ಯಾದಗಿರಿ : ಆಸ್ತಿ ಮಾರಾಟ ವಿಚಾರದಲ್ಲಿ ಬಿಜೆಪಿ ಮುಖಂಡರಿಂದ ನನಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಹೈಡ್ರಾಮಾ ಘಟನೆ ಮಂಗಳವಾರ ಸಂಜೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಯಾದಗಿರಿ ತಾಲೂಕಿನ ಮುದ್ನಾಳ್ ಗ್ರಾಮದ ಶರಣು ಎಂಬಾತನೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಜಿಲ್ಲಾಧಿಕಾರಿಗಳು ಕಚೇರಿಯಲ್ಲಿ ಇರದ ಸಂದರ್ಭದಲ್ಲಿ ಡಿಸಿ ಛೇಂಬರ್ ಮುಂಭಾಗದಲ್ಲಿಯೇ ಈ ಘಟನೆ ನಡೆದಿದ್ದು, ಆಸ್ತಿ ಮಾರಾಟ ವಿಚಾರದಲ್ಲಿ ಬಿಜೆಪಿ ಮುಖಂಡರಾದ ಲಲಿತಾ ಅನಪುರ ಹಾಗೂ ಚಂದ್ರಶೇಖರ ಮಾಗನೂರ ಅವರು ನನಗೆ ಮೋಸ ಮಾಡಿದ್ದಾರೆ ಎಂದು ಶರಣು ಆರೋಪಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷ ಸೇವಿಸಿದ ವ್ಯಕ್ತಿ ಶರಣುನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಬಿಜೆಪಿ ಮುಖಂಡರ ವಿರುದ್ಧ ಆರೋಪ ಮಾಡಿ ವಿಷ ಸೇವಿಸಿರುವ ಶರಣು ವಿರುದ್ಧ ಬಿಜೆಪಿ ಮುಖಂಡರಾದ ಲಲಿತಾ ಅನಪೂರ ಹಾಗೂ ಚಂದ್ರಶೇಖರ ಮಾಗನೂರ ಅವ್ರು ತಮ್ಮ ಅಪಾರ ಬೆಂಬಲಿಗರ ಜೊತೆ ಯಾದಗಿರಿ ನಗರದ ಸುಭಾಷ್ ವೃತ್ತದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ, ವಿಷ ಸೇವಿಸಿರುವ ಯುವಕ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾನೆ ಅವನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ರು. ನಮ್ಮನ್ನು ತೇಜೋವಧೆ ಮಾಡಲು ಮುಂದಾಗಿರುವ ಆ ಯುವಕನ ಆರೋಪ ನಿರಾಧಾರವಾದುದು ಅವನ ಹಿಂದೆ ನಿಂತು ಇದನ್ನು ಯಾರು ಮಾಡಿಸಿದ್ದಾರೆ ಎನ್ನುವುದನ್ನು ಪೊಲೀಸರು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ರು. ಪ್ರತಿಭಟನಾ ಸ್ಥಳಕ್ಕೆ ಎಸಿ ಶಾಲಂ ಹುಸೇನ್ ಭೇಟಿ ನೀಡಿದ ಬಳಿಕ ಬಿಜೆಪಿ ಮುಖಂಡರು ಪ್ರತಿಭಟನೆಯಿಂದ ಹಿಂದೆ ಸರಿದ್ರು