ಕರುನಾಡ ಚಕ್ರವರ್ತಿ’ ಶಿವರಾಜಕುಮಾರ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೊಸದೊಂದು ಚಿತ್ರವನ್ನು ಅವರು ಒಪ್ಪಿಕೊಂಡಿದ್ದು, ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಈ ಚಿತ್ರದಲ್ಲಿನ ಅವರ ಪಾತ್ರದ ಕಾನ್ಸೆಪ್ಟ್ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಅಭಿಮಾನಿಗಳಿಗೆ ಡಬಲ್ ಧಮಾಕ ಸಿಕ್ಕ ಹಾಗಾಗಿದೆ.
ಈ ಹಿಂದೆ ತಮಿಳಿನಲ್ಲಿ ವಿಕ್ರಮ್ ಪ್ರಭು ಅಭಿನಯದ ‘ಪಾಯುಮ್ ಒಳಿ ನೀ ಎನಕ್ಕು’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಕಾರ್ತಿಕ್ ಅದ್ವೈತ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸುಧೀರ್ ಚಂದ್ರ ಫಿಲಂ ಕಂಪನಿ ಮೂಲಕ ಸುಧೀರ್ ಚಂದ್ರ ಪದಿರಿ ನಿರ್ಮಿಸುತ್ತಿದ್ದಾರೆ. ಇದು ಅವರು ಕನ್ನಡದಲ್ಲಿ ನಿರ್ಮಿಸುತ್ತಿರುವ ಮೊದಲ ಚಿತ್ರವಾಗಿದೆ. ‘ವಿಕ್ರಮ್ ವೇದ’ ಮತ್ತು ‘ಕೈದಿ’ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದ ಸ್ಯಾಮ್ ಸಿ.ಎಸ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಇದೊಂದು ಆಕ್ಷನ್ ಚಿತ್ರವಾಗಿದ್ದು, ದಕ್ಷಿಣ ಭಾರತದ ಜನಪ್ರಿಯ ನಟ-ನಟಿಯರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದ್ದು, ಸದ್ಯದಲ್ಲೇ ಈ ಚಿತ್ರದ ಹೆಚ್ಚಿನ ವಿವರಗಳು ಹೊರಬೀಳಲಿವೆ. ಮತ್ತೊಂದು ಕಡೆ ಶಿವಣ್ಣ ತೆಲುಗು ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಬಂದಿದ್ದು, ಈ ಬಗ್ಗೆ ಇನ್ನು ಕೂಡ ಖಚಿತವಾಗಿಲ್ಲ.
ಇನ್ನು ಮಫ್ತಿ ಸಿನಿಮಾದ ಪ್ರಿಕ್ವೆಲ್ನಲ್ಲಿ ನರ್ತನ್ ನಿರ್ದೇಶನದ ಸಿನಿಮಾದಲ್ಲೂ ನಟಿಸುತ್ತಿರುವ ಶಿವಣ್ಣ ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನ ಮೂಡಿಸಿದ್ದಾರೆ. ಈ ಮಫ್ತಿ ಸಿನಿಮಾ ಗೀತಾ ಪಿಕ್ಚರ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿದ್ದು, ಭಾರೀ ನಿರೀಕ್ಷೆಯನ್ನ ಕೂಡ ಮೂಡಿಸುತ್ತಿದೆ, ಇದರ ಜೊರೆಗೆ ಕಾಲಿವುಡ್ನಲ್ಲೂ ಕೂಡ ಶಿವಣ್ಣ ಮಿಂಚು ಹರಿಸುತ್ತಿದ್ದು, ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಜೈಲರ್ ಚಿತ್ರದಲ್ಲಿ ಹಾಗೂ ತಮಿಳಿನ ಸ್ಟಾರ್ ನಟ ಧನುಷ್ ಜೊತೆ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಕೂಡ ನಟಿಸಿದ್ದು ಈ ಚಿತ್ರಕ್ಕೂ ಕೂಡ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.






