ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ.ಬಿ.ಟಿ. ಕವಿತಾ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಇದರಲ್ಲಿ ವಿಶೇಷವೆಂದರೆ, ಇವರ ಪತಿ ಚಾಮರಾಜನಗರ ಅಬಕಾರಿ ಇಲಾಖೆ ಉಪ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಚಾಮರಾಜನಗರದಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪದ್ಮಿನಿ ಸಾಹು ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಕವಿತಾ ಅವರು ಈ ಹಿಂದೆ, ನಾಗರಿಕ ಹಕ್ಕು ನಿರ್ದೇಶನಾಲಯದ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕವಿತಾ ಅವರು 2016ರ ಕರ್ನಾಟಕ ಕೇಡರ್ನ ಅಧಿಕಾರಿಯಾಗಿದ್ದಾರೆ. ಬುಧವಾರ ಮಧ್ಯಾಹ್ನ ಚಾಮರಾಜನಗರ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇವರ ಪತಿ ನಾಗಶಯನ ಅಬಕಾರಿ ಇಲಾಖೆ ಉಪ ಆಯುಕ್ತರಾಗಿದ್ದರೆ, ಪತ್ನಿ ಈಗ ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾರೆ. ಪತ್ನಿ ಅಧಿಕಾರ ಸ್ವೀಕಾರದಂದು ಪತಿಯೂ ಹಾಜರಾಗಿ ಶುಭ ಕೋರಿದ್ದಾರೆ.
ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕವಿತಾ ಅವರು, ”ಚಾಮರಾಜನಗರ ಜಿಲ್ಲೆಯು ಎರಡು ರಾಜ್ಯಗಳ ಗಡಿ ಹಂಚಿಕೊಂಡಿದೆ. ಚಾಮರಾಜನಗರವನ್ನು ಸುರಕ್ಷಿತ ಜಿಲ್ಲೆ ಮತ್ತು ಜನಸ್ನೇಹಿ ಪೊಲೀಸ್ ಮಾಡಲು ಮೊದಲ ಆದ್ಯತೆ ನೀಡಲಾಗುವುದು. ಅಪಘಾತ, ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲಾಗತ್ತದೆ ಎಂದು ಅಭಯ ನೀಡಿದರು. ಪತಿಯೂ ಜಿಲ್ಲೆಯಲ್ಲಿ ಅಧಿಕಾರಿ ಆಗಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ”ಇಬ್ಬರು ಸರ್ಕಾರಿ ನೌಕರರಾಗಿದ್ದು, ಮೊದಲು ಕರ್ತವ್ಯಕ್ಕೆ ಆದ್ಯತೆ ಬಳಿಕ ವೈಯಕ್ತಿಕ ವಿಚಾರ” ಎಂದರು.
ಇದೇ ಸಂದರ್ಭದಲ್ಲಿ ಮಹಿಳಾ ಅಧಿಕಾರಿಯೊಬ್ಬರು ಮೊಟ್ಟ ಮೊದಲ ಬಾರಿಗೆ ಮೈಸೂರಿನ ನಗರ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಮೈಸೂರು ಜಿಲ್ಲೆಯಲ್ಲಿ ಪೋಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತಿದ್ದ ಸೀಮಾ ಲಾಟ್ಕರ್ ಅವರು ವರ್ಗಾವಣೆಗೊಂಡಿದ್ದಾರೆ.
ಇವರು ಮೈಸೂರು ಜಿಲ್ಲಾ ವರಿಷ್ಠಾಧಿಕಾರಿಯಾಗಿ ಅಲ್ಲಿಯೂ ಪ್ರಥಮ ಮಹಿಳಾ ಅಧಿಕಾರಿಯಾಗಿ ಉತ್ತಮ ಆಡಳಿತ ನಡೆಸಿದ್ದರು. ಪ್ರಜ್ವಲ್ ರೇವಣ್ಣ ಪ್ರಕರಣದ ವಿಚಾರಣಾಧಿಕಾರಿ ಕಾರ್ಯ ನಿರ್ವಹಿಸಿ, ಇದೀಗ ಮೈಸೂರು ನಗರ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ. ಮೈಸೂರು ಜಿಲ್ಲಾ ವರಿಷ್ಠಾಧಿಕಾರಿಯಾಗಿ ವಿಷ್ಣುವರ್ಧನ್ ಅವರು ವರ್ಗಾವಣೆಗೊಂಡಿದ್ದಾರೆ. ಇವರು ಮೈಸೂರಿನ ಕೆ.ಆರ್.ಎಸಿಪಿಯಾಗಿ, ನಂತರ ಮೈಸೂರು ನಗರ ಡಿಸಿಪಿಯಾಗಿ ಬಳಿಕ ಜಿಲ್ಲೆಗಳಲ್ಲಿ ಎಸ್ಪಿಯಾಗಿ ಕೆಲಸ ಮಾಡಿ, ಮತ್ತೆ ಮೈಸೂರಿಗೆ ಬಂದಿದ್ದಾರೆ.