗಿದ್ದು, ಅದಕ್ಕೆ 240 ರೂ. ಕೋಟಿ ಬಡ್ಡಿ ಹಾಕಿದ್ದಾರೆ. ಆ ಮೂಲಕ ಪಾಲಿಕೆ ಅಧಿಕಾರಿಗಳು ತೆರಿಗೆ ಹೆಸರಿನಲ್ಲಿ ಮೀಟರ್ ಬಡ್ಡಿ ದಂಧೆ ನಡೆಸಲು ಮುಂದಾಗಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ಅವರು ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, ಬೆಂಗಳೂರು ಮಹಾನಗರ ಪಾಲಿಕೆ ಜನರ ಮೇಲೆ ಅವೈಜ್ಞಾನಿಕ ರೀತಿಯಲ್ಲಿ ತೆರಿಗೆ ಹಾಕುತ್ತಿದೆ. ಅಧಿಕಾರಿಗಳು ಐದು ವರ್ಷಗಳ ಹಿಂದೆ ವಲಯ ವಿಂಗಡಣೆಯನ್ನು ಸರಿಯಾಗಿ ಮಾಡದೇ, ಜನರಲ್ಲಿ ಗೊಂದಲ ಮೂಡಿಸಿದೆ. ಅಧಿಕಾರಿಗಳು ನಿಗದಿ ಮಾಡಿದ ವಲಯದಲ್ಲಿ ತೆರಿಗೆ ಪಾವತಿಸಿದ್ದಾರೆ. ಆದರೆ ಈಗ ಅಧಿಕಾರಿಗಳು ನೀವು ಬೇರೆ ವಲಯಕ್ಕೆ ಅನ್ವಯವಾಗುವಂತೆ ತೆರಿಗೆ ಪಾವತಿ ಮಾಡುವಂತೆ ನೋಟೀಸ್ ಜಾರಿ ಮಾಡಿದ್ದಾರೆ. ಅಧಿಕಾರಿಗಳಿಗೆ ಆಡಳಿತ ವಿಚಾರದಲ್ಲಿ ಮೇಯರ್ ಅವರ ಅಧಿಕಾರವನ್ನು ನೀಡಿರಬಹುದು. ಆದರೆ ತೆರಿಗೆ ಹೆಚ್ಚಳ ವಿಚಾರದಲ್ಲಿ ಇದು ಮುಖ್ಯಮಂತ್ರಿಗಳ ಗಮನಕ್ಕೆ ಬರದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ.
ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್ ಯಡಿಯೂರಪ್ಪ ಅವರ ಗಮನಕ್ಕೆ ಈ ವಿಚಾರ ಬಂದಿರುತ್ತದೆ. ಹೀಗಾಗಿ ಈ ಮೀಟರ್ ಬಡ್ಡಿ ವ್ಯವಹಾರ ದಂಧೆಗೆ ಬಿಜೆಪಿ ಸರ್ಕಾರವೇ ಕಾರಣವಾಗಿದೆ. ಪಾಲಿಕೆ ಮೊದಲು ಈ ಬಡ್ಡಿ ದಂಧೆಯನ್ನು ನಿಲ್ಲಿಸಬೇಕು. ಪಾಲಿಕೆ ಅಧಿಕಾರಿಗಳು 2016ರಲ್ಲಿ ಸರಿಯಾಗಿ ವಲಯ ವರ್ಗಿಕರಣ ಮಾಡಿದ್ದರೆ ಜನರು ಅದೇ ವಲಯದಲ್ಲಿ ತೆರಿಗೆ ಕಟ್ಟುತ್ತಿದ್ದರು. ಆದರೆ ಇಂದು ಯಾವುದೇ ತಪ್ಪು ಮಾಡದ ಜನರಿಗೆ ಈ ರೀತಿಯಾಗಿ ಮೂರು ಪಟ್ಟು ತೆರಿಗೆ ಕಟ್ಟುವಂತೆ ನೋಟೀಸ್ ಜಾರಿ ಮಾಡಿರುವುದು ಸರಿಯಲ್ಲ. ಕೂಡಲೇ ಈ ನಿರ್ಧಾರವನ್ನು ಅಧಿಕಾರಿಗಳು ಹಿಂಪಡೆಯಬೇಕು. ಈ ನಿರ್ಧಾರ ಹಿಂಪಡೆಯದಿದ್ದರೆ ಕಾಂಗ್ರೆಸ್ ಪಕ್ಷದಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಆಗ್ರಹಿಸಿದ್ದಾರೆ.
‘ಅಧಿಕಾರಿಗಳು ಈ ಹಿಂದೆ ಜಾರಿಯಲ್ಲಿದ್ದ ಕಾಯ್ದೆ ಆಧಾರವಾಗಿ ಜನರಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಹಳೇ ಕಾಯ್ದೆಯಲ್ಲಿ ನೋಟೀಸ್ ಜಾರಿ ಮಾಡಲು ಕೇವಲ 3 ವರ್ಷಗಳ ಕಾಲಾವಕಾಶವಿದೆ. 3 ವರ್ಷಗಳ ಒಳಗಾಗಿ ಅವರು ನೋಟೀಸ್ ನೀಡಬೇಕಾಗಿತ್ತು. ಆದರೆ ನೀಡಿಲ್ಲ. ನೂತನ ಕಾಯ್ದೆಯಲ್ಲಿ ಇದನ್ನು ಐದು ವರ್ಷಗಳಿಗೆ ವಿಸ್ತರಿಸಲಾಗಿದೆಯಾದರೂ, ಹಳೇಯ ಕಾಯ್ದೆ ಆಧಾರದ ಮೇಲೆ ನೋಟೀಸ್ ಅನ್ನು ನೀಡಲಾಗಿದೆ. ಪಾಲಿಕೆ ಅಧಿಕಾರಿಗಳ ಈ ನಿರ್ಧಾರ ಮಹಾ ಅಪರಾಧವಾಗಿದೆ’ ಎಂದು ಎಚ್ಚರಿಕೆ ನೀಡಿದ್ದಾರೆ.
‘ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ಪಾಲಿಕೆಯಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆಗ ಮೊದಲ ಬಾರಿಗೆ ಭ್ರಷ್ಟಾಚಾರ ನಿಯಂತ್ರಿಸಲು ಸ್ವಯಂ ಘೋಷಣಾ ಆಸ್ತಿ ತೆರಿಗೆ ಪದ್ಧತಿ ಜಾರಿಗೊಳಿಸಲಾಗಿತ್ತು. ಆಗ ಬೆಂಗಳೂರು ನಗರ ಪ್ರದೇಶವನ್ನು ತೆರಿಗೆ ಸಂಗ್ರಹಿಸಲು ಎ,ಬಿ,ಸಿ,ಡಿ,ಇ ಹಾಗೂ ಎಫ್ ವಲಯಗಳನ್ನಾಗಿ ವಿಂಗಡಿಸಲಾಗಿತ್ತು. 2016ರಲ್ಲಿ ಪಾಲಿಕೆಯು ಆಸ್ತಿ ತೆರಿಗೆ ಪರಿಷ್ಕರಿಸಿ ಯೂನಿಟ್ ದರಗಳನ್ನು ವಸತಿಗೆ ಶೇ.20ರಷ್ಟು ಹಾಗೂ ವಸತಿಯೇತರಕ್ಕೆ ಶೇ.25ರಷ್ಟು ಹೆಚ್ಚಳ ಮಾಡಿತ್ತು. ಆರಂಭದಲ್ಲಿ ಈ ತೆರಿಗೆ ಪಾವತಿ ಮಾಡುವ ತಂತ್ರಾಂಶಗಳಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಇದನ್ನು ಸರಿಪಡಿಸಲು ಅಲೇಕ ದಿನಗಳ ಸಮಯ ತೆಗೆದುಕೊಳ್ಳಲಾಯಿತು.
ಇದರಿಂದಾಗಿ 2016-17ನೇ ಸಸಾಲಿನಲ್ಲಿ ಕಡಿಮೆ ಆಸ್ತಿ ತೆರಿಗೆ ಮಾಡುವ ಮಾಲೀಕರು 2017-18ನೇ ಸಾಲಿನಲ್ಲಿ ಯಾವುದೇ ದಂಡ ಅಥವಾ ಬಡ್ಡಿ ಅಲ್ಲದೇ ತೆರಿಗೆ ಪಾವತಿ ಮಾಡಿರುತ್ತಾರೆ. ಆಸ್ತಿ ಮಾಲೀಕರು ತಮ್ಮ ವಲಯ ಗುರುತಿಸಲು ತೊಂದರೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳ ನೆರವನ್ನು ಪಡೆದು ಆಸ್ತಿ ತೆರಿಗೆ ಪಾವತಿ ಮಾಡಿರುತ್ತಾರೆ. ಈ ವೇಳೆ ಅಧಿಕಾರಿಗಳು ಮಾಡಿರುವ ತಪ್ಪಿನಿಂದಾಗಿ ತೆರಿಗೆ ಸಂಗ್ರಹದಲ್ಲಿ 120 ಕೋಟಿಯಷ್ಟು ವ್ಯತ್ಯಾಸ ಕಂಡು ಬಂದಿದೆ. ಕಳೆದ ಐದು ವರ್ಷಗಳಲ್ಲಿ ತಂತ್ರಾಂಶವನ್ನು ಸರಿಪಡಿಸಿಕೊಳ್ಳದ ಪಾಲಿಕೆ ಅಧಿಕಾರಿಗಳು 2021ರಲ್ಲಿ ತಂತ್ರಾಂಶ ಸರಿಪಡಿಸಿಕೊಂಡು ಈಗ ಕಡಿಮೆ ಆಸ್ತಿ ತೆರಿಗೆ ಪಾವತಿ ಮಾಡಿದವರಿಗೆ ಬಾಕಿ ತೆರಿಗೆ ಪಾವತಿ ಮಾಡುವುದರ ಜತೆಗೆ ಈ ಅವಧಿಗೆ ಮೂರುಪಟ್ಟು ಬಡ್ಡಿಯನ್ನು ವಿಧಿಸಿರುವುದು ಖಂಡನೀಯ’ ಎಂದು ಕಿಡಿಕಾರಿದ್ದಾರೆ.