ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಂಸದ ಶ್ರೀನಿವಾಸ ಪ್ರಸಾದ್ ಅವರ ಪಾರ್ಥಿವ ಶರೀರವನ್ನು ಇಂದು ಮೈಸೂರಿಗೆ ಕೊಂಡೊಯ್ಯಲಿದ್ದು, ಮೈಸೂರಿನ ಜಯಲಕ್ಷ್ಮೀಪುರ ನಿವಾದಲ್ಲಿ ಅಂತಿಮ ದರ್ಶನಕ್ಕೆ ಇಡುವುದಕ್ಕೆ ನಿರ್ಧಾರ ಮಾಡಲಾಗಿದೆ. ಇಂದು ಮೈಸೂರಿನಲ್ಲಿ ಅಂತಿಮ ದರ್ಶನ ಮುಗಿದ ಬಳಿಕ ಹುಟ್ಟೂರಿಗೆ ತೆಗೆದುಕೊಂಡು ಹೋಗಲಾಗುತ್ತದೆ.

ಶ್ರೀನಿವಾಸ್ ಪ್ರಸಾದ್ ಅಳಿಯ ಹರ್ಷವರ್ಧನ್ ಮಾತನಾಡಿ, ಮೊದಲು ಮೈಸೂರಿನ ಮನೆಗೆ ತೆಗೆದುಕೊಂಡು ಹೋಗುತ್ತೇವೆ. ನಂತರ ಯಾವುದಾದರೂ ಗ್ರೌಂಡ್ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡಿದ್ದಾರೆ, ಹೋರಾಟ ಜೀವಿ ಅವರು. ಐದು ವರ್ಷದ ಹಿಂದೆ ನಾನು ನಂಜನಗೂಡಿನಲ್ಲಿ ಗೆದ್ದಾಗ ಅವರು ಲೋಕಸಭೆಯಲ್ಲಿ ಸ್ಪರ್ಧೆ ಮಾಡ್ತಿನಿ ಅಂದ್ರು. ನನ್ನ ಅವರ ನಡುವೆ ತಂದೆ ಮಗನ ಸಂಬಂಧ ಇತ್ತು. ಈಗ ಅನಾಥ ಭಾವ ಕಾಡುತ್ತಿದೆ ಎಂದಿದ್ದಾರೆ.

ಮಣಿಪಾಲ ಆಸ್ಪತ್ರೆಯಿಂದ ಶ್ರೀನಿವಾಸ್ ಪ್ರಸಾದ್ ಪಾರ್ಥಿವ ಶರೀರ ಅಂಬ್ಯುಲೆನ್ಸ್ ಮೈಸೂರು ಕಡೆಗೆ ಹೊರಟಿದೆ. ಮೈಸೂರಿನ ಜಯಲಕ್ಷ್ಮೀ ಪುರಂ ನಿವಾಸದ ಬಳಿ ಗೌರವ ಸಲ್ಲಿಸಲಾಗುತ್ತದೆ. ಮಣಿಪಾಲ್ ಆಸ್ಪತ್ರೆಗೆ ದಾಖಲಾದ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ನಿನ್ನೆ ಎಲ್ಲರ ಜೊತೆ ಚೆನ್ನಾಗಿಯೇ ಮಾತನಾಡಿದ್ದ ಶ್ರೀನಿವಾಸ್ ಪ್ರಸಾದ್, ರಾತ್ರಿ ಮಾತನಾಡಲು ಆಗುತ್ತಿರಲಿಲ್ಲ. ಈ ವೇಳೆ ಪೆನ್ನು, ಪೇಪರ್ ಕೊಡಲಾಗಿತ್ತು. ಪೇಪರ್ನಲ್ಲಿ ಕಾಫಿ ಅಂತ ಬರೆದಿದ್ದರು. ಆ ವೇಳೆ ಕುಟುಂಬಸ್ಥರು, ಎರಡು ಗುಟುಕು ಕಾಫಿ ಬಾಯಿಗೆ ಬಿಟ್ಟ ಕೂಡಲೇ ಪ್ರಾಣ ಹೋಗಿತ್ತು.

ಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ. ದಲಿತ ದಮನಿತರ ಪರವಾದ ದಿಟ್ಟ ದನಿ ಶ್ರೀನಿವಾಸಪ್ರಸಾದ್ ಅವರ ಸಾವು, ನನ್ನನ್ನು ಆಘಾತಕ್ಕೀಡು ಮಾಡಿದೆ. ಅನ್ಯಾಯ-ಅಸಮಾನತೆಯ ವಿರುದ್ಧದ ಹೋರಾಟವನ್ನೇ ಬದುಕಾಗಿಸಿಕೊಂಡಿದ್ದರು. ಅವರ ಅಗಲಿಕೆ ರಾಜ್ಯದ ಸಾಮಾಜಿಕ ನ್ಯಾಯದ ಪರವಾದ ರಾಜಕೀಯ ಹೋರಾಟಕ್ಕೆ ದೊಡ್ಡ ಹಿನ್ನಡೆಯಾಗಿದೆ. ದೀರ್ಘಕಾಲದ ಕಾಂಗ್ರೆಸ್ ಪಕ್ಷದ ಪ್ರಮುಖ ನೇತಾರರಾಗಿ ಕೆಲಸ ಮಾಡಿದ್ದರು. ಸಚಿವರಾಗಿ ಮತ್ತು ಲೋಕಸಭಾ ಸದಸ್ಯರಾಗಿ ದೀರ್ಘಕಾಲ ಜನ ಸೇವೆ ಮಾಡಿದ್ದಾರೆ. ಅವರೊಬ್ಬ ಪ್ರಗತಿಪರ ಚಿಂತನೆಯ ರಾಜಕೀಯ ನಾಯಕ ಎಂದಿದ್ದಾರೆ.
ಹಳೆಮೈಸೂರು ಭಾಗದಲ್ಲಿ ಬಹಳಷ್ಟು ಕಾಲ ನಾವು ಬೇರೆಬೇರೆ ಪಕ್ಷಗಳಲ್ಲಿ ಕೆಲಸ ಮಾಡಿದ್ದರೂ ಪರಸ್ಪರ ಗೌರವಪೂರ್ಣ ಸಂಬಂಧವನ್ನು ಉಳಿಸಿಕೊಂಡಿದ್ದೆವು. ಇತ್ತೀಚೆಗಷ್ಟೇ ನಾನು ಭೇಟಿಯಾಗಿದ್ದ ಸಂದರ್ಭದಲ್ಲಿ ನಾವು ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡೆವು. ಆಗ ಆರೋಗ್ಯವಾಗಿಯೇ ಇದ್ದ ಶ್ರೀನಿವಾಸ್ ಪ್ರಸಾದ್, ಇಷ್ಟು ಶೀಘ್ರ ನಮ್ಮನ್ನು ಅಗಲಿ ಹೋಗುತ್ತಾರೆ ಎಂಬ ನಿರೀಕ್ಷೆಯೇ ಇರಲಿಲ್ಲ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದ ಸದಸ್ಯರು ಮತ್ತು ಅಪಾರವಾದ ಅಭಿಮಾನಿ ಬಳಗದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಎಕ್ಸ್ ಮೂಲಕ ಸಂತಾಪ ಸೂಚಿಸಿದ್ದಾರೆ.