ಸ್ವತಂತ್ರ ಭಾರತ ತನ್ನ 75 ವರ್ಷಗಳನ್ನು ಪೂರೈಸಲಿದೆ. ಇಡೀ ದೇಶವೇ ಅತ್ಯುತ್ಸಾಹದೊಂದಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷವನ್ನು ಪ್ರವೇಶಿಸುತ್ತಿದೆ. ಸದಾ ಸಾಂಕೇತಿಕ ವೈಭವೀಕರಣದ ಮೂಲಕವೇ ವಾಸ್ತವಗಳನ್ನು ಮರೆತು ಮುಂದಡಿಯಿಡುವ ಭಾರತೀಯ ಪರಂಪರೆಯನ್ನು ಈ ಸಂದರ್ಭದಲ್ಲಿ ಇನ್ನೂ ವಿಜೃಂಭಣೆಯಿಂದ ಅನುಸರಿಸಲಾಗುತ್ತಿದೆ. ಸಮಸ್ತ ದೇಶದ ಜನತೆ ಆಗಸ್ಟ್ 15ರಂದು ಸಾಮೂಹಿಕ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಸ್ವತಂತ್ರ ಭಾರತದ ಒಕ್ಕೊರಲ ಧ್ವನಿ ಜಗತ್ತಿನಾದ್ಯಂತ ಮೊಳಗಲಿದೆ. ಕಾರ್ಪೋರೇಟ್ ಕೆಂಪುಕೋಟೆಯಲ್ಲಿ ನಿಂತು ಸ್ವತಂತ್ರ ದಿನದ ಭಾಷಣ ಮಾಡಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಏಳು ವರ್ಷದ ಅಧಿಕಾರಾವಧಿಯಲ್ಲಿ ಪ್ರಪ್ರಥಮ ಬಾರಿ ಆಲಿಸುವವರಾಗಿದ್ದಾರೆ. ಹಾಗಾಗಿ ಆಗಸ್ಟ್ 15ರ ಮನದ ಮಾತುಗಳು ಜನದ ಮಾತುಗಳಾಗುವ ಸಾಧ್ಯತೆಗಳಿವೆ.
74 ವರ್ಷಗಳನ್ನು ಪೂರೈಸಲಿರುವ ಸ್ವತಂತ್ರ ಭಾರತ ತನ್ನದೇ ಆದ ಸಂವಿಧಾನವನ್ನು ತನಗೇ ಅರ್ಪಿಸಿಕೊಂಡು 70 ವರ್ಷಗಳನ್ನು ಪೂರೈಸಿದೆ. ಈ ದೇಶದ ಬಹುತ್ವದ ನೆಲೆಗಳನ್ನು, ಬಹುಮುಖಿ ಸಂಸ್ಕೃತಿಯನ್ನು ಮತ್ತು ವೈವಿಧ್ಯಮಯ ಸಾಮಾಜಿಕ ಚೌಕಟ್ಟುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಭಾರತ ಬಹುದೂರ ಸಾಗಿದೆಯಾದರೂ, ಹಿಂತಿರುಗಿ ನೋಡಿದಾಗಲೆಲ್ಲಾ ಕವಿ ಸಿದ್ಧಲಿಂಗಯ್ಯನವರ “ ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ” ಸಾಲುಗಳು ನೆನಪಾಗುತ್ತಲೇ ಇರುತ್ತವೆ. 1947ರ ನಂತರ ಭಾರತದ ಪ್ರಜಾತಂತ್ರ ವ್ಯವಸ್ಥೆ ಕ್ರಮಿಸಿದ ಹಾದಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಡಾ ಬಿ ಆರ್ ಅಂಬೇಡ್ಕರ್, ಸಂವಿಧಾನ ಅರ್ಪಣೆಯ ಸಂದರ್ಭದಲ್ಲಿ ಆಡಿದ ಎಚ್ಚರಿಕೆಯ ಮಾತುಗಳು ಮತ್ತೆ ಮತ್ತೆ ನೆನಪಾಗುತ್ತವೆ.
#ಆತ್ಮನಿರ್ಭರಭಾರತ ಇಂದು ಕವಲು ಹಾದಿಯಲ್ಲಿ ನಿಂತಿದೆ. ಈ ದೇಶದ ಸಂವಿಧಾನ ಸಾರ್ವಭೌಮ ಪ್ರಜೆಗಳಿಗೆ ನೀಡಿರುವ ಬದುಕುವ ಹಕ್ಕುಗಳನ್ನು ಕಸಿದುಕೊಳ್ಳಲು ಎರಡು ಪ್ರಬಲ ಶಕ್ತಿಗಳು ಸಕ್ರಿಯವಾಗಿವೆ. ನವ ಉದಾರವಾದ ಮತ್ತು ಹಣಕಾಸು ಬಂಡವಾಳ ತನ್ನ ಔದ್ಯಮಿಕ ಸಾಮ್ರಾಜ್ಯ ವಿಸ್ತರಣೆಗಾಗಿ ತಳಮಟ್ಟದ ಜನಸಮುದಾಯಗಳ ನಿತ್ಯ ಬದುಕಿನ ಹಕ್ಕುಗಳನ್ನೇ ಕಸಿದುಕೊಳ್ಳುತ್ತಿರುವುದು ಢಾಳಾಗಿ ಕಾಣಿಸುತ್ತಿದೆ. ಸಾಮಾಜಿಕ ತಾರತಮ್ಯ ಮತ್ತು ಆರ್ಥಿಕ ಅಸಮಾನತೆಯ ಬುನಾದಿಯ ಮೇಲೆಯೇ ನಿರ್ಮಾಣವಾಗುತ್ತಿರುವ ಒಂದು ಅರ್ಥವ್ಯವಸ್ಥೆಯನ್ನು ಸಾಕಾರಗೊಳಿಸಲು ಮತೀಯವಾದಿ ಫ್ಯಾಸಿಸ್ಟ್ ಶಕ್ತಿಗಳು, ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿನ ಒಳಬಿರುಕುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ಕೆಂಪುಕೋಟೆಯಲ್ಲಿ ಪ್ರತಿಧ್ವನಿಸುವ ಪ್ರಜಾತಂತ್ರ ಮೌಲ್ಯಗಳ ಪರಾಕುಗಳು ಸನಿಹದಲ್ಲೇ ನಡೆಯುತ್ತಿರುವ ರೈತರ ಹೋರಾಟದ ನಡುವೆ ಕಳೆದುಹೋಗುವುದನ್ನು ಗಮನಿಸದೆ ಹೋದರೆ ನಾವು ಮತ್ತೊಮ್ಮೆ ವಸಾಹತು ಕಾಲಘಟ್ಟದ ಪರಿಸ್ಥಿತಿಗೇ ಹಿಂದಿರುಗಿಬಿಡುತ್ತೇವೆ.
ಭಾರತದ ಪ್ರಭುತ್ವದ 74 ವರ್ಷಗಳ ಹೆಜ್ಜೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪಕ್ಷಾತೀತವಾಗಿ ಕಾಣಬಹುದಾದ ಒಂದು ಎಳೆ ಎಂದರೆ, ಮಾನವ ಹಕ್ಕುಗಳು ಮತ್ತು ಮೂಲಭೂತ ಹಕ್ಕುಗಳ ಬಗ್ಗೆ ಆಳುವ ವರ್ಗಗಳಲ್ಲಿರುವ ಅಸೂಕ್ಷ್ಮತೆ ಮತ್ತು ನಿರ್ಲಕ್ಷ್ಯ ಮನೋಭಾವ. ಇಂದಿಗೂ ಸಹ ಮೂಲಭೂತ ಹಕ್ಕುಗಳ ಪ್ರಶ್ನೆಗೆ ಮುಖಾಮುಖಿಯಾದರೆ ರಾಜಕೀಯ ಸಂಕಥನಗಳು ತುರ್ತುಪರಿಸ್ಥಿತಿಯ ಸಂದರ್ಭಕ್ಕೆ ಜಾರಿಬಿಡುತ್ತವೆ. ಸಂವಿಧಾನ ತಿದ್ದುಪಡಿಯ ಮೂಲಕ ಪ್ರಜೆಗಳ ಹಕ್ಕುಗಳನ್ನು ಕಸಿದುಕೊಂಡ ಆ ಗಳಿಗೆಯನ್ನು ಹೊರತುಪಡಿಸಿ ನೋಡಿದರೂ ಸ್ವತಂತ್ರ ಭಾರತದಲ್ಲಿ, ಮೂಲಭೂತ ಹಕ್ಕುಗಳು ಆಳುವ ವರ್ಗಗಳು ಸಾರ್ವಭೌಮ ಪ್ರಜೆಗಳಿಗೆ ಕೊಡುವ ಒಂದು ವಿದ್ಯಮಾನವಾಗಿಯೇ ಕಾಣುತ್ತಿವೆ. ಇಂದಿಗೂ ಸಹ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸಾಂವಿಧಾನಿಕ ಹಕ್ಕುಗಳು ಮರೀಚಿಕೆಯಾಗಿಯೇ ಉಳಿದಿರುವುದನ್ನು ಗಮನಿಸಬಹುದು.
“ ಪ್ರಭುತ್ವದ ಆಡಳಿತ ನೀತಿಗಳ ವಿರುದ್ಧ ಮಾತನಾಡುವವರು ಅಪರಾಧಿಗಳಾಗುತ್ತಾರೆ. ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ಟೀಕೆ ಮಾಡುವವರನ್ನು ಬಂಧಿಸಲಾಗುತ್ತದೆ. ಆಡಳಿತ ವ್ಯವಸ್ಥೆಯ ಲೋಪಗಳ ವಿರುದ್ಧ ದನಿ ಎತ್ತುವ ಸಾಮಾನ್ಯ ಪ್ರಜೆಗಳ ಪ್ರತಿರೋಧದ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತದೆ. ಸರ್ಕಾರದ ಜನವಿರೋಧಿ ಆಡಳಿತದ ವಿರುದ್ಧ ಸಾರ್ವಜನಿಕವಾಗಿ ನಡೆಸುವ ಪ್ರತಿಭಟನೆಗಳು ಕಾನೂನುಬಾಹಿರವಾಗುತ್ತವೆ. ತಮ್ಮ ಬದುಕುವ ಹಕ್ಕುಗಳಿಗಾಗಿ ಹೋರಾಡುವ ತಳಸ್ತರದ ಜನಸಮುದಾಯದ ಹೋರಾಟಗಳನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಲಾಗುತ್ತದೆ. ಸರ್ಕಾರ ಜನಸಾಮಾನ್ಯರ ಮೇಲೆ ಹೇರುವ ಜನವಿರೋಧಿ ಕಾಯ್ದೆ ಕಾನೂನುಗಳನ್ನು ವಿರೋಧಿಸುವುದು ದೇಶದ್ರೋಹವಾಗುತ್ತದೆ. ನಾಳಿನ ಬದುಕಿನ ಪ್ರಶ್ನೆ ಎದುರಿಸುತ್ತಿರುವ ಕೃಷಿಕರು, ಕಾರ್ಮಿಕರು ಮತ್ತು ದುಡಿಯುವ ವರ್ಗಗಳ ಮುಷ್ಕರಗಳು ನಿಷಿದ್ಧವಾಗುತ್ತವೆ. ಈ ನೊಂದ, ಶೋಷಿತ ಜನಸಮುದಾಯಗಳಿಗೆ ಒತ್ತಾಸೆಯಾಗಿ ನಿಲ್ಲುವವರನ್ನು ಕರಾಳಶಾಸನಗಳಡಿ ಬಂಧಿಸಲಾಗುತ್ತದೆ. ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿರುವ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರು ಜಾಮೀನು ದೊರೆಯದೆ ಸೆರೆಮನೆಗಳಲ್ಲಿ ಕೊಳೆಯಬೇಕಾಗುತ್ತದೆ ”.
ಈ ಮೇಲಿನ ಸನ್ನಿವೇಶಗಳು 1947ರ ಪೂರ್ವದ ವಸಾಹತು ಆಳ್ವಿಕೆಯಲ್ಲೂ ಇದ್ದವು, 2021ರ #ಆತ್ಮನಿರ್ಭರಭಾರತದ ಆಳ್ವಿಕೆಯಲ್ಲೂ ಇವೆ. ಅಂದಿನ ಕಾಲಾಪಾನಿಗಳು ಇಂದು ತಲೋಜಾಗಳಲ್ಲಿ, ತಿಹಾರ್‍ನಲ್ಲಿ ಕಾಣುತ್ತಿವೆ. ಅಂದಿನ ಖುದಿರಾಮ್ ಬೋಸ್‍ಗಳು ಇಂದು ಸ್ಟ್ಯಾನ್‍ಸ್ವಾಮಿಯ ರೂಪದಲ್ಲಿ ಕಾಣುತ್ತಿದ್ದಾರೆ. ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧ ತಮ್ಮ ಬದುಕಿನ ಹಕ್ಕುಗಳಿಗಾಗಿ, ನಿಸರ್ಗದ ಮೇಲಿನ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಆದಿವಾಸಿಗಳು ಇಂದಿಗೂ ಛತ್ತಿಸ್‍ಘಡದಲ್ಲಿ, ಜಾರ್ಖಂಡ್‍ನಲ್ಲಿ, ಒಡಿಷಾದ ದಟ್ಟಾರಣ್ಯಗಲ್ಲಿ, ಪಶ್ಚಿಮ ಘಟ್ಟಗಳಲ್ಲಿ ಹೋರಾಡುತ್ತಲೇ ಇದ್ದಾರೆ. ಸಾವಿರಾರು ಆದಿವಾಸಿಗಳು ಇನ್ನೂ ಸೆರೆಮನೆಯಲ್ಲೇ ಕೊಳೆಯುತ್ತಿದ್ದಾರೆ. ಈ ಬುಡಕಟ್ಟು ಸಮುದಾಯಗಳ ಪರ ದನಿ ಎತ್ತುವ ಬುದ್ಧ್ಧಿಜೀವಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ವಕೀಲರು ಅರ್ಬನ್ ನಕ್ಸಲರಾಗಿ ಬಂಧನಕ್ಕೊಳಗಾಗಿದ್ದಾರೆ.
ವಸಾಹತು ಆಳ್ವಿಕೆಯಲ್ಲಿ ಪ್ರಭುತ್ವದ ಜನವಿರೋಧಿ ಶಾಸನಗಳ ವಿರುದ್ಧ ಹೋರಾಡುವವರನ್ನು ನಿರ್ದಾಕ್ಷಿಣ್ಯವಾಗಿ ದಮನಿಸಲಾಗುತ್ತಿತ್ತು. ಕರಾಳ ಕಾರ್ಮಿಕ ಶಾಸನಗಳನ್ನು ವಿರೋಧಿಸಿದ ಭಗತ್‍ಸಿಂಗ್ ಮತ್ತು ಸಹಚರರು ಗಲ್ಲಿಗೇರಬೇಕಾಯಿತು. ರೌಲಟ್ ಕಾಯ್ದೆ ಮುಂತಾದ ಶಾಸನಗಳ ವಿರುದ್ಧ ಪ್ರತಿಭಟಿಸಿದ ನೂರಾರು ಜನರನ್ನು ಜಲಿಯನ್‍ವಾಲಾಬಾಗ್‍ನಲ್ಲಿ ಕೊಲ್ಲಲಾಯಿತು. ರಾಷ್ಟ್ರೀಯ ನಾಯಕರನ್ನು ಅನಿರ್ದಿಷ್ಟ ಕಾಲ ಬಂಧಿಸಲಾಯಿತು. ಪತ್ರಿಕೆಗಳ ಮೇಲೆ ನಿರ್ಬಂಧ, ನಿಷೇಧ ಹೇರಲಾಯಿತು. ಇಡೀ ಜನಸಮುದಾಯಗಳನ್ನು ಗೃಹಬಂಧನದಲ್ಲಿರಿಸಲಾಯಿತು. ನಿರಂತರ ಹೋರಾಟದಲ್ಲಿ ತೊಡಗಿದ್ದ ಸತ್ಯಾಗ್ರಹಿಗಳ ಆಗ್ರಹಗಳನ್ನು ನಿರ್ಲಕ್ಷಿಸಲಾಯಿತು. ಇದು ಬ್ರಿಟೀಷ್ ಸಾಮ್ರಾಜ್ಯಶಾಹಿಯ ಚರಿತ್ರೆ.
ಸ್ವತಂತ್ರ ಭಾರತದಲ್ಲಿ ಇಂದು ಕಾಶ್ಮೀರದ ಜನತೆ ಕಳೆದ ಎರಡು ವರ್ಷಗಳಿಂದ ಗೃಹಬಂಧನದಲ್ಲಿದ್ದಾರೆ. ಡಿಜಿಟಲ್ ಯುಗದಲ್ಲೂ ಅಂತರ್ಜಾಲ ಸಂಪರ್ಕವಿಲ್ಲದೆ ಕಾಶ್ಮೀರದ ಜನತೆ ಒಂದು ವರ್ಷ ಬದುಕು ಸವೆಸಿದ್ದಾರೆ. ವಿಧಿ 370 ರದ್ದಾದ ಎರಡು ವರ್ಷಗಳ ನಂತರವೂ ಕಾಶ್ಮೀರದಲ್ಲಿ ಒಂದು ಪ್ರಜಾಸತ್ತಾತ್ಮಕ ಚುನಾಯಿತ ಸರ್ಕಾರವನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ. ಸುದ್ದಿ ಮಾಧ್ಯಮಗಳು ನಿರ್ಬಂಧಕ್ಕೊಳಗಾಗಿವೆ. ಇತ್ತ ರಾಜಧಾನಿಯ ಸಮೀಪದಲ್ಲೇ ಕರಾಳ ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಒಂಬತ್ತು ತಿಂಗಳುಗಳಿಂದ ಮುಷ್ಕರ ನಿರತರಾಗಿರುವ ರೈತಾಪಿಯ ಆಗ್ರಹವನ್ನು ಆಲಿಸುವವರೂ ಇಲ್ಲವಾಗಿದೆ. ಇತಿಹಾಸದಲ್ಲೇ ಕಂಡಿರದ ಸುದೀರ್ಘ ಮುಷ್ಕರದಲ್ಲಿ ದೇಶದ ಸಮಸ್ತ ರೈತಾಪಿಯನ್ನು ಪ್ರತಿನಿಧಿಸುವ ಲಕ್ಷಾಂತರ ರೈತರು ತಮ್ಮ ಬದುಕಿನ ಹಕ್ಕಿಗಾಗಿ ಹೋರಾಡುತ್ತಿದ್ದಾರೆ.
ಈ ಹೋರಾಟಗಾರರೊಡನೆ ಮಾತುಕತೆಯಾಡಲೂ ಮುಂದಾಗದಂತಹ ಒಂದು ಪ್ರಭುತ್ವವನ್ನು ನಾವು 2021ರಲ್ಲಿ ಕಾಣುತ್ತಿದ್ದೇವೆ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‍ಆರ್‍ಸಿ ವಿರುದ್ಧ ನಡೆದ ಹೋರಾಟಗಳಲ್ಲಿ ನೂರಾರು ಅಮಾಯಕರನ್ನು ಬಂಧಿಸಲಾಗಿದೆ. ಹಲವರ ಹತ್ಯೆಯಾಗಿದೆ. ವಿದ್ಯಾರ್ಥಿ, ಯುವಕರು ಸೆರೆಮನೆಯಲ್ಲಿದ್ದಾರೆ. ಈ ದೇಶದ ಪ್ರಜೆಗಳ ಅಸ್ತಿತ್ವ ಮತ್ತು ಅಸ್ಮಿತೆಯನ್ನೇ ಪ್ರಶ್ನಾರ್ಹವಾಗಿಸುವ ಒಂದು ಜನವಿರೋಧಿ ಕಾಯ್ದೆಯನ್ನು ವಿರೋಧಿಸುವುದು ದೇಶದ್ರೋಹ ಎನಿಸಿಕೊಳ್ಳುತ್ತಿದೆ. ವಸಾಹತು ಕಾಲದ ರಾಜದ್ರೋಹ ಕಾಯ್ದೆಯನ್ನು ಅವ್ಯಾಹತವಾಗಿ ಬಳಸಲಾಗುತ್ತಿದೆ. ಕರಾಳ ಯುಎಪಿಎ ಕಾಯ್ದೆಯನ್ನು ಎಲ್ಲ ಪ್ರತಿರೋಧದ ದನಿಗಳನ್ನು ಹತ್ತಿಕ್ಕುವ ಬ್ರಹ್ಮಾಸ್ತ್ರದಂತೆ ಬಳಸಲಾಗುತ್ತಿದೆ. ಇದು 2021ರ ಸ್ವತಂತ್ರ ಭಾರತದ ವಾಸ್ತವ.
75ನೆಯ ವರ್ಷಕ್ಕೆ ಕಾಲಿಡುತ್ತಿರುವ ಸ್ವತಂತ್ರ ಭಾರತದ ಸಾರ್ವಭೌಮ ಪ್ರಜೆಗಳು ಯೋಚಿಸಬೇಕಾದ್ದು ಈ ಹಕ್ಕುಗಳ ದಮನದ ಬಗ್ಗೆ. ಸಂವಿಧಾನದಲ್ಲಿ ಗ್ರಾಂಥಿಕವಾಗಿ ಇಂದಿಗೂ ಲಭ್ಯವಿರುವ ಮೂಲಭೂತ ಹಕ್ಕುಗಳನ್ನು ಆಡಳಿತ ವ್ಯವಸ್ಥೆಯಲ್ಲಿ ಹಂತಹಂತವಾಗಿ ನಿರಾಕರಿಸಲಾಗುತ್ತಿರುವುದನ್ನು ಈ ಸಂದರ್ಭದಲ್ಲಿ ಗಂಭೀರವಾಗಿ ಗಮನಿಸಬೇಕಿದೆ. 2018ರ ಭೀಮಾಕೊರೆಗಾಂವ್ ಘಟನೆಗೆ ಸಂಬಂಧಿಸಿದಂತೆ 16 ಸಾಮಾಜಿಕ ಕಾರ್ಯಕರ್ತರನ್ನು, ವಕೀಲರನ್ನು, ಬುದ್ಧಿಜೀವಿಗಳನ್ನು ಅರ್ಬನ್ ನಕ್ಸಲರೆಂದು ಬಂಧಿಸಲಾಗಿದ್ದು, ಇವರ ಪೈಕಿ ಸ್ಟ್ಯಾನ್ ಸ್ವಾಮಿ ಹುತಾತ್ಮರಾಗಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭದ ಕೋಮುಗಲಭೆಗಳಲ್ಲಿ ಹಲವರನ್ನು ಸುಳ್ಳು ಮೊಕದ್ದಮೆಗಳ ಮೇಲೆ ಬಂಧಿಸಲಾಗಿದೆ. ಜೆಎನ್‍ಯು ವಿದ್ಯಾರ್ಥಿಗಳು, ಜಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಸಹ ಯುಎಪಿಎ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದಾರೆ.
2014ರ ನಂತರ ಅತಿ ಹೆಚ್ಚು ದುರ್ಬಳಕೆಯಾಗಿರುವ ಯುಎಪಿಎ ಮತ್ತು ರಾಜದ್ರೋಹದ ಕಾಯ್ದೆಗಳನ್ನು ಸರ್ಕಾರಗಳು ಪ್ರತಿರೋಧವನ್ನು ದಮನಿಸುವ ಅಸ್ತ್ರಗಳನ್ನಾಗಿಯೇ ಬಳಸುತ್ತಿವೆ. 2014ರ ನಂತರದಲ್ಲಿ ಈ ಕಾಯ್ದೆಗಳ ಬಳಕೆ ವ್ಯಾಪಕವಾಗುತ್ತಿದ್ದು , 2010 ರ ನಂತರ ರಾಜದ್ರೋಹದ ಕಾಯ್ದೆಯಡಿ 10938 ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ ಶೇ 65ರಷ್ಟು 2014ರ ನಂತರದಲ್ಲೇ ದಾಖಲಾಗಿವೆ. ರೈತ ಹೋರಾಟದಲ್ಲಿ 6, ಸಿಎಎ ವಿರೋಧಿ ಹೋರಾಟದಲ್ಲಿ 25, ಹಾಥ್ರಾಸ್ ಸಾಮೂಹಿಕ ಹತ್ಯೆಯ ನಂತರ 22 ಮತ್ತು ಪುಲ್ವಾಮಾದಲ್ಲಿ 27 ರಾಜದ್ರೋಹ ಪ್ರಕರಣಗಳು ದಾಖಲಾಗಿವೆ. 2014ರ ನಂತರ ರಾಜಕೀಯ ನಾಯಕರನ್ನು ಮತ್ತು ಸರ್ಕಾರಗಳನ್ನು ಟೀಕಿಸಿದ ಕಾರಣಕ್ಕಾಗಿಯೇ 405 ಜನರ ವಿರುದ್ಧ ರಾಜದ್ರೋಹ ಪ್ರಕರಣ ದಾಖಲಾಗಿದೆ. ಮೋದಿ ವಿರುದ್ಧ ಟೀಕೆ ಮಾಡಿರುವ 149 ಜನರ ವಿರುದ್ಧ, ಯೋಗಿ ಆದಿತ್ಯನಾಥ್ ಟೀಕೆ ಮಾಡಿದ 144 ಜನರ ವಿರುದ್ಧ ರಾಜದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. 2016-19ರ ಅವಧಿಯಲ್ಲಿ 1948 ಜನರನ್ನು ಯುಎಪಿಎ ಕಾಯ್ದೆಯಡಿ ಬಂಧಿಸಲಾಗಿದೆ.
ಇಲ್ಲಿ ಗಮನಿಸಬೇಕಾದ ಸೂಕ್ಷ್ಮ ಸಂಗತಿ ಎಂದರೆ #ಆತ್ಮನಿರ್ಭರ ಭಾರತದಲ್ಲಿ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಯ ವಿರುದ್ಧ ಮಾತನಾಡುವುದೂ ರಾಜದ್ರೋಹಕ್ಕೆ ಸಮಾನವಾಗುತ್ತದೆ. ಅಥವಾ ಭಯೋತ್ಪಾದಕ ಚಟುವಟಿಕೆ ಎಂದಾಗುತ್ತದೆ. ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುವ ಕಾರ್ಯಕರ್ತರನ್ನೂ ಯುಎಪಿಎ ಕಾಯ್ದೆಯಡಿ ಬಂಧಿಸಲಾಗುತ್ತದೆ. ಸಿಪಿಎಂ ಸರ್ಕಾರ ಇರುವ ಕೇರಳದಲ್ಲೇ 2019ರ ನಂತರ 145 ಯುಎಪಿಎ ಪ್ರಕರಣಗಳು ದಾಖಲಾಗಿವೆ. ತಮಿಳುನಾಡಿನ ತೂತ್ತುಕುಡಿಯಲ್ಲಿ ಪರಮಾಣು ಘಟಕದ ವಿರುದ್ಧ ಪ್ರತಿಭಟಿಸಿದವರನ್ನೂ ಯುಎಪಿಎ ಕಾಯ್ದೆಯಡಿ ಬಂಧಿಸಲಾಗಿದೆ. ಇದು ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರನ್ನು ಜಾಗೃತಿಗೊಳಿಸಬೇಕಾದ ದುರಂತಗಳು.
ಭಾರತದ ಪ್ರಭುತ್ವ ಸಾರ್ವಭೌಮ ಪ್ರಜೆಗಳ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕರಾಳ ಶಾಸನಗಳ ಮೂಲಕ ದಮನಿಸುವ ತಂತ್ರವನ್ನು ಕಳೆದ ನಲವತ್ತು ವರ್ಷಗಳಿಂದಲೂ ಅನುಸರಿಸುತ್ತಲೇ ಬಂದಿದೆ. ದುರಂತ ಎಂದರೆ ಪ್ರಜಾಪ್ರಭುತ್ವದ ಬಗ್ಗೆ ಹೆಮ್ಮೆಯಿಂದ ಎದೆತಟ್ಟಿಕೊಳ್ಳುವ ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಅಧಿಕಾರಾವಧಿಯಲ್ಲಿ ಈ ಕರಾಳಶಾಸನಗಳನ್ನು ಬಳಸುವ ಮೂಲಕ ಪ್ರತಿರೋಧವನ್ನು, ಜನಪರ ಹೋರಾಟಗಳನ್ನು ಹತ್ತಿಕ್ಕಲು ಪ್ರಯತ್ನಿಸಿವೆ. 2014ರ ನಂತರದ ಒಕ್ಕೂಟ ಸರ್ಕಾರದಲ್ಲಿ ಇದು ಸಮರ ನೀತಿಯಾಗಿಯೇ ರೂಪುಗೊಂಡಿದೆ. ತಮ್ಮ ವಿರುದ್ಧ ಯಾವುದೇ ವರದಿಯನ್ನು ಬಿತ್ತರಿಸದಂತೆ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲು ಚುನಾಯಿತ ಪ್ರತಿನಿಧಿಗಳು ನ್ಯಾಯಾಲಯದಿಂದ ಆದೇಶವನ್ನು ತಂದಿದ್ದಾರೆ.
ಅಂದರೆ ಭಾರತದ ಪ್ರಜಾತಂತ್ರ ವ್ಯವಸ್ಥೆ ಒಳಗಿಂದೊಳಗೇ ಕೊಳೆಯುತ್ತಿದೆ ಎಂದರ್ಥವಲ್ಲವೇ ? ಮತದಾರರಿಗೆ ತಾವು ಚುನಾಯಿಸಿದ ಪ್ರತಿನಿಧಿಯನ್ನು ಟೀಕಿಸುವ ಹಕ್ಕು ಒತ್ತಟ್ಟಿಗಿರಲಿ, ಪ್ರಶ್ನಿಸುವ ಹಕ್ಕೂ ಸಹ ಇಲ್ಲವಾಗಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲೇ ದೇಶದ ಎಲ್ಲ ಕ್ಷೇತ್ರಗಳಲ್ಲೂ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗುತ್ತಿದೆ. ರೈತಾಪಿಯ ಭೂಮಿಯ ಹಕ್ಕು, ಆದಿವಾಸಿಗಳ ಅರಣ್ಯ ಹಕ್ಕು, ಕಾರ್ಮಿಕರ ದುಡಿಮೆಯ ಹಕ್ಕು, ಯುವಕರ ಉದ್ಯೋಗದ ಹಕ್ಕು, ಬಡ ಜನತೆಯ ಆಹಾರದ ಹಕ್ಕು, ವಿದ್ಯಾರ್ಥಿಗಳ ಶಿಕ್ಷಣದ ಹಕ್ಕು ಮತ್ತು ಮಹಿಳೆಯರ-ಶೋಷಿತ ಸಮುದಾಯಗಳ ಘನತೆಯ ಹಕ್ಕು, ಇವೆಲ್ಲವೂ ಸಂವಿಧಾನ ನಮಗೆ ನೀಡಿರುವ ಮೂಲಭೂತ ಹಕ್ಕುಗಳು.
ಈ ಹಕ್ಕುಗಳು ಇಂದು ಕಾಪೋರೇಟ್ ಔದ್ಯಮಿಕ ಹಿತಾಸಕ್ತಿಗಳಿಗೆ, ಮತೀಯ ರಾಜಕಾರಣದ ಫ್ಯಾಸಿಸ್ಟ್ ದಾಳಿಗೆ ಬಲಿಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಹಿಂದುತ್ವ ರಾಜಕಾರಣ ಈ ದೇಶದ ಬಹುಸಂಖ್ಯಾತ ಜನತೆಯ ಆಹಾರದ ಹಕ್ಕನ್ನೂ ಪ್ರಶ್ನಿಸುತ್ತಿದೆ. ಮಾನವ ಹಕ್ಕುಗಳನ್ನು ಕೇವಲ ನ್ಯಾಯಶಾಸ್ತ್ರದ ಚೌಕಟ್ಟಿನಲ್ಲಿ, ಆಡಳಿತ ವ್ಯವಸ್ಥೆಯ ಚೌಕಟ್ಟಿನಲ್ಲಿ ನೋಡಲಾಗುವುದಿಲ್ಲ. ಈ ಪರಿಧಿಯಿಂದಾಚೆಗೆ ಮಾನವ ಹಕ್ಕುಗಳನ್ನು ಪರಾಮರ್ಶಿಸಬೇಕಿದೆ. ಈವತ್ತಿನ ಒಕ್ಕೂಟ ಸರ್ಕಾರದ ದಮನಕಾರಿ ನೀತಿಗಳನ್ನು ವಿರೋಧಿಸುತ್ತಲೇ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಡುತ್ತಿರುವ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಮೂಲ ಪ್ರಣಾಳಿಕೆಯಲ್ಲೇ ಕರಾಳ ಶಾಸನಗಳನ್ನು ವಿರೋಧಿಸುವ ಕಾರ್ಯನೀತಿಯನ್ನು ಅಳವಡಿಸುವುದು ಇಂದಿನ ತುರ್ತು.
ಪ್ರಭುತ್ವದ ನೀತಿಗಳು ಸಂವಿದಾನಬದ್ಧವಾಗಿರಬೇಕು, ಆಡಳಿತಾರೂಢ ಸರ್ಕಾರಗಳು ಜಾರಿಗೊಳಿಸುವ ಶಾಸನಗಳು ಸಾಂವಿಧಾನಿಕ ಆಶಯಗಳಿಗೆ ಬದ್ಧವಾಗಿರಬೇಕು. ಜನಪ್ರತಿನಿಧಿಗಳು ಶಾಸನಬದ್ಧರಾಗಿರಬೇಕು. ಆಗಲೇ ಒಂದು ಆರೋಗ್ಯಪೂರ್ಣ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಸಾಧ್ಯ. ಭಾರತದ ಇಂದಿನ ಸಂದರ್ಭದಲ್ಲಿ ಇದು ಕಾಣುತ್ತಿಲ್ಲ. ನವ ಉದಾರವಾದ ಮತ್ತು ಕೋಮುವಾದಿ ಫ್ಯಾಸಿಸಂ ಭಾರತದ ಪ್ರಜಾತಂತ್ರದ ಬೇರುಗಳನ್ನು ಅಲುಗಾಡಿಸುತ್ತಲೇ ಇದೆ. ಈ ಪ್ರಕ್ರಿಯೆಯಲ್ಲೇ ಸಂವಿಧಾನದತ್ತ ಮೂಲಭೂತ ಹಕ್ಕುಗಳಿಂದಲೂ ಜನತೆ ವಂಚಿತರಾಗುತ್ತಿದ್ದಾರೆ. ವಸಾಹತು ಕಾಲದ ಕರಾಳ ಶಾಸನಗಳನ್ನು ಇಂದಿಗೂ ಅನುಸರಿಸುತ್ತಿರುವ ಪ್ರಭುತ್ವದ ಆಡಳಿತ ನೀತಿಗಳ ವಿರುದ್ಧ ಸಾರ್ವಭೌಮ ಪ್ರಜೆಗಳು ದನಿ ಎತ್ತುವುದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅನಿವಾರ್ಯವಾಗಿದೆ.