ಮುಡಾ ಕೇಸ್ ವಿಚಾರವಾಗಿ ರಾಜ್ಯಪಾಲರ ಆದೇಶ ಮತ್ತು ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಮಾತನಾಡಿ, ಏಕಸದಸ್ಯ ಪೀಠದ ತೀರ್ಪನ್ನ ನಾವು ಒಪ್ಪಲ್ಲ. ಇದನ್ನ ಪ್ರಶ್ನಿಸಿಯೇ ನಾವು ಮೇಲ್ಮನವಿ ಹಾಕಿದ್ದೇವೆ. ನಾನು 28 ವರ್ಷದಿಂದ ವಕೀಲನಾಗಿ ಕೆಲಸ ಮಾಡಿದ್ದೇನೆ. ಎಲ್ಲಿ ಮನಿ ಲಾಂಡ್ರಿಂಗ್ ಆಗಿದೆ ಹೇಳಿ..? ಎಂದು ಪ್ರಶ್ನಿಸಿದ್ದಾರೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳ ನಡೆ ನೋಡಿದ್ರೆ ನನಗೆ ವಿದ್ಯೆನೇ ಮರೆತು ಹೋಗ್ತಿದೆ. ಈ ಪ್ರಕರಣದಲ್ಲಿ ಇಡಿ ಏಕಾಏಕಿ ಎಂಟ್ರಿ ಆಗಿದ್ದೇಕೆ ಎಂದು ಕಿಡಿಕಾರಿದ್ದಾರೆ. ಎಫ್‌ಐಆರ್ ಆಗಿಲ್ಲ, ನೋಟಿಸ್ ಕೊಟ್ಟ ಐದೇ ದಿನಕ್ಕೆ ಎಂಟ್ರಿ ಎಂಟ್ರಿ ಆಗುತ್ತೆ ಎಂದು ವ್ಯಂಗ್ಯವಾಡಿದ್ದಾರೆ.
ಕೋರ್ಟ್ ಆದೇಶ ದೋಷಪೂರಿತ ಅಂತ ನಾವು ಆರೋಪ ಮಾಡಲ್ಲ, ಆದರೆ ಸರಿಯಾಗಿ ಕಾನೂನು ಪಾಲನೆ ಮಾಡಿಲ್ಲ. ನ್ಯಾಯಾಮೂರ್ತಿಗಳಿಂದಲೂ ತಪ್ಪುಗಳಾಗುತ್ತವೆ. ಹೀಗಾಗಿ ನಾವು ಏಕಸದಸ್ಯ ಪೀಠದ ತೀರ್ಪು ಒಪ್ತಿಲ್ಲ. ಅದಕ್ಕೆ ದ್ವಿಸದಸ್ಯ ಪೀಠವಿದೆ. ಹೀಗಾಗಿ ನಾವು ಮೇಲ್ಮನವಿ ಸಲ್ಲಿಸಿದ್ದೇವೆ. 80 ವರ್ಷದ ದೇವರಾಜ್ ಮನೆ ಸರ್ಚ್ ಮಾಡ್ತಾರೆ. ಒಬ್ಬ ದಲಿತನ ಮನೆ ಮೇಲೆ ರೇಡ್ ಮಾಡ್ತಾರೆ, 2004 ರಲ್ಲಿ ದೇವರಾಜು ಮಾರಾಟ ಮಾಡಿದ್ದಾರೆ. ಇಲ್ಲಿಯವರೆಗೆ 20 ವರ್ಷ ಮುಗಿದು ಹೋಗಿದೆ. ಈಗ ಇವರೆಲ್ಲರ ಕಣ್ಣಿಗೆ ಬಿತ್ತಾ..? ಎಂದು ಪ್ರಶ್ನಿಸಿದ್ದಾರೆ.
ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಧ್ಯಪ್ರವೇಶ ಮಾಡಿರುವುದನ್ನು ನಾವು ಪ್ರಶ್ನೆ ಮಾಡಲ್ಲ. ದೇವರಾಜ್ ಬೇಕಾದರೆ ಇಡಿ ಎಂಟ್ರಿಯನ್ನು ಪ್ರಶ್ನೆ ಮಾಡಿ ನ್ಯಾಯಾಲಯಕ್ಕೆ ಹೋಗಬಹುದು ಎಂದು ಸಲಹೆ ನೀಡಿದ್ದಾರೆ. ಬೇರೆ ಬೇರೆ ಸಂಸ್ಥೆಗಳು ತನಿಖೆ ನಡೆಸ್ತಿವೆ. ಇವರು ಯಾವ ದಾಖಲೆ ಸಂಗ್ರಹಕ್ಕೆ ಹೊರಟಿದ್ದಾರೆ..? ಎಲ್ಲ ದಾಖಲೆಗಳು ನ್ಯಾಯಾಲಯದ ಮುಂದಿದೆ. ವಾಲ್ಮೀಕಿ ಹಗರಣದಲ್ಲಿ ಅವರಿಗೆ ಲಾಭ ಆಗಲಿಲ್ಲ, ಹೀಗಾಗಿ ಮುಡಾ ಕೇಸ್‌ಗೆ ಬಂದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಮೊನ್ನೆ ನಾಗೇಂದ್ರ ಏನು ಹೇಳಿದ್ರು..?ತಮ್ಮನ್ನ ಬಲವಂತ ಮಾಡಿದ್ರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹೆಸರು ಹೇಳಿ ಅಂತ ಹೇಳಿದ್ರು ಎಂದಿದ್ದಾರೆ. ಇದಕ್ಕಿತ ಇಡಿಗೆ ಏನು ಸಾಕ್ಷಿ ಬೇಕು..? ಮುಖ್ಯಮಂತ್ರಿಗಳ ಹೆಸರು ಹೇಳಿ ಅಂದ್ರೆ ಹೇಗೆ..? ಇಡಿನಲ್ಲಿ ಎಫ್ ಐಆರ್ ಇಲ್ಲ, ಯಾರೋ ಒಬ್ಬರು ಹೆಸರು ಹೇಳಿದ್ರೆ ಅವರ ಮೇಲೆ ತನಿಖೆಗೆ ಹೋಗಬಹುದು. ಅದನ್ನ ಮುಂದಿಟ್ಟುಕೊಂಡು ತನಿಖೆ ಮಾಡಬಹುದು. ಆ ಕಾರಣಕ್ಕೆ ಇಡಿಯವರು ಹೀಗೆ ಮಾಡಿದ್ದಾರೆ. ಅಬಿಷೇಕ್ ಮನುಸಿಂಘ್ವಿ ಉತ್ತಮ ನ್ಯಾಯವಾದಿ, ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರು. ದೊಡ್ಡ ದೊಡ್ಡ ಪ್ರಕರಣದಲ್ಲಿ ಅವರೇ ವಾದ ಮಾಡಿದ್ದಾರೆ. ಮೇಲ್ಮನವಿಯನ್ನೂ ಸಿಂಘ್ವಿಯವರೇ ವಾದಿಸ್ತಾರೆ ಎಂದಿದ್ದಾರೆ.