ರಾಮನಗರ: ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ, ನಾನೇ ಪ್ರಧಾನಿ ಕೈ ಹಿಡಿದು ಮೇಕೆದಾಟು ಯೋಜನೆಗೆ ಸಹಿ ಹಾಕಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾರೋಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲ ಕ್ಷೇತ್ರಗಳನ್ನು ಗೆಲ್ಲಿಸಿದರೆ, ಕರ್ನಾಟಕದ ಕನಸಿನ ಯೋಜನೆಯನ್ನು ನಾನು ನನಸು ಮಾಡುತ್ತೇನೆ ಎಂದು ಹೇಳಿದ್ದಾರೆ.

ನನಗೆ ಕನಕಪುರ ಹೊಸದಲ್ಲ. ಹಿಂದೆ ನನ್ನ ವಿರುದ್ಧ ತೇಜಸ್ವಿನಿ ಎಂಬ ಹೆಣ್ಣು ಮಗಳನ್ನು ನಿಲ್ಲಿಸಿ ಷಡ್ಯಂತ್ರದಿಂದ ಸೋಲಿಸಿದ್ದರು. ಆದರೆ, ನಾನು ಮತ್ತೆ ಅದೇ ಕ್ಷೇತ್ರದಲ್ಲಿ ಗೆದ್ದು ಪ್ರಧಾನಿಯಾದೆ. ನನ್ನನ್ನ ಪ್ರಧಾನಿ ಮಾಡಿದ್ದು ಇದೇ ಕ್ಷೇತ್ರದ ಮಹಾಜನತೆ ಎಂದು ಹೇಳಿದ್ದಾರೆ.

ಡಾ.ಮಂಜುನಾಥ್ ನನ್ನ ಅಳಿಯ ಅನ್ನುವುದಕ್ಕಿಂತ ಜಯದೇವ ಆಸ್ಪತ್ರೆಯಲ್ಲಿ ಅಪಾರ ಸೇವೆ ಮಾಡಿದ ಹಾಗೂ ಜನರ ಮನ ಗೆದ್ದ ವೈದ್ಯ. ಅವರ ಆರೋಗ್ಯ ಸೇವೆ ದೇಶದ ಗಮನ ಸೆಳೆದಿದೆ. ಅದಕ್ಕಾಗಿ ಮೋದಿ, ಅಮಿತ್ ಶಾ ಇವರ ಸೇವೆ ದೇಶಕ್ಕೆ ಬೇಕು ಅಂತ ಆಹ್ವಾನಿಸಿದರು. ಹೀಗಾಗಿ ಅವರನ್ನು ಇಲ್ಲಿ ನಿಲ್ಲಿಸಿದರು ಎಂದು ಹೇಳಿದ್ದಾರೆ.
ಕಾವೇರಿ ನದಿ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಮೋದಿ ಭರವಸೆ ಕೊಟ್ಟಿದ್ದಾರೆ. ಮೊನ್ನೆ ಚಿಕ್ಕಬಳ್ಳಾಪುರದಲ್ಲಿ ನನಗೆ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ 28 ಸ್ಥಾನ ಗೆದ್ದು ಕೊಡುವ ಮಾತು ಕೊಟ್ಟಿದ್ದೇನೆ. ಅದಕ್ಕಾಗಿ ಈ ವಯಸ್ಸಿನಲ್ಲೂ ರಾಜ್ಯಾದ್ಯಂತ ಪ್ರವಾಸ ಮಾಡ್ತಿದ್ದೇನೆ ಎಂದು ಹೇಳಿದ್ದಾರೆ.