ವಿಶೇಷ ವರದಿ, ಶಿವಕುಮಾರ್.ಎಸ್
ಬೆಂಗಳೂರು : ಅಕ್ರಮ ಮರಳು ಗಾರಿಕೆ ತಡೆದಿದ್ದಕ್ಕೆ ನನ್ನ ನಿವಾಸದ ಮೇಲೆ ನೂರಾರು ಮಂದಿ ಮರಳು ಮಾಫಿಯಾಗಾರರು ಬಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ರಾಯಚೂರಿನ ದೇವದುರ್ಗ ಶಾಸಕಿ ಕರೆಮ್ಮಾ ಜಿ ನಾಯಕ್ ಗಂಭೀರ ಆರೋಪ ಮಾಡಿದ್ದಾರೆ. ಶಾಸಕಿಯೊಬ್ಬರ ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕುವಷ್ಟು ಮರಳು ಮಾಫಿಯಾ ಭೀಕರವಾಗಿದೆಯೇ ಅಂದರೆ, ಹೌದು.. ಕಳೆದ ವರ್ಷ ಅಕ್ರಮ ತಡೆಯಲು ಮುಂದಾದ ಪೊಲೀಸ್ ಸಿಬ್ಬಂದಿಯೊಬ್ಬರನ್ನೇ ಮರಳು ಟಿಪ್ಪರಿನಡಿಗೆ ಹಾಕಿ ಕೊಲ್ಲಲಾಗಿತ್ತು. ಆದರೆ, ಈ ಪ್ರಕರಣದಲ್ಲಿ ಶಾಸಕಿ ಅಷ್ಟೊಂದು ಪ್ರಾಮಾಣಿಕರೇ ಎಂಬುದು ಪ್ರಶ್ನಾರ್ಹ ಸಂಗತಿ.
ಯಾಕೆಂದರೆ, ಕಾನೂನುಬದ್ದವಾಗಿ ಮರಳುಗಾರಿಕೆಗೆ ಟೆಂಡರ್ ಕರೆಯದೆ ಅಕ್ರಮ ಅವ್ಯಾಹತವಾಗಿ ನಡೆಯಲು ಅವರದ್ದೇ ಕುಮ್ಮಕ್ಕು ಇದೆ ಎಂಬ ಆರೋಪ ಕ್ಷೇತ್ರದಲ್ಲಿದೆ. ಟೆಂಡರ್ ವಿಚಾರವಾಗಿ ಮಾತನಾಡಲು ಹೋದ ನಮ್ಮ ಮೇಲೆ ಅನ್ಯಾಯವಾಗಿ ಜೀವಬೆದರಿಕೆ ಒಡ್ಡಿದ ಆರೋಪವನ್ನು ಹೊರಿಸಲಾಗಿದೆ ಎಂದು ಟಿಪ್ಪರ್ ಮಾಲಕರು ಶಾಸಕಿ ವಿರುದ್ಧ ಪ್ರತ್ಯಾರೋಪ ಮಾಡಿದ್ದಾರೆ.
ಈ ಎಲ್ಲಾ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. 2026ರ ಜನವರಿ 1ರಿಂದ 19ರವರೆಗೆ ಕೇವಲ 19 ದಿನಗಳಲ್ಲಿ ಜಿಲ್ಲೆಯಲ್ಲಿ 37 ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಕರೆಮ್ಮಾ ಜಿ ನಾಯಕ್ ಅವರ ಕ್ಷೇತ್ರದಲ್ಲೇ ಬರೋಬ್ಬರಿ 21 ಪ್ರಕರಣಗಳು ದಾಖಲಾಗಿವೆ. ಈ ಅಂಕಿಅಂಶಗಳು ಜಿಲ್ಲೆಯಲ್ಲಿ ಮರಳು ಮಾಫಿಯಾದ ಪ್ರಾಬಲ್ಯ ಎಷ್ಟರ ಮಟ್ಟಿಗೆ ವಿಸ್ತರಿಸಿದೆ ಎಂಬುದನ್ನು ತೋರಿಸುತ್ತವೆ.

ಕೃಷ್ಣಾ ಮತ್ತು ತುಂಗಭದ್ರಾ ನದಿ ವ್ಯಾಪ್ತಿಯಲ್ಲಿ ಅಕ್ರಮ ಮರಳು ತೆಗೆಯುವಿಕೆ ನಿರಂತರವಾಗಿ ನಡೆಯುತ್ತಿದ್ದು, ನದಿ ತೀರಗಳು ಬರಿದಾಗುತ್ತಿವೆ. ಪರಿಸರ ಹಾನಿಯ ಜೊತೆಗೆ, ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ರಾಯಲ್ಟಿ ನಷ್ಟವಾಗುತ್ತಿದೆ. ಇಲಾಖೆಗಳ ಅಧಿಕಾರಿಗಳಿಗೆ, ಶಾಸಕಿ ಆಪ್ತರಿಗೆ ಹಫ್ತಾ ಹೋದರೆ ಎಲ್ಲಾ ಅಕ್ರಮವೂ ಸಕ್ರಮವಾಗುತ್ತದೆ ಎಂಬ ಮಾತು ಇಲ್ಲಿ ಸಾಮಾನ್ಯವಾಗಿ ಚಾಲ್ತಿಯಲ್ಲಿದೆ.
ದೇವದುರ್ಗ ಶಾಸಕಿ ಕರೆಮ್ಮಾ ಜಿ. ನಾಯಕ್ ಅವರು, ಅಕ್ರಮ ಮರಳು ಸಾಗಣೆ ತಡೆಗಟ್ಟಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ ಬಳಿಕ, ತಮ್ಮ ನಿವಾಸಕ್ಕೆ ನುಗ್ಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ ಬೆನ್ನಲ್ಲೇ ಶಾಸಕಿ ಆಪ್ತರು ಮಧ್ಯರಾತ್ರಿ ಟಿಪ್ಪರ್ ಮಾಲಕರಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎಂದು ಮಾಲಕರು ಪ್ರತ್ಯಾರೋಪ ಮಾಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಶಾಸಕಿ, “ಮರಳು ಟೆಂಡರ್ ಪ್ರಕ್ರಿಯೆ ವಿಳಂಬವಾಗುತ್ತಿರುವ ನೆಪದಲ್ಲಿ ರಾಯಲ್ಟಿ ಇಲ್ಲದೆ ಮರಳು ಸಾಗಿಸಲು ಅವಕಾಶ ನೀಡುವಂತೆ ಒತ್ತಾಯಿಸಲಾಯಿತು. ಇದಕ್ಕೆ ನಿರಾಕರಿಸಿದಾಗ ಗೂಂಡಾಗಿರಿ ತೋರಿಸಿ ಜೀವ ಬೆದರಿಕೆ ಹಾಕಿದರು” ಎಂದು ಆರೋಪಿಸಿದ್ದರು. ಮರು ದಿನ ಮಂಗಳವಾರ ಜಿಲ್ಲಾಧಿಕಾರಿ ನಿತೀಶ್ ಕೆ. ಅವರನ್ನು ಭೇಟಿಯಾಗಿ ಪೊಲೀಸ್ ರಕ್ಷಣೆ ಕೋರಿ ಮನವಿ ಸಲ್ಲಿಸಿದ್ದರು.
“ಟ್ರ್ಯಾಕ್ಟರ್ ಮೂಲಕ ಕಾಮಗಾರಿಗಳಿಗೆ ಮರಳು ತೆಗೆದುಕೊಳ್ಳುವುದರಲ್ಲಿ ಯಾರಿಗೂ ಆಕ್ಷೇಪವಿಲ್ಲ. ಆದರೆ ದೊಡ್ಡ ಟಿಪ್ಪರ್ಗಳ ಮೂಲಕ ಬೇರೆ ಜಿಲ್ಲೆ ಹಾಗೂ ಬೇರೆ ರಾಜ್ಯಗಳಿಗೆ ರಾಯಲ್ಟಿ ಇಲ್ಲದೆ ಮರಳು ಸಾಗಿಸಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಿದ್ದಕ್ಕೆ ನನಗೆ ಬೆದರಿಕೆ ಬರುತ್ತಿದೆ” ಎಂದು ಶಾಸಕಿ ದೂರಿದ್ದಾರೆ.

‘ಕಾಣದ ಕೈಗಳ’ ಕೈವಾಡ?
ದೇವದುರ್ಗ ತಾಲೂಕಿನಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಕಾಮಗಾರಿಗಳು ನಡೆಯುತ್ತಿವೆ. ಇಂತಹ ದೊಡ್ಡ ಕಾಮಗಾರಿಗಳ ಹಿನ್ನೆಲೆಯಲ್ಲಿ ಮರಳು ಅವಶ್ಯಕತೆ ಹೆಚ್ಚಿರುವುದನ್ನು ಶಾಸಕಿ ಒಪ್ಪಿಕೊಂಡಿದ್ದಾರೆ. ಈ ಯೋಜನೆಗಳಿಗೆ ಬಳಕೆಯಾಘುತ್ತಿರುವ ಮರಳೂ ಅಕ್ರಮವಾದದು ಎಂಬುದು ಎದುರಾಳಿಗಳ ಆರೋಪ.
“ಅಕ್ರಮ ಮರಳು, ಮಟ್ಕಾ, ಗಾಂಜಾ ಮತ್ತು ಅಕ್ರಮ ಮದ್ಯದ ವಿರುದ್ಧ ನನ್ನ ಸಹಮತ ಇಲ್ಲ. ಈ ಕಾರಣಕ್ಕೆ ನನ್ನ ವಿರುದ್ಧ ಸಂಚು ನಡೆಯುತ್ತಿದೆ. ನನ್ನ ಮನೆ ತನಕ ಬಂದಿರುವುದು ಕೇವಲ ವ್ಯಕ್ತಿಗಳ ಕೃತ್ಯವಲ್ಲ, ಅದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ” ಎಂದು ಶಾಸಕಿ ಪತ್ರಿಕಾಗೋಷ್ಠಿಯಲ್ಲಿ ಇನ್ನೊಂದು ಆರೋಪ ಮಾಡಿದ್ದರು.
ಪ್ರತಿಯಾಗಿ ಶಾಸಕಿ ವಿರುದ್ಧವೇ ಆರೋಪ..
ಶಾಸಕಿಯ ಆರೋಪಗಳಿಗೆ ಗುರಿಯಾಗಿರುವ ಟಿಪ್ಪರ್ ಮಾಲಕ ಹಾಗೂ ಸ್ಥಳೀಯ ಮುಖಂಡ ಶ್ರೀನಿವಾಸ ನಾಯಕ್ ಪ್ರಕಾರ, ಶಾಸಕಿ ತನ್ನ ಪ್ರಭಾವ ಬಳಸಿ ಟಿಪ್ಪರ್ ಮಾಲಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಅಲ್ಲದೆ, ಮರಳು ಟೆಂಡರ್ ಪ್ರಕ್ರಿಯೆ ಆರು ತಿಂಗಳಾದರೂ ಪೂರ್ಣಗೊಳ್ಳದ ಕಾರಣ ನಮ್ಮ ಸಮಸ್ಯೆ ಹೇಳಿಕೊಳ್ಳಲು ನಾವು 20 ಮಂದಿ ಶಾಸಕರನ್ನು ಭೇಟಿ ಮಾಡಿದ್ದೇವೆ. ಶಾಸಕಿಗೆ ಕರೆ ಮಾಡಿ ತಿಳಿಸಿಯೇ ಹೋಗಿದ್ದೆವು. ಪೊಲೀಸರೂ ಬಂದಿದ್ದರು. ನಾವು ಜೀವ ಬೆದರಿಕೆ ಹಾಕಿದ್ದರೆ ಅಲ್ಲೇ ಇದ್ದ ಪೊಲೀಸರು ತಕ್ಷಣ ಬಂಧಿಸಬೇಕಿತ್ತು. ಬೇಕಾದರೆ, ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮಾಡಲಿ. ತಪ್ಪಿದ್ದಲ್ಲಿ ನಾನೇ ಶರಣಾಗುವೆ ಎಂದು ತಮ್ಮ ಬೆಂಬಲಿಗರೊಡನೆ ಪತ್ರಿಕಾಗೋಷ್ಠಿ ಕರೆದು ಸ್ಪಷ್ಟನೆ ನೀಡಿದ್ದಾರೆ.
ಇದಲ್ಲದೆ, ಶಾಸಕಿ ಮತ್ತು ಅವರ ಆಪ್ತರೇ ಅಕ್ರಮ ಮರಳು ಸಾಗಾಣಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವನ್ನು ಅವರು ಹೊರಿಸಿದ್ದಾರೆ. ಶಾಸಕರ ಮನೆ ನಿರ್ಮಾಣ, ತಾಲೂಕಿನ ಸರ್ಕಾರಿ ಕಾಮಗಾರಿಗಳು ಮತ್ತು ಎಂಜಿನಿಯರಿಂಗ್ ಕಾಲೇಜು ಕಟ್ಟಡಕ್ಕೆ ರಾಯಲ್ಟಿ ಇಲ್ಲದ ಮರಳು ಬಳಸಲಾಗಿದೆ ಎಂದು ಅವರು ದೂರಿದ್ದಾರೆ. “ಚೆಕ್ ಪೋಸ್ಟ್‌ಗಳಲ್ಲಿ ಹಫ್ತಾ ಕೇಳಲಾಗುತ್ತಿದೆ. ಶಾಸಕರ ಪ್ರಭಾವ ಬಳಸಿ ಟಿಪ್ಪರ್ ಮಾಲೀಕರನ್ನು ಬೆದರಿಸಲಾಗುತ್ತಿದೆ. ಶಾಸಕರ ಮನೆ ನಿರ್ಮಾಣ ಕಾಮಗಾರಿಗೆ, ಇಂಜಿನಿಯರಿಂಗ್ ಕಾಲೇಜು ಕಟ್ಟಡಕ್ಕೆ ರಾಯಲ್ಟಿ ಕಟ್ಟದ ಮರಳನ್ನೇ ಬಳಸಲಾಗುತ್ತಿದೆ. ಡೆಕ್ ಗಳಲ್ಲಿ, ಚೆಕ್ ಪೋಸ್ಟ್ ಗಳಲ್ಲಿ ಶಾಸಕಿಯ ಪ್ರಭಾವ ಬಳಸಿಕೊಂಡು ಶಾಸಕಿ ಸಂಬಂಧಿಗಳಾದ ಹನುಮಂತರಾಯ, ರಮೇಶ ರಾಮಣಾಳ ಮೊದಲಾದವರು ಹಫ್ತಾ ಕೇಳುತ್ತಿದ್ದಾರೆ. 50 ಸಾವಿರ ನೀಡದಿದ್ದರೆ, ಟಿಪ್ಪರ್ ಒಳಗೆ ಹಾಕಿಸುವುದಾಗಿ ಮಾಲಕರನ್ನು ಬೆದರಿಸುತ್ತಾರೆ” ಎಂದು ಶ್ರೀನಿವಾಸ್ ನಾಯಕ್ ಹೇಳಿದ್ದಾರೆ.

ಈ ರಾಜಕೀಯ ಆರೋಪ–ಪ್ರತ್ಯಾರೋಪಗಳ ನಡುವೆಯೇ, ಪುರಸಭೆ ಮಾಜಿ ಅಧ್ಯಕ್ಷ ಚಂದಪ್ಪ ಅಕ್ಕರಕಿ ಅವರು ಪ್ರಕರಣದ ಕುರಿತು ಇನ್ನೊಂದು ಆಯಾಮವನ್ನು ತೆರೆದಿಟ್ಟಿದ್ದಾರೆ. ಈ ಬಾರಿ ಹೆಚ್ಚುವರಿ ಮಳೆ ಬಂದಿದ್ದರಿಂದ ಕೃಷಿ ನಷ್ಟವಾಗಿದೆ. ಹಲವು ರೈತರು ತಮ್ಮ ಟ್ರ್ಯಾಕ್ಟರ್ ಗಳ ಕಂತು ಕಟ್ಟಲು ಮರಳು ಸಾಗಾಣಿಕೆ ಮಾಡುತ್ತಿದ್ದಾರೆ. ಜೆಸಿಬಿ, ಟಿಪ್ಪರ್ ಬಳಸಿ ಮಾಡಿದರೆ ಮಾತ್ರ ಅದು ಅಕ್ರಮ ಮರಳುಗಾರಿಕೆ. ಟ್ರ್ಯಾಕ್ಟರ್ ಗಳನ್ನು ಜಪ್ತಿಯಿಂದ ಉಳಿಸುವ ಸಲುವಾಗಿ ಮರಳು ಸಾಗಣೆ ಮಾಡುತ್ತಿರುವ ರೈತರ ಟ್ರ್ಯಾಕ್ಟರ್ ಗಳನ್ನೂ ವಶಪಡಿಸುವುದು ಸರಿಯಲ್ಲ. ರೈತರದ್ದು ದಂಧೆಯಲ್ಲ. ಆದರೆ, ಅವರ ಮೇಲೂ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.
“ಜೆಸಿಬಿ ಅಥವಾ ಭಾರೀ ಯಂತ್ರಗಳಿಲ್ಲದೆ, ಮನೆ ಕಟ್ಟುವವರಿಗೆ ಮರಳು ನೀಡುವುದು ದಂಧೆಯಲ್ಲ. ರೈತರು ಟ್ರ್ಯಾಕ್ಟರ್ ಸಾಲದ ಕಂತು ಕಟ್ಟಲು ಮರಳು ಸಾಗಣೆ ಮಾಡುತ್ತಾರೆ. ಅಕ್ರಮ ಎನ್ನುವುದಾದರೆ, ಸಾಮಾನ್ಯರಿಗೆ ಮರಳು ಸಿಗುವ ವ್ಯವಸ್ಥೆ ಸರ್ಕಾರವೇ ಮಾಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಮಾಫಿಯಾದ ಕರಾಳ ಮುಖ!..
ರಾಯಚೂರು ಜಿಲ್ಲೆಯಲ್ಲಿನ ಮರಳು ದಂಧೆಯ ಹಿನ್ನೆಲೆ ರಕ್ತಪಾತದಿಂದ ಕೂಡಿದೆ. ಈ ಹಿಂದೆ ಮಾನ್ವಿ ತಾಲೂಕಿನಲ್ಲಿ ಅಕ್ರಮ ಮರಳು ಸಾಗಣೆ ತಡೆಯಲು ಹೋದ ಪೊಲೀಸ್ ಪೇದೆ ಮೇಲೆ ಟಿಪ್ಪರ್ ಹರಿಸಿ ಕೊಲೆ ಮಾಡಿದ ಘಟನೆ ನಡೆದಿದೆ. ಇಂತಹ ಘಟನೆಗಳು ಮರಳು ಮಾಫಿಯಾದ ಪ್ರಭಾವ ಎಷ್ಟು ಅಪಾಯಕಾರಿ ಮಟ್ಟದಲ್ಲಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.
ಜಿಲ್ಲಾ ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ, 2025ರ ಜನವರಿಯಿಂದ ನವೆಂಬರ್ ವರೆಗೆ 4.25 ಕೋಟಿ ರೂ. ಮೌಲ್ಯದ ಅಕ್ರಮ ಮರಳು ಜಪ್ತಿ ಮಾಡಲಾಗಿದೆ.
“ಅಕ್ರಮ ಮರಳು ಸಾಗಣೆ ತಡೆಗಟ್ಟಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಸಮನ್ವಯ ಅಗತ್ಯವಿದೆ “
: ಅರುಣಾಂಗ್ಷು ಗಿರಿ, ಜಿಲ್ಲಾ ಪೊಲೀಸ್ ಅಧೀಕ್ಷಕ













