ದೇಶದಲ್ಲಿ ಕರೋನಾ ಸಂಕಷ್ಟದ ನಡುವೆ ಅಗತ್ಯವಸ್ತುಗಳ ಬೆಲೆ ಏರಿಕೆ ವಿರುದ್ಧ ಆಕ್ರೋಶ ಹೆಚ್ಚುತ್ತಿದೆ. ಈ ನಡುವೆ ಮಧ್ಯಪ್ರದೇಶದ ಬಿಜೆಪಿ ಸಚಿವ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಸಮರ್ಥನೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಮಧ್ಯಪ್ರದೇಶದ ಸಚಿವ ಓಂ ಪ್ರಕಾಶ್ ಸಕ್ಲೆಚಾ ಬೆಲೆ ಏರಿಕೆಯನ್ನು ಸಮರ್ಥನೆ ಮಾಡಿದವರು. ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಓಂ ಪ್ರಕಾಶ್ ‘‘ಯಾವುದೆ ಕಷ್ಟಗಳು ಇಲ್ಲದಾಗ, ಸಂತೋಷವನ್ನು ಆನಂದಿಸಲು ಸಾಧ್ಯವಾಗುವುದಿಲ್ಲ” ಎಂದು ಪೆಟ್ರೋಲ್ ಮತ್ತು ಡೀಸೆಲ್ ದರಗಳ ಹೆಚ್ಚಳವನ್ನು ಸಮರ್ಥಿಸಿಕೊಂಡಿದ್ದಾರೆ.
“ಕಷ್ಟಗಳು ನಿಮಗೆ ಒಳ್ಳೆಯ ಸಮಯದ ಸಂತೋಷವನ್ನು ಅರಿಯಲು ಸಹಾಯ ಮಾಡುತ್ತದೆ. ಯಾವುದೇ ತೊಂದರೆ ಇಲ್ಲದಿದ್ದರೆ, ನಿಮಗೆ ಸಂತೋಷವನ್ನು ಆನಂದಿಸಲು ಸಾಧ್ಯವಾಗುವುದಿಲ್ಲ” ಎಂದು ದೇಶದಲ್ಲಿ ಏರುತ್ತಿರುವ ಇಂಧನ ದರಗಳ ಬಗ್ಗೆ ಹೇಳಿದ್ದಾರೆ.
ದೆಹಲಿ, ಮುಂಬೈ, ಚೆನ್ನೈ, ಕೊಲ್ಕತ್ತಾ ಮತ್ತು ಬೆಂಗಳೂರು ನಗರದಲ್ಲಿ ಪೆಟ್ರೋಲ್ ಬೆಲೆ 100 ರೂ. ದಾಟಿದೆ. ಪ್ರಸ್ತುತ, ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಅತ್ಯಂತ ದುಬಾರಿಯಾಗಿರುವುದು ಮುಂಬೈ ನಗರದಲ್ಲಾಗಿದೆ ಎಂದು ಸರ್ಕಾರಿ ತೈಲ ಸಂಸ್ಕರಣಾ ಸಂಸ್ಥೆ ತಿಳಿಸಿದೆ. ಮೌಲ್ಯವರ್ಧಿತ ತೆರಿಗೆಯಿಂದಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಇಂಧನ ದರಗಳು ಬೇರೆ ಬೇರೆಯಾಗಿ ಇರುತ್ತವೆ.
ಪ್ರಧಾನಿ ನರೇಂದ್ರ ಮೋದಿ ಇಂಧನ ದರದ ತೀವ್ರ ಏರಿಕೆ ತಡೆಯುವುದರಲ್ಲಿ ವಿಫಲರಾಗಿದ್ದಾರೆ ಎಂದು ಮಾಧ್ಯಮಗಳು ವದಂತಿ ಮಾಡಿದೆ ಎಂದು ಹೇಳಿರುವ ಅವರು, ತಮ್ಮ ಪಕ್ಷದ ಸರ್ಕಾರವನ್ನು ಈ ಹಿಂದಿನ ಕಾಂಗ್ರೆಸ್ ಆಡಳಿತಕ್ಕೆ ಹೋಲಿಕೆ ಮಾಡಿ, ಕಾಂಗ್ರೆಸ್ ಪೋಲಿಯೊ ವಿರುದ್ಧ ಲಸಿಕೆ ನೀಡಲು 40 ವರ್ಷಗಳನ್ನು ತೆಗೆದುಕೊಂಡಿತು, ಆದರೆ ಪ್ರಧಾನಿ ಮೋದಿ ಅವರು ಒಂದು ವರ್ಷದಲ್ಲಿ ಮೇಡ್ ಇನ್ ಇಂಡಿಯಾ ಕರೊನಾ ಲಸಿಕೆ ನೀಡಿದ್ದಾರೆ ಮತ್ತು ವ್ಯಾಕ್ಸಿನೇಷನ್ ಅಭಿಯಾನ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇಂಧನ ಬೆಲೆಗಳ ಏರಿಕೆಯ ವಿರುದ್ದ ತೀವ್ರ ಆಕ್ರೋಶಗಳು ಹೆಚ್ಚುತ್ತಿದ್ದರೂ, ಶನಿವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಪೆಟ್ರೋಲ್ ದರ ಪ್ರತಿ ಲೀಟರ್ಗೆ 34 ರಿಂದ 43 ಪೈಸೆಯಷ್ಟು ಹಾಗೂ ಡೀಸೆಲ್ ದರ ಪ್ರತಿ ಲೀಟರ್ಗೆ 28 ರಿಂದ 36 ಪೈಸೆಯಷ್ಟು ಹೆಚ್ಚಳ ಕಂಡಿದೆ. ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ ಸದ್ಯ 104 ರೂಪಾಯಿಗಳನ್ನು ದಾಟಿದೆ.