ಶಿವಮೊಗ್ಗ ;ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಈ ಭಾರಿ ಜೂನ್ ತಿಂಗಳಿನಲ್ಲಿಯೇ ಮಳೆಗಾಲ ಆರಂಭಗೊಂಡಿರುವುದು ಕೃಷಿಕರಲ್ಲಿ ಹುರುಪು ಮೂಡಿಸಿದೆ. ಆದರೆ ಕಳೆದ ಎರಡು ದಿನಗಳಿಂದ ವ್ಯಾಪಕ ಮಳೆ ಆಗುತಿದ್ದು ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ ಆಗುತ್ತಿದೆ.
ಇಲ್ಲಿ ಮಳೆಯು ಸಾಮಾನ್ಯವಾಗಿ ಜುಲೈ ತಿಂಗಳ ಮೊದಲ ಹಾಗೂ ಎರಡನೇ ವಾರದಲ್ಲಿ ಬರುತ್ತಿದೆ. ಈ ಬಾರಿ ಮಳೆ ಜೂನ್ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಂದು ಮಳೆಯ ಬಗ್ಗೆ ಭರವಸೆಯನ್ನು ಮೂಡಿಸಿದೆ. ಜೂನ್ನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ವಾಡಿಕೆ 472 ಎಂಎಂ ಮಳೆಯಾಗಬೇಕು. ಆದರೆ ಇದುವರೆಗೂ ಆಗಿದ್ದು ಕೇವಲ 166 ಎಂ.ಎಂ. ಮಾತ್ರ.
ಹವಾಮಾನ ಇಲಾಖೆ ವರದಿಯಂತೆ 2023 ಜೂನ್ನಲ್ಲಿ ಶೇ.9ರಷ್ಟು ಮಳೆ ಕೊರತೆ ಇತ್ತು. ಜುಲೈನಲ್ಲಿ ಶೇ.13ರಷ್ಟು ಅಧಿಕ ಮಳೆಯಾಗಿದೆ. ಆಗಸ್ಟ್ನಲ್ಲಿ ಶೇ.36ರಷ್ಟು ಮಳೆ ಕೊರತೆ. ಸೆಪ್ಟೆಂಬರ್ನಲ್ಲಿ ಶೇ.13 ರಷ್ಟು ಮಳೆ ಅಧಿಕವಾಗಿ ಬಂದಿತ್ತು. ಹೀಗೆ ಮಳೆ ಏರುಪೇರು ಆಗುತ್ತಿದೆ.
ಲಿಂಗನಮಕ್ಕಿ ಜಲಾಶಯದ ಒಳಹರಿವು 16,984 ಕ್ಯುಸೆಕ್‌ಗೆ ಏರಿಕೆಯಾಗಿದೆ. ಬುಧವಾರ ಒಳಹರಿವು 9,033 ಕ್ಯುಸೆಕ್ ಇತ್ತು. ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ 24 ಗಂಟೆಯಲ್ಲಿ 7,900 ಕ್ಯುಸೆಕ್‌ನಷ್ಟು ಒಳಹರಿವು ಹೆಚ್ಚಳಗೊಂಡಿದೆ. 1,819 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಗುರುವಾರ 1,747.60 ಅಡಿ ನೀರಿನ ಸಂಗ್ರಹ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,740.20 ಅಡಿ ನೀರಿನ ಸಂಗ್ರಹ ಇತ್ತು.
ಶಿವಮೊಗ್ಗ ಜಿಲ್ಲೆಯ ಗಾಜನೂರು ಬಳಿ ಇರುವ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.
ಈ ವರ್ಷದ ಮಳೆಗಾಲದಲ್ಲಿ ರಾಜ್ಯದಲ್ಲಿ ಮೊದಲು ಭರ್ತಿಯಾದ ಜಲಾಶಯ ಇದಾಗಿದೆ. ‘3.24 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ತುಂಗಾ ಜಲಾಶಯದ ಗರಿಷ್ಠ ಮಟ್ಟ 588.24 ಮೀಟರ್. ಜಲಾಶಯಕ್ಕೆ ಒಳಹರಿವು 6,766 ಕ್ಯುಸೆಕ್ ಇದೆ. ಎರಡು ಕ್ರೆಸ್ಟ್ ಗೇಟ್‌ಗಳನ್ನು ತೆರೆದು 5,285 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಉಳಿದ ಹೆಚ್ಚುವರಿ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತಿದೆ’ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದರು.
ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿರುವುದರಿಂದ ತುಂಗಾ, ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳಿಗೆ ಒಳಹರಿವು ಹೆಚ್ಚಳಗೊಂಡಿದೆ.