ಜಗತ್ತಿನ ಅತ್ಯಗ್ರ tech giantಗಳಲ್ಲಿ ಒಂದಾಗಿರುವ ಆಗಿರುವ IBMನ ಮುಖ್ಯಸ್ಥರಾಗಿ ಭಾರತೀಯ ಅರವಿಂದ್ ಕೃಷ್ಣ ಆಯ್ಕೆಯಾಗಿರುವ ಸುದ್ದಿ ಅದಾಗಲೇ ವೈರಲ್ ಆಗಿದೆ. Data centric ಜಗತ್ತಿನ ಕೇಂದ್ರ ಬಿಂದುಗಳಾದ ಈ ಐಟಿ ಕಂಪನಿಗಳಲ್ಲಿ ಭಾರತೀಯರ ಸಾಧನೆಗಳ ಬಗ್ಗೆ ದೇಶದ ಒಂದು ವರ್ಗ ಹೆಮ್ಮೆ ಪಡುತ್ತಿದ್ದರೆ, ಮತ್ತೊಂದೆಡೆ ಎಂತೆಂಥಾ ಟಾಪ್ ತಲೆಗಳನ್ನೆಲ್ಲಾ ಉಳಿಸಿಕೊಳ್ಳಲು ಒಂದು ವ್ಯವಸ್ಥೆಯಾಗಿ ನಾವೆಲ್ಲಾ ಯಾವ ಮಟ್ಟಿಗೆ ವಿಫಲರಾಗಿಬಿಟ್ಟಿದ್ದೇವೆ ಎಂಬ ನೋವೂ ಸಹ ನಮ್ಮನ್ನು ಒಳಗೊಳಗೇ ಕಾಡುತ್ತಿದೆ ಎನ್ನುವುದಂತೂ ಅಷ್ಟೇ ಸತ್ಯ.
ಕಂಪ್ಯೂಟಿಂಗ್ ಕ್ಷೇತ್ರದ ಮೊದಲಿಗರಲ್ಲಿ ಒಂದು ಎಂಬ ಹೆಗ್ಗಳಿಕೆ ಇರುವ ಕಂಪನಿಯಾದ IBMನ ಮುಖ್ಯಸ್ಥರಾಗಿ ನೇಮಕಾವಾಗಿರುವ ಅರವಿಂದ್, ಸಂಸ್ಥೆಯ ಸದ್ಯದ ನಿಇಓ ವರ್ಜಿನಿಯಾ ರೊಮೆಟ್ಟಿ ಏಪ್ರಿಲ್ 6ರಂದ ಹುದ್ದೆ ತ್ಯಜಿಸಲಿದ್ದು, ತೆರವಾದ ಸ್ಥಾನವನ್ನು ಭರಿಸಲಿದ್ದಾರೆ.
ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಗೆ ಸೇರಿದವರಾದ ನಿವೃತ್ತ ಸೇನಾಧಿಕಾರಿ ವಿನೋದ್ ಕೃಷ್ಣ ಪುತ್ರರಾದ ಅರವಿಂದ್ ಕೃಷ್ಣ, ಕಾನ್ಪುರ ಐಐಟಿಯಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿರುವ ಅರವಿಂದ್ ಅಮೆರಿಕದ ಇಲೆನೋಯ್ ವಿವಿಯಲ್ಲಿ ಪಿಎಚ್‌ಡಿ ಮಾಡಿದ್ದಾರೆ. 1990ರಿಂದಲೂ IBMನಲ್ಲಿ ಕೆಲಸ ಮಾಡುತ್ತಿರುವ ಕೃಷ್ಣ ಸದ್ಯ ಸಂಸ್ಥೆಯ ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಸಾಫ್ಟ್‌ವೇರ್ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿದ್ದಾರೆ. ಸಶೋಧನೆ & ಅಭಿವೃದ್ಧಿಯಲ್ಲಿ ಅಪಾರವಾದ ಅನುಭವ ಹೊಂದಿರುವ ಅರವಿಂದ್ ಕೃಷ್ಣ ಅನೇಕ ಹೊಸತುಗಳನ್ನು ತಂತ್ರಜ್ಞಾನ ಜಗತ್ತಿಗೆ ಪರಿಚಯಿಸಿದ್ದು, ಅವರ ಹೆಸರಿನಲ್ಲಿ 15 ಪೇಟೆಂಟ್‌ಗಳಿವೆ!
ಮೈಕ್ರೋಸಾಫ್ಟ್‌ನ ಸತ್ಯ ನಡೆಲ್ಲ, ಆಲ್ಫಬೆಟ್/ಗೂಗಲ್‌ನ ಸುಂದರ್ ಪಿಚ್ಚಾಯ್, ಅಡೋಬ್‌ನ ಶಂತನು ನಾರಾಯಣ್, ಮೈಕ್ರಾನ್ ಟೆಕ್ನಾಲಜಿಯ ಸಂಜಯ್ ಮೆಹ್ರೋತ್ರಾ, ಪಾಲಾ ಆಲ್ಟೋದ ನಿಕೇಶ್ ಅರೋರಾ ಹಾಗೂ NetAppನ ಜಾರ್ಜ್ ಕುರಿಯನ್ ಈ ಪಟ್ಟಿಯಲ್ಲಿರುವ ಇತರ ಘಟಾನುಘಟಿಗಳಾಗಿದ್ದಾರೆ. ಇವರೆಲ್ಲಾ ಮುನ್ನಡೆಸುತಿರುವ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯವು $2.7 ಲಕ್ಷ ಕೋಟಿಗಳಷ್ಟಿದೆ.
2001ರ ವೇಳಗೆ $107 ಶತಕೋಟಿಯಷ್ಟು ಮಾರುಕಟ್ಟೆ ಮೌಲ್ಯವಿದ್ದ IBM, ಕಳೆದ ಎಂಟು ವರ್ಷಗಳಲ್ಲಿ ಇಳಿಮುಖದ ಹಾದಿಯಲ್ಲಿ ಸಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಕೊಂಚ ಚೇತರಿಕೆ ಕಂಡಿರುವ ಸಂಸ್ಥೆಗೆ, ಅರವಿಂದ್ ಹೊಸ ಚೇತರಿಕೆ ನೀಡುವರು ಎನ್ನುವ ಭರವಸೆ ಇಡಲಾಗಿದೆ. ಕಳೆದೊಂದು ದಶಕದಿಂದ ಕಳೆಗುಂದಿದ್ದ ಮೈಕ್ರೋಸಾಫ್ಟ್‌ಗೆ, ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಒಂದಾನೊಂದು ಕಾಲದಲ್ಲಿ ಕಾಂಪಿಟೇಟರ್‌ಗಳಾಗಿದ್ದ ಸಂಸ್ಥೆಗಳೊಂದಿಗೆ ಚತುರ ಹೆಜ್ಜೆಗಳನ್ನು ಇಟ್ಟು ಪಾಲುದಾರಿಕೆಗಳನ್ನು ಬೆಳೆಸುವ ಮೂಲಕ ಹೊಸ ಚೈತನ್ಯ ತುಂಬಿದ ಸತ್ಯ ನಡೆಲ್ಲಾ ಹಾದಿಯಲ್ಲೇ ಕೃಷ್ಣ ಸಹ IBMಗೆ ಹೊಸ ದಿಕ್ಕು ತೋರಬಹುದು ಎಂಬ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.
ಈ ಮಹಾನ್ ಪ್ರತಿಭಾವಂತರು ಹಾಗೂ high qualified ಸಂಪನ್ಮೂಲ ವ್ಯಕ್ತಿಗಳನ್ನು ನಮ್ಮಲ್ಲೇ ಉಳಿಸಿಕೊಂಡು ಹೋಗಲು ಬೇಕಾದ ವಾತಾವರಣವನ್ನು ಸೃಷ್ಟಿಸಲು ವಿಫಲವಾದ ಕಾರಣ ನಾವಿಲ್ಲಿ ಕುಳಿತು ಕೈ ಕೈ ಹೊಸಕಿಕೊಳ್ಳುವಂತಾಗಿದೆ. ದೇಶದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ಕ್ಷೇತ್ರಕ್ಕೆ ಹೊಸ ಹುರುಪು ನೀಡಲೆಂದು 1950ರ ದಶಕದಲ್ಲಿ ಪ್ರಾರಂಭಿಸಲಾದ highly esteemed ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ IITಗಳು ಮಹಾನ್ ಮೇಧಾವಿಗಳನ್ನೇನೋ ತಯಾರು ಮಾಡುತ್ತಿವೆ ಸರಿ. ಆದರೆ ಇಂಥ ಅಪ್ರತಿಮ ತಲೆಗಳನ್ನು ಬಳಕೆ ಮಾಡಿಕೊಳ್ಳಲು, ಅವುಗಳ potentialಅನ್ನು ಹೀರಿಕೊಳ್ಳಲು ಅತ್ಯಗತ್ಯವಾದ ವೈಜ್ಞಾನಿಕ & ತಾಂತ್ರಿಕ ವಾತಾವರಣವೇ ಇಲ್ಲದ ಕಾರಣ, ಪ್ರತಿಭಾ ಪಲಾಯನವೆಂಬ ದೊಡ್ಡ ಶಾಪಕ್ಕೆ ಭಾರತ ತುತ್ತಾಗುತ್ತಲೇ ಬಂದಿದೆ.
ಇತರ ದೇಶಗಳ ಅನಿವಾಸಿಗಳಿಂದಲೇ ತುಂಬಿಕೊಂಡಿರುವ ಅಮೆರಿಕದ ಆರ್ಥಿಕತೆಯ ಪ್ರಮುಖ ಕ್ಷೇತ್ರಗಳಲ್ಲಿ ಇಸ್ರೇಲಿಗಳು, ಚೀನೀಯರನ್ನು ಬಿಟ್ಟರೆ ಅತ್ಯಂತ ಹೆಚ್ಚು ಪ್ರಭಾವ ಹೊಂದಿರುವವರೇ ಭಾರತೀಯರು. ಅಲ್ಲಿ ಬೇಕಾದಷ್ಟು ದುಡ್ಡಿದೆ, ಸಾಗರದಷ್ಟು ಅವಕಾಶಗಳಿವೆ, ಮುಕ್ತ ಮಾರುಕಟ್ಟೆಯೆಂಬ ಕಾಂಪಿಟೇಟಿವ್ ವಾತಾವರಣವೂ ಇದೆ. ತಾಕತ್ತು, ಯೋಗ್ಯತೆ, ಅರ್ಹತೆಗಳಿದ್ದವು ಎಷ್ಟು ದೂರ ಬೇಕಾದರೂ ಕ್ರಮಿಸಬಹುದು, ಎಷ್ಟು ಎತ್ತರವನ್ನಾದರೂ ಏರಬಹುದು.
ಬಡತನ, ನಿರುದ್ಯೋಗ, ಜನಸಂಖ್ಯಾ ಸ್ಫೋಟಗಳಂಥ ಸಾಮಾಜಿಕ ಸಮಸ್ಯೆಗಳೆಂಬ ಟೈಂ ಬಾಂಬ್‌ಅನ್ನು ತನ್ನ ಒಡಲಲ್ಲಿ ಕಟ್ಟಿಕೊಂಡೇ ಭವಿಷ್ಯದತ್ತ ದಿಕ್ಸೂಚಿಯೇ ಇಲ್ಲದೇ ಸಾಗಿ ಬರುತ್ತಿರುವ ಭಾರತದಂಥ ಅಭಿವೃದ್ಧಿಶೀಲ ದೇಶವೊಂದಕ್ಕೆ, ಕಾಯಕಲ್ಪ ನೀಡುವುದು ಬಹಳ ದುಸ್ತರದ ಕೆಲಸವೇ ಸರಿ. ಭಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರಶಾಹಿ ಮೂಗುತೂರಿಸುವಿಕೆ, ಎಲ್ಲ ವ್ಯವಹಾರಗಳಲ್ಲೂ ಸರ್ಕಾರದ ಅಡ್ಡಗಾಲುಗಳು…. ಇಂಥ ಕ್ಯಾನ್ಸರ್ ಗಡ್ಡೆಗಳ ಪರಿಣಾಮ, “A drained brain is better than a wasted brain,” ಎಂಬ ನಿಟ್ಟುಸಿರು ಬಿಡುವ ಪರಿಸ್ಥಿತಿಯಲ್ಲಿ ಇದನ್ನು ಬರೆಯುತ್ತಿರುವ ನಾನು ಹಾಗೂ ಓದುತ್ತಿರುವ ನೀವೂ ಇರಬೇಕಾದ ಪರಿಸ್ಥಿತಿಯಲ್ಲಿ ಇದ್ದೇವೆ.
ನಮ್ಮೆಲ್ಲಾ ಚೈತನ್ಯವನ್ನೂ ಇಂಥ ಸಾಮಾಜಿಕ ಸಮಸ್ಯೆಗಳನ್ನು ಸರಿಪಡಿಸಲೆಂದೇ ವಿನಿಯೋಗ ಮಾಡುತ್ತಿರುವ ವಾಸ್ತವದ ನಡವೆ, ಅಭಿವೃದ್ಧಿ ಹೊಂದಿದೆ ಸೂಪರ್ ರಿಚ್ ದೇಶಗಳ ಪ್ರಭಾವವನ್ನು ಜಗತ್ತಿನಾದ್ಯಂತ ಪಸರಿಸಲು ಬೆನ್ನೆಲುಬಾಗಿ ಇರುವ R&D ecosystem (ಸಂಶೋಧನೆ & ಅಭಿವೃದ್ಧಿ ವಾತಾವರಣ) ನಮ್ಮಲ್ಲಿ ರೂಪುಗೊಳ್ಳಲು ದಶಕಗಳೇ ಬೇಕಾಗಬಹುದು.