ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ, ಬಸನಗೌಡ ಯತ್ನಾಳ್ ಪಾಟೀಲ್ ಮತ್ತೊಮ್ಮೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಗದಗನ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿಕಾಯಿ ನಿವಾಸದಲ್ಲಿ ಮಾತ್ನಾಡಿದ ಅವರು, ʻನಾನೂ ಮುಖ್ಯಮಂತ್ರಿ ಆಗಬೇಕೆನ್ನುತ್ತೇನೆ. ನಾನಾಗಬಾರದಾ? ನಾನೇನು ಅಯ್ಯೋಗ್ಯನೇ..? ನನಗೇನು ಶಕ್ತಿ ಇಲ್ಲವೇ? ನನ್ನ ಆಡಳಿತ ಬಂದರಂತೂ ಉತ್ತರ ಪ್ರದೇಶದ ಯೋಗಿಯಂತೆ ಬರುತ್ತೆ. ಅವಕಾಶ ಕೊಟ್ರೆ ಆಗ್ತೇನೆ. ಸುಮ್‌ಸುಮ್ನೆ ಬಯೋಡೆಟಾ ತೆಗೆದುಕೊಂಡು ಹೋಗುವವನಲ್ಲ. ಕರ್ನಾಟಕಕ್ಕೆ ನನ್ನ ಬಯೋಡೆಟಾವೇ ಬೇಕಿಲ್ಲ. ನಾ ಅವಕಾಶವನ್ನೂ ಸಹ ಕೇಳೋಲ್ಲ. ಇಷ್ಟು ದಿನ ಬಸನಗೌಡ ಪಾಟೀಲನನ್ನ ಮುಚ್ಚಿಟ್ಟಿದ್ದರು. ಕೆಲವು ಜನ ನನ್ನನ್ನ ಪಂಜರದಲ್ಲಿಟ್ಟಿದ್ದರು. ಅವರು ಪಾಪ ತಮ್ಮ ಕುಟುಂಬವನ್ನ ಬೆಳೆಸಬೇಕೆಂದಿದ್ದರು. ಕೆಲವೊಬ್ಬರಿಗೆ ನಾ ಆದಮೇಲೆ ನನ್ನ ಮಗಾನೇ ಮುಖ್ಯಮಂತ್ರಿ ಆಗಬೇಕು ಅನ್ನೋದು ಇರುತ್ತೆ. ಆದರೆ ಯತ್ನಾಳ ಬಂದ್ರೆ ಎಲ್ರನ್ನೂ ಮಣ್ಣಲ್ಲಿ ಇಡ್ತಾನೆ ಅಂತ ನನ್ನನ್ನ ಮುಚ್ಚಿಟ್ಟಿದ್ದರು. ಯತ್ನಾಳಗೂ ಒಂದು ಶಕ್ತಿ ಇದೆ ಅಂತ ಕೇಂದ್ರ ಹೈಕಮಾಂಡ್ ಗೆ ಗೊತ್ತಾಯ್ತು. ಇದನ್ನ ಉಪಯೋಗ ಮಾಡಿಕೊಳ್ಳಬೇಕೆಂದು ಅಮಿತ್ ಷಾಗೆ ಹಾಗೂ ಪ್ರಧಾನಿಗಳಿಗೆ ಗೊತ್ತಾಯ್ತು. ಅವರ ಆಶೀರ್ವಾದದಿಂದ ನಾನು ಇವತ್ತು ಹೊರಗಡೆ ಬಂದಿದ್ದೇನೆ. ನಾನೊಬ್ಬ MLA, ನಾನೇನು ಪ್ರದೇಶ ಅಧ್ಯಕ್ಷ ಇಲ್ಲ. ಕ್ಯಾಬಿನೇಟ್ ಮಂತ್ರಿ ಇಲ್ಲ..ಮಾಜಿ ಮುಖ್ಯಮಂತ್ರಿ ಇಲ್ಲ. ಆದ್ರೂ 10-15 ಸಾವಿರ ಜನ ಸೇರುತ್ತಾರೆಂದ್ರೆ ಜನರ ಆಶಿರ್ವಾದ ನನಗಿದೆ. ಹಾಗಂತ ನಾನು ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ. ಮುಖ್ಯಮಂತ್ರಿನೂ ಆಗೋದಿಲ್ಲ ಅಂತ ಬಸನಗೌಡ ಯತ್ನಾಳ್ ಪಾಟೀಲ್ ಹೇಳಿಕೆ ನೀಡಿದ್ರು.
ಬಳಿಕ ಮಾತ್ನಾಡಿದ ಅವರು, ʻರಾಜಕಾರಣದಲ್ಲಿ ಎಲ್ಲರದೂ ಸ್ವಭಾವ. ಜಗದೀಶ್ ಶೆಟ್ಟರ್‌ಗೆ ಅಪಮಾನ ಆಗಿದೆ ಅಂತಾರೆ. ಅಪಮಾನ ಏನಾಗಿದೆ? ಬಿಜೆಪಿಯಲ್ಲಿ ನನಗೆ ಅಪಮಾನ, ಅನ್ಯಾಯ ಆದಷ್ಟು ಯಾರಿಗೂ ಆಗಿಲ್ಲ. ನಾನು ಮೋಸ್ಟ್ ಸೀನಿಯರ್ ಇದ್ದೇನೆ..ಮಂತ್ರಿ ಅನ್ನೋ ಶಬ್ದ ಪ್ರಾರಂಭ ಅಗಿದ್ದೇ ಅನಂತಕುಮಾರವರಿಂದ. ನಂತರ ಬಾಬಾಗೌಡ ಪಾಟೀಲ, ಧನಂಜಯ ಕುಮಾರ, ಆನಂತರ ಬಸನಗೌಡ ಪಾಟೀಲ. ನಾ ಮಿನಿಸ್ಟರ್ ಇದ್ದಾಗ ಯಡಿಯೂರಪ್ಪ ಬರೀ ಶಾಸಕರಿದ್ದರು. ಜಗದೀಶ್ ಶೆಟ್ಟರ್ ಸಹ ಶಾಸಕರಿದ್ರು. ಇವಾಗ ನನಗೂ ಕೊಟ್ಟಿಲ್ಲ. ನಾನೂ ಸಹ ಅಸಮಾಧಾನ ಅಂದ್ರೆ ಹೇಗೆ? ನಾನೇನು ಕೇಳೋಕೆ ಹೋಗಿಲ್ಲ. ಶಾಸಕನಾಗಿ 5 ವರ್ಷದಲ್ಲಿ 3 ವರ್ಷ ಚೆನ್ನಾಗಿ ಕೆಲಸ ಮಾಡಿದ್ದೇನೆ. ಸಾಕು ಅಷ್ಟಕ್ಕೇ ತೃಪ್ತಿ ಇದೆ. ಮಂತ್ರಿಯಾಗಿ ಏನು ಮಾಡೋದು? ಎಷ್ಟು ಜನ ಮಂತ್ರಿಗಳನ್ನ ಸ್ಟಾರ್ ಪ್ರಚಾರಕ ಮಾಡಿದ್ದಾರೆ ಹೇಳಿ..? ಮಂತ್ರಿಗಳ ಕ್ಷೇತ್ರಕ್ಕೇನೆ ನಾನು ಸ್ಟಾರ್ ಪ್ರಚಾರಕ ಆಗಿ ಹೊರಟಿದ್ದೇನೆ..ನಾಳೆ ನಾಡಿದ್ದು, ಸಿಎಂ ಕ್ಷೇತ್ರ ಶಿಗ್ಗಾಂವಿಗೆ ಸ್ಟಾರ್ ಪ್ರಚಾರಕ ಆಗಿ ಹೋಗ್ತಿದ್ದೇನೆ ಅಂತ ಗದಗದಲ್ಲಿ ಶಾಸಕ ಬಸನಗೌಡ ಯತ್ನಾಳ್ ಹೇಳಿಕೆ ನೀಡಿದ್ರು.