ತಮಿಳುನಾಡು ಸರ್ಕಾರದೊಂದಿಗಿನ ಎಲ್ಲಾ ಸಂವಹನಗಳು “ಇಂಗ್ಲಿಷ್‌ನಲ್ಲಿ ಮಾತ್ರ” ಇರುವಂತೆ ನೋಡಿಕೊಳ್ಳಬೇಕೆಂದು ಮದ್ರಾಸ್ ಹೈಕೋರ್ಟ್ ಗುರುವಾರ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ಇದೇ ವೇಳೆ ಅಧಿಕೃತ ಭಾಷಾ ಕಾಯ್ದೆಯ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಎನ್. ಕಿರುಬಾಕರನ್ ಮತ್ತು ಎಂ.ದುರೈಸ್ವಾಮಿ ಅವರ ವಿಭಾಗೀಯ ಪೀಠವು, ನಿಯಮಗಳ ಅಡಿಯಲ್ಲಿ ಆಂಗ್ಲ ಭಾಷೆಯಲ್ಲಿ ಮನವಿ ನೀಡಿದರೆ, ಕಡ್ಡಾಯವಾಗಿ ಅದೇ ಭಾಷೆಯಲ್ಲಿ ಉತ್ತರವನ್ನು ಕಳುಹಿಸುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದೆ.
ರಾಜ್ಯ ಮತ್ತು ಅದರ ಸಂಸದರು ಹಾಗೂ ಸಾರ್ವಜನಿಕರೊಂದಿಗೆ ಕೇಂದ್ರ ಸರ್ಕಾರ ಮಾಡುವ ಎಲ್ಲಾ ಸಂವಹನಗಳಲ್ಲಿ ಇಂಗ್ಲಿಷ್ ಅನ್ನು ಮಾತ್ರ ಬಳಸುವಂತೆ ಆದೇಶವನ್ನು ಕೋರಿ ಮಧುರೈ ಲೋಕಸಭಾ ಸಂಸದ ಸು ವೆಂಕಟೇಶನ್ ಅವರು ಸಲ್ಲಿಸಿದ್ದ ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಈ ಆದೇಶವನ್ನು ನೀಡಿದೆ.
ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಅವರು ವೆಂಕಟೇಶ ಅವರಿಗೆ ಹಿಂದಿಯಲ್ಲಿ ಉತ್ತರಿಸಿದ ಬಳಿಕ ವೆಂಕಟೇಶ್ ಅವರು ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು.
ಪಾಂಡಿಚೇರಿಯಲ್ಲಿ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ನಡೆಸುವ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸುವಂತೆ ಗೃಹ ವ್ಯವಹಾರಗಳ ರಾಜ್ಯ ಸಚಿವಾಲಯಕ್ಕೆ ಪತ್ರ ಬರೆದಿದ್ದೆ, ಅಲ್ಲಿಂದ ಹಿಂದಿಯಲ್ಲಿ ಉತ್ತರ ಬಂದಿತ್ತು ಎಂದು ಸಂಸದ ವೆಂಕಟೇಶ್ ಹೇಳಿರುವುದಾಗಿ ವರದಿಯಾಗಿದೆ.
ಇದು ಮಾಹಿತಿ ಮತ್ತು ಸಂವಹನದ ಯುಗವಾಗಿದೆ, ಆದ್ದರಿಂದ ಎಲ್ಲಾ ಭಾಷೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಸಂವಿಧಾನದ ಆರ್ಟಿಕಲ್ 350 (ಕುಂದುಕೊರತೆಗಳ ನಿವಾರಣೆಗೆ ಬಳಸಬೇಕಾದ ಭಾಷೆ) ಅನ್ನು ಉಲ್ಲೇಖಿಸಿದ ನ್ಯಾಯಾಲಯವು, ಒಬ್ಬ ವ್ಯಕ್ತಿಯು ಭಾರತದಲ್ಲಿ ಬಳಕೆಯಲ್ಲಿರುವ ಯಾವುದೇ ಭಾಷೆಗಳಲ್ಲಿ ಕೇಂದ್ರಕ್ಕೆ ಪತ್ರ ಬರೆಯಲು ಅರ್ಹ ಎಂದು ಹೇಳಿದೆ.
ಇದೇ ವೇಳೆ, “ಮಾತೃಭಾಷೆಗೆ ಪ್ರಾಮುಖ್ಯತೆ ನೀಡಬೇಕು” ಎಂದು ಕೋರ್ಟ್ ಹೇಳಿರುವುದಾಗಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.