ಕೌಟುಂಬಿಕ ಪ್ರಕರಣವೊಂದರಲ್ಲಿ 10 ಸಾವಿರ ಇದ್ದ ಜೀವನಾಂಶವನ್ನು 20 ಸಾವಿರ ರೂ.ಗೆ ಹೆಚ್ಚಳ ಮಾಡಿದೆ
ಬೆಂಗಳೂರು; ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಪತ್ನಿಯ ಜೀವನ ವೆಚ್ಚ ಹೆಚ್ಚಾದರೆ ಅವರಿಗೆ ಪತಿ ನೀಡುವ ಜೀವನಾಂಶವನ್ನೂ ಸಹ ಏರಿಕೆ ಮಾಡಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶ ನೀಡಿದೆ.ವಿವಾಹ ಕಾಯಿದೆಯಡಿ ಬದಲಾಗುತ್ತಿರುವ ಕಾಲಘಟ್ಟ ಮತ್ತು ಏರುತ್ತಿರುವ ಜೀವನ ವೆಚ್ಚ ಕೂಡ ಜೀವನಾಂಶ ಹೆಚ್ಚಳಕ್ಕೆ ಕಾರಣ ಎಂದು ಹೈಕೋರ್ಟ್ ಹೇಳಿದೆ.
ಕೌಟುಂಬಿಕ ಪ್ರಕರಣವೊಂದರಲ್ಲಿ 10 ಸಾವಿರ ಇದ್ದ ಜೀವನಾಂಶವನ್ನು 20 ಸಾವಿರ ರೂ.ಗೆ ಹೆಚ್ಚಳ ಮಾಡಿದೆ.ಬೆಂಗಳೂರಿನ ವಿನೀತಾ ಥಾಮಸ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶವನ್ನು ಮಾಡಿದೆ.
ಮದುವೆ ಕಾಯಿದೆ ಸೆಕ್ಷನ್ 37ರಡಿ ಜೀವನಾಂಶ ಹೆಚ್ಚಳ ಕೋರಿ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ನ್ಯಾಯಪೀಠ ರದ್ದುಗೊಳಿಸಿದೆ.ಅಲ್ಲದೆ, ಪತಿ ಚೆನ್ನಾಗಿ ಆದಾಯಗಳಿಸಿದ್ದಾರೆಂಬ ಕಾರಣಕ್ಕೆ ಹೆಚ್ಚಿನ ಜೀವನಾಂಶ ನೀಡಬೇಕೆಂಬ ವಾದವನ್ನು ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಅಭಿಪ್ರಾಯವನ್ನೂ ಸಹ ತಿರಸ್ಕರಿಸಿದೆ.
ಆರು ವರ್ಷಗಳ ಹಿಂದೆ 2016ರಲ್ಲಿ ಅರ್ಜಿದಾರರಿಗೆ ಮಾಸಿಕ 10 ಸಾವಿರ ರೂ. ಜೀವನಾಂಶ ನಿಗದಿಪಡಿಸಲಾಗಿದೆ. ಸುಪ್ರೀಂಕೋರ್ಟ್ ರೀಮಾ ಸಲ್ಕನ್ ಮತ್ತು ಸುಮೇರ್ ಸಿಂಗ್ ಸಲ್ಕನ್ ಪ್ರಕರಣದಲ್ಲಿ ಸಿಆರ್‌ಪಿಸಿ ಸೆಕ್ಷನ್ 125ರಡಿಯಲ್ಲಿಒಮ್ಮೆ ಜೀವನಾಂಶವನ್ನು ನಿಗದಿಪಡಿಸಿದ ನಂತರವೂ ಕೋರ್ಟ್‌ಗಳು ಜೀವನ ವೆಚ್ಚ ಏರಿಕೆ ಮತ್ತಿತರ ಅಂಶಗಳನ್ನು ಪರಿಗಣಿಸಿ ಅದನ್ನು ಹೆಚ್ಚಳ ಮಾಡಬಹುದು ಎಂದೂ ಸಹ ಆದೇಶಿಸಿದೆ ಎಂಬ ಅಂಶವನ್ನು ನ್ಯಾಯಾಲಯ ಉಲ್ಲೇಖಿಸಿದೆ.
ಜೀವನ ವೆಚ್ಚ ಹೆಚ್ಚಳ ಸೇರಿದಂತೆ ಹಲವು ಕಾರಣಗಳಿಂದಾಗಿ ಜೀವನಾಂಶವನ್ನು ಹೆಚ್ಚಳ ಮಾಡಲೇಬೇಕಾದ ಅನಿವಾರ್ಯತೆ ಕಂಡುಬಂದಿದೆ. ಹಾಗಾಗಿ ಜೀವನಾಂಶವನ್ನು 10 ಸಾವಿರ ರೂ.ಗಳಿಂದ 20 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಲಾಗುತ್ತಿದೆ ಎಂದು ಆದೇಶ ನೀಡಿದೆ.