ಚಿಟಗುಪ್ಪ: ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಸಾಂಪ್ರದಾಯಿಕ ರೈತರ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ. ಇದು ಮುಂಗಾರಿನ ಪ್ರಥಮ ಹಬ್ಬವಾಗಿಯೂ ಆಚರಿಸಲಾಗುತ್ತದೆ.
ರೈತ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ಪೂಜಿಸಿ ಖುಷಿ ಪಡುವ ಈ ಹಬ್ಬ ಕಾರಹುಣ್ಣಿಮೆಯ ನಂತರ ಬರುತ್ತದೆ.
ಭೂತಾಯಿಯನ್ನು ಉಳುಮೆ ಮಾಡುವ ಸಂಕೇತವಾದ ಎತ್ತುಗಳನ್ನು ಮನೆಯಲ್ಲಿಯೇ ತಯಾರಿಸಿಕೊಂಡು ದೇವರ ಜಗುಲಿ ಮೇಲೆ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು.
ಪಟ್ಟಣ, ತಾಲ್ಲೂಕಿನ ನಿರ್ಣಾ, ಮುತ್ತಂಗಿ, ಮಂಗಲಗಿ, ಚಾಂಗಲೇರಾ, ಬೇಮಳಖೇಡಾ, ಇಟಗಾ, ವಳಖಿಂಡಿ, ಕುಡಂಬಲ್ ಗ್ರಾಮಗಳಲ್ಲಿ ಮಣ್ಣೆತ್ತುಗಳಿಗೆ ಹೂವಿನಿಂದ ಪೂಜಿಸಿ, ಕಾಯಿ, ಕರ್ಪೂರ, ಲೋಭಾನ ಆರತಿ ಮಾಡಿ ವಿವಿಧ ಸಿಹಿ ಪದಾರ್ಥಗಳನ್ನು ನೈವೇದ್ಯ ಮಾಡಿ, ಒಟ್ಟಾಗಿ ಕುಳಿತು ರೈತರು ಊಟ ಮಾಡಿದರು.
‘ಸಂಜೆ ಹೊತ್ತಿಗೆ ಕೆರೆ, ಹರಿಯುವ ನೀರಿನ ದಂಡೆಗೆ ಹೋಗಿ ಮಣ್ಣೆತ್ತುಗಳ ಮುಖ ತೊಳೆದು, ವಿಭೂತಿ, ಕುಂಕುಮ ಹಚ್ಚಿ ಆರತಿ ಬೆಳಗಿ, ಮಳೆ, ಬೆಳೆ ಸಮೃದ್ಧಿಗೆ ಪ್ರಾರ್ಥಿಸಿಕೊಂಡು ಎತ್ತುಗಳನ್ನು ನೀರಿಗೆ ಬಿಡುವ ಕಾರ್ಯ ನಡೆಯಿತು.
ಮರುದಿನ ಎತ್ತುಗಳನ್ನು ಚಿಣ್ಣರು ಕರಿ ಹರಿಯುವರು. ಬಳಿಕ ತಟ್ಟೆಯಲ್ಲಿ ಕರಿ ಹರಿದ ಎತ್ತುಗಳನ್ನಿಟ್ಟುಕೊಂಡು ಮನೆ, ಮನೆಗಳಿಗೆ ತೆರಳಿ ‘ಒಂಟೆತ್ತಿನ ಮೇಲೆ ಕುಂಟೆತ್ತು ಬಂದೈತೆ, ಜ್ವಾಳ ನೀಡ್ರಮ್ಮೊ’ ಎಂದು ಹಾಡುತ್ತ ಹೋಗುವ ಸಂಪ್ರದಾಯವು ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬಂತು.