ಕಳೆದ ಎರಡು ವಾರಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿಗಳು ೧೧ ನಾಗರಿಕರನ್ನು, ೯ ಸೇನಾ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದಾರೆ. ಹತ್ಯೆಗೊಳಗಾದವರಲ್ಲಿ ಹಿಂದೂಗಳೇ ಹೆಚ್ಚಾಗಿದ್ದು ಓರ್ವ ಸಿಖ್ ಮತ್ತು ಮುಸ್ಲಿಂ ವ್ಯಕ್ತಿಗಳು ಬಲಿಯಾಗಿದ್ದಾರೆ. ಹತ್ಯೆಗೊಳಗಾದ ಹಿಂದೂಗಳ ಪೈಕಿ ಕಾಶ್ಮೀರದ ಪಂಡಿತರು ಮತ್ತು ವಲಸೆ ಕಾರ್ಮಿಕರೂ ಸೇರಿದ್ದಾರೆ.
ಈ ಹತ್ಯೆಗಳ ತಕ್ಷಣದ ಪರಿಣಾಮ ಎಂದರೆ, ೨೦೦೬ರಲ್ಲಿ ಅಂದಿನ ಪ್ರಧಾನಮಂತ್ರಿಗಳು ನೀಡಿದ್ದ ಭರವಸೆಯನ್ನು ನಂಬಿ ಕಾಶ್ಮೀರಕ್ಕೆ ಮರಳಿ ಬಂದಿದ್ದ ಪಂಡಿತರು ಪುನಃ ವಲಸೆ ಹೋಗಲಾರಂಭಿಸಿದ್ದಾರೆ. ಕಾಶ್ಮೀರ ಕಣಿವೆಗೆ ಹಿಂದಿರುಗುವ ಪಂಡಿತ ಸಮುದಾಯದವರಿಗೆ ನೌಕರಿ ಒದಗಿಸಿ ಸೂಕ್ತ ಪುನರ್ವಸತಿ ಸೌಲಭ್ಯ ಒದಗಿಸುವ ಅಂದಿನ ಸರ್ಕಾರದ ಭರವಸೆಯ ಯೋಜನೆಯನ್ನು ನಂಬಿ ಬಂದಿದ್ದ ಪಂಡಿತರು ಈಗ ಪುನಃ ಹೊರಹೋಗಲಾರಂಭಿಸಿದ್ದಾರೆ. ಕಾಶ್ಮೀರಿ ಪಂಡಿತರ ಸಂಘಟನೆಗಳ ಮಾಹಿತಿಯ ಪ್ರಕಾರ . ಕಾಶ್ಮೀರಕ್ಕೆ ಹಿಂದಿರುಗಿದ್ದ ಮೂರನೆ ಒಂದರಷ್ಟು ಪಂಡಿತರು ಪುನಃ ತೊರೆದಿದ್ದಾರೆ. ಉಗ್ರಗಾಮಿಗಳ ದಂಗೆಯ ನಡುವೆಯೂ ಇಲ್ಲಿಯೇ ಉಳಿದಿದ್ದ ೮೦೦ಕ್ಕೂ ಹೆಚ್ಚು ಪಂಡಿತರ ಕುಟುಂಬಗಳೂ ಸಹ ಈಗ ಕಾಶ್ಮೀರವನ್ನು ತೊರೆಯಲು ನಿರ್ಧರಿಸಿವೆ. ಕಾಶ್ಮೀರದ ರಾಜಕೀಯ ಪಕ್ಷಗಳು, ನಾಗರಿಕ ಸಮಾಜ ಮತ್ತು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಆಡಳಿತವು , ಪಂಡಿತರಿಗೆ ಕಣಿವೆಯನ್ನು ತೊರೆದು ಹೋಗದಂತೆ ಮನವಿ ಮಾಡುತ್ತಿದ್ದರೂ, ಇತ್ತೀಚಿನ ಹತ್ಯೆಗಳು ಸೃಷ್ಟಿಸಿರುವ ಅನಿಶ್ಚಿತತೆ ಪಂಡಿತ ಸಮುದಾಯವನ್ನು ಭೀತಿಗೊಳಪಡಿಸಿದೆ.
ವಲಸೆ ಕಾರ್ಮಿಕರ ಬವಣೆ ಇನ್ನೂ ಗಂಭೀರವಾಗಿದೆ. ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ಕಾಶ್ಮೀರವನ್ನು ತೊರೆದು ತಮ್ಮ ಸ್ವಗ್ರಾಮಗಳಿಗೆ ಹಿಂದಿರುಗುತ್ತಿದ್ದಾರೆ. ಕೂಡಲೇ ಹಿಂದಿರುಗಲಾರದೆ ಇರುವ ವಲಸೆ ಕಾರ್ಮಿಕರಿಗೆ ಪೊಲೀಸ್ ಠಾಣೆಗಳಲ್ಲಿ ಮತ್ತು ಸುರಕ್ಷಿತ ಶಿಬಿರಗಳಲ್ಲಿ ಆಶ್ರಯ ನೀಡುವಂತೆ ಆಡಳಿತ ವ್ಯವಸ್ಥೆ ಆದೇಶಿಸಿದ್ದು, ನಿರಾಶ್ರಿತರಂತೆ ಪರಿಗಣಿಸಲು ಕೋರಲಾಗಿದೆ. ಬಹುಶಃ ಈ ಕಾರ್ಮಿಕರು ಹಿಂದಿರುಗಲು ಸೂಕ್ತ ವ್ಯವಸ್ಥೆ ಮಾಡುವ ಸಾಧ್ಯತೆಗಳೂ ಇವೆ. ಕಾಶ್ಮೀರವನ್ನು ತೊರೆಯಲು ಬಯಸುತ್ತಿರುವುದು ಈ ಎರಡೇ ಗುಂಪುಗಳಲ್ಲ. ಕಣಿವೆಯಲ್ಲಿ ಹೊಸ ಭೀತಿಯ ಅಲೆ ಸೃಷ್ಟಿಯಾಗಿದೆ. ಉಗ್ರಗಾಮಿಗಳು ಮತ್ತು ಸೇನಾ ಸಿಬ್ಬಂದಿಯ ಘರ್ಷಣೆಯ ನಡುವೆ ತಾವು ಸಿಲುಕಿಕೊಳ್ಳುವ ಭೀತಿ ಅನೇಕ ಕುಟುಂಬಗಳನ್ನು ಕಾಡುತ್ತಿದೆ. ಉಗ್ರಗಾಮಿಗಳಿಗೆ ನೆರವಾಗುತ್ತಿದ್ದಾರೆ ಎಂಬ ಅನುಮಾನದ ಮೇಲೆ ಪೊಲೀಸರು ಏಳುನೂರಕ್ಕೂ ಹೆಚ್ಚು ಸ್ಥಳೀಯರನ್ನು ಬಂಧಿಸಿದ್ದಾರೆ. ಏತನ್ಮಧ್ಯೆ ಗುಪ್ತಚರ ಇಲಾಖೆಯ ಮಾಹಿತಿಯ ಅನುಸಾರ ಉಗ್ರವಾದಿಗಳು ಈ ಬಾರಿ ಧಾರ್ಮಿಕ ನಾಯಕರನ್ನು, ಮಾಧ್ಯಮಗಳನ್ನು ಮತ್ತು ಪಂಚಾಯತ್ ಸದಸ್ಯರನ್ನು ಗುರಿಯಾಗಿರಿಸಿಕೊಂಡಿದ್ದಾರೆ.
ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆ ಆರಂಭವಾದ ನಂತರದಲ್ಲಿ ಪಾಕಿಸ್ತಾನ ಮೂಲಕ ಸಶಸ್ತç ಗುಂಪುಗಳು ಗಡಿಯಾಚೆಗಿನ ಉಗ್ರವಾದಿ ಚಟುವಟಿಕೆಗಳನ್ನು ಮತ್ತು ನುಸುಳುವಿಕೆಯನ್ನು ತೀವ್ರಗೊಳಿಸುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಇತ್ತೀಚಿನ ಘಟನೆಗಳನ್ನು ಗಮನಿಸಿದಾಗ ೧೯೯೦ರ ದಂಗೆಯ ಸಂದರ್ಭದಲ್ಲಿ ಅನುಸರಿಸಲಾದ ರಣತಂತ್ರಗಳನ್ನೇ ಈ ಸಶಸ್ತ್ರ ಗುಂಪುಗಳು ಅನುಸರಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಆ ಸಂದರ್ಭದಲ್ಲೂ ಸಹ ಉಗ್ರವಾದಿಗಳು ಕಾಶ್ಮೀರಿ ಪಂಡಿತರನ್ನೇ ಗುರಿಯಾಗಿಸಿ ತಮ್ಮ ದಾಳಿ ನಡೆಸಿದ್ದರು. ಇಸ್ಲಾಮಿಕ್ ಉಗ್ರವಾದಿಗಳು, ಕಾಶ್ಮೀರಿ ಪಂಡಿತರು ಹಿಂದೂಗಳು ಎಂಬ ಕಾರಣಕ್ಕೆ ಗುರಿಪಡಿಸಿದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಮುಸಲ್ಮಾನರನ್ನೂ ಗುರಿಯಾಗಿರಿಸಿ ಧಾಳಿ ನಡೆಸಿದ್ದವು.

ಧಾಳಿಯ ಉದ್ದೇಶ
ಈ ಧಾಳಿಗಳ ಉದ್ದೇಶ ಕಾಶ್ಮೀರ ಕಣಿವೆಯಲ್ಲಿ ಕೋಮು ಭಾವನೆಗಳನ್ನು ಕೆರಳಿಸುವ ಮೂಲಕ ಆಡಳಿತ ವ್ಯವಸ್ಥೆಯನ್ನು ಅಸ್ಥಿರಗೊಳಿಸುವುದೇ ಆಗಿತ್ತು. ಸಶಸ್ತç ಉಗ್ರವಾದಿಗಳ ಈ ಪ್ರಯತ್ನ ಭಾಗಶಃ ಯಶಸ್ವಿಯೂ ಆಗಿತ್ತು. ೨೦೦೦ದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಗಡಿಯಾಚೆಗಿನ ಉಗ್ರವಾದಿ ಗುಂಪುಗಳೊಡನೆ ಕದನವಿರಾಮ ಒಪ್ಪಂದವನ್ನು ಮಾಡಿಕೊಂಡ ನಂತರವೂ, ಈ ಒಪ್ಪಂದವನ್ನು ಉಲ್ಲಂಘಿಸಿದ ಉಗ್ರವಾದಿಗಳು ನೂರು ಬಿಹಾರಿ ವಲಸೆ ಕಾರ್ಮಿಕರನ್ನು ಹತ್ಯೆ ಮಾಡಿದ್ದರು. ಆದರೆ ಈ ಘಟನೆಯ ನಂತರ ಶಾಂತಿ ಸ್ಥಾಪಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿ, ೨೦೦೨ ರಿಂದ ೨೦೧೪ರ ಅವಧಿಯಲ್ಲಿ ಆಡಳಿತ ವ್ಯವಸ್ಥೆಯನ್ನು ಸುಗಮಗೊಳಿಸಲಾಗಿತ್ತು. ಈ ಅವಧಿಯಲ್ಲಿ ಪಂಡಿತರು ಮತ್ತು ವಲಸೆ ಕಾಶ್ಮೀರ ಕಣಿವೆಗೆ ಹಿಂದಿರುಗುವ ವಾತಾವರಣವನ್ನೂ ಸೃಷ್ಟಿಸಲಾಗಿತ್ತು. ಆದರೆ ಇದು ನಿರೀಕ್ಷಿತ ಮಟ್ಟದಲ್ಲಿ ಸಫಲವಾಗಲಿಲ್ಲ.
ಗಡಿಯಾಚೆಗಿನ ಮತ್ತು ಸ್ಥಳೀಯ ಉಗ್ರವಾದಿ ಗುಂಪುಗಳು ಕಾಶ್ಮೀರ ಕಣಿವೆಯನ್ನು ಮತ್ತೊಮ್ಮೆ ಕೋಮುವಾದದ ಸುಳಿಯಲ್ಲಿ ಸಿಲುಕಿಸಲು ಸಾಧ್ಯವೇ ಎನ್ನುವುದು ಚರ್ಚಾಸ್ಪದ ವಿಚಾರ. ಇದು ಒಕ್ಕೂಟ ಸರ್ಕಾರದ ಪ್ರತಿಕ್ರಿಯೆ ಮತ್ತು ಕೈಗೊಳ್ಳುವ ಕ್ರಮಗಳನ್ನು ಅವಲಂಬಿಸಿರುತ್ತದೆ. ಇಲ್ಲಿ ಎರಡು ಪ್ರಧಾನ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಮೊದಲನೆಯದಾಗಿ ಕಾಶ್ಮೀರದಲ್ಲಿನ ಅಲ್ಪಸಂಖ್ಯಾತರು ಮತ್ತು ಸಾರ್ವಜನಿಕರಲ್ಲಿ ಭರವಸೆಯನ್ನು ಮೂಡಿಸಬೇಕಾಗುತ್ತದೆ. ಎರಡನೆಯದಾಗಿ ಗಡಿಯಲ್ಲಿನ ಉಗ್ರಗಾಮಿ ಚಟುವಟಿಕೆಗಳನ್ನೂ ಸೇರಿದಂತೆ ಉಗ್ರವಾದಿಗಳ ದಂಗೆಯನ್ನು ಹತ್ತಿಕ್ಕುವ ರಣತಂತ್ರಗಳ ಬಗ್ಗೆ ಪುನರಾಲೋಚನೆ ಮಾಡಬೇಕಾಗುತ್ತದೆ.
ಕಾಶ್ಮೀರದಲ್ಲಿ ಪ್ರತಿಯೊಂದು ಸಂಘಟನೆ, ಗುಂಪು, ಸಮುದಾಯ ಮತ್ತು ಪಕ್ಷಗಳೂ ಈ ಹತ್ಯೆಗಳನ್ನು ಖಂಡಿಸಿರುವುದು ಸ್ವಾಗತಾರ್ಹ ಅಂಶ. ಮಸೀದಿಗಳಲ್ಲಿ ಈ ಹತ್ಯೆಗಳನ್ನು ಖಂಡಿಸಿ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡಲಾಗಿದೆ. ಕಾಶ್ಮೀರದ ಎಲ್ಲ ರಾಜಕೀಯ ಪಕ್ಷಗಳು ಈ ಉಗ್ರಗಾಮಿಗಳ ಕೃತ್ಯಗಳನ್ನು ಖಂಡಿಸಿವೆ. ಹುರಿಯತ್ ಸಂಘಟನೆ, ಮಿರ್ವಾಯಜ್ ಉಮರ್ ಫರೂಕ್ ಅವರನ್ನೂ ಒಳಗೊಂಡದಂತೆ ಎಲ್ಲ ರಾಜಕೀಯ ನಾಯಕರೂ ಈ ಹತ್ಯೆಗಳನ್ನು ಖಂಡಿಸಿದ್ದಾರೆ. ನಾಗರಿಕ ಸಮಾಜದ ಸಂಘಟನೆಗಳು ಹತ್ಯೆಗಳನ್ನು ವಿರೋಧಿಸಿ ಹೇಳಿಕೆ ನೀಡಿವೆ. ಸ್ಥಳೀಯ ಸಮುದಾಯದ ನಾಯಕರು ಮತ್ತು ನೆರೆಹೊರೆಯವರು ಪಂಡಿತರ ಕುಟುಂಬಗಳನ್ನು ಸಂಪರ್ಕಿಸಿ ನೆರವು ಮತ್ತು ಬೆಂಬಲವನ್ನು ಸೂಚಿಸಿದ್ದಾರೆ. ಈ ಬೆಳವಣಿಗೆಗಳು ಕಾಶ್ಮೀರದ ಜನತೆಯಲ್ಲಿ ಭರವಸೆ ಮೂಡಿಸಲು ನೆರವಾಗುತ್ತವೆ.
ಇದಕ್ಕೆ ಪೂರಕವಾಗಿ ಉತ್ತೇಜನ ನೀಡುವ ಕ್ರಮಗಳು ಲೆಫ್ಟಿನೆಂಟ್ ಗವರ್ನರ್ ಅವರಿಂದಲೇ ಆರಂಭವಾಗಬೇಕಿದೆ. ಈವರೆಗೆ ಲೆಫ್ಟಿನೆಂಟ್ ಗವರ್ನರ್ ಸಿನ್ಹಾ ಅವರ ಆಡಳಿತ, ಕಾಶ್ಮೀರಿ ಪಂಡಿತರ ಸಂಘಟನೆಗಳನ್ನಾಗಲಿ, ಹತ್ಯೆಗಳನ್ನು ಖಂಡಿಸಿರುವ ಹಲವು ಗುಂಪುಗಳನ್ನಾಗಲಿ ಸಂಪರ್ಕಿಸಿಲ್ಲ. ಈ ಗುಂಪುಗಳನ್ನು ಸಂಪರ್ಕಿಸುವ ಮೂಲಕ ಜನರಲ್ಲಿ ಭರವಸೆ ಮೂಡಿಸುವ ಪ್ರಯತ್ನಗಳನ್ನು ಆರಂಭಿಸಬಹುದಿತ್ತು. ಇದು ಅಚ್ಚರಿ ಮೂಡಿಸುವ ಸಂಗತಿ. ಏಕೆಂದರೆ ಈ ಗುಂಪುಗಳು ಕಾಶ್ಮೀರದಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವ ವೈವಿಧ್ಯಮಯ ಜನರನ್ನು ಪ್ರತಿನಿಧಿಸುತ್ತವೆ. ಈ ಗುಂಪುಗಳ ಸಹಾಯದೊಂದಿಗೇ ಉಗ್ರವಾದವನ್ನು ಸಾಮಾಜಿಕ ನೆಲೆಯಲ್ಲಿ ಮೂಲೆಗುಂಪು ಮಾಡಲು ಸಾಧ್ಯವಾಗಬಹುದು. ಶಾಂತಿ ಸ್ಥಾಪನೆಯ ಸಂದರ್ಭದಲ್ಲಿ ಇಂತಹ ಪ್ರಯತ್ನಗಳನ್ನು ಮಾಡಲಾಗಿತ್ತು.
ಬಲ್ಲ ಮಾಹಿತಿಯ ಅನುಸಾರ, ಇತ್ತೀಚೆಗೆ ನಡೆದ ನಾಗರಿಕರ ಹತ್ಯೆಯ ಪ್ರಕರಣಗಳಲ್ಲಿ ಮುಖ್ಯವಾಗಿ ಹೈಬ್ರಿಡ್ ಉಗ್ರವಾದಿಗಳೇ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಈ ಉಗ್ರವಾದಿಗಳನ್ನು ಸ್ಥಳೀಯ ಮಟ್ಟದಲ್ಲೇ ನೇಮಕ ಮಾಡಿಕೊಂಡು, ಅವರಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ. ನೌಕರಿಯಲ್ಲಿರುವ ಈ ಉಗ್ರವಾದಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಉಗ್ರವಾದಿ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ, ಸ್ಥಳೀಯವಾಗಿ ಲಭ್ಯವಾಗುವ ಪಿಸ್ತೂಲ್ ಮುಂತಾದ ಶಸ್ತ್ರಗಳನ್ನು ಬಳಕೆ ಮಾಡುತ್ತಾರೆ. ಇದರಿಂದ ಅರ್ಥವಾಗುವುದೇನೆಂದರೆ, ಉಗ್ರವಾದವು ಕಾಶ್ಮೀರದಲ್ಲಿ ಹೆಚ್ಚಿನ ಸಾರ್ವಜನಿಕ ಬೆಂಬಲವನ್ನು ಗಳಿಸುತ್ತಿದ್ದು ವ್ಯಾಪಕವಾಗಿ ಹರಡಿದೆ. ಲಷ್ಕರ್ ಎ ತೊಯಿಬಾ, ಜೈಷ್ ಎ ಮೊಹಮ್ಮದ್ ಮುಂತಾದ ಸಶಸ್ತ್ರ ಗುಂಪುಗಳನ್ನು ಮೂಲೆಗುಂಪು ಮಾಡುವಲ್ಲಿ ಭಾರತೀಯ ಭದ್ರತಾ ಪಡೆಗಳು ಸಾಕಷ್ಟು ಯಶಸ್ಸು ಸಾಧಿಸಿದ್ದರೂ ಈ ಸ್ಥಳೀಯ ಗುಂಪುಗಳು ಸಕ್ರಿಯವಾಗಿವೆ. ಈ ಹಿನ್ನೆಲೆಯಲ್ಲಿ ಉಗ್ರವಾದವನ್ನು ಸಾಮಾಜಿಕ ನೆಲೆಯಲ್ಲಿ ಮೂಲೆಗುಂಪು ಮಾಡುವ ಯಾವುದೇ ಪ್ರಯತ್ನಗಳು ಸ್ವಾಗತಾರ್ಹವಾಗುತ್ತವೆ.

ಕಾಶ್ಮೀರ ಪಂಡಿತರಿಗೆ ಹಿನ್ನಡೆ
೨೦೧೯ರ ಅಗಸ್ಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ ನೀಡಿರುವಂತೆ, ಕಾಶ್ಮೀರದ ಪಂಡಿತರು, ಇನ್ನು ಕಾಶ್ಮೀರ ಕಣಿವೆಗೆ ಮರಳಿ ಬಂದು ನೆಲೆಸುವುದು ಸಾಧ್ಯವೇ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಪಂಡಿತರ ಮರುವಾಪಸಾತಿ ಪ್ರಕ್ರಿಯೆಗೆ ಇತ್ತೀಚಿನ ಘಟನೆಗಳು ಹಿನ್ನಡೆ ಉಂಟುಮಾಡಿರುವುದು ವಾಸ್ತವ. ಅಷ್ಟೇ ಅಲ್ಲದೆ ಕಳೆದ ಒಂದು ವರ್ಷದಲ್ಲಿ ಕಾಶ್ಮೀರ ಕಣಿವೆಗೆ ಮರಳಿದ ಪಂಡಿತ ಕುಟುಂಬಗಳನ್ನು ಆಡಳಿತ ವ್ಯವಸ್ಥೆ ನಿರ್ಲಕ್ಷಿಸಿದೆ ಎಂಬ ಆಪಾದನೆಯೂ ಕೇಳಿಬರುತ್ತಿದೆ. ಕಣಿವೆಗೆ ವಾಪಸ್ ಬಂದ ಪಂಡಿತ ಕುಟುಂಬಗಳೊಂದಿಗೇ, ಕಣಿವೆಯನ್ನು ತೊರೆಯದೆಯೇ ಇಲ್ಲಿ ನೆಲೆಸಿರುವ ಕುಟುಂಬಗಳ ರಕ್ಷಣೆಯ ಬಗ್ಗೆಯೂ ಆಡಳಿತ ವ್ಯವಸ್ಥೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಂಡಿತ ಸಮುದಾಯದ ಕೆಲವರು ಅಪೇಕ್ಷಿಸುತ್ತಾರೆ. ಇಂತಹ ಕುಟುಂಬಗಳ ಸಂಖ್ಯೆ ಕ್ಷೀಣಿಸಿರುವುದರಿಂದ ಇವರ ಪರಿಸ್ಥಿತಿ ಹೀನಾಯವಾಗಿದ್ದು ಇದನ್ನು ಮಾಧ್ಯಮಗಳಲ್ಲೂ ಹೆಚ್ಚಾಗಿ ಬಿಂಬಿಸಲಾಗುತ್ತಿಲ್ಲ. ಇದೇ ಸಮಸ್ಯೆಯನ್ನು ಅಲ್ಪಸಂಖ್ಯಾತ ಸಿಖ್ ಸಮುದಾಯದವರೂ ಎದುರಿಸುತ್ತಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಕಾಶ್ಮೀರದಲ್ಲಿ ಸಿಖ್ ಸಮುದಾಯದ ಸಂಖ್ಯೆ ಕ್ಷೀಣಿಸುತ್ತಲೇ ಇದೆ.
ಕಾಶ್ಮೀರ ಪಂಡಿತರ ಸಂಕಷ್ಟಗಳ ದುರಂತಕ್ಕೆ ಮೂರು ದಶಕಗಳೇ ಸಂದಿವೆ. ಇಂತಹ ಸಂಕೀರ್ಣ ದುರಂತಮಯ ಪರಿಸ್ಥಿತಿಯನ್ನು ನಿಭಾಯಿಸಲು ವ್ಯಾಪಕ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಸುರಕ್ಷತೆಯನ್ನು ಒದಗಿಸುವುದು, ನ್ಯಾಯ ಒದಗಿಸುವುದರೊಂದಿಗೇ ಸಾಮರಸ್ಯ ಮೂಡಿಸುವುದೂ ಮುಖ್ಯವಾಗುತ್ತದೆ. ಸಾಮರಸ್ಯ ಮೂಡಿಸುವ ಹಾದಿಯಲ್ಲಿ ಸುರಕ್ಷತೆ ಒಂದು ಅವಶ್ಯ ಕ್ರಮವಾದರೂ, ಪಂಡಿತ ಕುಟುಂಬಗಳನ್ನು ಕೇವಲ ವಸತಿ ಸಮುಚ್ಚಯಗಳ ಭದ್ರಕೋಟೆಗಳಲ್ಲಿ ಬಂಧಿಸುವುದರಿಂದ ಅಥವಾ ದಂಗೆಯನ್ನು ನಿಯಂತ್ರಿಸುವ ಪ್ರತಿ ರಣತಂತ್ರಗಳಿಂದ ಸಾಮರಸ್ಯ ಸಾಧಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಪಂಡಿತ ಸಮುದಾಯ ಎದುರಿಸುವ ಅಪಾಯಗಳನ್ನು ತೊಡೆದುಹಾಕಲಾಗುವುದಿಲ್ಲ. ಯಾವುದೇ ಕ್ರಮ ಕೈಗೊಂಡರೂ ಸಮುದಾಯದ ಬೆಂಬಲ ಅವಶ್ಯವಾಗಿ ಬೇಕಾಗುತ್ತದೆ. ಯಾವುದೇ ಒಂದು ರೀತಿಯ ಕ್ರಮದಿಂದ ಕಾರ್ಯಸಾಧಿಸಲಾಗುವುದೂ ಇಲ್ಲ.
ನಿಜ, ದಂಗೆಯನ್ನು ಸಂಪೂರ್ಣವಾಗಿ ಹತ್ತಿಕ್ಕುವ ಮೂಲಕ ಮಾತ್ರವೇ ಉದ್ದೇಶಿತ ಹತ್ಯೆಗಳನ್ನು ತಡೆಗಟ್ಟಲು ಸಾಧ್ಯ. ಆದರೆ ಈ ದಂಗೆಯನ್ನು ದಮನಿಸುವ ಪ್ರತಿ ಧಾಳಿಯೊಂದಿಗೇ ಶಾಂತಿ ಸ್ಥಾಪನೆಯ ಪ್ರಯತ್ನಗಳೂ ಅವಶ್ಯವಾಗುತ್ತವೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ , ಭಾರತದಲ್ಲೂ ಸಹ ಹಲವು ಸಂದರ್ಭಗಳಲ್ಲಿ ಈ ತಂತ್ರಗಾರಿಕೆ ಯಶಸ್ವಿಯಾಗಿದೆ. ಆದರೆ ಈವರೆಗೂ ಒಕ್ಕೂಟ ಸರ್ಕಾರ ಈ ರೀತಿಯ ಯಾವುದೇ ಪ್ರಯತ್ನಗಳನ್ನು ಮಾಡಿಲ್ಲ. ಬದಲಾಗಿ ೨೦೧೯ರ ನಂತರ ಜಾರಿಗೊಳಿಸಿದ ಕೆಲವು ನಿರ್ಣಯಗಳ ಪರಿಣಾಮ ಕಾಶ್ಮೀರದಲ್ಲಿ ಅಸಮಾಧಾನ ಹೆಚ್ಚಾಗುತ್ತಲೇ ಇದೆ. ಇದರ ಒಂದು ಉದಾಹರಣೆಯನ್ನು ಸಂವಿಧಾನ ವಿಧಿ ೩೧೧(೨)ರ ಬಳಕೆಯಲ್ಲಿ ಕಾಣಬಹುದು. ಈ ವಿಧಿಯನ್ನು ವ್ಯಾಪಕವಾಗಿ ಬಳಸುವ ಮೂಲಕ ಸರ್ಕಾರಿ ನೌಕರರನ್ನು ಯಾವುದೇ ವಿಚಾರಣೆ, ತನಿಖೆ ಇಲ್ಲದೆಯೇ ವಜಾಗೊಳಿಸಲಾಗಿದೆ. ಪಂಡಿತರ ಆಸ್ತಿಯನ್ನು ಹಿಂಪಡೆಯುವ ನೀತಿಯೂ ಅಷ್ಟಾಗಿ ಫಲಪ್ರದವಾಗಿರಲಿಲ್ಲ. ಈಗ ಕೆಲವು ನ್ಯೂನತೆಗಳನ್ನು ಸರಿಪಡಿಸಲಾಗಿದೆ.

ಬಹುಸಂಖ್ಯಾತ ಜನತೆ ಅಭದ್ರತೆಯನ್ನು ಎದುರಿಸುತ್ತಿರುವ ಪರಿಸ್ಥಿತಿಯಲ್ಲಿ ದುರ್ಬಲವಾಗಿರುವ ಅಲ್ಪಸಂಖ್ಯಾತರನ್ನು ರಕ್ಷಿಸುವುದು ಕಷ್ಟ ಸಾಧ್ಯ ಎಂದು ಸಮಾಜಶಾಸ್ತ್ರ ಮತ್ತು ರಾಜ್ಯಶಾಸ್ತ್ರದಲ್ಲಿ ಹೇಳಲಾಗುತ್ತದೆ. ಏಕೆಂದರೆ ಬಹುಸಂಖ್ಯಾತ ಜನತೆ ತಮ್ಮ ಸುರಕ್ಷತೆಯ ಬಗ್ಗೆ ಗಮನ ನೀಡುತ್ತವೆ. ಇತ್ತೀಚಿನ ಸತತ ನಾಗರಿಕ ಹತ್ಯೆಗಳ ನಂತರ ೭೦೦ಕ್ಕೂ ಹೆಚ್ಚು ಜನರನ್ನು ಅನುಮಾನದ ಮೇಲೆ ಬಂಧಿಸಿರುವುದು ಈ ಅಭದ್ರತೆಯ ಭಾವನೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಪೊಲೀಸರು ತಮ್ಮ ಬೇಹುಗಾರಿಕೆಯನ್ನು ನಿರ್ದಿಷ್ಟವಾಗಿ ಅನುಮಾನಾಸ್ಪದವಾಗಿ ಕಾಣುವಂತಹವರ ಮೇಲೆ ಏಕೆ ಪ್ರಯೋಗಿಸಬಾರದು ಎಂಬ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ.
ನರೇಂದ್ರ ಮೋದಿ ಸರ್ಕಾರ ಪಾಕಿಸ್ತಾನದೊಡನೆ ಬಹುಮುಖೀ ಧೋರಣೆಯನ್ನು ಅನುಸರಿಸುತ್ತಿದೆ. ಕದನವಿರಾಮ ಘೋಷಿಸುವುದರೊಟ್ಟಿಗೆ ಆಫ್ಘಾನಿಸ್ತಾನದಲ್ಲಿ ನಡೆಯುವ ಪ್ರಾದೇಶಿಕ ಸಭೆಯೊಂದಕ್ಕೆ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನು ಆಹ್ವಾನಿಸಲಾಗಿದೆ, ಆದರೆ ಇತ್ತ ಗಡಿ ಪ್ರದೇಶದ ಉಗ್ರಗಾಮಿ ಚಟುವಟಿಕೆಗಳನ್ನು , ನುಸುಳುವಿಕೆಯನ್ನು ನಿಗ್ರಹಿಸಲು ಸೇನೆಗೆ ಮುಕ್ತ ಅನುಮತಿ ನೀಡಲಾಗಿದೆ. ಇದೇ ಬಹುಮುಖೀ ಧೋರಣೆಯನ್ನು ಕಾಶ್ಮೀರದಲ್ಲಿ ಏಕೆ ಅನುಸರಿಸುತ್ತಿಲ್ಲ ? ಕಾಶ್ಮೀರದಲ್ಲಿ ನಾಗರಿಕ ಹಕ್ಕುಗಳು ಮತ್ತು ಮಾನವ ಹಕ್ಕುಗಳು ಅತಿಯಾಗಿ ನಿರ್ಬಂಧಕ್ಕೊಳಗಾಗಿದ್ದು ಆಡಳಿತ ವ್ಯವಸ್ಥೆಯು ಪಾರದರ್ಶಕತೆಯನ್ನು ಕಳೆದುಕೊಂಡಿರುವುದರಿಂದ, ಕುಂದುಕೊರತೆ ನಿವಾರಣಾ ಸಮಿತಿಗಳು ನೀಡಿದ್ದ ಅವಕಾಶಗಳೂ ಈಗ ಇಲ್ಲವಾಗಿದೆ. ಸಮಗ್ರ ನೆಲೆಯಲ್ಲಿ ನಾಗರಿಕ ಹಕ್ಕುಗಳು ಮತ್ತು ಮಾನವ ಹಕ್ಕುಗಳು ಇಲ್ಲದಿರುವ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಹೇಗೆ ರಕ್ಷಿಸಲು ಸಾಧ್ಯ ? ಅಲ್ಪಸಂಖ್ಯಾತರ ವಾಪಸಾತಿಯಾದರೂ ಹೇಗೆ ಸಾಧ್ಯ ?
ಮೂಲ: ರಾಧಾ ಕುಮಾರ್- ದ ಹಿಂದೂ ೨೦-೧೦
ಅನುವಾದ :ನಾ ದಿವಾಕರ








