ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಸ್ಥಾನ ಬದಲಾವಣೆ ಬಗೆಗಿನ ಚರ್ಚೆ ಇನ್ನಷ್ಟು ಕಾವು ಪಡೆದಿದೆ. ಈ ತಿಂಗಳ ಅಂತ್ಯದೊಳಗೆ ಯಡಿಯೂರಪ್ಪ ಸ್ಥಾನ ಬದಲಾವಣೆ ಆಗುವುದು ಬಹುತೇಕ ಪಕ್ಕಾ ಎನ್ನಲಾಗಿದೆ.
ಈ ನಡುವೆ ಕಾಂಗ್ರೆಸ್ ಶಾಸಕ ಎಂಬಿ ಪಾಟೀಲ್ ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದ ಧೀಮಂತ ನಾಯಕ, ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಬಿಜೆಪಿ ಪಕ್ಷದ ವರಿಷ್ಟರು ಲಿಂಗಾಯತ ಸಮುದಾಯದ ಅಸಮಾಧಾನಕ್ಕೆ ಗುರಿಯಾಗಬೇಕೆಂದು ಎಚ್ಚರಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಎಂಬಿ ಪಾಟೀಲ್ ʼಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಲಿಂಗಾಯತ ಸಮುದಾಯದ ಧೀಮಂತ ನಾಯಕರು. ಅವರನ್ನು ಪದಚ್ಯುತಗೊಳಿಸಿದರೆ, ನಿಶ್ಚಿತವಾಗಿಯೂ ಬಿಜೆಪಿ ವರಿಷ್ಠರು ಲಿಂಗಾಯತರ ಅವಕೃಪೆಗೆ ತುತ್ತಾಗುತ್ತಾರೆ. ಯಡಿಯೂರಪ್ಪನವರ ವಯಸ್ಸು ಮತ್ತು ಕೊಡುಗೆಯನ್ನು ಪರಿಗಣಿಸಿ, ಅವರನ್ನು ಘನತೆ ಮತ್ತು ಮರ್ಯಾದೆಯಿಂದ ನಡೆಸಿಕೊಳ್ಳಬೇಕೆಂಬುದು ನನ್ನ ವೈಯಕ್ತಿಕ ಅನಿಸಿಕೆʼ ಎಂದು ಹೇಳಿದ್ದಾರೆ.

ಎಂಬಿ ಪಾಟೀಲ್ ಹೇಳಿರುವ ವಿಚಾರ ಬಿಜೆಪಿ ವರಿಷ್ಟರಿಗೆ ತಿಳಿಯದೇ ಇರುವುದೇನಲ್ಲ. ಕರ್ನಾಟಕದಲ್ಲಿ ಬಿಜೆಪಿಯ ದೊಡ್ಡ ಮತ ಬ್ಯಾಂಕ್ ಆಗಿರುವ ಲಿಂಗಾಯತ ಸಮುದಾಯವನ್ನು ಎದುರು ಹಾಕಿಕೊಳ್ಳಲು ತಯಾರಿಲ್ಲದ್ದರಿಂದಲೇ ಯಡಿಯೂರಪ್ಪ ಅವರ ಪದಚ್ಯುತಿ ಇದುವರೆಗೂ ತಡ ಮಾಡಲಾಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಲಿಂಗಾಯತ ರಾಜಕಾರಣದ ಭಾಗವಾಗಿಯೇ ಕಾಂಗ್ರೆಸ್ ಇನ್ನೋರ್ವ ಲಿಂಗಾಯತ ನಾಯಕ ಶ್ಯಾಮನೂರು ಶಿವಶಂಕರಪ್ಪ ಕೂಡಾ ಈ ಹಿಂದೆ ಯಡಿಯೂರಪ್ಪ ಪರವಾಗಿ ಮಾತನಾಡಿದ್ದರು.