
ವಿದ್ಯಾರ್ಥಿ ದೆಸೆಯಲ್ಲಿ ಭವಿಷ್ಯದ ಹಾದಿಯಲ್ಲಿ ಬೆಳಕು ಮೂಡಿಸಿದ ಗುರುಗಳ ಸ್ಮರಣೆ
ನಾ ದಿವಾಕರ
ಮನುಷ್ಯ ಸಮಾಜ ಆಧುನಿಕತೆಗೆ ತೆರೆದುಕೊಂಡಂತೆಲ್ಲಾ, ನವ ನಾಗರಿಕತೆಯನ್ನು ಕಲ್ಪಿಸಿಕೊಳ್ಳುತ್ತಾ, ತಾನು ನಡೆದುಬಂದ ಹಾದಿಯನ್ನು ಮರೆತು ಭವಿಷ್ಯದತ್ತಲೇ ಪಯಣಿಸುವ ಒಂದು ವಿದ್ಯಮಾನ ಸಾರ್ವಕಾಲಿಕ-ಸಾರ್ವತ್ರಿಕವಾಗಿ ಕಾಣಬಹುದಾದ ವಾಸ್ತವ. ಸಾಮಾಜಿಕ ಮೇಲ್ ಚಲನೆ ಮತ್ತು ಆರ್ಥಿಕ ಸಬಲೀಕರಣದ ಪರಿಣಾಮವಾಗಿ, ವ್ಯಕ್ತಿಗತ ಜೀವನದಲ್ಲಿ ಸಮಷ್ಟಿ ಪ್ರಜ್ಞೆಯನ್ನು ಹಿಂಬದಿಗೆ ತಳ್ಳುತ್ತಾ ವ್ಯಷ್ಟಿ ಪ್ರಜ್ಞೆಯನ್ನೇ ಪ್ರಧಾನವಾಗಿ ಬೆಳೆಸಿಕೊಂಡು , ಸ್ವಾರ್ಥ ಬದುಕಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುವುದು ಮಾನವ ಸಹಜ ಪ್ರವೃತ್ತಿ. ಇದು ವೈಯುಕ್ತಿಕ ಆಯ್ಕೆಯೂ ಹೌದು. ಹಾಗಾಗಿಯೇ ಎಲ್ಲರೂ ಸಮಾಜಮುಖಿ ಆಗುವುದಿಲ್ಲ.
ಆದರೂ ಅಂತರ್ಮುಖಿಗಳಾಗಿ ಬದುಕು ಸವೆಸುವಾಗ ಎದುರಿಸುವ ಸಿಕ್ಕುಗಳು, ಸವಾಲುಗಳು ಸವೆದ ಹಾದಿಯನ್ನು ಸ್ವಾಭಾವಿಕವಾಗಿ ನೆನಪಿಸುತ್ತವೆ. ಆಗ ನಮಗೆ ನೆನಪಾಗಬೇಕಿರುವುದು, ಬಾಲ್ಯದಿಂದ ಯೌವ್ವನದವರೆಗೆ ನಮ್ಮೊಳಗಿನ ಅಂತರ್ಗತ ಪ್ರತಿಭೆಗಳನ್ನು, ಅಂತಃಶಕ್ತಿಯನ್ನು ಪೋಷಿಸಿ, ಅಮೂರ್ತ ನೆಲೆಯಲ್ಲಿರಬಹುದಾದ ವ್ಯಕ್ತಿತ್ವವನ್ನು ಹೊರಗೆಳೆದು, ಶಿಲ್ಪಿಯೊಬ್ಬ ಬಂಡೆಯನ್ನು ಮೂರ್ತಿ ಮಾಡಿದ ಹಾಗೆ, ವ್ಯಕ್ತಿಯ ವ್ಯಕ್ತಿತ್ವವನ್ನು ಕಡೆದು ಸಮಾಜದ ನಡುವೆ ನಿಲ್ಲಿಸುವುದು ಈ ಹಾದಿಯಲ್ಲಿ ನಮ್ಮ ಹಾದಿ ದೀವಿಗೆಯಾಗಿ, ಕೈ ಹಿಡಿದು, ಬೆನ್ನುತಟ್ಟಿ ಬೆಳೆಸುವ ನಮ್ಮ ಶಿಕ್ಷಕರು. ಶಿಕ್ಷಕರ ದಿನ ಆಚರಿಸುವಾಗ ಈ ಮಹಾನ್ ಚೇತನಗಳನ್ನು ಸ್ಮರಿಸುವ ಮೂಲಕ, ನಮ್ಮ ನಡುವೆ ಇರುವವರಿಗೆ, ನಮ್ಮನ್ನು ಅಗಲಿರುವವರಿಗೆ ಕೃತಜ್ಞತೆಗಳನ್ನು ಸಲ್ಲಿಸಬೇಕಾದ್ದು ನಮ್ಮ ನೈತಿಕ ಆದ್ಯತೆಯಾಗಬೇಕು.
ಅಂತಹ ಒಂದು ನೆನಪಿನ ಮೆರವಣಿಗೆಯನ್ನು ಈ ಲೇಖನದ ಮೂಲಕ ರೂಪಿಸುವ ಪ್ರಯತ್ನ ಇದು.
ಬಾಲ್ಯದ ದಿನಗಳ ಮೆಲುಕು
ನನ್ನ ಬಾಲ್ಯದ ವಿದ್ಯಾರ್ಜನೆ ಆರಂಭವಾದದ್ದು 1967ರಲ್ಲಿ ಬಂಗಾರಪೇಟೆಯ ಸರ್ಕಾರಿ ಶಾಲೆಯಲ್ಲಿ. ಪದವಿಯವರೆಗೆ ಸಾಗಿ ಕೊನೆ ಕಂಡಿದ್ದು ಕೋಲಾರದ ಸರ್ಕಾರಿ ಕಾಲೇಜಿನಲ್ಲಿ. ಈ ನಡುವೆ ಕಂಡ ಶಾಲೆಗಳು ನಾಲ್ಕು. ಆದರೆ ಈ ಹಾದಿಯಲ್ಲಿ ನಮ್ಮೊಳಗಿನ ಆಸಕ್ತಿ, ಆದ್ಯತೆ, ಬೌದ್ಧಿಕ ಶಕ್ತಿ-ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನಮಗೇ ಮನದಟ್ಟು ಮಾಡಿಸುತ್ತಾ, ಅಮೂರ್ತದಲ್ಲಿ ಇದ್ದಿರಬಹುದಾದ ಗುಣ ಲಕ್ಷಣಗಳನ್ನು ಮೂರ್ತ ರೂಪಕ್ಕೆ ತಂದು ನಿಲ್ಲಿಸಿದ ಶಿಲ್ಪಿಗಳು ಅನೇಕರು. ಇವರನ್ನು ಸಾಮಾನ್ಯ ಪರಿಭಾಷೆಯಲ್ಲಿ ಗುರುಗಳು, ಶಿಕ್ಷಕರು ಎಂದು ಕರೆಯಬಹುದಾದರೂ, ವೈಯುಕ್ತಿಕವಾಗಿ ನನ್ನ ಬದುಕಿನ ಕೆಲವು ಆದರ್ಶಗಳು ಮತ್ತು ಜೀವನಮುಖಿ ದರ್ಶನಗಳನ್ನು ಉದ್ಧೀಪನಗೊಳಿಸಿ, ಬೆಳೆಸಿರುವ ಕೆಲವು ಶಿಕ್ಷಕರನ್ನು ಸ್ಮರಿಸುವುದು ಹೆಮ್ಮೆಯಷ್ಟೇ ಅಲ್ಲ ಕರ್ತವ್ಯವೂ ಹೌದು.
“ ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ” ಎಂಬ ಕವಿವಾಣಿಯನ್ನು ಗೌರವಿಸುತ್ತಾ, ನೆನಪಿನಲ್ಲುಳಿದಿರುವ ಹಾಗೂ ತೀವ್ರವಾಗಿ ಪ್ರಭಾವಿಸಿರುವ ಶಿಕ್ಷಕರನ್ನು ಸ್ಮರಿಸುವ ಸಾಹಸ ಮಾಡಿದ್ದೇನೆ. ಏಕೆಂದರೆ ವಿದ್ಯೆ ಕಲಿಸಿದ ಎಲ್ಲ ಗುರುಗಳು ಸದಾ ಸ್ಮರಣೀಯರೇ ಆಗಿರುತ್ತಾರೆ.

ನಾನು ಒಂದನೆ ತರಗತಿಗೆ ಸೇರಿದಾಗ, 1967ರಲ್ಲಿ ನಮ್ಮ ಶಾಲಾ ಹೆಡ್ ಮಾಸ್ತರ್ ಆಗಿದ್ದವರು ಬಾಲಯ್ಯ ಎಂಬ ಅಪೂರ್ವ ವ್ಯಕ್ತಿ. ಅಪೂರ್ವ ಏಕೆಂದರೆ ನಮಗೆ ಅವರು ಹೆಡ್ ಮಾಸ್ತರ್ ಎನಿಸುತ್ತಲೇ ಇರಲಿಲ್ಲ ಅಷ್ಟರ ಮಟ್ಟಿಗೆ ಒಂದರಿಂದ ನಾಲ್ಕರವರೆಗಿನ ಎಲ್ಲ ವಿದ್ಯಾರ್ಥಿಗಳೊಡನೆ ಸ್ನೇಹದಿಂದ ವರ್ತಿಸುತ್ತಿದ್ದರು. ಸೂಟು ಬೂಟುಗಳಿಲ್ಲದ, ಸರಳ ಸಜ್ಜನ ವ್ಯಕ್ತಿಯಾಗಿ ಬಾಲಯ್ಯ ಮೇಷ್ಟ್ರು ನಮಗೆ ಪಾಠ ಮಾಡಿರುವುದು ನೆನಪಿಲ್ಲ ಆದರೆ ಮುಂಜಾನೆಯ ಪ್ರಾರ್ಥನೆಯ ಸಮಯದಲ್ಲಿ, ಬಿಡುವಿನ ವೇಳೆಯಲ್ಲಿ ಅವರು ಕಲಿಸಿದ ಪಾಠಗಳು ಪಠ್ಯಗಳಗಿಂತಲೂ ಅಮೂಲ್ಯವಾದದ್ದು. ಮೂರು ನಾಲ್ಕು ಫರ್ಲಾಂಗ್ ದೂರದಲ್ಲಿದ್ದ ಶಾಲೆಗೆ ಮನೆಯಿಂದ ಹೊರಟಾಗ ಬಲಗೈ ಮೇಲೆತ್ತಿ ನಮಸ್ಕಾರ ಶುರು ಮಾಡುತ್ತಿದ್ದ ಬಾಲಯ್ಯನವರು ಶಾಲೆಗೆ ಬಂದ ಮೇಲೆಯೇ ಕೈ ಇಳಿಸುತ್ತಿದ್ದುದು.
ವಿದ್ಯಾರ್ಥಿಗಳೇ ಆಗಲೀ, ಶಿಕ್ಷಕರೇ ಆಗಲೀ, ಊರಿನ ಜನರೇ ಆಗಲಿ ಮುಂಜಾನೆಯ ನಮಸ್ಕಾರ ಹೇಳಿದಾಗ ಅವರ ಪ್ರತಿಕ್ರಿಯೆ ಹೀಗಿರುತ್ತಿತ್ತು. ನಮಸ್ಕಾರ್ ಸರ್ ಎಂದಾಗ ತಲೆಯಾಡಿಸುವ ಈಗಿನ ವರ್ತನೆಗೆ ಹೋಲಿಸಿದಾಗ ಇದು ಎಂತಹ ದೊಡ್ಡ ಪಾಠ ಕಲಿಸುವಂತಹುದು. ಶಾಲೆಯಲ್ಲಿ ಅವರು ಕಲಿಸಿದ ಶಿಸ್ತು, ಆಟೋಟಗಳಲ್ಲಿ ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಪರಿ, ವೈಯುಕ್ತಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ರೀತಿ ಇವೆಲ್ಲವೂ ಮರೆಯಲಾಗದ ಗಳಿಗೆಗಳು. ಅಪರೂಪಕ್ಕೆ ಮನೆಗೆ ಹೋದಾಗ ಅವರು ನೀಡುತ್ತಿದ್ದ ಆತಿಥ್ಯ ಇಂದಿಗೂ ಅನುಕರಣೀಯ. ಕೆಲವು ವ್ಯಕ್ತಿಗಳು ತಮ್ಮ ಮಾತು, ವರ್ತನೆ ಮತ್ತು ಮನೋಭಾವದಿಂದಲೇ ಯುವ ಮನಸ್ಸುಗಳನ್ನು ಸದ್ಭಾವನೆಯ ಆಗರಗಳನ್ನಾಗಿ ಮಾಡುವ ಕ್ಷಮತೆ ಹೊಂದಿರುತ್ತಾರೆ.. ಬಾಲಯ್ಯ ಅಂತಹ ಒಬ್ಬ ಹೆಡ್ ಮಾಸ್ತರ್.
ಕಲಿಕೆ-ಬೋಧನೆಯ ಆದರ್ಶಗಳು
ಇದೇ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಸರಸ್ವತಮ್ಮ ಮೇಡಂ, ನಮ್ಮ ವಿದ್ಯಾರ್ಜನೆಯ ಹಾದಿಯಲ್ಲಿ ಮುಂಗಾಣ್ಕೆಯ ದೀವಿಗೆ ಮೂಡಿಸಿದ ಮಹಾತಾಯಿ. ಆಕೆಯ ಕಂಠ ಎಷ್ಟು ದೊಡ್ಡದು ಎಂದರೆ ಒಮ್ಮೆ ಗದರಿಸಿದರೆ ಪಕ್ಕದ ತರಗತಿಯ ಮಕ್ಕಳೂ ತೆಪ್ಪಗಾಗುತ್ತಿದ್ದರು. ಕನ್ನಡ ಅಂಕಿಗಳನ್ನು 2ನೆ ತರಗತಿಯಲ್ಲೇ ಕಲಿಸಿದ ಸರಸ್ವತಮ್ಮ ಮೇಡಂ ಮಗ್ಗಿಯನ್ನೂ ಕನ್ನಡ ಅಂಕಿಯಲ್ಲೇ ಬರೆಸುತ್ತಿದ್ದರು. ಮಗ್ಗಿ ಹೇಳುವಾಗ ಒಂದರಿಂದ ಆರಂಭಿಸುವ ಬದಲು ಹತ್ತರಿಂದ ಆರಂಭಿಸಿ ಹೇಳಿಕೊಡುತ್ತಿದ್ದರು. ಬಹುಶಃ ಮೂರನೆ ತರಗತಿಗೇ 20ರ ವರೆಗೆ ಮಗ್ಗಿ ಕಲಿಸಿದ್ದರು ಎಂದು ನೆನಪು. ಬಹುಶಃ ಮೂರನೆಯ ತರಗತಿಯಲ್ಲಿ ಮಾನಿಟರ್ ಆಗಿದ್ದಾಗ, ಮೀನಾಕ್ಷಿ ಎಂಬ ಸಹಪಾಠಿ ಗದ್ದಲ ಮಾಡುತ್ತಿದ್ದಳು. ನಾನು ಅವಳ ಬೆನ್ನಿನ ಮೇಲೆ ಹೊಡೆದುಬಿಟ್ಟೆ, ಅಳಲು ಶುರು ಮಾಡಿದಳು.
ಅಷ್ಟು ಹೊತ್ತಿಗೆ ಮೇಡಂ ಪ್ರವೇಶಿಸಿದರು. ನಾನು ಹಾಗೆ ಮಾಡಬಾರದಿತ್ತು ಎಂದು ಬುದ್ಧಿ ಹೇಳಿದ್ದೇ ಅಲ್ಲದೆ ಜೀವನದಲ್ಲಿ ಯಾವತ್ತೂ ಹೆಣ್ಣು ಮಕ್ಕಳ ಮೇಲೆ ಕೈಮಾಡಕೂಡದು ಎಂದು ಪ್ರಮಾಣ ಮಾಡಿಸಿದರು ಅವಳನ್ನು ಸಮಾಧಾನಪಡಿಸಿದರು. ಈ ಕ್ಷಣದವರೆಗೂ ಈ ಪ್ರಮಾಣವಚನವನ್ನು ಕಾಪಾಡಿಕೊಂಡು ಬಂದಿದ್ದೇನೆ. ಎಷ್ಟರ ಮಟ್ಟಿಗೆ ಎಂದರೆ ನಮ್ಮ ಮಗಳಿಗೆ ಬಾಲ್ಯಾವಸ್ಥೆಯಿಂದಲೂ ನನ್ನಿಂದ ಏಟು ತಿಂದ ಪ್ರಸಂಗವೇ ಬಂದಿಲ್ಲ. ಸರಸ್ವತಮ್ಮ ಮೇಡಂ ಅನುಸರಿಸುತ್ತಿದ್ದ ಮತ್ತೊಂದು ಅಪೂರ್ವ ಪ್ರಯೋಗ ಎಂದರೆ ತರಗತಿಯಲ್ಲಿ ಒಬ್ಬ ಹುಡುಗ, ಒಬ್ಬ ಹುಡುಗಿ ಹೀಗೆ ಕುಳಿತುಕೊಳ್ಳಬೇಕಿತ್ತು. ಜೂಟಾಟ ಮುಂತಾದ ಕ್ರೀಡೆಗಳಲ್ಲಿ ಒಟ್ಟಿಗೇ ಆಡಬೇಕಿತ್ತು. ಇದು ಗೆಳೆತನವನ್ನು ಗಟ್ಟಿಗೊಳಿಸಿದ್ದೇ ಅಲ್ಲದೆ ಲಿಂಗ ತಾರತಮ್ಯ ಅಥವಾ ಭಿನ್ನ ದೃಷ್ಟಿಕೋನವನ್ನು ಇಲ್ಲವಾಗಿಸಿತ್ತು. ನೆನಪಿರುವ ಒಬ್ಬ ಸಹಪಾಠಿ ಸ್ವರ್ಣಗೌರಿ ಈಗಲೂ ಬಂಗಾರಪೇಟೆಯಲ್ಲಿದ್ದಾರೆ. ಇವರೊಂದಿಗೇ ನೆನಪಿನಲ್ಲುಳಿದಿರುವ ಶಿಕ್ಷಕಿಯರೆಂದರೆ ವೆಂಕಟಲಕ್ಷ್ಮಮ್ಮ, ಕನಕಮ್ಮ ಮೊದಲಾದವರು.

ಐದನೆ ತರಗತಿಗೆ ಹಿರಿಯ ಪ್ರಾಥಮಿಕ ಶಾಲೆಗೆ ಬಂದಾಗ ಭಿನ್ನ ವಾತಾವರಣ, ಹೊಸ ಶಿಕ್ಷಕ ವೃಂದ, ಕೆಲವು ಹೊಸ ಗೆಳೆಯರು, ಬಾಲಕರ ಶಾಲೆಯಾದ್ದರಿಂದ ಹೆಣ್ಣು ಮಕ್ಕಳು ಇರಲಿಲ್ಲ. ಐದರಿಂದ ಏಳರವರೆಗಿನ ವಿದ್ಯಾಭ್ಯಾಸದ ಅವಧಿಯಲ್ಲಿ ಎಲ್ಲ ಶಿಕ್ಷಕ-ಶಿಕ್ಷಕಿಯರೂ ಸ್ಮರಣೀಯರೇ ಆದರೂ, ಬಹಳ ಮುಖ್ಯವಾಗಿ ಇಂದಿಗೂ ಸ್ಮೃತಿಪಟಲದಲ್ಲಿ ಅಚ್ಚಾಗಿರುವವರು ಎಚ್ ಎನ್ ರಾಮರಾವ್, ನಂಜುಂಡ ಗೌಡ, ಮಲ್ಲಪ್ಪ ಮತ್ತು ಜಯರಾಮ್ ಮೇಷ್ಟ್ರು. ಈ ಶಿಕ್ಷಕರು ಕಲಿಸಿದ ಸಮಯ ಪಾಲನೆ, ಹಿರಿಯರನ್ನು ಗೌರವಿಸುವ ಮನೋಭಾವ, ಸಹಪಾಠಿಗಳನ್ನು ಸಹಾನುಭೂತಿಯಿಂದ ಕಾಣುವ ಮನಸ್ಥಿತಿ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಪಠ್ಯಕ್ರಮವನ್ನು ಶಿಸ್ತಿನಿಂದ ಅಭ್ಯಾಸ ಮಾಡುವ ಗುಣ, ಅದನ್ನೂ ಮೀರಿದಂತೆ ಇತರ ಸಹಪಾಠಿಗಳೊಡನೆ ಸದಾ ಸ್ನೇಹದಿಂದಿರುವ ಒಂದು ಸದ್ಭಾವನೆಯ ಲಕ್ಷಣ.
ಎಚ್ ಎನ್ ರಾಮರಾವ್ ತರಗತಿಯಲ್ಲಿ ಬಹಳವೇ ಶಿಸ್ತು. ಸದಾ ನಗುಮೊಗದ ಈ ಗುರುಗಳನ್ನು ಎರಡು ವರ್ಷಗಳ ಹಿಂದೆ ಭೇಟಿ ಮಾಡುವ ಸೌಭಾಗ್ಯ ನನ್ನದಾಗಿತ್ತು. ಆಗ ಅವರು ಅಪ್ಪಿಕೊಂಡ ಕ್ಷಣ ಗಳಗಳನೆ ಅತ್ತುಬಿಟ್ಟಿದ್ದೆ. “ ಯಾಕೆ ಮರಿ ಅಳ್ತೀಯ ಚೆನ್ನಾಗಿರು ” ಎಂದು ಹಾರೈಸಿದ ಅವರ 82ರ ಹರೆಯದ ಭಾವಚಿತ್ರವನ್ನು ಇಲ್ಲಿ ಲಗತ್ತಿಸಲು ಖುಷಿಯಾಗುತ್ತದೆ. ಅವರು ಮಾಡುತ್ತಿದ್ದ ಕನ್ನಡ, ಸಮಾಜಶಾಸ್ತ್ರದ ಪಾಠಗಳು ನಮ್ಮ ಜ್ಞಾನವನ್ನು ಹೆಚ್ಚಿಸಿದ್ದಷ್ಟೇ ಅಲ್ಲದೆ, ವ್ಯಕ್ತಿತ್ವವನ್ನೂ ಪೋಷಿಸಿದ್ದವು.

ಐದರಿಂದ ಏಳರವರೆಗೆ ಕಲಿಸಿದ ನಂಜುಂಡ ಗೌಡ ಮೇಷ್ಟ್ರು ಗಣಿತ ಶಿಕ್ಷಕರು ಜೊತೆಗೆ ಎನ್‌ಸಿಸಿ ಮಾಸ್ತರು. ಗಣಿತ ಕಲಿಕೆಯಲ್ಲಿ ಒಂದು ಅಡಿಪಾಯ ಹಾಕಿದ ಈ ಮಾಸ್ತರು ಕಲಿಸಿದ ಶಿಸ್ತು, ಸಮಯಪಾಲನೆಯ ಪ್ರಜ್ಞೆ ನನ್ನ ಬ್ಯಾಂಕಿಂಗ್ ಸೇವೆಯಲ್ಲೂ ನೆರವಾಗಿತ್ತು. ಕೆಜಿಎಫ್ ಶಾಖೆಯಲ್ಲಿದ್ದಾಗ ಒಮ್ಮೆ ಅವರ ಭೇಟಿಯಾಗಿದ್ದೆ, 1994ರಲ್ಲಿ. ನನ್ನನ್ನು ಅಪ್ಪಿಕೊಂಡು ಹಾರೈಸಿದ ಕ್ಷಣ ಅವಿಸ್ಮರಣೀಯ. ಜಯರಾಂ ನಮಗೆ ಹಿಂದಿ ಕಲಿಸಿದ ಮಾಸ್ತರು. ಹಿಂದಿ ಪರಿಕ್ಷೆಗಳನ್ನು ಬರೆಯಲು ಪ್ರೇರೇಪಿಸಿದ್ದರು. ಮಲ್ಲಪ್ಪ ಮಾಸ್ತರು ನೆರೆಮನೆಯವರೇ ಆದರೂ, ಶಾಲೆಯಲ್ಲಿ ಯಾವುದೇ ಸಲುಗೆ ಇರುತ್ತಿರಲಿಲ್ಲ. ತಲೆಗೆ ಎಣ್ಣೆ ಹಚ್ಚದೆ ಬಂದರೆ ಕೂದಲು ಹಿಡಿದು ಅಲ್ಲಾಡಿಸುವ ಮೂಲಕ ಶಿಕ್ಷೆ ನೀಡುತ್ತಿದ್ದುದು ಅವರ ಗುಣ. ಶರ್ಟಿನ ಮೇಲೆ ಇಂಕ್ ಬಿದ್ದ ಕಲೆ ಇದ್ದರೂ ನಿಲ್ಲಿಸಿ ಪ್ರಶ್ನಿಸುತ್ತಿದ್ದ ಮಲ್ಲಪ್ಪ ಮಾಸ್ತರು, ಶಾಲೆಗೆ ಬರುವಾಗ ಶುಚಿಯಾಗಿ, ಒಗೆದ ಬಟ್ಟೆ ಧರಿಸಿ ಬರಲು ಕಲಿಸಿದ ಗುರು ಎನ್ನಬಹುದು. ಇದೂ ಸಹ ನನ್ನ ಬ್ಯಾಂಕಿಂಗ್ ಸೇವೆಯಲ್ಲಿ ನೆರವಾದ ಒಂದು ಗುಣ. ಶಾಲೆಯ ಹೆಡ್ ಮಾಸ್ತರ್ ಆಗಿದ್ದ ಪ್ರಭಾಕರ್ ಅವರೂ ಸಹ ಸ್ನೇಹಜೀವಿಯಾಗಿದ್ದರು. ಒಮ್ಮೆ ತರಗತಿಯಲ್ಲಿ ದುಂಬಿ ಬಂದು ಸುತ್ತಾಡಿಸಿದಾಗ, ಮಾನಿಟರ್ ಆಗಿದ್ದ ನಾನು ಅದರಿಂದ ತಪ್ಪಿಸಿಕೊಳ್ಳಲು ಓಡಾಡುತ್ತಿದ್ದೆ. ಆಗ ಒಳಗೆ ಬಂದ ರಾಮರಾವ್ ಮೇಷ್ಟ್ರು, ಮಾನಿಟರ್ ಆಗಿ ಈ ಅಶಿಸ್ತು ಸಲ್ಲದು ಎಂದು ಬೈದು, ಹೊರಗೆ ನಿಲ್ಲಿಸಿದ್ದರು. ಆಗ ಹೆಡ್ ಮಾಸ್ತರ್ ಪ್ರಭಾಕರ್ ಬಂದು ನನ್ನನ್ನು ಒಳಗೆ ಕೂರಿಸಲು ಹೇಳಿ ಹೋಗಿದ್ದರು. ಈ ಪ್ರಸಂಗ ಅಚ್ಚಳಿಯದೆ ಉಳಿದಿದೆ. ಹಾಗೆಯೇ ಅಂದು ಕಲಿತ ಜೀವನಾದರ್ಶನಗಳೂ ಸಹ.
ಪ್ರೌಢಾವಸ್ಥೆಯ ಕಲಿಕೆಯ ಅನುಭವಗಳು
ಎಂಟನೆ ತರಗತಿಗೆ ಸರ್ಕಾರಿ ಬಾಲಕರ ಪ್ರೌಢ ಶಾಲೆಗೆ ಸೇರಿದಾಗ, ಆಂಗ್ಲ ಮಾಧ್ಯಮ ಆಯ್ದುಕೊಂಡಿದ್ದೆ, ಸಂಸ್ಕೃತ ದ್ವಿತೀಯ ಪಠ್ಯವಿಷಯ. ಆದರೆ ಸಂಸ್ಕೃತದ ಮೇಷ್ಟ್ರು (ಎಚ್‌ಎಮ್‌ವಿ) ಬೇಗನೆಯೇ ವರ್ಗವಾಗಿದ್ದರಿಂದ ಹತ್ತನೆ ತರಗತಿಯವರೆಗೆ ಸುಭಾಷ್ ಗೈಡ್ ನನ್ನ ಕಲಿಕೆಗೆ ನೆರವಾಗಿತ್ತು. ಈ ಶಾಲೆಯಲ್ಲಿದ್ದ ಶಿಕ್ಷಕರಲ್ಲಿ ಯಾರನ್ನು ಸ್ಮರಿಸುವುದು ? ಎಲ್ಲರೂ ಸಮಾನವಾಗಿ ಆದರ್ಶಗಳನ್ನು ಕಲಿಸಿದ ಗುರುಗಳೇ ಆಗಿದ್ದರು. ಆರ್ ವೆಂಕಟರಾಮ್ (ಈಗ ಬೆಂಗಳೂರಿನಲ್ಲಿದ್ದಾರೆ ) ಪಾಠದ ನಡುವೆ ತಮ್ಮ ಜೀವನಾನುಭವದ ಪ್ರಸಂಗಗಳನ್ನು ಹೇಳುತ್ತಾ, ಇಂಗ್ಲಿಷ್ ಮಾತನಾಡುವುದನ್ನು ಹೇಳಿಕೊಡುತ್ತಾ, ವ್ಯಾಕರಣ ದೋಷಗಳನ್ನು ತಿದ್ದಿದ ಮೇಷ್ಟ್ರು.

ಎಂಟನೆ ತರಗತಿಯಲ್ಲಿ ಬಹುಶಃ ಎರಡು ತಿಂಗಳು ಮಾತ್ರ ಗಣಿತ ಕಲಿಸಿದ ಎಮ್ ಅಬ್ದುಲ್ ವಹೀದ್ (ಎಮ್‌ಎಡಬ್ಲ್ಯು ಎಂದೇ ಖ್ಯಾತಿ ಪಡೆದಿದ್ದವರು ) ಗಣಿತ ಶಿಕ್ಷಕರಲ್ಲಿ ಒಂದು ಮೇರು ಶಿಖರ ಎನ್ನಬಹುದು. ತರಗತಿಯಲ್ಲಿ ಶಿಸ್ತಿನ ಸಿಪಾಯಿಯ ಹಾಗೆ ನಿರ್ವಹಿಸುತ್ತಿದ್ದ ಎಮ್‌ಎಡಬ್ಲ್ಯು ನಮ್ಮ ಉನ್ನತ ಗಣಿತ ಕಲಿಕೆಗೆ ಅಡಿಪಾಯ ಹಾಕಿದವರು. 1955ರಲ್ಲಿ ಸೇವೆಗೆ ಪ್ರವೇಶಿಸಿದ ಈ ಮೇಷ್ಟ್ರು 1962 ರಿಂದ 1974ರವರೆಗೆ ಬಂಗಾರಪೇಟೆಯ ನಮ್ಮ ಶಾಲೆಯಲ್ಲಿದ್ದರು. ಇವರ ತದನಂತರ ವರ್ಗಾವಣೆಗಳಾಗಿ 1991ರಲ್ಲಿ ನಿವೃತ್ತರಾದರು. ಇವರ ಅವಧಿಯಲ್ಲಿ ಗಣಿತ ಶಿಕ್ಷಣ ಪಡೆದ ನೂರಾರು ವಿದ್ಯಾರ್ಥಿಗಳು ಇಂದು ಅತ್ಯುನ್ನತ ಹುದ್ದೆಗಳಲ್ಲಿದ್ದಾರೆ, ನಿವೃತ್ತರಾಗಿದ್ದಾರೆ. ನಿವೃತ್ತಿಯ ನಂತರ ಖಾಸಗಿ ಶಾಲೆಯೊಂದರಲ್ಲಿ ಮುಖ್ಯ ಶಿಕ್ಷಕರಾಗಿದ್ದು, ಆ ಶಾಲೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಎಮ್‌ಎಡಬ್ಲ್ಯು ತಮ್ಮ ಶಿಸ್ತು ಮತ್ತು ನೈತಿಕ ತತ್ವಗಳಿಗೆ ಬದ್ಧರಾಗಿದ್ದುದರಿಂದ ಆ ಶಾಲೆಯನ್ನು ತೊರೆಯಬೇಕಾಯಿತು. ಅವರ ಬಳಿ ಖಾಸಗಿ ಟ್ಯೂಷನ್ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸಂಖ್ಯೆ ಅಪರಿಮಿತ. 92 ವಯೋಮಾನದ ಎಮ್‌ಎಡಬ್ಲ್ಯು ಈಗ ಬೆಂಗಳೂರಿನಲ್ಲಿ ನೆಲೆಸಿದ್ದು, ಸೆಪ್ಟಂಬರ್ 6ರಂದು ಖಾಸಗಿ ಸಂಸ್ಥೆಯೊಂದರಲ್ಲಿ ಸನ್ಮಾನಿಸಲ್ಪಡುತ್ತಿದ್ದಾರೆ.
ಈ ಮೇಷ್ಟ್ರು ಕಲಿಸಿದ ಶಿಸ್ತು ಮತ್ತು ಸಂಯಮ ಇಂದಿಗೂ ವೈಯುಕ್ತಿಕ ಬದುಕಿನ ದಾರಿ ದೀವಿಗೆಯಾಗಿದೆ. ಇವರ 92ರ ಹರೆಯದ ಭಾವಚಿತ್ರ ಇಲ್ಲಿದೆ.

ಅಷ್ಟೇ ಸ್ಮರಣೀಯರು ಸೈಯದ್ ಮುನೀರ್ (ಎಸ್‌ಎಮ್) ಇಂಗ್ಲಿಷ್ ಮಾಸ್ತರು. ಈಗ ನಮ್ಮ ನಡುವೆ ಇಲ್ಲ. ಆದರೆ ಅವರ ಸರಳ ಸಜ್ಜನಿಕೆ, ವಿದ್ಯಾರ್ಥಿಗಳೊಂದಿಗೆ ಬೆರೆಯುತ್ತಿದ್ದ ವೈಖರಿ ಇವೆಲ್ಲವೂ , ನಮಗಿಂತಲೂ ಕಿರಿಯರ ಒಡನಾಟದಲ್ಲಿ ಅನುಸರಿಸಬೇಕಾದ ನೀತಿಗಳ ಬೋಧನೆಯಂತಿರುತ್ತಿತ್ತು. ಎಮ್‌ಎಡಬ್ಲ್ಯು ವರ್ಗವಾದ ನಂತರ ಗಣಿತ ಕಲಿಸಲು ಬಂದ ಎಚ್ ಎಸ್ ನರಸಿಂಹ ಮೂರ್ತಿ (ಎಚ್‌ಎಸ್‌ಎನ್) ನಮ್ಮ ಉನ್ನತ ಗಣಿತದ ಜ್ಞಾನಕ್ಕೆ ಸುಭದ್ರ ಅಡಿಪಾಯ ಹಾಕಿದ ಮಹಾನ್ ಶಿಕ್ಷಕ. ಮಾಲೂರಿನಿಂದ ನಿತ್ಯ ಬರುತ್ತಿದ್ದ ಇವರು ಖಾಸಗಿ ಟ್ಯೂಷನ್ ಎಂದರೆ ಉರಿದುಬೀಳುತ್ತಿದ್ದರು. ಹತ್ತನೆ ತರಗತಿಯಲ್ಲಿ ಪರೀಕ್ಷೆಗೆ ನಾಲ್ಕು ತಿಂಗಳ ಮುನ್ನವೇ, ಬೆಳಿಗ್ಗೆ 8 ಗಂಟೆಗೆ ಮಾಲೂರಿನಿಂದ ಬಂದು ವಿಶೇಷ ತರಗತಿಗಳನ್ನು ನಡೆಸುತ್ತಿದ್ದುದು ಇವರ ವೈಶಿಷ್ಟ್ಯ. ಇವರೂ ಮಹಾ ಮುಂಗೋಪಿ, ಶಿಕ್ಷೆ ನೀಡುವುದರಲ್ಲಿ ಎತ್ತಿದ ಕೈ. ಕ್ರಿಕೆಟ್ ಪ್ರಿಯರೂ ಹೌದು, ಟೆಸ್ಟ್ ಮ್ಯಾಚ್ ಬಂದರೆ ನಮಗೆ ಟೆಸ್ಟ್ ಕೊಟ್ಟು ಕಾಮೆಂಟಿರಿ ಕೇಳುತ್ತಿದ್ದರು. ನಾವು ಸ್ಕೋರ್ ಕೇಳಿದಾಗ ಸಿಟ್ಟು ಮಾಡದೆ ಹೇಳುತ್ತಿದ್ದರು.
ಪಿಯುಸಿ-ಪದವಿ ವ್ಯಾಸಂಗದ ದಿನಗಳು
ಪಿಯುಸಿಗೆ ಅದೇ ಕಾಲೇಜಿನಲ್ಲಿ ಪ್ರವೇಶಿಸಿದಾಗ ವಿದ್ಯೆ ಮತ್ತು ಜೀವನ ಎರಡನ್ನೂ ಕಲಿಸಿದ ಇಬ್ಬರನ್ನು ಹೆಸರಿಸಬಹುದಾದರೆ ಅದು ಮೈಕೆಲ್ ಎಂಬ ಅಕೌಂಟೆನ್ಸಿ ಅಧ್ಯಾಪಕರು ಮತ್ತು ಆರ್ ಎಸ್ ಕೃಷ್ಣಯ್ಯ ಶೆಟ್ಟಿ (ಆರ್‌ಎಸ್‌ಕೆ) , ಇತಿಹಾಸ ಅಧ್ಯಾಪಕರು. ಹೃದಯ ಸಮಸ್ಯೆ ಇದ್ದ ಮೈಕೆಲ್ ಆಗಾಗ್ಗೆ ಸಿಬ್ಬಂದಿಯ ಕೋಣೆಗೆ ಹೋಗಿ, ವಿರಮಿಸಿ ಬಂದು ಪಾಠ ಮಾಡುತ್ತಿದ್ದರು. ಅಂದು ಅವರು ಕಲಿಸಿದ ಅಕೌಂಟೆನ್ಸಿ ಇಂದಿಗೂ ನೆರವಾಗುತ್ತಿದೆ. ಬಹಳ ಬೇಗನೆ ಮೈಕೆಲ್ ನಮ್ಮನ್ನು ಅಗಲಿದ್ದರು, 1990ರಲ್ಲಿ. ಇತಿಹಾಸದ ಅಧ್ಯಾಪಕರಾಗಿದ್ದ ಕೃಷ್ಣಯ್ಯ ಶೆಟ್ಟಿ ನನಗೆ ಎರಡು ವರ್ಷ ಟೈಪಿಂಗ್ ಕಲಿಯಲು ಹಣಕಾಸು ಒದಗಿಸಿದ್ದರು. ನಾನು ಎಮ್‌ಎ ಮಾಡಬೇಕೆಂಬುದು ಅವರ ಆಶಯವಾಗಿತ್ತು. ಅದಕ್ಕಾಗಿ ಎಲ್ಲ ಖರ್ಚುಗಳನ್ನೂ ಭರಿಸಲು ತಯಾರಿದ್ದರು. ಬೆಂಗಳೂರಿನ ಬಡಗನಾಡು ಹಾಸ್ಟೆಲ್‌ನಲ್ಲಿ ಉಚಿತ ಸೀಟು ಕೊಡಿಸಿದ್ದರು. ಆದರೆ ನನ್ನದೇ ಸಮಸ್ಯೆಗಳಿಂದ, ಅಧ್ಯಾಪಕನಾಗುವ ನನ್ನ ಕನಸು ಕೈಗೂಡಲಿಲ್ಲ.

ನಾನು ಬ್ಯಾಂಕಿನಲ್ಲಿದ್ದಾಗ, ಕೆಜಿಎಫ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಆರ್‌ಎಸ್‌ಕೆ ಒಮ್ಮೆ ನನ್ನನ್ನು ಕರೆಸಿ, ಅಂಬೇಡ್ಕರ್ ಕುರಿತು ಭಾಷಣಕ್ಕೆ ವಿಷಯ ಒದಗಿಸುವಂತೆ ಕೇಳಿದಾಗ ನನಗೆ ಅಚ್ಚರಿಯಾಗಿತ್ತು. ಆದರೆ ಅವರು ಅಂದು ಆಡಿದ ಮಾತು ಇಂದಿಗೂ ನೆನಪಿದೆ “ ನಾನು ನಿನಗೆ ಇತಿಹಾಸ ಕಲಿಸಿದ ಗುರು ಇರಬಹುದು ಕಣೋ ಆದರೆ ಈ ವಿಷಯದಲ್ಲಿ ನನಗಿಂತಲೂ ನಿನಗೆ ಹೆಚ್ಚಿನ ಅರಿವು ಇದೆ, ಬರೆದುಕೊಡು ” ಎಂಬ ಅವರ ಮಾತುಗಳು ನನ್ನ ಕಣ್ಣಲ್ಲಿ ಕಂಬನಿ ಮೂಡಿಸಿತ್ತು. ಅವರೂ ಕೆಲವು ವರ್ಷಗಳ ಹಿಂದೆ ನಿರ್ಗಮಿಸಿದರು. ಇದೇ ಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಎಚ್ ಆರ್ ರಂಗನಾಥ ರಾವ್ (ಎಚ್‌ಆರ್‌ಆರ್) ಮತ್ತೋರ್ವ ಪ್ರಾತಃಸ್ಮರಣೀಯರು. ಸಂಸ್ಕೃತ ಶಿಕ್ಷಕರು ಇಲ್ಲದಿದ್ದುದರಿಂದ ಕೆಲವೊಮ್ಮೆ ಇವರ ಕನ್ನಡ ತರಗತಿಗಳಿಗೆ ಹಾಜರಾಗುತ್ತಿದ್ದೆ. ಚರ್ಚಾ ಸ್ಪರ್ಧೆ, ಗಾಯನ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಉತ್ತೇಜನ ನೀಡಿದ ಗುರುಗಳು ಇವರು. ಹೈಸ್ಕೂಲಿನಲ್ಲಿದ್ದಾಗ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಗಾಂಧೀಜಿ ಕುರಿತು ಬರೆದಿದ್ದೆ. ಸ್ಪರ್ಧೆಯ ಹಿಂದಿನ ಕೋಲಾರದಲ್ಲಿದ್ದ ಅವರ ಮನೆಗೆ ನನ್ನನ್ನು ಕರೆಸಿಕೊಂಡು, ಅವರ ಮನೆಯಲ್ಲೇ ತಂಗಿದ್ದು, ಊಟ ಮಾಡಿದ್ದೆ ರಾತ್ರಿ ಹನ್ನೆರಡರವರೆಗೂ ನನಗೆ ವಿಷಯವನ್ನು ಹೇಳಿಕೊಟ್ಟಿದ್ದರು. ನನಗೆ ಎರಡನೆ ಬಹುಮಾನ ಬಂದಿತ್ತು. ನನ್ನ ಸಾಹಿತ್ಯಾಸಕ್ತಿಗೆ ಪ್ರೇರಣೆ ನೀಡಿದ ಶಿಕ್ಷಕರು ಎಚ್‌ಆರ್‌ಆರ್.
ಕೋಲಾರದಲ್ಲಿ ಪದವಿ ತರಗತಿ ಪ್ರವೇಶಿಸುವ ವೇಳೆಗೆ ಕೌಟುಂಬಿಕ ಸಂಕಟ, ಸಂಕಷ್ಟಗಳು ನನ್ನ ಹಾಜರಾತಿಯನ್ನು ನಿರ್ಬಂಧಿಸಿದ್ದವು. ಬಂಗಾರಪೇಟೆಯಿಂದ ಕೋಲಾರಕ್ಕೆ ಹೋಗಲು ಬಸ್ ಚಾರ್ಜ್ ಸಹ ಇಲ್ಲದೆ ಕಾಲ ಕಳೆದ ದಿನಗಳು ಅವು. ಬಿಕಾಂ ಅಂತಿಮ ವರ್ಷದಲ್ಲಿ ಪರೀಕ್ಷೆಗೆ ಹಾಜರಾಗಬೇಕಾದ ಹಾಜರಾತಿ ಇಲ್ಲದ ಕಾರಣ ಪ್ರಾಂಶುಪಾಲರು ಹಾಲ್ ಟಿಕೆಟ್ ಕೊಡಲು ನಿರಾಕರಿಸಿದ್ದರು. ಆಗ ನನ್ನ ನೆರವಿಗೆ ಬಂದವರು ಎಂ. ಚಂದ್ರೇಶೇಖರ್ ರಾವ್ (ಎಮ್‌ಸಿಅರ್)̧ ಸ್ಟಾಟಿಸ್ಟಿಕ್ಸ್ ಅಧ್ಯಾಪಕರು. ಬಹುಶಃ ಅವರ ಶಿಫಾರಸು ಇಲ್ಲದೆ ಹೋಗಿದ್ದರೆ ನನಗೆ ಪರೀಕ್ಷೆ ಬರೆಯಲು ಆಗುತ್ತಿರಲಿಲ್ಲ. ಅವರ ನಿರೀಕ್ಷೆಗೆ ತಕ್ಕಂತೆ ಉತ್ತಮ ಅಂಕ ಗಳಿಸಿ, ಬಂಗಾರಪೇಟೆಯಿಂದ ಬರುವ ವಿದ್ಯಾರ್ಥಿಗಳ ಪೈಕಿ ಮೊದಲ ಸ್ಥಾನಪಡೆದಿದ್ದೆ. ಈಗ ಇವರು ಮೈಸೂರಿನಲ್ಲೇ ಇದ್ದಾರೆ. ನಮ್ಮ ಭವಿಷ್ಯದ ಬದುಕಿನ ಹಾದಿ ಸುಗಮಗೊಳಿಸಿದ ಮಹನೀಯರು ಎಮ್‌ಸಿಆರ್ ಎಂದರೆ ಅತಿಶಯೋಕ್ತಿಯಲ್ಲ.
ಕೊನೆಯ ಹನಿ
ನನ್ನ ಈ ಪಯಣ ಕಥನದಲ್ಲಿ ಉಲ್ಲೇಖಿಸಿರುವ ಎಲ್ಲ ಶಿಕ್ಷಕರ ಬೋಧನೆಯ ವೈಖರಿ, ಶೈಲಿಯನ್ನು ವಿವರಿಸುತ್ತಾ ಹೋದರೆ ಅದು ದೀರ್ಘ ಪ್ರಬಂಧವೇ ಆಗುತ್ತದೆ. ಅಷ್ಟು ಪ್ರಭಾವಶಾಲಿಯಾಗಿ ನನ್ನಲ್ಲಿ ಜ್ಞಾನಾರ್ಜನೆಗೆ ನೀರೆರೆದ ಈ ಶಿಕ್ಷಕರು ಮತ್ತು ಇವರೊಡನೆ ಇನ್ನು ಅನೇಕರು , ಈ ಕ್ಷಣದ ನನ್ನ ವ್ಯಕ್ತಿತ್ವವನ್ನೂ ರೂಪಿಸಿದ, ತಾತ್ವಿಕ ನೈತಿಕತೆಯನ್ನೂ ಉದ್ಧೀಪನಗೊಳಿಸಿದ, ಜೀವನಾದರ್ಶನವನ್ನೂ ಕಲಿಸಿದ ಸ್ಮರಣೀಯ ವ್ಯಕ್ತಿಗಳು. ಶಿಕ್ಷಕರ ದಿನದಂದು ಇವರೆಲ್ಲರನ್ನು ಸ್ಮರಿಸುವುದು ಹೆಮ್ಮೆಯ ವಿಚಾರ ಎಂದೇ ಭಾವಿಸುತ್ತೇನೆ.
-೦-೦-೦-೦-















