ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅಖಾಡಕ್ಕೆ ಇಳೀತಾರೆ ಅನ್ನೋ ವಿಚಾರದಲ್ಲಿ ಕುಮಾರಸ್ವಾಮಿ ಹಾಗು ಹೆಚ್.ಡಿ ರೇವಣ್ಣ ಜೊತೆಗೆ ಆಂತರಿಕ ಯುದ್ಧವೇ ಶುರುವಾಗಿದೆ. ಭವಾನಿ ರೇವಣ್ಣಗೆ ಟಿಕೆಟ್ ಕೊಡದಿದ್ದರೆ ನನಗೂ ಟಿಕೆಟ್ ಬೇಡ ಎಂದಿದ್ದಾರೆ ಎನ್ನಲಾಗ್ತಿದೆ. ಇನ್ನು ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಭವಾನಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಹಾಸನದಲ್ಲಿ ಪ್ರೀತಂಗೌಡ ವಿರುದ್ಧ ಸ್ವರೂಪ್ ಪ್ರಕಾಶ್ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಕುಮಾರಸ್ವಾಮಿ ಪಟ್ಟು ಹಿಡಿದಿದ್ದಾರೆ. ಇದರ ನಡುವೆ ಕಡೂರು ಕ್ಷೇತ್ರದ ಸಂಕಷ್ಟ ಎದುರಾಗಿದೆ. ಜನವರಿ 15ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದ ಮಾಜಿ ಶಾಸಕ ವೈಎಸ್ವಿ ದತ್ತಾ ಕಾಂಗ್ರೆಸ್ನಲ್ಲಿ ಟಿಕೆಟ್ ಸಿಗದೆ ಮತ್ತೆ ಜೆಡಿಎಸ್ಗೆ ವಾಪಸ್ ಆಗಿದ್ದಾರೆ. ಇದು ಮತ್ತೊಂದು ರೀತಿಯ ಬಿರುಕು ಬಿಡುವಂತೆ ಮಾಡಿದೆ.
YSV ದತ್ತಾ ಸೇರ್ಪಡೆ ಬಗ್ಗೆ ಕುಮಾರಸ್ವಾಮಿಗೇ ಗೊತ್ತಿಲ್ವಾ..?
YSV ದತ್ತಾ ಕಡೂರಿನ ಯಗಟಿ ಮನೆಯಲ್ಲಿ ಬಹಿರಂಗ ಸಭೆ ಮಾಡಿ ಜೆಡಿಎಸ್ ಸೇರ್ಪಡೆ ಬಗ್ಗೆ ಘೋಷಣೆ ಮಾಡಿದ್ದಾರೆ. ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ಭೇಟಿ ಮಾಡಿದ್ದ YSV ದತ್ತಾ, ಮಾಜಿ ಸಚಿವ ಹೆಚ್.ಡಿ ರೇವಣ್ಣ ಹಾಗು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಮ್ಮುಖದಲ್ಲಿ ಜೆಡಿಎಸ್ಗೆ ವಾಪಸ್ ಆಗುವ ಬಗ್ಗೆ ಘೋಷಣೆ ಮಾಡಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ಭೇಟಿ ಮಾಡಿದ್ದ ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರವನ್ನು ತಿಳಿಸಿದ್ದೆ, ಆದರೆ ನಾನಿನ್ನೂ ಸತ್ತಿಲ್ಲ, ಪಕ್ಷೇತರ ಅಭ್ಯರ್ಥಿ ಆಗಿ ಅಖಾಡಕ್ಕೆ ಇಳಿಯಬೇಡ, ಜೆಡಿಎಸ್ನಿಂದಲೇ ಸ್ಪರ್ಧೆ ಮಾಡು, ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ನಾನೇ ಬರುತ್ತೇನೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಕುಮಾರಸ್ವಾಮಿ ಮಾತ್ರ YSV ದತ್ತಾ ಸೇರ್ಪಡೆ ವಿಚಾರ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಹಾಸನ ಬಳಿಕ ಕಡೂರು ಕೂಡ ಜೆಡಿಎಸ್ಗೆ ಸಂಕಷ್ಟ..!
JDS ಬಿಟ್ಟು ಕಾಂಗ್ರೆಸ್ ಸೇರಿದ್ದ ದತ್ತಾ ಮತ್ತೆ JDS ಮನೆಗೆ ವಾಪಸ್ ಆಗಿದ್ದಾರೆ ಎಂದು ರೇವಣ್ಣ ಹೇಳಿಕೆ ನೀಡಿದ್ದಾರೆ. ಇದು ಸಹೋದರರ ನಡುವೆ ಸವಾಲ್ ಆಗಿದೆ. ವೈಎಸ್ವಿ ದತ್ತಾ ಸೇರ್ಪಡೆ ಬಗ್ಗೆ ಕಲಬುರಗಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ನಾನು ಕಳೆದ ನಾಲ್ಕು ದಿನಗಳಿಂದ ನಿರಂತರ ಪ್ರವಾಸದಲ್ಲಿ ಇದ್ದೇನೆ. ನನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದರು. ಆ ಬಳಿಕ ಹಾವೇರಿಯಲ್ಲಿ ಹಾವೇರಿಯಲ್ಲಿ ವ್ಯಂಗ್ಯಭರಿತವಾಗಿ ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ, ಅವರು ದೊಡ್ಡವರು, ಅವರಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ. ಈ ವಿಚಾರದಲ್ಲಿ ಈಗಾಗಲೇ ಜೆಡಿಎಸ್ ಟಿಕೆಟ್ ಘೋಷಣೆ ಆಗಿರುವ ಧನಂಜಯ್ ಎಂಬುವರು ಮಾತನಾಡಿದ್ದು, ದತ್ತಾ ಅವರು ವಾಪಸ್ ಬಂದಿದ್ದಾರೆ. ನಾಲ್ಕೈದು ದಿನಗಳಲ್ಲಿ ಎಲ್ಲವೂ ಬಹಿರಂಗ ಆಗಲಿದೆ ಎಂದಿದ್ದಾರೆ. ಹಾಸನದ ಸ್ವರೂಪ್ ಬಳಿಕ ಕಡೂರಿನ ಧನಂಜಯ್ ಜೆಡಿಎಸ್ ಬಿಕ್ಕಟ್ಟಿಗೆ ಸಾಕ್ಷಿಗಳಾಗಿದ್ದಾರೆ.
ರೇವಣ್ಣ ಹಠವೋ..? ಮಗನ ಆಯ್ಕೆ ಹಿಂದಿನ ಗುಟ್ಟೋ..?
ಜೆಡಿಎಸ್ನಲ್ಲಿ ಸಂಪೂರ್ಣ ಅಧಿಕಾರ ಕುಮಾರಸ್ವಾಮಿ ಕೇಂದ್ರಿತವಾಗಿದೆ ಎನ್ನುವುದು ಜಗಜ್ಜಾಹೀರು. ಆದರೆ ಹಾಸನ ವಿಚಾರ ಎಂದಾಗ ಹೆಚ್.ಡಿ ರೇವಣ್ಣ ಅವರ ನಿರ್ಧಾರವೇ ಅಂತಿಮ ಎನ್ನುವುದು ಅಲಿಖಿತ ನಿಯಮ. ಇದೀಗ ಹಾಸನ ವಿಚಾರದಲ್ಲಿ ಕುಮಾರಸ್ವಾಮಿ ಮೂಗು ತೂರಿಸಿದ್ದಾರೆ. ಇದೀಗ ರೇವಣ್ಣ ಕೂಡ ಜೆಡಿಎಸ್ ಪಕ್ಷದಲ್ಲಿ ತನ್ನದೂ ಹಿಡಿತ ಇದೆ ಎಂಬ ಸಂದೇಶ ರವಾನೆ ಮಾಡಲು ಕಡೂರಿನ ವೈಎಸ್ವಿ ದತ್ತಾ ಅವರನ್ನು ಪಕ್ಷಕ್ಕೆ ವಾಪಸ್ ಕರೆತರುವ ಮೂಲಕ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಹೆಚ್.ಡಿ ಕುಮಾರಸ್ವಾಮಿ ಗಮನಕ್ಕೂ ತರದೆ ವೈಎಸ್ವಿ ದತ್ತಾ ಅವರನ್ನು ಕರೆತಂದಿದ್ದಾರೆ ಎನ್ನಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಚಿಕ್ಕಮಗಳೂರಿನ ಕಡೂರು ಕ್ಷೇತ್ರ ಹಾಸನ ಲೋಕಸಭಾ ವ್ಯಾಪ್ತಿಗೆ ಬರುವ ಕಾರಣಕ್ಕೆ ವೈಎಸ್ವಿ ದತ್ತಾ ಅವರ ಅಗತ್ಯವಿದೆ. ಇದೇ ಕಾರಣಕ್ಕಾಗಿ ಮುತುವರ್ಜಿ ವಹಿಸಿ ದತ್ತಾ ಅವರನ್ನು ವಾಪಸ್ ಕರೆತಂದಿದ್ದಾರೆ ಎನ್ನಲಾಗ್ತಿದೆ. ಆದರೆ ಈ ವಿಚಾರ ಕೂಡ ಮತ್ತೊಂದು ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ದಟ್ಟವಾಗಿದೆ.
ಕೃಷ್ಣಮಣಿ