ಹಾಸನ: ಚಿಕ್ಕಮಗಳೂರಿನಲ್ಲಿ ನಾನು ಹಾಗೂ ಹಾಸನದಲ್ಲಿ ಪ್ರೀತಂಗೌಡ (Preethamgowda) ಕೆಲಸ ಮಾಡಿಯೂ ರಾಜಕೀಯ ಪಿತೂರಿಗೆ ಬಲಿಯಾಗಿದ್ದೇವೆ ಎಂದು ಮಾಜಿ ಸಚಿವ ಸಿ.ಟಿ.ರವಿ (CTRavi) ಹೇಳಿದರು.

ನಗರದ ಸೀತಾರಾಮಾಂಜನೇಯ ಸಭಾಭವನದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ನಮ್ಮನ್ನು ಕೆಲಸ ಮಾಡಿಲ್ಲ ಅಂತ ಯಾರೂ ದೂರುವುದಿಲ್ಲ. ರಾಜಕೀಯ ಪಿತೂರಿಗೆ ನಾವು ಬಲಿಯಾದ್ವಿ. ಚಿಕ್ಕಮಗಳೂರಿನಲ್ಲಿ ಜೆಡಿಎಸ್ 2018ರಲ್ಲಿ 40 ಸಾವಿರ ಓಟು ಪಡೆದಿತ್ತು. ಇತ್ತೀಚಿನ ಚುನಾವಣೆಯಲ್ಲಿ 1700 ಓಟು ಪಡೆದಿದೆ. ಕಾಂಗ್ರೆಸ್ ಹಾಸನದಲ್ಲಿ 38 ಸಾವಿರ ತಗೊಂಡಿತ್ತು. ಈಗ 4 ಸಾವಿರ ಮತ ಮಾತ್ರ ಗಳಿಸಿದೆ. ಪಿತೂರಿ ಹೇಗೆ ನಡೆದಿದೆ ಅಂತ ಬಿಡಿಸಿ ಹೇಳಬೇಕಿಲ್ಲ ಎಂದರು.

ಸಂಬಂಧ ಕೆಡಬಾರದು ಅಂತ ನಾವು ನೀಲಕಂಠ ಆಗಿದ್ದೇವೆ, ವಿಷಕಂಠ ಆಗಿದ್ದೇವೆ. ಒಳ್ಳೆಯ ಉದ್ದೇಶಕ್ಕಾಗಿ ಸಂಬಂಧ ಕೆಡಬಾರದು ಅಂತ ಇದ್ದೀವಿ. ಈಗ ಎಲ್ಲವನ್ನೂ ಬಿಡಿಸಿ ಹೇಳಲು ಆಗುವುದಿಲ್ಲ. ಎಲ್ಲಿ, ಏನು, ಹೇಗೆ, ಪಿತೂರಿ ನಡೆಯಿತು ಅಂತ ಗೊತ್ತು. ಎಲ್ಲವನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಿದ್ದೇವೆ. ನಾವು ಅಷ್ಟು ಅಮಾಯಕರಲ್ಲ. ನಾವು ತತ್ವದ ಮೇಲೆ ನಂಬಿಕೆ ಇಟ್ಟವರು. ನಾನು ವಿನಂತಿ ಮಾಡೋದು ಇಷ್ಟೇ, ದೇಶ ಮೊದಲು ಅಂತ ಕೆಲಸ ಮಾಡ್ತಿದ್ದೇವೆ. ಮೋದಿ ಅವರ ಚಿತ್ರ ಕಣ್ಮುಂದೆ ಬರಬೇಕು. ಆ ಕಾರಣಕ್ಕಾಗಿ ಎಲ್ಲವನ್ನು ಸಹಿಸಿಕೊಂಡಿದ್ದೇನೆ ಎಂದು ಪರೋಕ್ಷವಾಗಿ ತಮ್ಮ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
#CTRavi #Preethamgowda #politics #chikamagaluru #Hassan #jds #bjp #Congress